ಬೆಂಗಳೂರು (ಜ. 15): ಕಿಚ್ಚ ಸುದೀಪ್‌ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ತಾವು ನಿರ್ದೇಶಿಸಿ, ನಟಿಸಬೇಕಿದ್ದ ಮದಕರಿ ನಾಯಕನ ಜೀವನ ಚರಿತ್ರೆ ಆಧರಿಸಿದ ‘ದುರ್ಗದ ಹುಲಿ’ ಚಿತ್ರವನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಮದಕರಿ ನಾಯಕ ಚಿತ್ರದ ಕುರಿತಾಗಿ ಉಂಟಾಗಿದ್ದ ವಿವಾದಕ್ಕೆ ಕೊನೆ ಎಳೆದಿದ್ದಾರೆ.

ಕಿಚ್ಚ - ದರ್ಶನ್ ಸ್ಟಾರ್‌ವಾರ್? ಯಾರಾಗ್ತಾರೆ ’ವೀರ ಮದಕರಿ’ ನಾಯಕ?

ಅತ್ತ ದರ್ಶನ್‌ ಅಭಿನಯದಲ್ಲಿ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದಲ್ಲಿ ‘ಗಂಡುಗಲಿ ವೀರ ಮದಕರಿ’ ಸಿನಿಮಾ ಸೆಟ್ಟೇರಲು ತಯಾರಾಗಿತ್ತು. ಇತ್ತ ಸುದೀಪ್‌ ತನ್ನ ಮಹತ್ವಾಕಾಂಕ್ಷೆಯ ‘ದುರ್ಗದ ಹುಲಿ’ ಚಿತ್ರ ನಿರ್ದೇಶಿಸಲು ತಯಾರಿ ಮಾಡಿಕೊಂಡಿದ್ದರು. ಹೆಸರು ಬೇರೆ ಬೇರೆ. ಆದರೆ, ಕತೆಯ ಹಿನ್ನೆಲೆ ಒಂದೇ. ಹೀಗಾಗಿ ಈ ಎರಡೂ ಚಿತ್ರಗಳು ಇಬ್ಬರು ನಟರುಗಳ ಅಭಿಮಾನಿಗಳ ನಡುವೆ ಸಾಕಷ್ಟುಜಿದ್ದಾಜಿದ್ದಿಗೆ ಕಾರಣವಾಗಿತ್ತು. ಆದರೆ, ಇದೀಗ ‘ದುರ್ಗದ ಹುಲಿ’ ಚಿತ್ರದ ಅಂಗಳದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ವತಃ ಸುದೀಪ್‌ ಅವರೇ ಹೇಳಿಕೊಂಡಿದ್ದಾರೆ. ಈ ಮೂಲಕ ನಮ್ಮವರಿಗಾಗಿ, ನಮ್ಮವರ ಖುಷಿಗಾಗಿ ತ್ಯಾಗ ಮಾಡುವುದೇ ಒಳ್ಳೆಯದು ಎಂಬ ಸಂದೇಶ ರವಾನಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್‌ಗೆ ನಾಯಕಿಯಾಗಲಿದ್ದಾರೆ ಸ್ಯಾಂಡಲ್‌ವುಡ್ ಕ್ವೀನ್

ಯಾಕೆ ಈ ನಿರ್ಧಾರ?

ಇತ್ತೀಚೆಗಷ್ಟೆನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರು ಸುದೀಪ್‌ ಅವರನ್ನು ಭೇಟಿ ಮಾಡಿ ಚಿತ್ರದುರ್ಗದ ಪಾಳೆಗಾರರ ಕತೆಯ ಎರಡು ಸಿನಿಮಾ ಆಗುತ್ತಿರುವ ಬಗ್ಗೆ ಮಾತುಕತೆ ಮಾಡುತ್ತಿದ್ದಾಗ ‘ನೀವು ನಮ್ಮ ಕನ್ನಡ ಚಿತ್ರರಂಗದ ನಿರ್ಮಾಪಕರು. ದರ್ಶನ್‌ ಕೂಡ ನಮ್ಮ ಕನ್ನಡ ಚಿತ್ರರಂಗದ ಹೀರೋ. ಇಬ್ಬರೂ ನಮ್ಮವರೇ. ನಾನೂ ನಿಮ್ಮವನೇ. ಆದರೆ, ಒಂದೇ ಹಿನ್ನೆಲೆಯ ಕತೆಗಾಗಿ ನಾವು ಮುನಿಸಿಕೊಳ್ಳುವುದು ಬೇಡ. ದರ್ಶನ್‌ ಬೇರೆ ಅಲ್ಲ, ನೀವು ಬೇರೆ ಅಲ್ಲ. ನಾವೆಲ್ಲ ಗೆಳೆಯರು. ಹೀಗಾಗಿ ನಾನೇ ದುರ್ಗದ ಹುಲಿ ಚಿತ್ರದಿಂದ ಹಿಂದೆ ಸರಿಯುತ್ತಿದ್ದೇನೆ. ಮುಂದೆ ಬೇರೆ ಐತಿಹಾಸಿಕ ಸಿನಿಮಾ ಕತೆ ಸಿಕ್ಕರೆ ಜತೆಯಾಗಿ ಮಾಡೋಣ. ನೀವು ಖುಷಿಯಾಗಿ ವೀರ ಮದಕರಿ ನಾಯಕನ ಚಿತ್ರ ಮಾಡಿ’ ಎಂದು ಸುದೀಪ್‌ ರಾಕ್‌ಲೈನ್‌ ವೆಂಕಟೇಶ್‌ ಅವರಿಗೆ ಹೇಳಿದ್ದಾರೆ. ಅಲ್ಲಿಗೆ ತಮ್ಮ ಆತ್ಮೀಯ ಗೆಳೆಯ ದರ್ಶನ್‌ ಅವರಿಗಾಗಿ ‘ದುರ್ಗದ ಹುಲಿ’ ಚಿತ್ರದಿಂದ ಹಿಂದೆ ಸರಿಯುವ ಮೂಲಕ ಸ್ನೇಹ ಮೆರೆದಿದ್ದಾರೆ.

ಉಪ್ಪಿ ಚಿತ್ರಕ್ಕೆ ನಿರ್ದೇಶನ

ಉಪೇಂದ್ರ ಚಿತ್ರವನ್ನು ಸುದೀಪ್‌ ನಿರ್ದೇಶಿಸಲಿದ್ದಾರೆ- ಎಂಬ ಸುದ್ದಿ ಓಡಾಡುತ್ತಿದೆ. ಈ ಸುದ್ದಿಯನ್ನು ಒಂದು ರೀತಿಯಲ್ಲಿ ಹೌದು ಎಂದೇ ಒಪ್ಪಿಕೊಂಡಿದ್ದಾರೆ ನಟ ಸುದೀಪ್‌. ‘ಉಪೇಂದ್ರ ಅವರ ಮೂಲಕ ನಾನು ಹೇಳುವಂತಹ ಕತೆ ಸಿಕ್ಕರೆ ಖಂಡಿತವಾಗಿಯೂ ನಾನು ಅವರಿಗೆ ಸಿನಿಮಾ ಮಾಡಲಿದ್ದೇನೆ. ಆದರೆ, ಅಂಥ ಕತೆ ಯಾವಾಗ ಸಿಗುತ್ತದೋ ಗೊತ್ತಿಲ್ಲ. ಇಬ್ಬರು ಜತೆಯಾಗಿ ನಟಿಸಿದ್ದೇವೆ. ಮತ್ತೆ ಜತೆಯಾಗಿ ಒಬ್ಬರು ನಿರ್ದೇಶಕರಾಗಿ, ಮತ್ತೊಬ್ಬರು ನಾಯಕನಾಗಿ ಕೆಲಸ ಮಾಡುವುದಕ್ಕೆ ನನಗೂ ಆಸೆ ಇದೆ’ ಎಂದು ಸುದೀಪ್‌ ಹೇಳಿಕೊಂಡಿದ್ದಾರೆ.