ಹೇಮಂತ್ ರಾವ್ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ‘ಕವಲುದಾರಿ’ ಚಿತ್ರ ನೋಡಿದವರಿಗೆ ಅಲ್ಲಿ ಗಮನ ಸೆಳೆದ ಪಾತ್ರಗಳ ಪೈಕಿ ಫರ್ನಾಂಡಿಸ್ ಅಲಿಯಾಸ್ ಮೈಲೂರ್ ಶ್ರೀನಿವಾಸ್ ಪಾತ್ರವೂ ಒಂದು. ಇದು ಆ ಚಿತ್ರದ ಪ್ರಮುಖ ಖಳ ಪಾತ್ರ. ಆ ಪಾತ್ರದಲ್ಲಿ ಅಭಿನಯಿಸಿದವರೇ ಈ ಸಂಪತ್ ಕುಮಾರ್. ಅವರ ಪಾತ್ರ ಪೋಷಣೆಯ ವೈಖರಿಗೆ ಅಪಾರ ಮೆಚ್ಚುಗೆ ಸಿಗುತ್ತಿದೆ. ಚಿತ್ರೋದ್ಯಮದ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಿರಿಯ ನಟ ಅನಂತ ನಾಗ್ ಅವರಿಗೂ ಸಂಪತ್ ಅಭಿನಯ ಹಿಡಿಸಿದೆ. ಸಂಪತ್ ವೆರಿ ಇಂಟೆನ್ಸಿವ್ ಆ್ಯಕ್ಟರ್ ಎನ್ನುವುದು ಅನಂತ್ ನಾಗ್ ಅಭಿಪ್ರಾಯ. ಮತ್ತೆ ಕೆಲವರು, ಸಂಪತ್ ಅವರನ್ನು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರಿಗೆ ಹೋಲಿಸಿ ಮಾತನಾಡಿದ್ದಾರೆ.

ನಾನು ಪಾಸಿಟಿವ್, ನೆಗೆಟಿವ್ ಪಾತ್ರ ಎನ್ನುವುದನ್ನು ನೋಡಿಲ್ಲ. ಸಿಕ್ಕ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದಿದ್ದೇನೆ. ಕೆಲವು ಜನ ಮೆಚ್ಚುಗೆ ಪಡೆದರೆ, ಮತ್ತೆ ಕೆಲವು ಕಾಣದೆಯೂ ಕಳೆದು ಹೋಗಿದೆ. ಆದರೆ, ಬಹುತೇಕ ಪಾತ್ರಗಳಿಗೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ. ಹಾಗಾಗಿಯೇ ಒಂದಷ್ಟು ಅವಕಾಶ ಸಿಗುತ್ತಿವೆ ಎನ್ನುವುದು ನನ್ನ ಭಾವನೆ - ಸಂಪತ್ ಕುಮಾರ್ 

‘ಕೆಜಿಎಫ್’ ಚಿತ್ರದಲ್ಲಿ ಐದ್ಹತ್ತು ನಿಮಿಷಗಳಲ್ಲಿ ಬಂದು ಹೋಗುವ ಪೋಷಕ ಪಾತ್ರಗಳಿಗೂ ಬಣ್ಣ ಹಚ್ಚಿ ಮನೋಜ್ಞ ಅಭಿನಯ ನೀಡಿ ಸೈ ಎನಿಸಿಕೊಂಡವರು ಸಂಪತ್. ರಂಗಭೂಮಿ ಕಸುವು ಅವರ ಸಿನಿಪಯಣವನ್ನು ಶ್ರೀಮಂತಗೊಳಿಸಿದೆ. ಯಾವುದೇ ಪಾತ್ರ ಕೊಡಿ, ನಾನು ಅಭಿನಯಿಸುತ್ತೇನೆನ್ನುವ ನಟನೆಯ ಹಸಿವಿನಿಂದಲೇ ಸಿಕ್ಕ ಪಾತ್ರಗಳನ್ನು ಒಪ್ಪಿಕೊಂಡು ಅವುಗಳ ಮೂಲಕವೇ ಅವಕಾಶಗಳು ತಮ್ಮತ್ತ ಬರುವಂತೆ ಮಾಡಿಕೊಂಡಿದ್ದಾರೆ ಸಂಪತ್. ಅದಕ್ಕೆ ಸಾಕ್ಷಿ ಇದುವರೆಗಿನ ಅವರ ಸಿನಿಜರ್ನಿ. ಸದ್ಯಕ್ಕೀಗ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣಕ್ಕೂ ಪ್ರಮುಖ ಖಳನಟರಾಗಿದ್ದಾರೆ. ಜತೆಗೆ ಕಂಟ್ರಿಮೇಡ್ ಚಾರಿ ಹಾಗೂ ಅಮೃತ್ ಅಪಾಟ್ಮೆರ್ಂಟ್ ಹೆಸರಿನ ಎರಡು ಹೊಸಬರ ಚಿತ್ರಗಳು ಅವರ ಅಕೌಂಟ್‌ನಲ್ಲಿವೆ.