ಬೆಂಗಳೂರು (ಆ. 28): ಈ ಸಲ ಸುದೀಪ್ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಕಳೆದ ವರ್ಷ ಅವರು ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ. ಅಲ್ಲದೇ ಮನೆಯಲ್ಲಿ ಅಭಿಮಾನಿಗಳಿಗೆ ಸಿಗುತ್ತಲೂ ಇರಲಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದರು. ಈ ಸಲ ಅಭಿಮಾನಿ ದೇವರ ಮನಸ್ಸನ್ನು ನೋಯಿಸದಿರಲು ಸುದೀಪ್ ನಿರ್ಧರಿಸಿದ್ದಾರೆ. ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಲಿದ್ದಾರೆ. ಆದರೆ ಇದಕ್ಕೆ ಷರತ್ತುಗಳು ಅನ್ವಯಿಸುತ್ತವೆ.

ಸುದೀಪ್ ತಮ್ಮ ಅಭಿಮಾನಿಗಳಿಗೆ ವಿಧಿಸಿರುವ ಷರತ್ತುಗಳೇನು?

ಹೈದರಾಬಾದಿನ ರಾಮೋಜಿ ಫಿಲಮ್ ಸ್ಟುಡಿಯೋದಲ್ಲಿ ‘ಪೈಲ್ವಾನ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಹೇಳಿದ ಮಾತುಗಳು ಇಲ್ಲಿವೆ.

ಕೇಕು, ಹಾರ, ಶಾಲು ತರಬಾರದು:

ಕಳೆದ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ ಮಾಡುವ ಖರ್ಚನ್ನು ನಿಮ್ಮ ನಿಮ್ಮ ಊರುಗಳಲ್ಲಿ ಬಡವರಿಗೆ ನೆರವಾಗಿ. ಅದೇ ನನ್ನ ಹುಟ್ಟು ಹಬ್ಬ ಅಂತ ಹೇಳಿದ್ದೆ. ಆದರೆ, ಎಲ್ಲಿ ಹೋದರೂ ಅಭಿಮಾನಿಗಳು ನೀವು ನಮ್ಮೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂದು ಪಟ್ಟು ಹಿಡಿಯುತ್ತಿದ್ದರು. ಹೀಗಾಗಿ ನಾನು ಈ ಬಾರಿ ಕೆಲ ಷರತ್ತುಗಳನ್ನು ಹಾಕಿಯೇ ಅವರೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದೇನೆ.

ಸೆಪ್ಟಂಬರ್ 2 ಕ್ಕೆ ಕಿಚ್ಚ ಸುದೀಪ್ ಹುಟ್ಟುಹಬ್ಬ ಸಂಭ್ರಮಕ್ಕೆ ಅಂತ ಬರುವ ಯಾರೊಬ್ಬರು ಕೇಕು, ಹೂವಿನ ಹಾರ, ಶಾಲು, ಗಿಫ್ಟ್‌ಗಳನ್ನು ಯಾವ ಕಾರಣಕ್ಕೂ ತರಬಾರದು. ಒಂದೇ ಒಂದೇ ಕೇಕು ಕೂಡ ಕಾಣಬಾರದು. ಬರೀ ಕೈಯಲ್ಲಿ ಬಂದು ವಿಶ್ ಮಾಡಿ ಅಂತ ಹೇಳಿದ್ದೇನೆ. ಇದಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ವರ್ಷ ಅಭಿಮಾನಿಗಳ ಸಮ್ಮುಖದಲ್ಲಿ ಆಡಂಬರವಿಲ್ಲದೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವೆ.

ಯಾಕೆ ಇಂಥ ನಿರ್ಧಾರ?:

ಕೇಕು, ಹೂವಿನ ಹಾರ ತಂದು ತಮ್ಮ ನೆಚ್ಚಿನ ನಟರ ಹುಟ್ಟು ಹಬ್ಬ ಆಚರಿಸುವುದು ಅಭಿಮಾನಿಗಳ ತಪ್ಪಲ್ಲ. ಆದರೆ, ಸ್ಪರ್ಧೆಗೆ ಬಿದ್ದವರಂತೆ ನೂರು, ಇನ್ನೂರು ಕೇಜಿಗಳ ಲೆಕ್ಕದಲ್ಲಿ ಕೇಕ್ ತರುತ್ತಾರೆ. ಒಂದೊಂದು ತಂಡವೂ ಒಂದೊಂದು ಕೇಕ್ ತಂದು ಕಟ್ ಮಾಡಿ ಸಂಭ್ರಮಿಸುತ್ತಾರೆ. ಹಾಗೆ ತಂದ ಕೇಕ್‌ಗಳನ್ನು ಯಾರೂ ತಿನ್ನಲ್ಲ. ಮನೆ ಮುಂದೆಯೇ ಬಿಸಾಡಿ ಹೋಗಿರುತ್ತಾರೆ. ಹೀಗೆ ಬಿಸಾಡಿದ, ನೆಲಕ್ಕೆ ಕೇಕ್‌ಗಳನ್ನು ನನ್ನ ಮನೆಯ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸಕ್ಕೆ ಬರುವವರ ಮಕ್ಕಳು ಎತ್ತಿಕೊಂಡು ತಿನ್ನುತ್ತಿದ್ದನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ನೋವಾಯಿತು.

ನನ್ನ ಹುಟ್ಟುಹಬ್ಬದ ಸಂಭ್ರಮದ ನೆಪದಲ್ಲಿ ಇಂಥ ಅನಗತ್ಯ ವೆಚ್ಚ ಮಾಡುವ ಬದಲು ಅದೇ ಹಣವನ್ನು ಒಂದು ದಿನವಾದರೂ ಹಸಿದವರಿಗೆ ವೆಚ್ಚ ಮಾಡಿ ಅಂದಿದ್ದೆ. ಈ ಬಾರಿ ನನ್ನ ಅಭಿಮಾನಿಗಳು ಕೊಡಗಿನ ಜನರಿಗೆ ನೆರವಾಗುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ನನ್ನ ಹುಟ್ಟುಹಬ್ಬದ ಖರ್ಚನ್ನು ಕೂಡ ರಾಜ್ಯದಲ್ಲಿರುವ ಎಲ್ಲ ನನ್ನ ಅಭಿಮಾನಿ ಸಂಘಗಳು ಕೊಡಗು ಸಂಕಷ್ಟಕ್ಕೆ ನೆರವಾಗುವಂತೆ ವೆಚ್ಚ ಮಾಡಲಿ.