ಆರಂಭದಲ್ಲಿ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌ ಚಿತ್ರದ ಟೀಸರ್‌ ಲಾಂಚ್‌ ಮಾಡಿ ಶುಭ ಹಾರೈಸಿದ್ದರು. ಅನಂತರ ಶಿವರಾಜ್‌ಕುಮಾರ್‌ ಟ್ರೇಲರ್‌ ಲಾಂಚ್‌ ಮಾಡಿ, ಹೊಸಬರ ಚಿತ್ರ ಗೆಲ್ಲಲಿ ಎಂದಿದ್ದರು. ಈಗ ಚಿತ್ರದ ಬಿಡುಗಡೆ ಪೂರ್ವ ಪ್ರಮೋಷನ್‌ಗೆ ನೆನಪಿರಲಿ ಪ್ರೇಮ್‌, ಶ್ರೀಮುರುಳಿ, ಕಾರ್ತಿಕ್‌ ಜಯರಾಂ, ಯಶ್‌ ಶೆಟ್ಟಿಸೇರಿದಂತೆ 50ಕ್ಕೂ ಹೆಚ್ಚು ನಟ-ನಟಿಯರು ಚಿತ್ರದ ಟ್ರೇಲರ್‌ ಹಾಗೂ ಟೀಸರ್‌ ಮೆಚ್ಚಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ರಾಮಚಾರಿ ಚಿತ್ರದ 'ಕಸ್ತೂರಿ-ಸುವರ್ಣ' ಅವಳಿ-ಜವಳಿ ಫೋಟೋಸ್!

‘ಹೊಸಬರ ಚಿತ್ರವಾದರೂ, ಚಿತ್ರೋದ್ಯಮದಿಂದ ದೊಡ್ಡ ಬೆಂಬಲ ಸಿಕ್ಕಿದೆ. ಪ್ರತಿಯೊಬ್ಬರು ಚಿತ್ರದ ಬಗ್ಗೆ ಅತೀವ ವಿಶ್ವಾಸದಲ್ಲಿ ಮಾತನಾಡಿದ್ದಾರೆ. ಅವರ ನಂಬಿಕೆಯೂ ಸೇರಿ ಪ್ರೇಕ್ಷಕರ ನಿರೀಕ್ಷೆ ಇಲ್ಲಿ ಹುಸಿಯಾಗುವುದಿಲ್ಲ ಎನ್ನುವ ಭರವಸೆ ನಮಗೂ ಇದೆ. ವಿಭಿನ್ನವಾದ ಕತೆ, ವಿಶಿಷ್ಟವಾದ ನಿರೂಪಣೆ ಸೇರಿ ಸಾಕಷ್ಟುಹೊಸತನಗಳು ಇಲ್ಲಿವೆ. ಕನ್ನಡಕ್ಕೆ ಅಪರೂಪವೇ ಎನ್ನುವ ಹಾಗೆ ಪ್ಯಾರಾ ನಾರ್ಮಲ್‌ ಜಾನರ್‌ನಲ್ಲಿ ಕತೆ ಹೇಳುವ ಪ್ರಯತ್ನ ಮಾಡಿದ್ದೇನೆ. ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರಲ್ಲಿ ತುಳು ಹಾಡು ಸೇರಿಸಿದ್ದು ಇಲ್ಲಿ ವಿಶೇಷ. ಹಾಗೆಯೇ ಹೊಸ ಕಲಾವಿದರನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಂಡು, ಅವರ ಮೂಲಕ ಒಂದು ವಿಭಿನ್ನ ಕತೆ ಹೇಳಲು ಹೊರಟಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಪರಮೇಶ್‌.

ನಗುವಿನಿಂದಲೇ ಮೋಡಿ ಮಾಡುವ ‘ಸುಹಾಸಿನಿ’ ಎಂಬ ಬ್ಯೂಟಿ!

ಈ ಹಿಂದೆ ಇವರು ‘ಮಾಮು ಟೀ ಅಂಗಡಿ’ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಇದು ಪ್ಯಾರಾ ನಾರ್ಮಲ್‌ ಜಾನರ್‌ಗೆ ಸೇರಿದ ಸಿನಿಮಾ. ‘ಪ್ಯಾರಾ ನಾರ್ಮಲ್‌ ಅಂದ್ರೆ ಸ್ಕ್ರೀನ್‌ ಮೇಲೆ ದೆವ್ವವನ್ನು ತೋರಿಸದೆ ಬರೀ ಸೌಂಡ್‌ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುವುದು. ಅದನ್ನು ಕೊನೆ ತನಕ ಕಾಪಾಡಿಕೊಳ್ಳಬೇಕು. ಆಗ ಮಾತ್ರ ಅದು ಪ್ಯಾರಾ ನಾರ್ಮಲ್‌ ಸಿನಿಮಾ ಎಂದೆನಿಸಿಕೊಳ್ಳುತ್ತದೆ. ಆ ಪ್ರಯತ್ನವನ್ನೇ ಇಲ್ಲಿ ಪ್ರಾಮಾಣಿಕವಾಗಿ ಮಾಡಿದ್ದೇವೆ’ ಎನ್ನುತ್ತಾರೆ ಪರಮೇಶ್‌.