ಕ್ರೈಮ್‌, ಥ್ರಿಲ್ಲರ್‌ ಹಾಗೂ ತನಿಖೆಯ ಅಂಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಶಂಕರ್‌ ಜೆ ಎಂಬುವವರು ನಿರ್ದೇಶಕರು. ಇವರೇ ಕತೆ, ಚಿತ್ರಕತೆ ಬರೆದಿರುವುದು. ಸಂಗೀತ ನಿರ್ದೇಶಕ ಮಿಥುನ್‌ ಮುಕುಂದನ್‌, ಶಶಿಧರ್‌ ಕೆ., ಜಯಲಕ್ಷೀಕೃಷ್ಣಗೌಡ, ಸಂದೀಪ್‌ ಶಿವಮೊಗ್ಗ ಮತ್ತು ಶ್ವೇತಮಧುಸೂಧನ್‌ ಚಿತ್ರದ ನಿರ್ಮಾಪಕರು. ವಿಜಯ್‌ ಸಿನಿಮಾಸ್‌ ಮುಖಾಂತರ ಸುಮಾರು 150 ಕೇಂದ್ರಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

ಆ ಪಾರ್ವತಮ್ಮ ಬೇರೆ ಈ ಪಾರ್ವತಮ್ಮನೇ ಬೇರೆ!

ಅಮ್ಮ-ಮಗಳ ಬಾಂದವ್ಯವನ್ನು ಹೇಳುವ ಸಿನಿಮಾ. ನಾನು ಇಲ್ಲಿ ಮಧ್ಯಮ ವರ್ಗದ ಮಹಿಳೆಯ ಪಾತ್ರ ಮಾಡಿದ್ದೇನೆ. ಮಹಿಳಾ ಶಕ್ತಿಯನ್ನು ತೋರುವ ಸಿನಿಮಾ. ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ಕಡಿಮೆ. ಹೀಗಾಗಿ ಅಪರೂಪಕ್ಕೆ ಬರುವ ಚಿತ್ರಗಳನ್ನು ಗೆಲ್ಲಿಸಬೇಕು. ಇಡೀ ಸಿನಿಮಾ ನ್ಯಾಚುರಲ್ಲಾಗಿ ಬಂದಿದೆ ಎಂದು ಚಿತ್ರದ ಕುರಿತು ಹೇಳಿಕೊಂಡಿದ್ದು ಸುಮಲತಾ ಅವರು. ನಟಿ ಹರಿಪ್ರಿಯಾ ಅವರು ಎಲ್ಲ ರೀತಿಯ ಪಾತ್ರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈಗ ನಾಯಕಿ ಪ್ರಧಾನ ಸಿನಿಮಾ ಮಾಡಿರುವುದಕ್ಕೆ ಖುಷಿ ಇದೆ. ಚಿತ್ರದಲ್ಲಿ ನಾನು ವೈದೇಹಿ ಪಾತ್ರ ಮಾಡಿರುವೆ. ಸಾಹಸ ದೃಶ್ಯಗಳು ಸೇರಿದಂತೆ ಇಡೀ ಸಿನಿಮಾ ರಿಯಾಲಿಸ್ಟಿಕ್‌ ಆಗಿದೆ. ಎಲ್ಲ ರು ಸೇರಿ ಪ್ರೀತಿಯಿಂದ ಮಾಡಿರುವ ಚಿತ್ರವಿದು. ಚಿತ್ರಕ್ಕೆ ಒಂದು ಪವರ್‌ಫುಲ್‌ ಟೈಟಲ್‌ ಇದೆ ಎಂದು ಹರಿಪ್ರಿಯಾ ಅವರು ಹೇಳಿಕೊಂಡರು. ಹಾಡು ಬರೆದಿರುವ ಧನಂಜಯ್‌ ‘ನಾನು ಸಾಹಿತಿ ಅಲ್ಲ. ನಟನೆಯಲ್ಲಿ ಬಿಡುವು ಇದ್ದಾಗ ಹಾಗೇ ಸುಮ್ಮನೆ ಮನಸ್ಸಿನಲ್ಲಿರುವ ಪದಗಳನ್ನು ಪೇಪರಿನಲ್ಲಿ ಬರದುಕೊಳ್ಳುತ್ತಿದ್ದೆ. ಈಗ ಅದು ಹಾಡಾಗಿದೆ’ ಎಂದರು.

ನಿರ್ಮಾಪಕರಿಗೆ ಇದು ಮೊದಲ ಸಿನಿಮಾ. ಹೀಗಾಗಿ ಅವರು ಈ ಸಿನಿಮಾ ಗೆಲ್ಲಬೇಕು ಎನ್ನುವ ಸಂಭ್ರಮದಲ್ಲಿದ್ದರು. ನಿರ್ದೇಶಕ ಶಂಕರ್‌ ಜೆ ಅವರಿಗೆ ಒಂದು ಪವರ್‌ಫುಲ್‌ ಟೈಟಲ್‌ನಲ್ಲಿ ಕತೆ ಬರೆದು ಸಿನಿಮಾ ಮಾಡಿದ ಖುಷಿ. ‘ನಾವೆಲ್ಲ ಹೊಸಬರು. ತುಂಬಾ ಪ್ರೀತಿಯಿಂದ ಮಾಡಿರುವ ಸಿನಿಮಾ ಇದು. ಹರಿಪ್ರಿಯಾ ಹಾಗೂ ಸುಮಲತಾ ಅಂಬರೀಶ್‌ ಅವರು ಚಿತ್ರದ ಬೆನ್ನೆಲುಬು. ಹರಿಪ್ರಿಯಾ ಅವರು ಕನ್ನಡದ ಲೇಡಿ ಸೂಪರ್‌ ಸ್ಟಾರ್‌’ ಎಂದು ಮೆಚ್ಚಿಕೊಂಡರು ನಿರ್ದೇಶಕರು. ಸೂರಜ್‌ಗೌಡ, ಪ್ರಭು, ತರಂಗವಿಶ್ವ ಮುಂತಾದವರು ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.