ಮೂವರ ಪ್ರೇಮದಲ್ಲಿ ಸಂಸಾರ ಮಾಯ 'ಯಾರಿಗೆ ಯಾರುಂಟು'!
‘ಯಾರಿಗೆ ಯಾರುಂಟು’ ಟೈಟಲ್‌ನಲ್ಲೇ ಒಂದು ಪ್ರಶ್ನೆ ಇದೆ, ಸಸ್ಪೆನ್ಸ್ ಇದೆ. ಪುಟ್ಟದೊಂದು ಆಧ್ಯಾತ್ಮವೂ ಅಡಗಿದೆ. ಇದರ ಜೊತೆಗೆ ತ್ರಿಕೋನ ಪ್ರೇಮವನ್ನು ಹದವಾಗಿ ಬೆರೆಸಿ ಮಲೆನಾಡಿನ ಮಡಿಲ ಸುಂದರ ತಾಣಗಳನ್ನು ಪೋಣಿಸಿ ಚಿತ್ರ ಮಾಡಿದ್ದಾರೆ ನಿರ್ದೇಶಕ ಕಿರಣ್ ಗೋವಿ. ಇವರಿಗೆ ಅಚ್ಚುಕಟ್ಟಾದ ಸಾಥ್ ಕೊಟ್ಟಿರುವುದು ಛಾಯಾಗ್ರಾಹಕ ರಾಕೇಶ್ ಸಿ. ತಿಲಕ್, ಸಂಗೀತ ನಿರ್ದೇಶಕ ಬಿ.ಜೆ. ಭರತ್ ಮತ್ತು ಚಿತ್ರತಂಡ.
ಕೆಂಡಪ್ರದಿ
ಆಸ್ಪತ್ರೆಯ ವಾರ್ಡ್ ಬಾಯ್ ಆಗಿರುವ ನಾಯಕನಿಗೆ ಅಲ್ಪಾಯುಷ್ಯ. ಸಾವು ಕಣ್ಣ ಮುಂದೆಯೇ ಇರುವಾಗ ಯಾರಾದರೂ ಹುಡುಗಿಯನ್ನು ಇಂಪ್ರೆಸ್ ಮಾಡಿ ಅವಳಿಂದ ‘ಐ ಲವ್ ಯು’ ಎಂದು ಹೇಳಿಸಿಕೊಳ್ಳುವ, ಸುಂದರ ಪ್ರೀತಿಯಲ್ಲಿ ಕಳೆದುಹೋಗುವ ಆಸೆ. ಇದಕ್ಕಾಗಿಯೇ ಮೂರು ಹುಡುಗಿಯರ ಸುತ್ತ ಗಿರಕಿ ಹೊಡೆಯುತ್ತಾನೆ. ಇನ್ನೇನು ಪ್ರೀತಿ ದಕ್ಕಿತು ಎನ್ನುವಷ್ಟರಲ್ಲಿ ಕೈ ತಪ್ಪುವ ಪ್ರೀತಿ, ಒಂದೇ ಕಣ್ಣಿನಲ್ಲಿ ಅಳುವ ನಾಯಕ, ಅದೇ ವಿರಹ, ಸಂಜೆಗೆ ಎಣ್ಣೆ ಪ್ರೋಗ್ರಾಂ. ಇದು ಸಾಮಾನ್ಯವಾದರೂ ಚಿತ್ರದುದ್ದಕ್ಕೂ ಮೇಲೊಬ್ಬ ಗಾಡ್ ಇದ್ದಾನೆ ಅವನು ನನಗಾಗಿ ಹೊಸ ಹುಡುಗಿಯನ್ನು ಕಳಿಸಿಕೊಡುತ್ತಾನೆ ಎನ್ನುವ ನಂಬಿಕೆ ನಾಯಕನದ್ದು.
ರಾತ್ರಿ ಗುಂಡು ಹಾಕಿ ಬೆಳಿಗ್ಗೆ ಆಗುವಷ್ಟರಲ್ಲಿ ಹೊಸ ಹುಡುಗಿ ಅದೆಲ್ಲಿಂದಲೋ ಬಂದು ಎದುರು ನಿಲ್ಲುತ್ತಾಳೆ. ಮೊದಲೊಬ್ಬಳು, ಆಮೇಲೊಬ್ಬಳು, ಮಗದೊಬ್ಬಳು ಹೀಗೆ ಮೂವರನ್ನು ಪ್ರೇಮಿಸುವ ನಾಯಕನಿಗೆ ನಿರಾಶೆಯಾಗುವುದು ಮೂವರು ನಾಯಕಿಯರು ತಮ್ಮದೇ ಕಮಿಟ್ಮೆಂಟ್‌ಗಳ ಬಲೆಗೆ ಸಿಲುಕಿರುವುದರಿಂದ. ಆಮೇಲೆ ನಾಯಕಿಯರಾದ ಲೇಖಾ ಚಂದ್ರ, ಅದಿತಿ ರಾವ್, ಕೃತ್ತಿಕಾ ರವೀಂದ್ರ ತನ್ನ ಬಲೆಗಳಿಂದ ಬಿಡಿಸಿಕೊಂಡು ನಾಯಕ ಪ್ರಶಾಂತನಿಗಾಗಿ ಹಂಬಲವಿಟ್ಟರೂ ಅವನು ದಕ್ಕುವುದಿಲ್ಲ. ಅದಕ್ಕೆ ಕಾರಣವೇನು ಎನ್ನುವ ಒಂದೇ ಪ್ರಶ್ನೆ ಹಾಕಿಕೊಂಡು ಚಿತ್ರ ನೋಡಿದರೆ ಒಂದಷ್ಟುಮನರಂಜನೆ ಗ್ಯಾರಂಟಿ.
ಇಡೀ ಚಿತ್ರ ಸಾಗುವುದು ಮಲೆನಾಡಿನ ಸುಂದರ ತಾಣ ಮತ್ತು ಆಸ್ಪತ್ರೆಯೊಂದರ ಅಂಗಳದಲ್ಲಿ. ರಾಕೇಶ್ ಸಿಕ್ಕಿರುವ ಲೊಕೇಷನ್‌ನಲ್ಲಿ ಚೆಂದದ ಕ್ಯಾಮರಾ ವರ್ಕ್ ಮಾಡಿದ್ದಾರೆ. ಬಿ.ಜೆ. ಭರತ್ ಸಂಗೀತದಲ್ಲಿ ಹಾಡುಗಳೆಲ್ಲವೂ ಮುದ ನೀಡಿ ಮುಂದೆ ಸಾಗುತ್ತವೆ.
ನಿರ್ದೇಶಕ ಕಿರಣ್ ಗೋವಿ ತ್ರಿಕೋನ ಪ್ರೇಮ ಕತೆ ಎಣೆಯುವಾಗ ವಹಿಸಬಹುದಾದ ಎಲ್ಲಾ ಎಚ್ಚರವನ್ನು ವಹಿಸಿದ್ದರೂ ಭಾವ ತೀವ್ರತೆಯ ಕಡೆಗೆ ನೀಡಬೇಕಿದ್ದ ಗಮನ ಕಡಿಮೆಯಾಗಿದೆ ಎನ್ನಿಸುತ್ತದೆ. ಸುಂದರವಾದ ಹೂವಿನ ಅಂಗಡಿಯಲ್ಲಿ ಪ್ಲಾಸ್ಟಿಕ್ ಹೂವು ತಟ್ಟನೆ ಕೈಗೆ ಸಿಕ್ಕಾಗ ಆಗುವ ಬೇಸರ ಕೆಲವೊಂದಷ್ಟುಕಡೆ ಇಲ್ಲೂ ಆಗುತ್ತದೆ. ಕೆಲವು ಕಡೆ ಒರಟ ಪ್ರಶಾಂತ್ ನಟನೆಯಲ್ಲಿ ಸಿಹಿಯಾದ ಕಲ್ಲಂಗಡಿ ಹಣ್ಣು ತಿನ್ನುವಾಗ ಸಡನ್ ಆಗಿ ಬೀಜ ಸಿಕ್ಕಾಗ ಆಗುವ ಅನುಭವ ಆಗುತ್ತದೆ. ಶ್ರೀಮಂತನ ಮಗಳಾಗಿ ಲೇಖಾ ಚಂದ್ರ, ಅಂಧೆಯಾಗಿ ಅದಿತಿ ರಾವ್, ಸಿನಿಮಾ ತಾರೆಯಾಗಿ ಕೃತ್ತಿಕಾ ರವೀಂದ್ರ ಒಳ್ಳೆಯ ನಟನೆ ಮಾಡಿದ್ದಾರೆ. ಅಚ್ಯುತ್ ಕುಮಾರ್, ಸುಂದರ್, ಕುರಿ ಪ್ರತಾಪ್ ಮೊದಲಾದ ಕಿರುತೆರೆಯ ಬಳಗ ನಗಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದೆ.
ಮರದ ಮೇಲಿನ ಮೂರು ಹಣ್ಣುಗಳಿಗೆ ಆಸೆಯಿಂದ ಕಲ್ಲು ಬೀಸಿ ಇನ್ನೇನು ಬೀಳಬೇಕು ಎನ್ನುವ ವೇಳೆಗೆ ನಾಯಕನಲ್ಲಿ ಇಲ್ಲ, ಎಲ್ಲಿ ಹೋದ? ಏನಾದ? ಎನ್ನುವ ಪ್ರಶ್ನೆಗೆಲ್ಲಾ ಉತ್ತರ ಸಿಕ್ಕುವುದು ಚಿತ್ರದ ಕಡೆಗೆ. ಅದೇನು ಎಂದು ನೋಡಲು ಸಪರಿವಾರ, ಸಕುಟುಂಬ ಸಮೇತರಾಗಿ ಚಿತ್ರ ನೋಡಬಹುದು. ಕಡೆಗೆ ‘ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ’