ಚಿತ್ರ ವಿಮರ್ಶೆ: ವೀಕೆಂಡ್
ಕೆಟ್ಟಕೆಲಸ ಮಾಡುವವರಿಗೆ ಕೆಲವೇ ದಾರಿ, ಒಳ್ಳೆಯ ಕೆಲಸ ಮಾಡುವವರಿಗೆ ನೂರಾರು ದಾರಿ. ಇದು ಈ ಚಿತ್ರದ ಒಟ್ಟು ತಿರುಳು. ಅದನ್ನೇ ಕತೆಯ ಮೂಲವಾಗಿಟ್ಟುಕೊಂಡು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಪ್ರಸ್ತುತ ಬದುಕಿನ ಕತೆ ಮತ್ತು ವ್ಯಥೆ ಹೇಳಲು ಹೊರಟ ಚಿತ್ರವಿದು. ಟೆಕ್ಕಿಗಳೆಂದರೆ ವಾರವಿಡೀ ಕೆಲಸ, ವಾರದ ಕೊನೆಯಲ್ಲಿ ಪ್ರವಾಸ ಎನ್ನುವುದು ಜನ ಸಾಮಾನ್ಯರಲ್ಲಿರುವ ಸಹಜವಾದ ನಂಬಿಕೆ. ಆದರೆ ಇವತ್ತು ಟೆಕ್ಕಿಗಳ ಬದುಕು ಕೂಡ ಬೇರೆಯವರ ಹಾಗಿಲ್ಲ. ಅವರಲ್ಲೂ ಹತ್ತಾರು ಬಗೆಯ ನೋವುಗಳಿವೆ. ಸಂಕಟಗಳಿವೆ. ಕೆಲಸದ ಅಭದ್ರತೆ ಅವರನ್ನು ತೀವ್ರವಾಗಿ ಕಾಡುತ್ತಿದೆ. ಅದೆಲ್ಲವನ್ನು ಪ್ರೀತಿ-ಪ್ರೇಮದ ಸುತ್ತಲ ಕತೆಯೊಳಗೆ ಸೊಗಸಾಗಿ ಕಟ್ಟಿಕೊಡಲು ಯತ್ನಿಸಿರುವ ನಿರ್ದೇಶಕರು, ಗಂಭೀರ ವಿಷಯಗಳನ್ನು ಕೆದಕಿ, ಅವುಗಳಿಗೆ ನ್ಯಾಯ ಒದಗಿಸಿಲ್ಲ ಎನ್ನುವುದೇ ಇಲ್ಲಿ ಬೇಸರ.
ಶೀರ್ಷಿಕೆಯೇ ಹೇಳುವ ಹಾಗೆ ಒಂದು ವೀಕೆಂಡ್ ಜರ್ನಿಯ ಮೂಲಕ ಸಿನಿಮಾದ ಕತೆ ಕೂಡ ಶುರುವಾಗುತ್ತದೆ. ಒಂದಷ್ಟುಟೆಕ್ಕಿಗಳು ವೀಕೆಂಡ್‌ನಲ್ಲಿ ಪ್ರವಾಸ ಹೊರಡುತ್ತಾರೆ. ವೀಕೆಂಡ್ ಜರ್ನಿ ಅಂದ್ರೆ ಅದೊಂದು ಜಾಲಿ ಟ್ರಿಪ್. ಹಾಗೆ ಆ ಟ್ರಿಪ್ ಸುಖಾಂತ್ಯ ಕಾಣುವ ಹೊತ್ತಿಗೆ ಟೆಕ್ಕಿಗಳ ಮತ್ತೊಂದು ಬದುಕು ಅನಾವರಣಗೊಳ್ಳುತ್ತದೆ. ಕಂಪನಿಗಳ ನೌಕರ ವಿರೋಧಿ ಧೋರಣೆಗಳಿಂದ ಕೆಲಸ ಕಳೆದುಕೊಂಡ ನಾಲ್ಕು ಮಂದಿ ಟೆಕ್ಕಿಗಳು, ಪ್ರಸ್ತುತ ಸಾಫ್ಟ್‌ವೇರ್ ಜಗತ್ತಿನಲ್ಲೂ ಯುವ ಸಮೂಹ ಏನೆಲ್ಲ ಸಂಕಟ ಅನುಭವಿಸುತ್ತದೆ ಎನ್ನುವುದನ್ನು ಅನಾವರಣಗೊಳಿಸುತ್ತಾ ಹೋಗುತ್ತಾರೆ.
ತಾರಾಗಣ : ಅನಂತ ನಾಗ್, ಮಿಲಿಂದ್, ಸಂಜನಾ ಬುರ್ಲಿ, ಗೋಪಿನಾಥ್, ನೀತು ಬಾಲಾ
ನಿರ್ದೇಶನ : ಶೃಂಗೇರಿ ಸುರೇಶ್
ಸಂಗೀತ: ಮನೋಜ್
ಛಾಯಾಗ್ರಹಣ: ಶಶಿಧರ್
ಈ ಮೂಲಕ ಚಿತ್ರ ಇನ್ನೇನೋ ಗಂಭೀರ ತಿರುವಿಗೆ ಕಾಲಿಡುತ್ತದೆ ಅಂತ ಪ್ರೇಕ್ಷಕ ಎದುರು ನೋಡುವಾಗ, ನಾಯಕ-ನಾಯಕಿ ನಡುವಿನ ಪ್ರೀತಿಯ ಕತೆ ತೆರೆದುಕೊಳ್ಳುತ್ತದೆ. ಅವರಿಬ್ಬರನ್ನು ದೂರ ಮಾಡಲು ಚಿತ್ರದ ಮತ್ತೋರ್ವ ನಾಯಕಿ ರಕ್ಷಾ ಮತ್ತು ಅನು ತಂದೆಯ ಕುತಂತ್ರದ ಕತೆ ಮುನ್ನೆಲೆಗೆ ಬರುತ್ತದೆ. ಮುಂದೇನು ಅನ್ನೋದು ಸಸ್ಪೆನ್ಸ್. ಹೊಸ ಬಾಟಲಿನಲ್ಲಿ ಹಳೇ ವೈನ್ ಎನ್ನುವ ಹಾಗೆ ಇಲ್ಲಿ ಹೊಸತೇನು ಇಲ್ಲ. ನಿಧಾನ ಗತಿಯ ನಿರೂಪಣೆಯಲ್ಲಿ ಹಳೇ ಸೂತ್ರವೂ ಸೋತು ಪ್ರೇಕ್ಷಕರನ್ನು ಬೇಸರದಲ್ಲಿ ಮುಳುಗಿಸುತ್ತದೆ. ಅಬ್ಬರ ಇಲ್ಲ, ಹೊಡೆದಾಟಗಳಿಲ್ಲದ ಕತೆ ಎನ್ನುವುದೇ ಒಂದಷ್ಟುಸಮಾಧಾನ.
ಚಿತ್ರ ವಿಮರ್ಶೆ: ಡಾಟರ್ ಆಫ್ ಪಾರ್ವತಮ್ಮ
ಚಿತ್ರದ ನಾಯಕ ಮಿಲಿಂದ್‌ಗೆ ಇದು ಮೊದಲ ಚಿತ್ರ. ಹಾಗೆಯೇ ನಾಯಕಿಯರಿಬ್ಬರು ಹೊಸಬರು. ಅವರವರ ಪಾತ್ರಗಳಲ್ಲಿ ಚೆನ್ನಾಗಿಯೇ ಅಭಿನಯಿಸಿದ್ದಾರೆ. ನಟನೆಯಲ್ಲಿ ಇಷ್ಟವಾಗುವ ಮಿಲಿಂದ್, ಆ್ಯಕ್ಷನ್ ಸನ್ನಿವೇಶಗಳಲ್ಲಿ ಇನ್ನು ಸಾಕಷ್ಟುತರಬೇತಿ ಪಡೆದುಕೊಳ್ಳಬೇಕಿದೆ. ನಾಯಕನ ತಾತಾನ ಪಾತ್ರದಲ್ಲಿ ಅನಂತನಾಗ್, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಸಿನಿಮಾ ಅವರ ಎಂಟ್ರಿಯಲ್ಲಿ ಕುತೂಹಲ ಮೂಡಿಸುತ್ತದೆ. ಉಳಿದವರು ಕೂಡ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಹಾಡುಗಳಲ್ಲಿ ಆಪ್ತವಾಗುವ ಮನೋಜ್, ಸಂಗೀತ ಹಿನ್ನೆಲೆ ಸಂಗೀತದಲ್ಲಿ ಕಿರಿಕಿರಿ ಎನಿಸುತ್ತದೆ. ಸಂಭಾಷಣೆಗಳಲ್ಲಿ ಸ್ಪಷ್ಟತೆ ಇಲ್ಲ. ಮಾತುಗಳಿಗಿಂತ ಹಿನ್ನೆಲೆ ಧ್ವನಿಯ ಅಬ್ಬರ ಕೇಳಿಸುತ್ತದೆ. ಶಶಿಧರ್ ಛಾಯಾಗ್ರಹಣ ಅಷ್ಟೇನು ಕಡೆಗಣಿಸುವಂತಿಲ್ಲ. ಕತೆಯ ಅಂದವನ್ನು ಹೆಚ್ಚಿಸುವಲ್ಲಿ ಛಾಯಾಗ್ರಹಣದ ಪಾತ್ರವೂ ಹೆಚ್ಚಿದೆ. ಹೇಳಬೇಕಿನಿಸಿದ್ದರಲ್ಲಿ ಸ್ಪಷ್ಟತೆ, ನಿಖರತೆ ಇಲ್ಲ ಎನ್ನುವುದನ್ನು ಬಿಟ್ಟರೆ, ಉಳಿದಿದ್ದೆಲ್ಲ ಚೆನ್ನಾಗಿವೆ. ಫ್ಯಾಮಿಲಿ ಜತೆಗೆ ಒಮ್ಮೆ ನೋಡಬಹುದಾದ ಸಿನಿಮಾವಂತೂ ಹೌದು.