ಕಿಚ್ಚನಿಗೆ ಹತ್ತು ಪ್ರಶ್ನೆ; ಇಂಟರೆಸ್ಟಿಂಗ್ ಉತ್ತರ

Kiccha Interview with Kannada Prabha
Highlights

ಪ್ರಪಂಚದಲ್ಲಿ ನೀವೆಷ್ಟೇ ದೊಡ್ಡ ದೇವಸ್ಥಾನಕ್ಕೆ ಹೋದರೂ ಅದನ್ನು ನೋಡಿಕೊಳ್ಳುವವರು ಪೂಜಾರಿಗಳೇ. ಹಾಗಾಗಿ ದೊಡ್ಡದು ಚಿಕ್ಕದು ಎಂದುಕೊಳ್ಳಬಾರದು. ಗುರುದತ್ ಗಾಣಿಗ ನನ್ನ ಅಸಿಸ್ಟೆಂಟ್ ಆಗಿದ್ದ. ಕಾಫಿ, ಟೀ ಕೊಡುತ್ತಿದ್ದ. ನನಗೆ ಅವನ ಪ್ರತಿಭೆಯ ಬಗ್ಗೆ ಗೊತ್ತೇ ಇರಲಿಲ್ಲ.

1.  ಎಳೆನಿಂಬೆಕಾಯಿ ನಿರ್ದೇಶಕರ ಕೈಲಿ ಅಂಬರೀಷ್ ಸಿನಿಮಾ ಮಾಡಿಸಬಹುದಾ?

ಪ್ರಪಂಚದಲ್ಲಿ  ನೀವೆಷ್ಟೇ ದೊಡ್ಡ ದೇವಸ್ಥಾನಕ್ಕೆ ಹೋದರೂ ಅದನ್ನು ನೋಡಿಕೊಳ್ಳುವವರು ಪೂಜಾರಿಗಳೇ. ಹಾಗಾಗಿ ದೊಡ್ಡದು ಚಿಕ್ಕದು ಎಂದುಕೊಳ್ಳಬಾರದು. ಗುರುದತ್ ಗಾಣಿಗ ನನ್ನ ಅಸಿಸ್ಟೆಂಟ್ ಆಗಿದ್ದ. ಕಾಫಿ, ಟೀ ಕೊಡುತ್ತಿದ್ದ. ನನಗೆ ಅವನ ಪ್ರತಿಭೆಯ ಬಗ್ಗೆ ಗೊತ್ತೇ ಇರಲಿಲ್ಲ. ಒಮ್ಮೆ ನನ್ನ  ಕಂಪ್ಯೂಟರ್ ಹುಡುಗ ರಜೆಯಲ್ಲಿದ್ದಾಗ, ನನಗೇನೋ ಕಂಪ್ಯೂಟರ್ ಕೆಲಸ ಮಾಡಿಸಬೇಕಿತ್ತು. ನಾನೇ ಮಾಡ್ತೀನಿ ಅಣ್ಣ ಅಂದ. ನನ್ನ ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ಪರಿಹಾರ ಮಾಡಿಕೊಟ್ಟ. ನಿನಗಿದೆಲ್ಲ ಹೇಗೆ ಗೊತ್ತು ಅಂತ ಕೇಳಿದ್ದಕ್ಕೆ, ನಾನು ಬಂದಿದ್ದು ಅಸಿಸ್ಟೆಂಟ್  ಡೈರೆಕ್ಟರ್ ಆಗೋದಕ್ಕೆ. ಆದರೆ ನನಗೆ ಯಾರೂ ಪರಿಚಯ ಇಲ್ಲ. ಹೀಗಾಗಿ ಈ ಕೆಲಸ ಮಾಡ್ತಿದ್ದೀನಿ ಅಂದ. ಡೈರೆಕ್ಟರ್ ಆಗಬೇಕು ಎಂದುಕೊಂಡು ಬಂದು ಇದೆಲ್ಲವನ್ನೂ ಮಾಡಬಾರದು ಎಂದು ಹೇಳಿದೆ. ಅವತ್ತೇ ಅವನು ನನಗೆ  ಕೊನೆಯದಾಗಿ ಒಂದು ಕಪ್ ಟೀ ಕೊಟ್ಟದ್ದು. ನಾಳೆಯಿಂದಲೇ ಅವನನ್ನು ನನ್ನ ಸಮನಾಗಿ ಕೂರಿಸಿಕೊಂಡು ಮಾಣಿಕ್ಯದಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟೆ ಅವನು ಚೆನ್ನಾಗಿಯೆ ಮಾಡಿದ. ಪ್ರತಿಭೆ  ಇರುವವರು ಈ ರೀತಿಯ ಕೆಲಸಗಳನ್ನು ಮಾಡಬಾರದು. ಏನು ಪ್ರತಿಭೆ ಇದೆಯೋ ಆ ಕ್ಷೇತ್ರದಲ್ಲಿ ಕೆಲಸ ಮಾಡಬೇಕು.

2.  ನೀವು ಮಾಡುತ್ತಿದ್ದ ಕೌಟುಂಬಿಕ ಚಿತ್ರಗಳಲ್ಲಿ ಫೀಲಿಂಗ್  ಇತ್ತು. ಈಗ ಮಾಡ್ತಿರೋ ಸಿನಿಮಾಗಳು ಹಾಗಿಲ್ಲವಲ್ಲ? 
ಅದೇ ಇದು. ಇದೇ ಅದು. ಶಾಂತಿ ನಿವಾಸವೇ ಮಾಣಿಕ್ಯ. ಅದು ಹಿಟ್ ಆಗಲಿಲ್ಲ. ಇದು ಹಿಟ್ ಆಯಿತು. ಫ್ಯಾಮಿಲಿಯನ್ನು ಸೇರಿಸುವುದೇ ಮಾಣಿಕ್ಯ. ಇದು ನಾನು ಕಲಿತ ಪಾಠ. ಬಾಳೆ ಎಲೆಯಲ್ಲಿ ಹಾಕಿಕೊಟ್ರೆ ರೇಟ್ ಎಷ್ಟು? ಸ್ಟೀಲ್ ತಟ್ಟೆಯಲ್ಲಿ ಹಾಕಿ ಕೊಟ್ಟರೆ ರೇಟೇನು? ಸೆರಾಮಿಕ್ ನಲ್ಲಿ ಹಾಕಿ ಕೊಟ್ಟರೆ ಬೆಲೆ ಏನು? ಅದಕ್ಕು ಒಂಚೂರು  ಗಾರ್ನಿಶ್ ಮಾಡಿಕೊಟ್ಟರೆ ರೇಟೇನು ಎನ್ನುವುದೇ ನನಗೆ  ಸಿನಿಮಾ ನೈಜವಾಗಿ ಕಲಿಸಿದ ಪಾಠ. 

3. ಅಂದರೆ ನೀವು ಕಾಲಕ್ಕಿಂತ ಮುಂದೆ ಇದ್ದೀರಿ ಅಂತೀರಾ?
ಹಾಗೇನು ಇಲ್ಲ. ಅದು ರಾಂಗ್ ಟೈಂ ಅಷ್ಟೇ. ಕಾಮಿಡಿ ಬೇಕು ಎಂದಾಗ ನೋವಿನಕತೆ ಹೇಳುವುದು. ಫೀಲಿಂಗ್ ಬೇಕು ಅಂದಾಗ ಆ್ಯಕ್ಷನ್ ಹೇಳುವುದು ವ್ಯರ್ಥ.  ಸಾಯಂಕಾಲ ಬಿಸಿ ಬಿಸಿ ಬೊಂಡಾ ಬಜ್ಜಿ ಬೇಕು ಎನ್ನುವಾಗ  ಇಡ್ಲಿ ಕೊಟ್ಟರೆ ಅದು ವೇಸ್ಟ್. ಅದೇ ಬೊಂಡಾ ಬಜ್ಜಿ ಬೆಳಿಗ್ಗೆ ಕೊಟ್ಟರೆ ಫ್ಲಾಪ್. ಟೈಮಿಂಗಲ್ಲಿ ನಾವೆಲ್ಲಾ ಹೊಡೆಸಿಕೊಂಡಿದ್ದೇವೆ. ಯಾವಾಗ ಯಾರಿಗೆ ಏನು ಬೇಕು  ಎನ್ನುವುದನ್ನು ತಿಳಿದುಕೊಳ್ಳಬೇಕು.

4. ಸುದೀಪ್ ಆಗ ಹೇಗಿದ್ದರು, ಈಗ ಹೇಗಿದ್ದಾರೆ?
ನಾನಿಂದು ಬಹಳ ಖುಷಿಯಾಗಿದ್ದೇನೆ, ಒಂದು ಮ್ಯಾಗ್‌ಜಿನ್ ನನ್ನ ಚೇಂಜ್ ಮಾಡಿತು. ನಾನು ಸಾಮಾನ್ಯ  ವಿಮರ್ಶೆ, ನನ್ನ ಬಗ್ಗೆ ಬಂದಿರುವ ಲೇಖನ ಓದುವುದಿಲ್ಲ. ಒಮ್ಮೆ ಅಮ್ಮ ಬಂದಿದ್ದಾಗ, ಅವರು ನೆತ್ತಿಗೆ ಎಣ್ಣೆ  ಹಚ್ಚುತ್ತಿದ್ದರು. ನಾನು ಎದುರಿಗಿದ್ದ ಪತ್ರಿಕೆ ತಿರುವಿ ಹಾಕುತ್ತಿದ್ದೆ. ಅದರಲ್ಲಿ ಎಲ್ಲಾ ಹೀರೋ ಹೀರೋಯಿನ್  ಫೋಟೋ ಹಾಕಿದ್ದರು. ನಾನು ಎಂಟನೇ ಸಾಲಲ್ಲಿ ಇದ್ದೆ. ಹೊಸಬರ ಸಾಲಲ್ಲಿ ನಾನ್ಯಾಕೆ ಇದ್ದೀನಿ ಅಂತ ನೋಡಿದರೆ, ಅವರು ನನಗೆ ಕೊಟ್ಟ ಸ್ಥಾನ ಅದು ಅಂತ ಗೊತ್ತಾಯಿತು. ಆಮೇಲೆ ಅದು ಬಾಕ್ಸ್ ಆಫೀಸ್ ಕಲೆಕ್ಷನ್ ಪ್ರಕಾರ ಮಾಡಿದ ಪಟ್ಟಿ ಅನ್ನೋದು ತಿಳಿಯಿತು. ವೇದಿಕೆ ಮೇಲೆ ಏರಿದಾಗ ಯಾರಿಗೆ ವಿಶಲ್ ಹೆಚ್ಚು ಹಾಕುತ್ತಾರೆ ಎನ್ನುವುದನ್ನು ಕೂಡ ಲೆಕ್ಕ ಹಾಕುತ್ತಿದ್ದೆ. ನನ್ನ ಗೆಳೆಯ ಹೇಳಿದ ನೀನು ಅಡುಗೆ ಚೆನ್ನಾಗಿ ಮಾಡುತ್ತೀಯ. ಆದರೆ
ಅದನ್ನು ಬಡಿಸುವಾಗ ಯಾರಿಗೆ ಹೇಗೆ ಬೇಕೋ ಹಾಗೆ ಬಡಿಸು ಎಂದು. ಆವತ್ತಿಂದ ತೀರ್ಮಾನ ಮಾಡಿದೆ. ಐದು ವರ್ಷಗಳಲ್ಲಿ ಬದಲಾಗಬೇಕು ಅಂದುಕೊಂಡೆ. ಅದಾಗಿ ಐದು ವರ್ಷದ ನಂತರ ಮಾಣಿಕ್ಯ ಬಂತು. ರನ್ನ ಬಂತು.

5. ಪ್ರೇಕ್ಷಕರು ಬದಲಾಗಿದ್ದಾರಲ್ಲ.
ಹೌದು ಎಲ್ಲವೂ ಬದಲಾಗಿದೆ. ಎಲ್ಲರ ಸಮಯಕ್ಕೂ ಬೆಲೆ ಇದೆ. ಎಲ್ಲರೂ ತುಂಬಾ ಪ್ರೊಫೆಷನಲ್ ಆಗಿದ್ದಾರೆ. ನಾವು ಎಲ್ಲರ ಸಮಯಕ್ಕೂ ಬೆಲೆ ಕೊಟ್ಟರೆ ನಮ್ಮ ಸಮಯಕ್ಕೂ ಬೆಲೆ ಸಿಕ್ಕುತ್ತದೆ. ನನ್ನ ಸಿನಿಮಾಗಳಲ್ಲಿ ನಾನು ಟೀಚ್ ಮಾಡುವುದಿಲ್ಲ. ಮನರಂಜನೆ ನೀಡುತ್ತೇನೆ. ಅದರ ಜೊತೆಗೆ ಸ್ವಲ್ಪ ನೀತಿಗಳು ತಲುಪಬಹುದು, ಅದು ಪ್ರೇಕ್ಷಕ ತೆಗೆದುಕೊಂಡೆರೆ ಮಾತ್ರ. ಇಂದು ಎಲ್ಲರೂ ಸುಶಿಕ್ಷಿತರೇ ನಾವು ಏನನ್ನು ಮಾಡಬೇಕೋ ಅದನ್ನು ಮಾಡಬೇಕು ಅಷ್ಟೇ. ನಾವು ಹೇಳುವ ರೀತಿ ಚೇಂಜ್ ಆಗಬೇಕು. ಇಲ್ಲವಾದರೆ ಹಿಂದೆ ಉಳಿದುಬಿಡುತ್ತೇವೆ. 

6.  ಹೀರೋ ಲೈಫ್ ಹತ್ತು ವರ್ಷ ಇರುತ್ತೆ. ನಾವು ರಾಜ್ ಕುಮಾರ್ ಥರ ಇರೋಕೆ ಆಗಲ್ಲ ಅಂದಿದ್ದಿರಿ
ನಾವು ಪರಿಶ್ರಮ ಹಾಕಿದರೆ ಮಾತ್ರ ಉಳಿಯಲು ಸಾಧ್ಯ, ಇಲ್ಲವಾದರೆ ಬೇರೆಯವರು ಹಿಂದೆ ಹಾಕುತ್ತಾರೆ. ನಮ್ಮ ಬಳಿ ಫೆರಾರಿ, ಲ್ಯಾಂಬೋರ್ಗಿನಿ ಯಾವ ಕಾರ್ ಇದ್ದರೇನು ನಾವು 20 ಕಿ.ಮೀ  ಸ್ಪೀಡ್‌ನಲ್ಲಿ ಸಾಗಿದರೆ ಒಂದು ಸೈಕಲ್ ನಮ್ಮನ್ನು ಹಿಂದೆ ಹಾಕುತ್ತದೆ. ಸರಾಸರಿ ಸ್ಪೀಡನ್ನಾದರೂ ನಾವು ಕಾಪಾಡಿಕೊಳ್ಳಲೇಬೇಕು. ಇಂದು ನಮ್ಮ ಬೆರಳ ತುದಿಯಲ್ಲಿಯೇ ಮನರಂಜನೆ ಇದೆ. ಇಂದಿನ ತಂತ್ರಜ್ಞಾನ ನಮ್ಮ ಅಭಿರುಚಿಗಳನ್ನು ಚೆನ್ನಾಗಿ ತಿಳಿದುಕೊಂಡಿದೆ. ನನ್ನ ಯೂಟ್ಯೂಬ್‌ನಲ್ಲಿ ನನ್ನ ಹೋಮ್ ಪೇಜ್ ಬೇರೆ ಇರುತ್ತದೆ. ಇನ್ನೊಬ್ಬರ ಹೋಮ್ ಪೇಜ್ ಬೇರೆ ಇರುತ್ತದೆ. ಹಾಗಾಗಿ ಯಾರಿಗೆ ಏನೇನು ಬೇಕೋ ಅದು ಬೇಗನೇ ಸಿಕ್ಕುತ್ತದೆ. ಹಾಗಾಗಿ ನಾವು ವೇಗವಾಗಿ ಸಾಗಬೇಕು.

7. ಎಲ್ಲರಲ್ಲೂ ಸುದೀಪ್ ನಮ್ಮವರು ಎನ್ನುವ ಅಭಿಮಾನವಿದೆ
ನಾವು ಕನ್ನಡದವರು ಎನ್ನುವ ಕಾರಣಕ್ಕೆ ಗೆಲ್ಲುತ್ತೇವೆ ಎನ್ನುವುದು ತಪ್ಪು, ನಾವು ನಮ್ಮತನವನ್ನು ಕಾಪಾಡಿಕೊಳ್ಳಬೇಕು. ನಾವು ಫ್ರೆಂಡ್ಸ್ ಜೊತೆ ಇದ್ದಾಗ ಯಾವುದಾದರೂ ಹೋಟೆಲ್‌ಗೆ ಹೋಗಿ ಊಟ ಮಾಡಿಕೊಂಡು ಬರಬಹುದು. ಆದರೆ ಫ್ಯಾಮಿಲಿ ಜೊತೆಗೆ ಹೋಗುವಾಗಿ ಒಳ್ಳೆಯ ಹೋಟೆಲ್ ಆಯ್ಕೆ ಮಾಡಿಕೊಳ್ಳುತ್ತೇವೆ. ಆ ಆಯ್ಕೆ ಮಾಡಿಕೊಳ್ಳುವಾಗ ಆ ಹೋಟೆಲ್‌ಗೆ ಏನಾದರೂ ವಿಶೇಷ ಇರಲೇಬೇಕಲ್ಲವೇ. ಅಲ್ಲಿ ನಿಮಗೆ ಏನೋ ಇಷ್ಟವಾಗಿದೆ ಅದಕ್ಕೆ ಅಲ್ಲಿಗೇ ಹೋಗುತ್ತೀರಿ. ಸಿನಿಮಾ, ನಟ ಎಲ್ಲರೂ ಹಾಗೇನೆ. ಭಾಷೆ ನನ್ನ ಐಡೆಂಟಿಟಿ. ಆದರೆ ಅದೇ ನನಸಾಮರ್ಥ್ಯವಲ್ಲ. ಬಿಗ್ ಬಾಸ್‌ಅನ್ನು ಐದನೇ ಸೀಸನ್‌ನಲ್ಲೂ ಮತ್ತೆ ಜನ ನೋಡುತ್ತಾರೆ ಎಂದರೆ ಅದರ ಹಿಂದೆ ದೊಡ್ಡ ಪರಿಶ್ರಮ ಇರುತ್ತದೆ. ಅದಕ್ಕೆ ಅದು ಹಿಟ್ ಆಗುವುದು.

8.  ಬಿಗ್ ಬಾಸ್ ಹೇಗನ್ನಿಸಿತು?
ಅದು ಹೋಗಿದ್ದೇ ಗೊತ್ತಾಗಲಿಲ್ಲ. ತುಂಬಾ ಚೆನ್ನಾಗಿತ್ತು. ಪ್ರತಿಯೊಂದು ಸೀಸನ್‌ಗೂ ಹೇಗೇಗೆ ಬೇಕೋ ಹಾಗೆ ಇದ್ದೆ. 

9.  ನೀವು ಹಲವಾರು ಹೊಸಬರಿಗೆ ಬೆಂಬಲ ನೀಡಿದ್ದೀರಿ ಇದರಿಂದ ಇಂಡಸ್ಟ್ರಿಗೆ ಒಳ್ಳೆಯದಾಗುತ್ತಿದೆ.
ಇದೆಲ್ಲವೂ ನಮ್ಮ ಅನುಭವ. ಹಿಂದೊಮ್ಮೆ ನಮಗೆ ಬೇರೆಯವರು ಅವಕಾಶ ಕೊಟ್ಟಿರುತ್ತಾರೆ. ಈಗ ನಾವು ಕೊಡುತ್ತೇವೆ ಅಷ್ಟೇ. ಮದುವೆ ಎಂದರೆ ಗಂಡು ಹೆಣ್ಣಿಗೆ ಮಾತ್ರ ಆಗುವುದು. ಆದರೆ ಎಲ್ಲರನ್ನೂ ಕರೆದು ಊಟ ಹಾಕುತ್ತೇವೆ. ಏಕೆಂದರೆ ನಮ್ಮ ಬಳಿ ದುಡ್ಡಿದೆ ಎನ್ನುವುದಕ್ಕೆ ಅಲ್ಲ. ಒಂದು ಆಶೀರ್ವಾದ ಸಿಗಲಿ ಎಂದಷ್ಟೇ. ನಾವು ನಮ್ಮ ಬಳಿ ಸಹಾಯ ಮಾಡುವ ಶಕ್ತಿ ಇದ್ದಾಗ ಮಾಡಬೇಕು. ದೇವರು ಸಹಾಯ ಮಾಡಲಿ ಎಂದೇ ಶಕ್ತಿ ನೀಡುವುದು.

10.  ಯು  ಆರ್ ನಾಟ್ ರೀಚಬಲ್ ಎನ್ನುವ ಮಾತಿದೆ
ಹಾಗೇನೂ ಇಲ್ಲ. ಸರಿಯಾದ ಉದ್ದೇಶ ಇದ್ದರೆ ನಾನು ಸಿಕ್ಕೇ ಸಿಕ್ಕುತ್ತೇನೆ.

loader