ಯಾವ ತಂಡದಲ್ಲಿ ಯಾರು ಧೋನಿ, ಯಾರು ಕೊಹ್ಲಿ?

First Published 4, Sep 2018, 9:51 AM IST
Karnataka Chalanachitra Cup starts from 8th September
Highlights

ಇಡೀ ಕನ್ನಡ ಚಿತ್ರರಂಗ ಕ್ರಿಕೆಟ್ ಮೈದಾನಕ್ಕೆ ಇಳಿದುಬಿಟ್ಟಿದೆ. ಸೆ.8 ಮತ್ತು ಸೆ.9ರಂದು ನಡೆಯಲಿರುವ ಕೆಸಿಸಿ ಪಂದ್ಯಾವಳಿಗೆ ತಯಾರಿ ನಡೆಸುತ್ತಿದೆ. ಕಲರ್ಸ್ ಸೂಪರ್‌ನಲ್ಲಿ ಪಂದ್ಯದ ನೇರಪ್ರಸಾರ ಇರಲಿದೆ. ಈ ಹಂತದಲ್ಲಿ ಯಾವ ತಂಡ, ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

ಕರ್ನಾಟಕ ಚಲನಚಿತ್ರ ಕಪ್‌ಗೆ ಇಡೀ ಚಿತ್ರರಂಗ ಸಜ್ಜಾಗಿದೆ. ಸೆ.೮ ಮತ್ತು ಸೆ.೯ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. ಅದಕ್ಕಾಗಿ ಚಿತ್ರರಂಗದ ಆಟಗಾರರೆಲ್ಲಾ ಬ್ಯಾಟು, ಬೌಲು ಹಿಡಿದು ಪ್ಯಾಡ್ ಧರಿಸಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಪ್ರಾಕ್ಟೀಸ್ ಮಾಡಲೆಂದೇ ಕಿಚ್ಚ ಸುದೀಪ್ ‘ಪೈಲ್ವಾನ್’ ಚಿತ್ರದಿಂದ ಬ್ರೇಕ್ ತಗೊಂಡು ಬಂದಿದ್ದಾರೆ. ಮದುಮಗ ಪವನ್ ಒಡೆಯರ್, ನಿರ್ದೇಶಕ ಸಿಂಪಲ್ ಸುನಿ ಯಾವಾಗಿನಿಂದಲೋ ತಾವು ಪ್ರಾಕ್ಟೀಸ್ ಮಾಡುತ್ತಿರುವ ಫೋಟೋಗಳನ್ನು ಸೋಷಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ.

ಒಟ್ಟು ಆರು ತಂಡಗಳಿವೆ. ಆ ತಂಡಗಳಲ್ಲಿ ಯಾರು ಪ್ರಮುಖ ಬ್ಯಾಟ್ಸ್‌ಮನ್‌ಗಳು, ಯಾರು ಸ್ಟ್ರಾಂಗ್ ಬೌಲರ್‌ಗಳು ಅಂತ ಕುತೂಹಲದಿಂದ ನೋಡಿದರೆ ಅನೇಕ ಸಂಗತಿಗಳು ತೆರೆದುಕೊಂಡವು. ಅದರಲ್ಲೂ ಯಾವ ತಂಡ ಸ್ಟ್ರಾಂಗ್ ಇದೆ ಎಂದು ಕೇಳಿದರೆ ಬಹುತೇಕರು ಹೇಳಿದ್ದು ರಾಷ್ಟ್ರಕೂಟ ಪ್ಯಾಂಥರ್ಸ್. ಕಾರ್ತಿಕ್ ಗೌಡ ಈ ತಂಡದ ಮುಂದಾಳು. ಕಳೆದ ಕೆಸಿಸಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದ ಶಿವರಾಜ್ ಕುಮಾರ್ ಅವರ ವಿಜಯನಗರ ಪೇಟ್ರಿಯಾಟ್ಸ್ ತಂಡದ ಮೇಲೂ ಭರವಸೆ ಇದೆ. ಸದಾಶಿವ ಶೆಣೈ ತಂಡವೂ ಸ್ಟ್ರಾಂಗ್ ಎನಿಸಿಕೊಂಡಿದೆ.

ಈಗಾಗಲೇ ಕೆಸಿಸಿ ಪಂದ್ಯಾವಳಿಗಳ ಟಿಕೆಟ್‌ಗಳ ಮಾರಾಟ ಕೂಡ ಭರದಿಂದ ಸಾಗಿದೆ. ಸಂಗೀತ ಮೊಬೈಲ್ ಸ್ಟೋರ್, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವಕಲಾವಿದರ ಸಂಘ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಟಿಕೆಟ್‌ಗಳ ಮಾರಾಟವಾಗುತ್ತಿದೆ.

ಗಂಗಾ ವಾರಿಯರ್ಸ್

ಟಗರು ಚಿತ್ರ ನಿರ್ಮಾಪಕ ಕೆಪಿ ಶ್ರೀಕಾಂತ್ ಈ ತಂಡದ ಸಾರಥಿ. ಕೆಪಿಎಲ್‌ನಿಂದ ಬಂದಿರುವ ನಿಹಾಲ್ ಉಲ್ಲಾಳ್, ಸುಜಿತ್, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಲ್ಯಾನ್ಸ್ ಕ್ಲೂಸ್ನರ್, ನಟರಾದ ದಿಗಂತ್ ಹಾಗೂ ಕಿರಣ್ ಶ್ರೀವಾಸ್ ಇವರು ಪುನೀತ್ ರಾಜ್ ಕುಮಾರ್ ನಾಯಕತ್ವದ ಗಂಗಾ ವಾರಿಯರ್ಸ್‌ನ ಭರವಸೆಗಳಾಗಿ ಕಾಣುತ್ತಿದ್ದಾರೆ. ಸ್ವತಃ ತಂಡವೇ ಇವರನ್ನು ನಂಬಿಕೊಂಡು ಮೈದಾನಕ್ಕಿಳಿಯುತ್ತಿದೆ.

ರಾಷ್ಟ್ರಕೂಟ ಪ್ಯಾಂಥರ್ಸ್

ಈ ತಂಡದ ಮುಂದಾಳು ಹೊಂಬಾಳೆ ಫಿಲಮ್ಸ್‌ನ ಕಾರ್ತಿಕ್ ಗೌಡ. ಸೆಲೆಬ್ರಿಟಿ ಫೇಸ್ ಆಗಿ ಯಶ್ ಇದ್ದಾರೆ. ಇಂಗ್ಲೆಂಡಿನ ಓವೈಸ್ ಶಾ ಪ್ರಮುಖ ಆಟಗಾರ. ಬ್ಯಾಟ್ಸ್‌ಮನ್‌ಗಳಾದ ರಾಜೀವ್, ಮದರಂಗಿ ಕೃಷ್ಣ, ಭಜರಂಗಿ ಲೋಕಿ, ಸ್ಟಾಲಿನ್ ಹೂವರ್ ಫಾರ್ಮ್‌ನಲ್ಲಿದ್ದಾರೆ. ಈ ತಂಡದಲ್ಲಿ ಇರುವ ಅನೇಕರು ಆಲ್‌ರೌಂಡರ್‌ಗಳು. ಹಾಗಾಗಿ ಎದುರಾಳಿಗಳಿಗೆ ರಾಷ್ಟ್ರಕೂಟ ಪ್ಯಾಂಥರ್ಸ್ ಸ್ವಲ್ವ ಸ್ಟ್ರಾಂಗ್ ಇದ್ದಾರೆ ಎನ್ನುವ ಅಭಿಪ್ರಾಯ ಇದೆ. ‘ಪ್ರಾಕ್ಟೀಸ್ ಮಾಡುತ್ತಲೇ ಇದ್ದೇವೆ. ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಇದೆ’ ಎನ್ನುತ್ತಾರೆ ಕಾರ್ತಿಕ್ ಗೌಡ.

ಕದಂಬ ಲಯನ್ಸ್

ನಿರ್ದೇಶಕ ನಂದಕಿಶೋರ್ ಈ ತಂಡದ ಮುಂದಾಳು. ಕಿಚ್ಚ ಸುದೀಪ್ ಈ ತಂಡದ ಶಕ್ತಿ. ವೀರೇಂದ್ರ ಸೆಹವಾಗ್ ಇರುವುದರಿಂದ ಆನೆ ಬಲ ಬಂದಿದೆ. ಅಯ್ಯಪ್ಪ, ಶರಣ್ ಗೌಡ, ತರುಣ್ ಸುಧೀರ್, ಅಜಿತ್ ಜಯರಾಜ್ ಹೀಗೆ
ಅನೇಕರು ಆಲ್‌ರೌಂಡರ್‌ಗಳಿದ್ದಾರೆ. ಮಹೇಶ್, ವಿಜಯ್ ಬೌಲಿಂಗ್‌ನಲ್ಲಿ ಎಂಥಾ ಆಟಗಾರರನ್ನೂ ನಿಯಂತ್ರಿಸುವ ಶಕ್ತಿ ಇರುವವರು. ಅಲ್ಲದೇ ಸುದೀಪ್ ಅವರು ಮಹೇಂದ್ರ ಸಿಂಗ್ ಧೋನಿ ಥರ ವಿಕೆಟ್ ಹಿಂದೆ ನಿಂತು ಎಲ್ಲವನ್ನೂ ನಿಯಂತ್ರಿಸುವ ನಂಬಿಕೆ ಎಲ್ಲರಲ್ಲೂ ಇದೆ. ನಮ್ಮದು ತುಂಬಾ ಬ್ಯಾಲೆನ್ಸ್‌ಡ್ ಟೀಮ್ ಎನ್ನುತ್ತಾರೆ ನಂದಕಿಶೋರ್.

ಒಡೆಯರ್ ಚಾರ್ಜರ್ಸ್

ಪತ್ರಕರ್ತ ಸದಾಶಿವ ಶೆಣೈ ನೇತೃತ್ವದ ತಂಡ ಇದು. ಗಣೇಶ್ ಸೆಲೆಬ್ರಿಟಿ ಫೇಸ್. ಶ್ರೀಲಂಕಾದ ದಿಲ್ಷಾನ್ ಸ್ಟಾರ್ ಆಟಗಾರ. ಸದಾಶಿವ ಶೆಣೈ ಅವರ ಈ ತಂಡ ಕಳೆದ ಕೆಸಿಸಿ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗಳಿಸಿತ್ತು. ಸಿಎಂ ಗೌತಮ್, ರಿತೇಶ್ ಭಟ್ಕಳ್, ರೋನಿತ್ ಮೋರೆ, ನಿರೂಪ್ ಭಂಡಾರಿ ಬ್ಯಾಟಿಂಗ್‌ನಲ್ಲಿ ಮುಂದಿದ್ದಾರೆ. ಪವನ್ ಒಡೆಯರ್, ಪೆಟ್ರೋಲ್ ಪ್ರಸನ್ನ, ಸೈಯದ್, ಮಲ್ಲಿಕಾರ್ಜುನ ಬೌಲಿಂಗ್ ಸ್ಟ್ರಾಂಗ್ ಇದೆ. ಹಲವಾರು ಅನುಭವಿ ಆಟಗಾರರು ಇರುವುದರಿಂದ ಈ ಸಲವೂ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸುತ್ತಾರೆ ಸದಾಶಿವ ಶೆಣೈ.

ಹೊಯ್ಸಳ ಈಗಲ್ಸ್

ಜೆಕೆ, ಉಪೇಂದ್ರ, ಪ್ರಶಾಂತ್ ಎಸ್, ಸಿದ್ದಾರ್ಥ್ ಮಹೇಶ್ ಅವರು ಹೊಯ್ಸಳ ಈಗಲ್ಸ್‌ನ ತಂಡವನ್ನು ದಡ ಸೇರಿಸು ವಪ್ಲೇಯರ್‌ಗಳಂತೆ ಕಾಣುತ್ತಿದ್ದಾರೆಎಂಬುದು ತಂಡದ ಭರವಸೆ. ಈ ತಂಡದ ಮುಂದಾಳು ಜ್ಯಾಕ್ ಮಂಜು. ಇಲ್ಲಿ ಸ್ಟಾರ್ ಆಟಗಾರ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಇರುವುದರಿಂದ ತಂಡದ ಭರವಸೆ, ವಿಶ್ವಾಸ ಹೆಚ್ಚಿದೆ. ಅಲ್ಲದೇ ಮಾಸ್ಟರ್ ಮೈಂಡ್ ಉಪೇಂದ್ರ ಈ ತಂಡದ ಸ್ಟಾರ್ ಫೇಸ್ ಆಗಿರುವುದೂ ಈ ತಂಡದ ಹೆಚ್ಚುಗಾರಿಕೆ. 

ವಿಜಯನಗರ ಪೇಟ್ರಿಯಾಟ್ಸ್

ಕಳೆದ ಬಾರಿ ನಟ ಶಿವರಾಜ್‌ಕುಮಾರ್ ನಾಯಕತ್ವದಲ್ಲಿ ಚಾಪಿಯನ್ ಆದ ತಂಡವಿದು. ಹೀಗಾಗಿ ಈ ಬಾರಿಯೂ ಕೆಸಿಸಿ ಕಪ್ ತಮ್ಮದಾಗಿಸಿಕೊಳ್ಳುವ ಉಮೇದಿನಲ್ಲಿ ತಯಾರಿ ಮಾಡಿಕೊಳ್ಳುತ್ತಿದೆ. ಶಿವಣ್ಣನ ಜತೆ ಶರತ್ ಬಿ ಆರ್, ಪ್ರದೀಪ್ಟಿ,
ಅಭಿಷೇಕ್, ಕಿರಣ್, ಧರ್ಮ ಕೀರ್ತಿರಾಜ್ ಗೆಲುವಿನ ಭರವಸೆಯನ್ನು ಹೆಚ್ಚಿಸುವ ಸಾರಥಿಗಳಾಗಿದ್ದಾರೆಂಬುದು ತಂಡದ ನಂಬಿಕೆ. ಈ ಬಾರಿಯೂ ಕಪ್ ತಮ್ಮದಾಗಿಸಿಕೊಳ್ಳಲಿದೆ ಎಂದು ತಂಡದ ಸಾರಥಿ ಕೆ ಕೃಷ್ಣ ಗೆಲುವಿನ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.
 

ಕರ್ನಾಟಕ ಚಲನಚಿತ್ರ ಕಪ್‌ನ ಹೆಚ್ಚಿನ ಮಾಹಿತಿ:

ಕರ್ನಾಟಕ ಚಲನಚಿತ್ರ ಕಪ್ ವೇಳಾಪಟ್ಟಿ ಪ್ರಕಟ

ಸುದೀಪ್-ಶಿವಣ್ಣ ನಡುವೆ ಶುರುವಾಗಿದೆ ಕ್ರಿಕೆಟ್ ಆಟ ! 25, Jul 2018, 10:59 AM IST

ಕನ್ನಡ ಸಿನಿಮಾ-ಕ್ರಿಕೆಟ್ ಪ್ರೇಮಿಗಳ ಪಾಲಿಗಿದು ಸಿಹಿ ಸುದ್ದಿ..!

loader