ಕೋರ್ಟ್‌ ಡ್ರಾಮಾ ಎನ್ನುವುದರ ಜತೆಗೆ ಈ ಚಿತ್ರವು ಒಂದು ಫ್ಯಾಮಿಲಿ ಡ್ರಾಮಾವೂ ಹೌದು. ಎಲ್ಲಕ್ಕಿಂತ ತನ್ನ ಫ್ಯಾಮಿಲಿಯೇ ಮುಖ್ಯ ಎಂದುಕೊಳ್ಳುವ ಒಬ್ಬ ಪ್ರತಿಷ್ಠಿತ ವಕೀಲ, ತನ್ನದೇ ಫ್ಯಾಮಿಲಿ ಸಮಸ್ಯೆ ಕೋರ್ಟ್‌ ಮೇಟ್ಟಿಲೇರಿದಾಗ ಅದನ್ನು ಹೇಗೆ ಚಾಣಾಕ್ಷ್ಯತನದಿಂದ ಗೆದ್ದು ತೋರಿಸಿದ ಎನ್ನುವುದು ಚಿತ್ರದ ಕತೆ. ಹಾಗೆ ನೋಡಿದರೆ, ರವಿಚಂದ್ರನ್‌ ಅವರ ‘ದೃಶ್ಯಂ’ ಸಿನಿಮಾಕ್ಕೂ ಇಲ್ಲಿಗೂ ಒಂದಷ್ಟುಹೋಲಿಕೆ ಕಾಣುತ್ತದೆ. ಅಲ್ಲಿ ಒಬ್ಬ ಕಥಾ ನಾಯಕ ರಾಜೇಂದ್ರ ಪೊನ್ನಪ್ಪ ಸಾಮಾನ್ಯ ಮನುಷ್ಯನಾಗಿ ತನ್ನ ಫ್ಯಾಮಿಲಿಯ ಘನತೆ, ಗೌರವ ಕಾಪಾಡಿಕೊಳ್ಳಲು ಹೇಗೆಲ್ಲ ಹೋರಾಡುತ್ತಾನೋ, ಹಾಗೆಯೇ ಇಲ್ಲಿ ಕಥಾ ನಾಯಕ ದಶರಥ ಪ್ರಸಾದ್‌ ಒಬ್ಬ ವಕೀಲನಾಗಿ ತನ್ನ ಮಗಳಿಗಾದ ಅನ್ಯಾಯದ ವಿರುದ್ಧ ಕಾನೂನು ಸಮರ ಸಾರಿ ಗೆಲ್ಲುತ್ತಾನೆ.

ದುಬಾರಿ ಬೈಕ್‌ಗೆ ಒಡೆಯನಾದ ಕ್ರೇಜಿಸ್ಟಾರ್ ಪುತ್ರ !

ರವಿಚಂದ್ರನ್‌ ಅವರನ್ನು ವಕೀಲರನ್ನಾಗಿ ತೆರೆ ಮೇಲೆ ತೋರಿಸಲು ಹೊರಟ ನಿರ್ದೇಶಕ ಎಂ.ಎಸ್‌. ರಮೇಶ್‌, ದೇಶಾದ್ಯಂತ ಸಾಕಷ್ಟುತಲ್ಲಣ ಹುಟ್ಟಿಸಿದ ರೇಪ್‌ ಕೇಸ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಹಿಳೆಯನ್ನು ಎರಡನೇ ದರ್ಜೆಯ ಪ್ರಜೆ ಎಂದು ಭಾವಿಸುವ ಗಂಡಸಿನ ಕೆಟ್ಟಮನಸ್ಥಿತಿ, ಆಕೆ ಭೋಗದ ವಸ್ತು ಎಂಬುದಾಗಿ ಅತ್ಯಾಚ್ಯಾರ ಎಸುಗುವ ಗಂಡಸಿನ ವಿಕೃತ ಮನೋಭಾವನೆಗಳಿಗೆ ಕಾನೂನಿನಲ್ಲಿ ಹೇಗೆಲ್ಲ ಶಿಕ್ಷೆ ವಿಧಿಸಲು ಸಾಧ್ಯವಿದೆ ಎನ್ನುವುದನ್ನು ಕೋರ್ಟ್‌ ಡ್ರಾಮಾದಲ್ಲಿ ಮನ ಮುಟ್ಟುವಂತೆ ತೋರಿಸಿದ್ದಾರೆ.

ಚಿತ್ರ ವಿಮರ್ಶೆ: ಮಹಿರ

ಸಿಡಿಗುಂಡಿನ ಮಾತುಗಳ ಮೂಲಕ ಕೋರ್ಟ್‌ ಸೀನುಗಳು ಪ್ರೇಕ್ಷಕರನ್ನು ರಂಜಿಸುತ್ತವೆ. ಅದರ ಜತೆಗೆ ಅಪ್ಪ-ಮಕ್ಕಳ ಸೆಂಟಿಮೆಂಟ್‌, ಗಂಡ-ಹೆಂಡತಿ ಬಾಂಧವ್ಯದ ಮನ ಮಿಡಿಯುವ ಸನ್ನಿವೇಶಗಳ ಜತೆಗೆಯೇ ಪ್ರೀತಿ-ಪ್ರೇಮದ ದೃಶ್ಯಗಳನ್ನು ಕತೆಗೆ ಪೋಣಿಸಿ, ಚಿತ್ರ ಕಮರ್ಷಿಯಲ್‌ ಆಗಿಯೂ ಪ್ರೇಕ್ಷಕರಿಗೆ ತಲುಪುವಂತೆ ಮಾಡುವಲ್ಲೂ ನಿರ್ದೇಶಕರ ಶ್ರಮ ಯಶಸ್ವಿ ಆಗಿದೆ. ಅಷ್ಟುಬಗೆಯಲ್ಲೂ ರವಿಚಂದ್ರನ್‌ ಅಭಿನಯ ಸೊಗಸಾಗಿದೆ. ಈಗಲೂ ಅವರು ಒಬ್ಬ ಪ್ರೇಮಿ ಆಗಬಲ್ಲರು ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟವಾದರೂ, ಪ್ರೀತಿ-ಪ್ರೇಮಕ್ಕೆ ಅವರು ಮಲ್ಲ ಎನ್ನುವುದು ವಾಸ್ತವವೇ. ಕಥಾ ನಾಯಕ ದಶರಥ ಪ್ರಸಾದ್‌ ಪತ್ನಿಯಾಗಿ ಸೋನಿಯಾ ಅಗರವಾಲ್‌, ಎಸ್‌ಕೆ ಸಲ್ಯೂಷನ್ಸ್‌ ಕಂಪನಿಯ ಮಾಲಿಕಳಾಗಿ ಅಭಿರಾಮಿ, ದಶರಥ ವಿರುದ್ಧ ವಾದಿಸುವ ವಕೀಲ ಪಾಟೀಲ್‌ ಪಾತ್ರದಲ್ಲಿ ರಂಗಾಯಣ ರಘು, ರವಿಚಂದ್ರನ್‌ ಮಗಳಾಗಿ ಮೇಘಶ್ರೀ ಅಭಿನಯ ಚೆನ್ನಾಗಿದೆ. ಗುರುಕಿರಣ್‌ ಸಂಗೀತ ಎರಡು ಹಾಡುಗಳಲ್ಲಿ ಇಷ್ಟವಾಗುತ್ತದೆ. ಸೀತಾರಾಂ ಛಾಯಾಗ್ರಹಣವೂ ಅಡ್ಡಿಯಿಲ್ಲ. ಕೊನೆಗೂ ಪ್ರೇಕ್ಷಕರನ್ನು ರಂಜಿಸುವುದು ಚಿತ್ರದ ಕತೆ. ಹಾಗೆಯೇ ಸಂಭಾಷಣೆ.