ಸ್ಯಾಂಡಲ್‌ವುಡ್ ನಟರಿಗೆ ಡಾ.ರಾಜ್‌ಕುಮಾರ್ ಕಾಲದಿಂದಲೂ ಕನ್ನಡ ಭಾಷಾ ಪ್ರೇಮವೇ ಹೆಚ್ಚು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವೆಂದು ಸಾರಿದ ಡಾ.ರಾಜ್ ಹಾದಿಯಲ್ಲಿಯೇ ಬಹುತೇಕ ನಟರೂ ಸಾಗುತ್ತಿರುವುದರಿಂದಲೇ ನಮ್ಮ ಭಾಷೆ ನಮ್ಮ ನೆಲದಲ್ಲಿನ್ನೂ ಉಳಿದಿದೆ. ಅನ್ಯ ಭಾಷಿಗರ ದಾಳಿಗೆ ನಮ್ಮ ಸಾಹಿತ್ಯ, ಭಾಷೆ, ಸಂಸ್ಕೃತಿ ಚದುರಿ ಹೋಗದಿರುವುದಕ್ಕೆ ಕನ್ನಡ ಚಿತ್ರಗಳ ಕೊಡುಗೆಯೂ ಅಪಾರ.

ಕನ್ನಡ ಚಿತ್ರ ನಟರ ಕನ್ನಡದ ನಾಡು, ನುಡಿಯ ಪ್ರೀತಿ ಮತ್ತೆ ಅನಾವರಣಗೊಂಡಿದೆ. ಕಿಚ್ಚ ಸುದೀಪ್ ಪಕ್ಕದ ಆಂಧ್ರ ಪ್ರದೇಶದಲ್ಲಿ ಚಿತ್ರೀಕರಣದಲ್ಲಿದ್ದಾರೆ. ಅಲ್ಲಿಯೇ ರಾಜ್ಯದ  ಧ್ವಜಾರೋಹಣ ಮಾಡಿ, ಕನ್ನಡ ನಾಡು, ನುಡಿಗೆ ನಮನ ಸಲ್ಲಿಸಿದ್ದಾರೆ. ಬಿಗ್‌ಬಾಸ್ ಹಾಗೂ ಫೈಲ್ವಾನ್ ಚಿತ್ರಗಳ ಚಿತ್ರೀಕರಣದಲ್ಲಿ  ಬಿಡುವು ಮಾಡಿಕೊಂಡು, ಕನ್ನಡ ನುಡಿಗೆ ಗೌರವ ಸಲ್ಲಿಸಿದ್ದಾರೆ. ಕಿಚ್ಚ ತಮ್ಮದೇ ಆದ ರೀತಿಯಲ್ಲಿ ಕನ್ನಡ ಪ್ರೇಮ ಮೆರೆದಿದ್ದಾರೆ.

ಬಹಳ ತೂಕ ಇಳಿಸಿಕೊಂಡು, 'ಫೈಲ್ವಾನ್' ಚಿತ್ರಕ್ಕೆ ತಯಾರಾಗಿರುವ ಸುದೀಪ್ ಲುಕ್ ಬಹಳ ಕುತೂಹಲ ಕೆರಳಿಸಿದೆ. ಈ ಚಿತ್ರದ ಮೊದಲ ಭಾಗದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಲಿದ್ದು, ಅಂತಿಮ ದೃಶ್ಯಗಳು ಬೆಂಗಳೂರಿನಲ್ಲಿ ಚಿತ್ರೀಕರಣಗೊಳ್ಳಲ್ಲಿದೆ.