ಚಿತ್ರ ವಿಮರ್ಶೆ: ಕುರುಕ್ಷೇತ್ರ

ಇದು ನಿಜಕ್ಕೂ ಕನ್ನಡಿಗರ ಹೆಮ್ಮೆಯ ಸಿನಿಮಾವೇ? ಹೌದು. ಕನ್ನಡದ ಮಟ್ಟಿಗೆ ಇದು ಒಂದೊಳ್ಳೆಯ ಪ್ರಯತ್ನ. ಯಾಕಂದ್ರೆ, ಪೌರಾಣಿಕ ಕತೆಗಳಿಗೆ ದೃಶ್ಯರೂಪ ನೀಡುವುದು ಈಗ ಅಂದುಕೊಂಡಷ್ಟುಸುಲಭವಲ್ಲ. ಅದೊಂದು ಸವಾಲಿನ ಕೆಲಸ. ಆ ದೃಷ್ಟಿಯಲ್ಲಿ ‘ಕುರುಕ್ಷೇತ್ರ’ದ ಕತೆ ರಂಜಿಸಬಲ್ಲ ಮಹಾಕಾವ್ಯವೇ ಹೌದು.

Kannada Movie Munirathna Kurukshetra film review

ದೇಶಾದ್ರಿ ಹೊಸ್ಮನೆ

ಮಹಾಭಾರತದಲ್ಲಿನ ದುರ್ಯೋಧನ ಹಾಗೂ ಭೀಮನ ನಡುವಿನ ಗದಾಯುದ್ಧ, ದ್ರೌಪದಿ ವಸ್ತ್ರಾಪಹರಣ ಹಾಗೂ ಕುರುಕ್ಷೇತ್ರ ಯುದ್ಧದ ಸನ್ನಿವೇಶಗಳ ಮುಖ್ಯ ದೃಶ್ಯರೂಪಕವೇ ಈ ಚಿತ್ರದ ಪ್ರಮುಖ ಕಥಾ ಹಂದರ. ಇದನ್ನೇ ದುರ್ಯೋಧನನ್ನು ಕೇಂದ್ರವಾಗಿಸಿಕೊಂಡು ತೆರೆಗೆ ತರಲಾಗಿದೆ. ಹಾಗಾಗಿ ದರ್ಶನ್‌ ಇದರ ಕೇಂದ್ರ ಬಿಂದು. ಕತೆಗೆ ತಕ್ಕಂತೆ ಚಿತ್ರದ ಉದ್ದಕ್ಕೂ ದುರ್ಯೋಧನನೇ ಆವರಿಸಿಕೊಂಡಿದ್ದರೂ ಪ್ರತಿಯೊಂದು ಪಾತ್ರಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಅವರೆಲ್ಲರೂ ಸನ್ನಿವೇಶದ ಮಹತ್ವ, ಮಾತು ಹಾಗೂ ಸುಂದರವಾದ ನಟನೆಯ ಮೂಲಕ ಪ್ರೇಕ್ಷಕರ ಮನಸಲ್ಲಿ ಉಳಿಯುವಂತೆ ಮಾಡಿರುವುದು ಚಿತ್ರದ ವಿಶೇಷ. ಹಾಗೆಯೇ ಅದು ನಿರ್ದೇಶಕ ನಾಗಣ್ಣ ಮತ್ತು ಚಿತ್ರಕತೆ ಬರೆದ ಭೈರವಿ ಅವರ ಜಾಣ್ಮೆ.

ತಾರಾಗಣ : ಅಂಬರೀಶ್‌, ದರ್ಶನ್‌, ರವಿಚಂದ್ರನ್‌, ನಿಖಿಲ್‌ ಕುಮಾರಸ್ವಾಮಿ, ಅರ್ಜುನ್‌ ಸರ್ಜಾ, ಶಶಿಕುಮಾರ್‌, ಮೇಘನಾ ರಾಜ್‌, ಸ್ನೇಹಾ, ಸೋನು ಸೂದ್‌, ಡ್ಯಾನಿಶ್‌ ಆಖ್ತರ್‌, ಶ್ರೀನಿವಾಸ ಮೂರ್ತಿ

ನಿರ್ದೇಶನ: ನಾಗಣ್ಣ

ನಿರ್ಮಾಣ: ಮುನಿರತ್ನ

ಬಿಡುಗಡೆಗೂ ಮುನ್ನ ಇದು ಹೆಚ್ಚು ಫೋಕಸ್‌ ಆಗಿದ್ದು ಮಲ್ಟಿಸ್ಟಾರ್‌ ಸಿನಿಮಾ ಎನ್ನುವುದರ ಜತೆಗೆ 2ಡಿ ಮತ್ತು 3 ಡಿ ತಂತ್ರಜ್ಞಾನ ಬಳಕೆಯ ಕುರಿತು. ಸಿನಿಮಾದ 3ಡಿ ಕೂಡ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇನ್ನು ಬಹುತೇಕ ಸಿನಿಮಾ ಸೆಟ್‌ನಲ್ಲೇ ಚಿತ್ರೀಕರಣಗೊಂಡಿದೆ.

ಮಹಾಭಾರತ ದರ್ಶನ ಮಾಡಿಸಿದ ‘ಕುರುಕ್ಷೇತ್ರ’; ಇಲ್ಲಿದೆ Review

ಕಲಾವಿದರ ಅಭಿನಯದ ವಿಚಾರಕ್ಕೆ ಬಂದರೆ ಸಿನಿಮಾದ ಪ್ರಮುಖ ಆಕರ್ಷಣೆ ದರ್ಶನ್‌. ಅಂದ್ರೆ, ಕತೆಯ ಕೇಂದ್ರ ಬಿಂದು ದುರ್ಯೋಧನ. ಮೂರು ಗಂಟೆಯ ಅವಧಿಯ ಸಿನಿಮಾದ ತೂಕ ಅವರ ಪಾತ್ರದ ಮೇಲಿದೆ. ಅದಕ್ಕೆ ತಕ್ಕಂತೆ ಇಡೀ ಸಿನಿಮಾ ದರ್ಶನ್‌ ಮೇಲೆ ಸಾಗುತ್ತದೆ. ವಸ್ತ್ರಾಲಂಕಾರದಲ್ಲಿ ಇನ್ನಷ್ಟುನೈಪುಣ್ಯತೆ ಬೇಕಿತ್ತು ಎನ್ನುವುದನ್ನು ಬಿಟ್ಟರೆ, ಮಹಾಭಾರತದ ನಿಜವಾದ ದುರ್ಯೋಧನನ ಪ್ರತಿರೂಪವೇ ದರ್ಶನ್‌. ನಡಿಗೆಯಲ್ಲಿನ ಗಜ ಗಾಂಭೀರ್ಯ, ಮಾತುಗಳಲ್ಲಿನ ಗತ್ತು ಗೈರತ್ತು ಎಲ್ಲವೂ ಅತ್ಯದ್ಭುತ. ಸಿಕ್ಕ ಅವಕಾಶದಲ್ಲಿ ಭೋರ್ಗರೆದು, ಅಬ್ಬರಿಸಿದ್ದಾರೆ ದರ್ಶನ್‌. ಅವರ ಇದುವರೆಗಿನ ಸಿನಿಮಾಗಳಲ್ಲಿ ಇದು ಅತ್ಯುತ್ತಮ ಅಭಿನಯವೆಂದರೂ ಸರಿ. ಅಭಿಮಾನಿಗಳಿಗೆ ಪಾಲಿಗೆ ದರ್ಶನ್‌ 50ನೇ ಸಿನಿಮಾದ ಆಯ್ಕೆ ಸರಿಯಾಗಿಸಿದೆ ಎಂದೆನಿಸುವುದು ಸಹಜ.

ದರ್ಶನ್‌ ಅವರ ಹಾಗೆಯೇ ಇಲ್ಲಿ ಚೆಂದವಾದ ಅಭಿನಯ ಕರ್ಣನ ಪಾತ್ರಧಾರಿ ಅರ್ಜುನ್‌ ಸರ್ಜಾ ಅವರದ್ದು. ಪೌರಾಣಿಕ ಸಿನಿಮಾವೊಂದರ ಪಾತ್ರಕ್ಕೆ ಬೇಕಾದ ಮಾತಿನ ವರಸೆ, ಅಭಿನಯದ ಚತುರತೆಯಲ್ಲಿ ಅವರನ್ನು ತೆರೆ ಮೇಲೆ ನೋಡುವುದಕ್ಕೆ ಚೆಂದ. ಮಹಾಭಾರತದಲ್ಲಿ ಕರ್ಣನಿಗಾದ ಅವಮಾನ, ಮೋಸ, ನೋವಿನ ಭಾವನಾತ್ಮಕ ಸನ್ನಿವೇಶಗಳಲ್ಲೂ ಪ್ರೇಕ್ಷಕನ ಮನ ಮುಟ್ಟುತ್ತಾರೆ ಅರ್ಜುನ್‌ ಸರ್ಜಾ. ನಿಖಿಲ್‌ ಕುಮಾರಸ್ವಾಮಿ ಮಿಂಚುವುದು ಯುದ್ಧದ ಸನ್ನಿವೇಶಗಳಲ್ಲಿ. ಯುದ್ಧದಲ್ಲಿ ಅವರನ್ನು ಮೀರಿಸುವುವರೇ ಇಲ್ಲ.

ದರ್ಶನ್ ಇಲ್ಲದೇ ಕುರುಕ್ಷೇತ್ರವೇ ಇಲ್ಲ; ಮುನಿರತ್ನ ಮಾತುಗಳಿವು

ಮಹಾಭಾರತದಲ್ಲಿ ಭೀಷ್ಮ ಅತ್ಯಂತ ಹಿರಿಯ ವ್ಯಕ್ತಿ. ಅದರಲ್ಲಿ ತಮ್ಮ ಮಾಗಿದ ಅಭಿನಯ ತೋರಿಸುವ ಅಂಬರೀಶ್‌, ನಿಜವಾದ ಭೀಷ್ಮನಂತೆಯೇ ಕಾಣಿಸಿಕೊಂಡಿದ್ದಾರೆ. ಶಕುನಿ ಪಾತ್ರಧಾರಿ ರವಿಶಂಕರ್‌, ದುಶ್ಯಾಸನ ಪಾತ್ರಧಾರಿ ರವಿಚೇತನ್‌, ಕೃಷ್ಣನಾಗಿ ರವಿಚಂದ್ರನ್‌ ಅಭಿನಯಕ್ಕೂ ಪ್ರೇಕ್ಷಕರಿಂದ ಚಪ್ಪಾಳೆ ಸಿಗುತ್ತವೆ. ಶ್ರೀನಿವಾಸ ಮೂರ್ತಿ, ಶ್ರೀನಾಥ್‌, ಭಾರತಿ ವಿಷ್ಣುವರ್ಧನ್‌, ಸ್ನೇಹಾ, ಪವಿತ್ರಾ ಲೋಕೇಶ್‌ ಸೇರಿ ಪ್ರತಿಯೊಬ್ಬರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೊಂಚ ಬೇಸರ ಎನಿಸುವುದು ಅರ್ಜುನನ ಪಾತ್ರಧಾರಿ ಸೋನು ಸೂದ್‌ ಹಾಗೂ ಭೀಮನ ಪಾತ್ರಧಾರಿ ಡ್ಯಾನಿಶ್‌ ಆಯ್ಕೆ ಮತ್ತು ಅವರ ಅಭಿನಯದ ಮೇಲೆ. ಅವರಿಬ್ಬರು ಅದ್ಭುತ ನಟರೇ. ಆದರೆ ಪೌರಾಣಿಕದ ಪಾತ್ರಗಳಿಗೆ ಅವರು ಅಷ್ಟಾಗಿ ಸೂಕ್ತ ಎನಿಸುವುದು ತುಸು ಕಷ್ಟ. ದೇಹಾಕೃತಿಯಲ್ಲಿ ಸೈ ಎನಿಸಿಕೊಳ್ಳುವ ಡ್ಯಾನಿಶ್‌, ಪಾತ್ರದ ಹಾವಭಾವದಲ್ಲಿ ನಿರಾಸೆ ಹುಟ್ಟಿಸುತ್ತಾರೆ. ಅದೇ ಮಾತು ಅರ್ಜುನನ ಪಾತ್ರಧಾರಿ ಸೋನು ಸೂದ್‌ ಅವರಿಗೂ ಅನ್ವಯ.

ಕುರುಕ್ಷೇತ್ರ ಒಪ್ಪದಿದ್ದರೆ ನನ್ನಂಥ ಮುಠ್ಠಾಳ ಮತ್ತೊಬ್ಬ ಇರುತ್ತಿರಲಿಲ್ಲ!

ಹರಿಕೃಷ್ಣ ಸಂಗೀತದಲ್ಲಿ ನಾಗೇಂದ್ರ ಪ್ರಸಾದ್‌, ಭೈರವಿ ಹಾಗೂ ಕಲ್ಯಾಣ್‌ ಅವರ ಸಾಹಿತ್ಯ ಸಿನಿಮಾಕ್ಕೂ ದೊಡ್ಡ ಮೆರಗು. ಕತೆಯಲ್ಲಿ ರಂಜಿಸುವ ಸಿನಿಮಾವು, ಹಾಡುಗಳ ಮೂಲಕ ಹಿಡಿದಿಡುವಲ್ಲಿ ಯಶಸ್ವಿ ಆಗುತ್ತದೆ.

Latest Videos
Follow Us:
Download App:
  • android
  • ios