ನಮ್ಮದು ಬಡ ಕುಟುಂಬ. ತಂದೆ ಪ್ರತಿಮೆ ಮಾಡುತ್ತಾ ತಮ್ಮ ನಾಲ್ಕು ಜನ ಮಕ್ಕಳನ್ನು ನೋಡಿಕೊಂಡು ಬೆಳೆಸುತ್ತಿದ್ದರು. ನನ್ನ ಮೊದಲ ಹೆಸರು ಕಿರಣ್‌. ನನ್ನೂರು ಸಂಗೀತ ಕುಟುಂಬಗಳಿಂದ ಕೂಡಿದ್ದ ಒಂದು ಹಳ್ಳಿ. ಊರಿನಲ್ಲಿ ಶಾಸ್ತ್ರೀಯ ಸಂಗೀತ, ಭಜನೆ, ಯಕ್ಷಗಾನ ಹೀಗೆ ಎಲ್ಲಾ ರೀತಿಯ ಸಂಗೀತಗಳು ಕೇಳುತ್ತ ಬೆಳೆದವರು. ಇದರಿಂದಲೇ ಒಂದು ಹಂತದಲ್ಲಿ ಸಂಗೀತದ ಮೇಲೆ ಆಸಕ್ತಿ, ಪ್ರೀತಿ, ಕನಸು ಹುಟ್ಟಿತು ಎಂದರೆ ತಪ್ಪಾಗಲಾರದು.

ಅಮೇಜಾನ್ ಪ್ರೈಮ್‌ನಲ್ಲಿ ಕೆಜಿಎಫ್ ಬಿಡುಗಡೆ

ವಿದ್ಯಾಭ್ಯಾಸಕ್ಕಿಂತ ಸಂಗೀತಕ್ಕೆ ಆಸಕ್ತಿ ಹೆಚ್ಚು

ನನ್ನ ವಿದ್ಯಾಭ್ಯಾಸವನ್ನು ಮಜಮಾಡಿಕೊಂಡು ಕಲಿತೆ. ಓದುವುದೆಂದರೆ ಅಲರ್ಜಿ ಇದ್ದಂತೆ. ಆದರೆ ಸಂಗೀತ ಎಂದರೆ ಎಲ್ಲಿದ್ದರೂ ಓಡಿ ಬರುತ್ತಿದ್ದೆ. ನಾನು ಎಂಟನೇ ತರಗತಿಯಲ್ಲಿ ಮೊದಲು ಫೇಲ್‌ ಆಗಿದ್ದೆ. ನಂತರ ನೇರವಾಗಿ ಹತ್ತನೇ ತರಗತಿಗೆ ಹೋಗಿ ಕಷ್ಟಪಟ್ಟು ಮುಗಿಸಿದ ಮೇಲೆ ಮುಂದೆ ಓದಲು ಮನಸ್ಸು ಬಾರದೆ ಸಂಗೀತದ ಕಡೆ ನನ್ನ ಆಸಕ್ತಿ ಗಮನ ಹೆಚ್ಚಾಯಿತು. ನಂತರ ಒಂಭತ್ತನೇ ತರಗತಿಯನ್ನು ಎಗರಿಸಿ ಅಥವಾ ತಪ್ಪಿಸಿಕೊಂಡು, ಹತ್ತನೇ ತರಗತಿಯಲ್ಲಿ ಕಷ್ಟಪಟ್ಟು ಪರೀಕ್ಷೆ ಬರೆದು ತೇರ್ಗಡೆಯಾದೆ. ಓದಿನ ವಿಚಾರದಲ್ಲಿ ನಾನು ಎಂದಿಗೂ ಪಾಸ್‌, ಫೇಲ್‌ಬಗ್ಗೆ ತಲೆಕೆಡಿಸಿಕೊಂಡವನಲ್ಲ.

ಕೇರಳ ಅಭಿಮಾನಿಗಳೊಂದಿಗೆ ಕೆಜಿಎಫ್ ವೀಕ್ಷಿಸಿದ ಯಶ್

ಕಷ್ಟಜೀವನದ ಮೊದಲನೇ ಮೆಟ್ಟಿಲು

ನನ್ನ ತಂದೆ ಪ್ರತಿಮಗಳನ್ನು ಮಾಡುತ್ತಿದ್ದರು. ನಮ್ಮದು ಬಡ ಕುಟುಂಬವಾಗಿದ್ದರಿಂದ ಅಪ್ಪನಿಗೆ ಬಾಲ್ಯದಲ್ಲಿ ಆಗಾಗ ಜೊತೆಯಾಗುತ್ತಿದ್ದೆ. ನನ್ನ 14ನೇ ವಯಸ್ಸಿನಲ್ಲಿದ್ದಾಗ ಪ್ರತಿಮೆ ಬಗ್ಗೆ ಹಾಗೂ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಬೇಕೆಂದು ನನ್ನ ಸಂಗೀತ ಪರಿಕರಗಳ ಜೊತೆಗೆ ಬೆಂಗಳೂರಿಗೆ ಕಾಲಿಟ್ಟೆ. ಬೆಂಗಳೂರಿಗೆ ಬಂದಾಗ ಬೆಳಗ್ಗೆ ಶಿಲ್ಪಕಲೆಗಳ ಬಗ್ಗೆ ಕಲಿಯಲು ಹೋಗುತ್ತಿದ್ದೆ. ಸಂಜೆ ಸಮಯದಲ್ಲಿ ಕೀಬೋರ್ಡ್‌ ಹಿಡಿದು ನುಡಿಸುತ್ತಿದ್ದೆ. ನನ್ನ ಪ್ರತಿಭೆಯನ್ನು ಗುರುತಿಸಿದ ನನ್ನ ಸ್ನೇಹಿತ ‘ಇದು ಕಂಪ್ಯೂಟರ್‌ ಯುಗ, ಇದರಿಂದ ಏನೂ ಪ್ರಯೋಜನವಿಲ್ಲ’ ಎಂದಿದ್ದ. ಅದೇ ಮೊದಲ ಬಾರಿಗೆ ಕಂಪ್ಯೂಟರ್‌ ಎಂಬ ಪದದ ಪರಿಚಯವಾಗಿದ್ದು, ಅಲ್ಲಿಯವರೆಗೂ ಅದರ ಬಗ್ಗೆ ಗೊತ್ತೇ ಇರಲಿಲ್ಲ. ಬಾಲ್ಯದಿಂದಲೂ ಕೂಡಿಡುತ್ತಿದ್ದ ಅಲ್ಪ ಸ್ವಲ್ಪ ಹಣಗಳಿಂದ ಒಂದು ಕಂಪ್ಯೂಟರ್‌ನ್ನು ಖರೀದಿಸಿದೆ. ಆಗ ನಾನೇ ಒಂದು ಮ್ಯೂಸಿಕ್‌ ಕಂಪೋಸ್‌ ಮಾಡಬೇಕು ಎಂಬ ಆಸೆ ಹುಟ್ಟಿತು. ಆದರೆ ಕೈನಲ್ಲಿ ಪಿಡಿಗಾಸು ಇಲ್ಲ, ಹಾಗಂತ ಆಸೆಯನ್ನು ಬಿಟ್ಟುಬಿಡಲು ಸಿದ್ಧನಿರಲಿಲ್ಲ. ಅದಕ್ಕೆಂದೇ ಬಾಂಬೆ ಕಡೆ ಮುಖ ಮಾಡಿದೆ.

ಜೀವನ ಪರೀಕ್ಷೆಯ ಎರಡನೇ ಮೆಟ್ಟಿಲು

ಶಿಲ್ಪಕಲೆಯನ್ನು ಕಲಿಯುತ್ತಿದ್ದ ನಾನು ಆ ಒಂದು ವರ್ಷ ಬೆಳಗ್ಗೆ ಜೀಸಸ್‌ನ ಪ್ರತಿಮೆಯನ್ನು ಮಾಡುತ್ತಿದ್ದೆ. ರಾತ್ರಿ ಪಬ್‌ಗಳಿಗೆ ಹೋಗುತ್ತಿದ್ದೆ. ಆಗ ಬಾಂಬೆಯಲ್ಲಿದ್ದ ನನಗೆ ಬಾಲಿವುಡ್‌ನಲ್ಲಿ ಒಂದು ಸಂಗೀತ ಕಂಪೋಸ್‌ ಮಾಡಿ ನಾನೇ ನುಡಿಸಬೇಕು ಎಂಬ ಆಸೆ ಮೂಡಿತು. ಅದಕ್ಕೂ ಪ್ರಯತ್ನಿಸಿದೆ. ಆದರೆ ನಾನಿದ್ದ ವೇಷ ಹಾಗೂ ಭಾಷೆಯಿಂದ ಜನ ಹತ್ತಿರಕ್ಕೂ ಕರೆಸಿಕೊಳ್ಳುತ್ತಿರಲಿಲ್ಲ. ಹಸಿದ ಹೊಟ್ಟೆಯಲ್ಲಿ ಸಾಧನೆಯ ಛಲ ಇನ್ನೂ ಆಳವಾಗಿ ನನ್ನಲ್ಲಿ ಬೇರೂರಿತ್ತು. ನಾನಿದ್ದ ಅವಸ್ಥೆಯಲ್ಲಿ ಎಲ್ಲೂ ಅವಕಾಶ ಸಿಗದೆ ಅವಮಾನಕ್ಕೆ ಗುರಿಯಾದೆ. ನಾನು ಕೆಲಸ ಮಾಡುತ್ತಿದ್ದ ಪಬ್‌ಗೆ ಪೊಲೀಸರು ರೇಡ್‌ ಮಾಡಿದ್ದರಿಂದ ಅದು ಸಹ ಬಾಗಿಲು ಮುಚ್ಚಿತು. ಎಲ್ಲಿಯೂ ಕೆಲಸವಿಲ್ಲದೆ ಬರಿಗೈನಲ್ಲಿದ್ದೆ. ಇದರಿಂದ ಬೇಸತ್ತು ಊರಿಗೆ ಮರಳಲು ನನ್ನೆಲ್ಲಾ ಇನ್ಸಟ್ರುಮೆಂಟ್‌ಗಳನ್ನು ಪ್ಯಾಕ್‌ ಮಾಡಿಕೊಂಡು ಬಾಂಬೆ ರೈಲ್ವೆ ಸ್ಟೇಷನ್‌ ಬಳಿ ಹೋದೆ. ಅಲ್ಲಿ ಎಲ್ಲಿ ನೋಡಿದರು ಪೊಲೀಸರ ಸರ್ಪಗಾವಲಿತ್ತು. ಥಾಣೆ ರೈಲ್ವೇ ಸ್ಟೇಷನ್‌ನಲ್ಲಿ ಬಾಂಬ್‌ ಸ್ಫೋಟವಾಗಿತ್ತು ಎಂಬ ಮಾಹಿತಿ ತಿಳಿತು.

ಪ್ರಿಯಾ ವಾರಿಯರ್ ಕನ್ನಡದಲ್ಲಿ ನೋಡಿದ ಚಿತ್ರ ಇದಂತೆ!

ನಾನು ಒರಟು ಒರಟಾಗಿದ್ದರಿಂದ ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದರು. ನನ್ನ ಬಳಿ ಬಾಂಬ್‌ ಇರಬಹುದೆಂದು ಇದ್ದ ಗಿಟಾರ್‌, ತಬಲ, ಕೀಬೋರ್ಡ್‌ ಎಲ್ಲ ಸಂಗೀತ ಪರಿಕರಗಳನ್ನು ನಾಶ ಮಾಡಿದ್ದರು. ಇತ್ತ ಕೆಲಸವಿಲ್ಲದೆ ಬರಿಗೈ, ಉಸಿರಾಗಿದ್ದ ಸಂಗೀತದ ಎಲ್ಲಾ ಸಂಗೀತ ಪರಿಕರಗಳನ್ನು ಕಳೆದುಕೊಂಡ ದುಃಖದಲ್ಲೇ ಕೊನೆಗೂ ರೈಲು ಹತ್ತಿದೆ. ಸತತ 16 ಗಂಟೆ ರೈಲಿನ ಶೌಚಾಲಯದಲ್ಲೇ ಕುಳಿತು ಬಾಂಬೆಯಿಂದ ಮಂಗಳೂರಿಗೆ ಪ್ರಯಾಣಬೆಳೆಸಿದೆ.

ಕಿಡ್ನಿ ಮಾರಲು ಮುಂದಾದ ಕ್ಷಣ

ಮಂಗಳೂರಿಗೆ ಮರಳಿದೆ. ಬಾಲ್ಯದಿಂದಲೂ ನನಗೆ ನನ್ನಣ್ಣ ತುಂಬಾ ಪ್ರೋತ್ಸಾಹ ನೀಡುತ್ತಿದ್ದ. ಆದರೆ ಮನೆಯ ಸಾಲ ಹಾಗೂ ಕುಟುಂಬ ನಿರ್ವಹಣೆಯ ಒತ್ತಡ ಹೆಚ್ಚಿತ್ತು. ಯಾವುದೇ ರೀತಿಯಲ್ಲಿ ನನ್ನ ಕಲಿಕೆ ಹಾಗೂ ಆಸೆ, ಕನಸುಗಳಿಂದ ಹಿಂದೆ ಸರಿಯಲು ಇಷ್ಟಇರಲಿಲ್ಲ. ಜೀವವಾಗಿದ್ದ ಸಂಗೀತ ಪರಿಕರಗಳೂ ಸಹ ನನ್ನ ಬಳಿ ಇರಲಿಲ್ಲ, ಎಲ್ಲವನ್ನು ಕಳೆದುಕೊಂಡಿದ್ದೆ. ಕನಸು ಜೀವಂತವಾಗಿರಿಸಿ ಕೊನೆಗೆ ಮಂಗಳೂರಿನ ಆಸ್ಪತ್ರೆಗೆ ಫೋನ್‌ ಮಾಡಿ ಯಾರಿಗಾದರೂ ಕಿಡ್ನಿ ಬೇಕಾಗಿದೆಯಾ ಎಂದು ವಿಚಾರಿಸಿದ್ದೆ. ಆಸ್ಪತ್ರೆಯ ಸಿಬ್ಬಂದಿಗಳೆಲ್ಲ ನನ್ನನ್ನು ಸಿದ್ಧಪಡಿಸುತ್ತಿದ್ದರೆ ನನಗೆ ಹೆದರಿಕೆಯಾಗುತ್ತಿತ್ತು. ಆಗ ನನಗೆ ಬಂದ ಆಲೋಚನೆಗಳು ಈಗಲೂ ಹೆದರಿಸುತ್ತದೆ. ಆಗ ಆಸ್ಪತ್ರೆಯವರು ನನ್ನ ಎರಡೂ ಕಿಡ್ನಿ ತೆಗೆದುಕೊಂಡರೆ ಏನಾಗುತ್ತೆ? ನಾನು ಟೇಬಲ್‌ ಮೇಲೆ ಸತ್ತರೆ ಏನಾಗುತ್ತೆ? ಎಂಬ ಆಲೋಚನೆಗಳು ತಲೆಯಲ್ಲಿ ಓಡಲಾರಂಭಿಸಿದವು. ಆಗ ಸಿಬ್ಬಂದಿಗಳಿಗೆ ಶೌಚಾಲಯಕ್ಕೆ ಹೋಗಬೇಕೆಂದು ಹೇಳಿ ಅಲ್ಲಿಂದ ಓಡಿ ಹೋದೆ. ನಂತರ ಮಂಗಳೂರಿನ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುತ್ತಾ ಅಲ್ಲಿದ್ದ ಗಾರ್ಡ್‌ಗೆ ದಿನಕ್ಕೆ ರು.3 ಕೊಟ್ಟು ಒಂದು ತಿಂಗಳು ಅಲ್ಲಿಯೇ ವಾಸವಿದ್ದೆ.

ಹಸಿದ ಹೊಟ್ಟೆಗೆ ಜೀವದಾನ

ಹೀಗೆ ಇದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಮನಗಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದೆ. ಕೈಯಲ್ಲಿ ಒಂದು ಕಾಸೂ ಸಹ ಇರಲಿಲ್ಲ. ಹೊಟ್ಟೆಹಸಿವು ನೀಗಿಸಲು ಬೇರೆ ಬೇರೆ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ನೀಡುತ್ತಿದ್ದ ಪ್ರಸಾದ ಸೇವಿಸುತ್ತ ಹಸಿವು ನೀಗಿಸುತ್ತಿದ್ದೆ. ಆದರೆ ಸಂಗೀತದ ಹಸಿವು ಇನ್ನೂ ಹೆಚ್ಚಾಗುತ್ತಿತ್ತು. ನಾನಿದ್ದ ಸ್ಥಿತಿಯನ್ನೂ ಗಮನಿಸದೆ ಅದು ನನ್ನ ಕೈಯಲ್ಲಿ ಆಗುತ್ತೊ ಇಲ್ಲವೋ ಎಂಬ ಮಟ್ಟಿಗೆ ಯೋಚಿಸದಷ್ಟು ಛಲ, ಕನಸು, ಆಸೆ, ಹಟ ನನ್ನಲ್ಲಿ ಬೇರುರಿತ್ತು. ಹೀಗೆ ಒಮ್ಮೆ ಯಾರೋ ಒಬ್ಬರು ನನ್ನನ್ನು ಗುರುತಿಸಿ ಅಕ್ಕಸಾಲಿಗನ ಬಳಿ ಕರೆದುಕೊಂಡು ಹೋದರು. ಅಲ್ಲಿ ಆ ಅಕ್ಕಸಾಲಿಗ ‘ನನ್ನನ್ನು ಭೇಟಿ ಮಾಡಲು ಮುಂದೊಂದು ದಿನ ಆಪಾಯಿಂಟ್‌ಮೆಂಟ್‌ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು. ಆಗ ನನಗೆ ಹೊಟ್ಟೆಹಸಿವು ನೀಗಿಸಲು ಬೇಕಾದದ್ದು ಕೇವಲ ರು.10 ಅಷ್ಟೆ. ಅವರು ಅಲ್ಲಿ ಮಾತನಾಡಿದ್ದು ಅನುಮತಿ ಮತ್ತು ಹೆಸರು ಗಳಿಸುವ ಬಗ್ಗೆ. ನನ್ನ ಕನಸಿಗೆ ನೀರೆರದ ಮಾತುಗಳು ಅವು ಎಂದು ಕಾಣಿಸಿತು. ಆ ಮಾತುಗಳು ನನಗೆ ಇನ್ನಷ್ಟುಪುಷ್ಠಿ ನೀಡಿತು.

ಆ ಅಕ್ಕಸಾಲಿಗ ‘ನಿನಗೆ ಏನು ಬೇಕು’ ಎಂದು ಕೇಳಿದರು. ಆಗ ಕೀಬೋರ್ಡ್‌ ಕೊಂಡುಕೊಳ್ಳಲು ನನಗೆ 35 ಸಾವಿರ ಹಣ ಬೇಕು ಎಂದು ಕೇಳಿದ್ದೆ. ನಾನು ಅವರನ್ನು ಭೇಟಿ ಮಾಡಿದ್ದು ಅಂದೇ ಮೊದಲ ಬಾರಿಗೆ. ಅವರು ನನ್ನ ಮಾತನ್ನು ಕೇಳಿ ನನ್ನಲ್ಲಿ ಏನೋ ಒಂದು ಪ್ರತಿಭೆ ಇದೆ ಎಂದು ಗುರುತಿಸಿ ಅಲ್ಲೇ ಒಂದು ಕ್ಷಣವೂ ಯೋಚಿಸದೆ ತಕ್ಷಣ ನನಗೆ 35 ಸಾವಿರ ಹಣ ನೀಡಿದರು. ಅಂದಿನಿಂದ ಕಿರಣ್‌ ಎಂದಾಗಿದ್ದ ನಾನು ಕ್ರಿಶ್ಚಿಯನ್‌ನ ರವಿಯಾಗಿ ಬದಲಾದೆ. ಕೆಲ ವರ್ಷದ ನಂತರ ನನ್ನ ಹೆಸರಿನ ಮುಂದೆ ನನ್ನೂರಿನ ಹೆಸರು ಜೋಡಿಸಿಕೊಂಡು ರವಿ ಬಸ್ರೂರು ಎಂದು ಬದಲಾದೆ.

ಸಿನಿಮಾ ಇಂಡಸ್ಟ್ರೀ ಪ್ರವೇಶ

ಅಂದು ಅಕ್ಕಸಾಲಿಗನಿಂದ ಪಡೆದ ಹಣದಲ್ಲಿ ಕೀಬೋರ್ಡ್‌ ಖರೀದಿಸಿದೆ. ನಂತರ ಬಂದದ್ದನ್ನು ಸ್ವೀಕರಿಸಿ, ಕಷ್ಟಗಳನ್ನು ಎದುರಿಸುತ್ತಾ ಬಂದೆ. ಕೊನೆಗೆ ಬೆಂಗಳೂರಿನ ರೇಡಿಯೋ ಸ್ಟೇಷನ್‌ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಮೊದಲ ಬಾರಿ 15 ಸಾವಿರ ಹಣವನ್ನು ನನ್ನ ಶ್ರಮದಿಂದ ವೇತನದ ರೂಪದಲ್ಲಿ ಪಡೆದುಕೊಂಡೆ. ಅದೇ ಮೊದಲ ಬಾರಿ ‘ಸ್ಯಾಲರಿ’ ಎಂಬ ಶಬ್ದ ಕೇಳಿದ್ದು. ಅಲ್ಲಿಂದ ನನಗೆ ಮ್ಯೂಸಿಕ್‌ ಡೈರೆಕ್ಟರ್‌ ಅರ್ಜುನ್‌ ಜನ್ಯ ಅವರ ಪರಿಚಯವಾಯಿತು. ಅವರ ಜೊತೆಗೆ ಸುಮಾರು 64 ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಆದರೆ 65ನೇ ಸಿನಿಮಾ ಉಗ್ರಂ ಚಿತ್ರಕ್ಕೆ ಮೊಟ್ಟಮೊದಲ ಬಾರಿಗೆ ನಾನೇ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದೆ. ಅದೂ ಸಹ ಸೂಪರ್‌ ಹಿಟ್‌ ಆಗಿ ಜನ ನನ್ನನ್ನು ಗುರುತಿಸುವಂತೆ ಮಾಡಿತು.

ಅಲ್ಲಿಂದ ಇತ್ತೀಚೆಗೆ ಬಿಡುಗಡೆಯಾದ ಬಹುಭಾಷಾ ಚಿತ್ರ ಕೆಜಿಎಫ್‌ಗೂ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದೆ. ಹಲವು ಭಾಷೆಗಳಲ್ಲಿ ತೆರೆಕಂಡ ನನ್ನ ಮೊದಲ ಸಿನಿಮಾವಾಗಿ ಕೆಜಿಎಫ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಲಾಕ್‌ಬಾಸ್ಟರ್‌ ಸಿನಿಮಾವಾಗಿ ವಿಶ್ವದಾದ್ಯಂತ ನನ್ನನ್ನು ಗುರುತಿಸುವಂತೆ ಮಾಡಿತು.

ಲೈಫ್‌ ಜರ್ನಿಯಲ್ಲಿ ಕಲಿಕೆಯೊಂದಿಗೆ ಕೀರ್ತಿ

ನಾನು ನನ್ನ ಜೀವನದುದ್ದಕ್ಕೂ ಒಬ್ಬ ಕಾರ್ಮಿಕನಾಗಿ, ಟೈಲರ್‌, ಅಕ್ಕಸಾಲಿಗ, ಸಿಲ್ವರ್‌ಸ್ಮಿತ್‌, ಮನೆಗಳಿಗೆ ಬಣ್ಣ ಬಳೆಯುವ ಪೇಯಿಂಟರ್‌ ಆಗಿ, ಪ್ರತಿಮೆ ಮಾಡುವ ಶಿಲ್ಪಗಾರನಾಗಿ ಕೆಲಸ ಮಾಡಿದೆ. ನಾನೊಬ್ಬ ನಿರೂಪಕ, ಹಾಡುಗಾರ, ಸಂಗೀತ ನಿರ್ದೇಶಕನಾಗಿ ಜೀವನದಲ್ಲಿ ಸಾಕಷ್ಟುಕಷ್ಟಗಳನ್ನು ಎದುರಿಸಿ ಪ್ರತಿ ಹಂತದಲ್ಲೂ ಕಲಿತಿದ್ದೇನೆ. ಎಲ್ಲಾ ರೀತಿಯ ಕೆಲಸಗಳನ್ನು ಮಾಡಿ, ಜೀವನದ ಪರೀಕ್ಷೆಗಳನ್ನು ಎದುರಿಸಿ ಕೊನೆಗೆ ನನ್ನ ಸಾಧನೆ, ಕನಸುಗಳಿಗೆ ಮತ್ತು ಜೀವನದ ಗುರಿಯ ಕಡೆ ಕೆಲಸ ಮಾಡುತ್ತಿದ್ದೇನೆ.

ನಾವು ನಮ್ಮ ನಿಶ್ಚಲ ಗುರಿಯನ್ನು ಹೊಂದಿ ಅದರ ಕಡೆ ಶ್ರಮಿವಹಿಸಿ ಕೆಲಸ ಮಾಡಿದ್ದೇ ಆದಲ್ಲಿ ಯಶಸ್ಸು, ಕೀರ್ತಿ ತನ್ನಿಂದ ತಾನೇ ಲಭಿಸುತ್ತದೆ.