ರಮ್ಯಾ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅವರು ಯಾವಾಗಲೂ ಸದ್ದು ಮಾಡುತ್ತಿರುತ್ತಾರೆ ಅದರಲ್ಲೇನು ವಿಶೇಷ ಬಿಡಿ ಅನ್ನಬೇಡಿ. ಈ ಬಾರಿ ಅವರು ಸುದ್ದಿಯಾಗುತ್ತಿರುವುದು ಸಿನಿಮಾ ವಿಚಾರಕ್ಕೆ. 

ಬೆಂಗಳೂರು (ಅ. 06): ಹಾಲಿ ರಾಜಕಾರಣಿಯಾಗಿ ಮಾಜಿ ನಟಿಯಾಗಿದ್ದ ರಮ್ಯಾ ಈಗ ಮತ್ತೆ ಬಣ್ಣ ಹಚ್ಚುವ ಮಾತುಗಳು ಕೇಳಿ ಬರುತ್ತಿದೆ. ಅದು ಕೂಡ ದರ್ಶನ್ ಚಿತ್ರದಲ್ಲಿ ಎಂಬುದು ವಿಶೇಷ. 2006ರಲ್ಲಿ ಬಂದ ‘ದತ್ತ’ ಚಿತ್ರಕ್ಕೆ ದರ್ಶನ್ ಅವರಿಗೆ ಜತೆಯಾದವರು. ಆ ನಂತರ ಚಾಲೆಂಜಿಂಗ್ ಸ್ಟಾರ್ ಜತೆ ಮತ್ತೆ ನಟಿಸಿಲ್ಲ.

Add Asianetnews Kannada as a Preferred SourcegooglePreferred

ಈಗ ಬರೋಬ್ಬರಿ 12 ವರ್ಷಗಳ ನಂತರ ರಮ್ಯಾ ದರ್ಶನ್‌ಗೆ ನಾಯಕಿಯಾಗುವ ಸಾಧ್ಯತೆಗಳಿವೆ ಎನ್ನುತ್ತಿದೆ ಅವರದ್ದೇ ರಾಜಕೀಯ ವಲಯ. ಇತ್ತೀಚೆಗಷ್ಟೇ ಅವರ ಟ್ವಿಟ್ಟರ್ ಅಕೌಂಟ್‌ನಲ್ಲಿ ಬಯೋಡೇಟಾ ಬದಲಾಗಿದ್ದು ಕೂಡ ರಮ್ಯಾ ಚಿತ್ರರಂಗಕ್ಕೆ ಬರುತ್ತಾರೆಂಬುದನ್ನು ಪುಷ್ಠೀಕರಿಸುತ್ತಿದೆ. 

ದರ್ಶನ್‌ಗೆ ರಮ್ಯಾ ನಾಯಕಿಯಾಗುತ್ತಿರುವುದು ‘ಗಂಡುಗಲಿ ಮದಕರಿ ನಾಯಕ’ ಎನ್ನುವ ಚಿತ್ರಕ್ಕೆ ಎಂಬುದು ಸದ್ಯದ ಸುದ್ದಿ. ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿ, ರಾಜೇಂದ್ರಸಿಂಗ್ ಬಾಬು ನಿರ್ದೇಶನ ಮಾಡಲಿರುವ ಈ ಚಿತ್ರಕ್ಕೆ ದರ್ಶನ್ ಅವರೇ ನಾಯಕ ಎಂಬುದು ಈಗಾಗಲೇ ಗೊತ್ತು ಪಡಿಸಲಾಗಿದೆ. ಇದರ ಜತೆಗೆ ಈಗಷ್ಟೇ ಬಂದಿರುವ ಸುದ್ದಿ ಎಂದರೆ ಈ ಚಿತ್ರಕ್ಕೆ ರಮ್ಯಾ ನಾಯಕಿ ಆಗುತ್ತಾರೆಂಬುದು.

ಹಾಗೆ ನೋಡಿದರೆ ಪೌರಾಣಿಕ ನೆರಳು ಇದ್ದ ‘ಕಠಾರಿ ವೀರ ಸುರಸುಂದರಾಂಗಿ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಮುನಿರತ್ನ ನಿರ್ಮಿಸಿದ್ದರು. ಮುನಿರತ್ನ ಕಾಂಗ್ರೆಸ್ ಶಾಸಕರು. ಜತೆಗೆ ರಾಕ್‌ಲೈನ್ ವೆಂಕಟೇಶ್ ಅವರಿಗೆ ಬೀಗರು. ಈ ಎಲ್ಲಾ ಹಿನ್ನೆಲೆಗಳಿಂದ ‘ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕೆ ರಮ್ಯಾ ಅವರೇ ನಾಯಕಿ ಆಗುತ್ತಾರೆಂಬುದಕ್ಕೆ ಬಲವಾದ ಸಾಕ್ಷಿಗಳು ಸಿಗುತ್ತಿವೆ. ಅಲ್ಲದೆ ರಾಕ್‌ಲೈನ್ ನಿರ್ಮಾಣದಲ್ಲಿ ಬಂದ ‘ಬೊಂಬಾಟ್’ ಚಿತ್ರದಲ್ಲಿ ನಟ ಗಣೇಶ್ ಅವರಿಗೆ ರಮ್ಯಾ ನಾಯಕಿಯಾಗಿದ್ದವರು.

ಈಗ ದೊಡ್ಡ ಮಟ್ಟದಲ್ಲಿರುವ ಬರುತ್ತಿರುವ ಐತಿಹಾಸಿಕ ಚಿತ್ರಕ್ಕೆ ರಮ್ಯಾ ಅವರನ್ನೇ ಯಾಕೆ ಕರೆತರಬಾರದು ಎಂಬುದು ಚಿತ್ರತಂಡದ ಯೋಚನೆ. ಇದರ ಜತೆಗೆ ಸ್ವತಃ ರಮ್ಯಾ ಅವರಿಗೂ ಮತ್ತೆ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಅದನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲವೂ ಅಂದುಕೊಂಡಂತೆ ನಿಜವೇ ಆದರೆ ಸ್ಯಾಂಡಲ್‌ವುಡ್ ಕ್ವೀನ್ ಮತ್ತೆ ಬಣ್ಣ ಹಚ್ಚುವುದು ನಿಶ್ಚಿತ ಎನ್ನಲಾಗಿದೆ.