ಚಲನಚಿತ್ರ ವಾಣಿಜ್ಯ ಮಂಡಳಿಗೆ ಅವಿರೋಧ ಆಯ್ಕೆಗೆ ಕಾರಣ?

ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಇರುತ್ತೇನೆ. ಎಲ್ಲರನ್ನು ಸ್ನೇಹ ಮನೋಭಾವದಿಂದ ನಡೆಸಿಕೊಂಡು, ಎಲ್ಲರ ಸಮಸ್ಯೆಗಳು ಸ್ಪಂದಿಸುತ್ತೇನೆಂಬ ಭರವಸೆ ಇಟ್ಟುಕೊಂಡು ನನ್ನ ಆಯ್ಕೆ ಮಾಡಿದ್ದಾರೆ. ಹಳಬ, ಅನುಭವಸ್ಥ ಎಂಬುದು ಒಂದು ಕಾರಣ ಅಷ್ಟೆ. ನಾನು ಹುಟ್ಟಿದ್ದೇ ಸಿನಿಮಾ ಕುಟುಂಬದಲ್ಲಿ. ನಮ್ಮ ತಂದೆಯವರು 1965ರಲ್ಲೇ ಟೂರಿಂಗ್‌ ಟಾಕೀಸ್‌ ನಡೆಸುತ್ತಿದ್ದವರು. 16ನೇ ವಯಸ್ಸಿಗೇ ಚಿತ್ರರಂಗಕ್ಕೆ ಬಂದೆ. ತುಮಕೂರಿನಲ್ಲಿ ಚಿತ್ರಮಂದಿರಗಳನ್ನು ನಡೆಸುತ್ತಿದ್ದೆ. ಸಿನಿಮಾ ವಿತರಣೆ ಮಾಡಿದ್ದೇನೆ.

ಚಿತ್ರರಂಗದ ಸಮಸ್ಯೆಗಳಿಗೆ ವಾಣಿಜ್ಯ ಮಂಡಳಿಯಿಂದ ಪರಿಹಾರ ಸಾಧ್ಯವೇ?

ಎಲ್ಲರಿಗೂ, ಎಲ್ಲ ಸಮಸ್ಯೆಗಳಿಗೂ ಪರಿಹಾರ ಹೇಳಿಬಿಡುತ್ತೇವೆ ಅಂತಲ್ಲ. ಖಂಡಿತವಾಗಲೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕರ್ನಾಟಕ ಚಲನಚಿತ್ರ ಮಂಡಳಿ ಹುಟ್ಟಿಕೊಂಡಿದ್ದೇ ಚಿತ್ರೋದ್ಯಮದ ಒಳಿತಿಗಾಗಿ. ಪ್ರದರ್ಶಕರು, ವಿತರಕರು ಹಾಗೂ ನಿರ್ಮಾಪಕರು... ಹೀಗೆ ಹಂತ ಹಂತವಾಗಿ ಎಲ್ಲರಿಂದಲೂ ಹುಟ್ಟಿಕೊಂಡ ಸಂಸ್ಥೆ ಇದು. ಯಾರೇ ಸಮಸ್ಯೆ ಹೇಳಿಕೊಂಡು ಬಂದರೂ ಇಲ್ಲಿ ಸ್ಪಂದಿಸುತ್ತೇವೆ.

ಅಧ್ಯಕ್ಷರುಗಳು ಬರುತ್ತಿದ್ದಾರೆ, ಹೋಗುತ್ತಿದ್ದಾರೆ. ಆದರೂ ಸಮಸ್ಯೆಗಳು ಹಾಗೆ ಇವೆಯಲ್ಲ?

ನೀವು ಹೇಳುವ ಸಮಸ್ಯೆಗಳನ್ನು ನಾನು, ಸಮಸ್ಯೆ ಅನ್ನಲ್ಲ. ಸವಾಲು ಅನ್ನುತ್ತೇನೆ. ಈ ಸವಾಲುಗಳನ್ನು ಉದ್ಯಮದ ಎಲ್ಲರು ಸೇರಿ ನಿಭಾಯಿಸಬೇಕು. ಅವುಗಳಿಗೆ ಉತ್ತರ ಕೊಂಡುಕೊಳ್ಳಬೇಕು. ಯಾರಿಗೂ ಹೀಗೇ ಮಾಡಿ, ಹೀಗೇ ಹೋಗಿ ಎಂದು ಒತ್ತಾಯ ಮಾಡಲ್ಲ. ಸಲಹೆ ಕೊಡಬಹುದು ಅಷ್ಟೆ. ಜತೆಗೆ ಮಾರ್ಗದರ್ಶನ ಮಾಡಬಹುದು.

ವಾಣಿಜ್ಯ ಮಂಡಳಿ ಸಮಸ್ಯೆ ಅಥವಾ ಸವಾಲುಗಳ ಪರಿಹಾರ ಕೇಂದ್ರವಾ?

ವಾಣಿಜ್ಯ ಮಂಡಳಿ ಮುಂದೆ ಉದ್ಯಮ ಕ್ರಿಯಾಶೀಲವಾಗಿ ಕಟ್ಟುವುದಕ್ಕೆ ಇರುವ ಯೋಜನೆಗಳು, ಕನಸುಗಳನ್ನೂ ಹಂಚಿಕೊಳ್ಳಬೇಕು. ಇದಕ್ಕೆ ವಾಣಿಜ್ಯ ಮಂಡಳಿ ಮಾತ್ರ ಮನಸು ಮಾಡಿದರೆ ಸಾಲದು. ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ, ಕಾರ್ಮಿಕರ ಮತ್ತು ತಂತ್ರಜ್ಞರ ಒಕ್ಕೂಟ ಹೀಗೆ ಎಲ್ಲರ ಪಾಲ್ಗೊಳ್ಳುವಿಕೆಯಿಂದ ಆಗಬೇಕಾದ ರಚನಾತ್ಮಕ ಕೆಲಸ ಇದು.

ಚಲನಚಿತ್ರ ವಾಣಿಜ್ಯ ಮಂಡಳಿ ದೊಡ್ಡ ನಿರ್ಮಾಪಕ, ನಟರ ವೇದಿಕೆ ಅನ್ನೋ ಮಾತು ಇದೆಯಲ್ಲ?

ದೊಡ್ಡ ನಿರ್ಮಾಪಕ, ಸ್ಟಾರ್‌ ನಟರ ಚಿತ್ರಗಳು, ಹೊಸಬರ ಸಿನಿಮಾಗಳು ಹೀಗೆ ಯಾರೇ ಆಗಿರಲಿ ಅವರ ವ್ಯಾಪಾರದಲ್ಲಿ ನಾವು ಮಧ್ಯೆ ಪ್ರವೇಶ ಮಾಡಿಲ್ಲ. ಮಾಡುವುದೂ ಇಲ್ಲ. ಆದರೆ, ಸಮಸ್ಯೆ ಅಂತ ಬಂದಾಗ ಮಾತ್ರ ಅವರ ಜತೆ ನಿಲ್ಲುವ ಪ್ರಯತ್ನ ಮಾಡುತ್ತೇವೆ. ಒಂದು ಒಳ್ಳೆಯ ಸಿನಿಮಾ ಬಂದರೆ ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ, ತಾರಾಗಣ, ವಿತರಕ, ಪ್ರದರ್ಶಕ ಹೀಗೆ ಎಲ್ಲರೂ ಗೆಲ್ಲುತ್ತಾರೆ. ಹೀಗಾಗಿ ಇದು ವ್ಯಕ್ತಿಕೇಂದ್ರಿತ ಉದ್ಯಮ ಅಲ್ಲ.

ಸಿನಿಮಾಗಳ ಬಿಡುಗಡೆ ಹೊತ್ತಿನಲ್ಲಿ ಚಿತ್ರಮಂದಿರಗಳು ಸಿಗಲ್ಲ ಅನ್ನೋದು ಹೊಸಬರ ಅಳಲು ಉಂಟಲ್ಲ?

ಹೊಸಬರಿಗೆ ಚಿತ್ರಮಂದಿರಗಳು ಸಿಗಲ್ಲ ಎನ್ನುವುದು ಸುಳ್ಳು. ಯಾಕೆಂದರೆ ನಾನೂ ಒಬ್ಬ ಪ್ರದರ್ಶಕ. ಸಿನಿಮಾ ಚೆನ್ನಾಗಿದ್ದರೆ ಖಂಡಿತ ಅಂಥ ಚಿತ್ರವನ್ನು ಯಾರೂ ಬೇಕಾದರೂ ತೆಗೆದುಕೊಂಡು ಹೋಗುತ್ತಾರೆ. ಆದರೆ, ಸಿನಿಮಾನೇ ಚೆನ್ನಾಗಿಲ್ಲ ಎಂದ ಮೇಲೆ ಹೊಸಬರು ಎನ್ನುವ ಕಾರಣಕ್ಕೆ ಖಾಲಿ ಥಿಯೇಟರ್‌ನಲ್ಲಿ ಪ್ರದರ್ಶನ ಮಾಡಲಾಗದು. ಅಲ್ಲದೆ ವಾರಕ್ಕೆ ಏಳೆಂಟು ಚಿತ್ರಗಳು ಬಂದರು ಯಾರಿಗೆ ಚಿತ್ರಮಂದಿರ ಕೊಡಬೇಕು ಹೇಳಿ? ನಿಜ ಹೇಳಬೇಕು ಅಂದರೆ ಸಿನಿಮಾಗಳು ಇಲ್ಲದೆ ಸಿಂಗಲ್‌ ಸ್ಕ್ರೀನ್‌ಗಳ ವೆಚ್ಚವನ್ನು ನಿಭಾಯಿಸುವುದಕ್ಕೆ ಆಗುತ್ತಿಲ್ಲ.

ಒಳ್ಳೆಯ ಸಿನಿಮಾಗಳು ಇಲ್ಲ ಎನ್ನುವ ಕಾರಣಕ್ಕೆ ಸಿಂಗಲ್‌ ಸ್ಕ್ರೀನ್‌ಗಳು ಯಾಕೆ ಮುಚ್ಚಲಾಗುತ್ತಿದೆಯೇ?

ಸಿಂಗಲ್‌ ಸ್ಕ್ರೀನ್‌ ಹಾಗೂ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಿಗೆ ತುಂಬಾ ವ್ಯತ್ಯಾಸಗಳಿವೆ. ಸಿಂಗಲ್‌ ಸ್ಕ್ರೀನ್‌ಗಳು ಕೇವಲ ಒಳ್ಳೆಯ ಸಿನಿಮಾಗಳನ್ನೇ ನಂಬಿಕೊಂಡು ನಡೆಯುತ್ತಿರುತ್ತವೆ. ಒಳ್ಳೆಯ ಸಿನಿಮಾಗಳು ಬಂದಿಲ್ಲ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲ್ಲ ಅಂದರೆ ಅಂಥ ಚಿತ್ರಮಂದಿರಗಳನ್ನು ಉಳಿಸಿಕೊಂಡು ಸಾಕುವುದು ಕಷ್ಟ. ಮುಂದೆ ಅವು ಕಲ್ಯಾಣ ಮಂಟಪಗಳೋ, ವ್ಯಾಪಾರದ ಮಾಲುಗಳಾಗಿ ಮಾರ್ಪಡುವುದನ್ನು ನೋಡುತ್ತಿದ್ದೇವೆ. ಹೀಗಾಗಿ ಸಿಂಗಲ್‌ ಸ್ಕ್ರೀನ್‌ಗಳು ಉಳಿಯಬೇಕು ಅಂದರೆ ಕೇವಲ ಒಳ್ಳೆಯ ಸಿನಿಮಾಗಳನ್ನು ಮಾಡುವುದರಿಂದ ಮಾತ್ರ ಸಾಧ್ಯ. ಆದರೆ, ಮಲ್ಟಿಪ್ಲೆಕ್ಸ್‌ಗಳ ವ್ಯವಸ್ಥೆಯೇ ಬೇರೆ. ಇವು ಕೇವಲ ಸಿನಿಮಾ ಪರದೆಗಳನ್ನು ನಂಬಿಕೊಂಡು ಹುಟ್ಟಿಕೊಂಡಿರುವುದಿಲ್ಲ. ಬೇರೆ ಬೇರೆ ರೀತಿಯ ವ್ಯಾಪಾರಗಳನ್ನು ನಂಬಿಕೊಂಡಿವೆ. ಅಲ್ಲಿ ಸಿನಿಮಾ ನಡೆಯಲ್ಲ ಎಂದರೆ ಮಾಲು ಮುಚ್ಚಿ ಹೋಗಲ್ಲ. ಅವರಿಗೆ ಸಿನಿಮಾ ಒಂದು ಭಾಗ ಅಷ್ಟೆ. ಅದೇ ಮುಖ್ಯವಲ್ಲ. ಸಿಂಗಲ್‌ ಸ್ಕ್ರೀನ್‌ಗಳಿಗೆ ಸಿನಿಮಾಗಳ ಜೀವಾಳ.

ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳ ಉಳಿಸುವುದಕ್ಕೆ ಇರುವ ದಾರಿ ಏನು?

ಒಳ್ಳೆಯ ಸಿನಿಮಾಗಳ ಜತೆಗೆ ಇಲ್ಲೂ ಕೂಡ ಮಲ್ಟಿಪ್ಲೆಕ್ಸ್‌ ರೀತಿಯಲ್ಲಿ ಸಣ್ಣ ಸಣ್ಣ ಪುಟ್ಟವ್ಯಾಪಾರಕ್ಕೆ ಅವಕಾಶ ಕೊಡಬೇಕು. ಚಿತ್ರಮಂದಿರ ನಿರ್ಮಾಣಕ್ಕೆ ಇರುವ ಕಾನೂನುಗಳನ್ನು ಸಡಿಲ ಮಾಡಿಸಿ, ಮಾಮೂಲಿ ಚಿತ್ರಮಂದಿರದಲ್ಲೂ ಹೋಟೆಲ್‌, ಅಂಗಡಿ ಸೇರಿದಂತೆ ಬೇರೆ ಬೇರೆ ವ್ಯಾಪಾರಕ್ಕೆ ಅವಕಾಶ ಕೊಟ್ಟರೆ, ಚಿತ್ರಮಂದಿರಕ್ಕೆ ಆದಾಯ ಬರುತ್ತದೆ. ಸಿನಿಮಾಗಳ ಜತೆಗೆ ಈ ಆದಾಯ ಬಂದರೆ ಥಿಯೇಟರ್‌ಗಳು ಉಸಿರಾಡುತ್ತವೆ. ಜತೆಗೆ ಗ್ರಾಮೀಣ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಚಿತ್ರಮಂದಿರಗಳ ನಿರ್ಮಾಣಕ್ಕೆ ಒಂದಿಷ್ಟುಕಾನೂನು ಅಡೆತಡೆಗಳಿವೆ. ಈ ಬಗ್ಗೆ ಸರ್ಕಾರದ ಜತೆ ಮಾತುಕತೆ ಮಾಡಬೇಕು.

ಸರ್ಕಾರವೇ ರೂಪಿಸಿರುವ ಜನತಾ ಚಿತ್ರಮಂದಿರಗಳ ಯೋಜನೆ ಇದೆಯಲ್ಲ?

ನಿಜ ಇದೆ. ಆದರೆ, ಯಾರೂ ಮುಂದೆ ಬರುತ್ತಿದ್ದಾರೆ ಹೇಳಿ? ಚಿತ್ರಮಂದಿರಗಳು ಮುಚ್ಚುತ್ತಿರುವ ಹೊತ್ತಿನಲ್ಲಿ ಸರ್ಕಾರ ಕೊಡುವ ಹಣಕ್ಕಾಗಿ ಲಕ್ಷಾಂತರ ರುಪಾಯಿ ಹೂಡಿಕೆ ಮಾಡಕ್ಕೆ ಯಾರೂ ಮುಂದೆ ಬರುತ್ತಿಲ್ಲ.

ಸರ್ಕಾರದಿಂದ ಉದ್ಯಮಕ್ಕೆ ತಕ್ಷಣ ಆಗಬೇಕಾದ ಕೆಲಸಗಳೇನು?

ನಾನು ಪ್ರದರ್ಶಕರ ವಲಯದಿಂದ ಬಂದವನು. ನಿರ್ಮಾಪಕರು ಹಾಗೂ ಹಂಚಿಕೆದಾರರ ಸಮಸ್ಯೆಗಳನ್ನು ತಿಳಿಯಬೇಕಿದೆ. ಇದರ ನಡುವೆ ಜಿಎಸ್‌ಟಿ ಸಮಸ್ಯೆ ಇದೆ. ರಾಜ್ಯ ಸರ್ಕಾರದ ಪಾಲನ್ನು ಬಿಟ್ಟುಕೊಡುವುದಕ್ಕೆ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ.

ಅಧ್ಯಕ್ಷರಾಗಿ ನಿಮ್ಮ ತಕ್ಷಣ ಕರ್ತವ್ಯ ಅಥವಾ ಕನಸಿನ ಕೆಲಸ ಏನು?

ಹೊಸ ನಿರ್ಮಾಪಕರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಗೆ ಮಾರ್ಗದರ್ಶನ ಮುಖ್ಯ. ಸಿನಿಮಾ ನಿರ್ಮಾಣ, ಬಿಡುಗಡೆ, ವಿತರಣೆ ಹೀಗೆ ಹಲವಾರು ವಿಚಾರಗಳಲ್ಲಿ ಅವರಿಗೆ ಮಾರ್ಗದರ್ಶನ ಮಾಡಬೇಕು.