ಚಿತ್ರರಂಗದಲ್ಲಿ ಭಾರೀ ಮೋಡಿ ಮಾಡಿದ್ದು ಗೊತ್ತೇ ಇದೆ. ಆಕೆಯ ಚೆಲುವೆಗೆ ಮಾರು ಹೋಗದವರಿಲ್ಲ. ಬಹಳಷ್ಟು ಖ್ಯಾತ ತಾರೆಯರು ಕೂಡ ಆಕೆಗೆ ಅಭಿಮಾನಿಗಳಾಗಿಬಿಟ್ಟಿದ್ದರು. 'ನಾನು ಅವರನ್ನು ನೋಡಬೇಕು, ಆಕೆಯ ಜೊತೆ ಸಿನಿಮಾ ಮಾಡಬೇಕು' ಎನ್ನುವ ಒಂದೇ ಆಸೆಯಿಂದ ಚಿತ್ರರಂಗಕ್ಕೆ ಬಂದೆ ಎಂದು ನಿರ್ದೇಶಕ..
ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರದು ಮರೆಯಲಾಗದ ಕೊಡುಗೆ. ಈಗ ಅವರು ಲೈಮ್‌ಲೈಟ್‌ನಲ್ಲಿ ಇಲ್ಲದಿರಬಹುದು, ಆದರೆ ದಶಕಗಳ ಹಿಂದೆ ಅವರು 'ಪ್ರೇಮಲೋಕ' ಹಾಗೂ 'ರಣಧೀರ' ಮುಂತಾದ ಸಿನಿಮಾಗಳ ಮೂಲಕ ಸೃಷ್ಟಿಸಿದ್ದ ಕ್ರೇಜ್ ಯಾರೂ ಯಾವತ್ತೂ ಮರೆಯಲು ಸಾಧ್ಯವಿಲ್ಲ. ನಟ ರವಿಚಂದ್ರನ್ ಅವರ ಬಗ್ಗೆ ಬಹಳಷ್ಟು ಸಂಗತಿಗಳು ಗೊತ್ತಿದ್ದರೂ ಕೆಲವಷ್ಟು ಸಂಗತಿಗಳು ಗೊತ್ತಿಲ್ಲದೆಯೂ ಇದೆ. ಇದೀಗ, ಅಂತಹ ಒಂದು ಸಂಗತಿ ಇಲ್ಲಿದೆ ನೋಡಿ..
90ರ ದಶಕದ ಆರಂಭದಲ್ಲೇ ನಿಜವಾದ ಪ್ಯಾನ್ ಇಂಡಿಯಾ ಕ್ರಾಂತಿ ಮಾಡಿದ್ದ ಫಿಲ್ಮ್ ಮೇಕರ್ ಈ ರವಿಚಂದ್ರನ್. 'ಶಾಂತಿ ಕ್ರಾಂತಿ' ಸಿನಿಮಾ ಮೂಲಕ ಹಲವು ಭಾಷೆಗಳಲ್ಲಿ ಕನ್ನಡ ಸಿನಿಮಾ ತೋರಿಸುವ ಪ್ರಯತ್ನ ಮಾಡಿದ್ದರು ರವಿಚಂದ್ರನ್. ಆದರೆ, ಅದು ಯಶಸ್ವಿ ಆಗಲಿಲ್ಲ ಅಷ್ಟೇ. ಬಳಿಕ ಕೂಡ ಅವರು ಕೆಲವು ಸೂಪರ್ ಹಿಟ್ ಚಿತ್ರಗಳನ್ನು, ರಿಮೇಕ್ ಚಿತ್ರಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಆದರೆ ಅಚ್ಚರಿ ಎಂಬಂತೆ, ಅವರು ಯಾಕೆ ಅಂದಿನ ಕಾಲದ ಮಹಾನ್ ಸುಂದರಿ ನಟಿ ಶ್ರೀದೇವಿ ಅವರೊಂದಿಗೆ ಸಿನಿಮಾ ಮಾಡಲಿಲ್ಲ? ಅವರನ್ನು ಯಾಕೆ ಕನ್ನಡಕ್ಕೆ ತರಲಿಲ್ಲ? ಈ ಬಗ್ಗೆ ಹಲವರು ಯೋಚಿಸಿದ್ದಾರೆ.
ಆದರೆ, ಸತ್ಯ ಸಂಗತಿ ಏನೆಂದರೆ, ನಟಿ ಶ್ರೀದೇವಿ ಜೊತೆ ನಟ ರವಿಚಂದ್ರನ್ ಅವರ ಸಿನಿಮಾವೊಂದು ಸೆಟ್ ಏರಿತ್ತು. ಅದಕ್ಕೆ 'ಚೆಲುವೆ' ಎಂದು ಹೆಸರು ಕೂಡ ಇಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಮುಂದುವರೆಯಲಿಲ್ಲ. ಆದರೆ, ರವಿಚಂದ್ರನ್ ಆ ಪ್ರಯತ್ನ ಮಾಡದೇ ಕೈಚೆಲ್ಲಿರಲಿಲ್ಲ ಎಂಬುದು ತುಂಬಾ ಮುಖ್ಯ ಸಂಗತಿ. ಆದರೆ, ಇದಕ್ಕಿಂತಲೂ ಅಚ್ಚರಿದಾಯಕ ಸಂಗತಿ ಎಂದರೆ, ನಟ ರವಿಚಂದ್ರನ್ ಅವರಿಗೆ ನಟಿ ಶ್ರೀದೇವಿ ಮದುವೆಯಾದಾಗ 'ಹಾರ್ಟ್ ಬ್ರೇಕ್' ಆಗಿತ್ತಂತೆ. ಈ ಸಂಗತಿಯನ್ನು ಸ್ವತಃ ರವಿಚಂದ್ರನ್ ಅವರು ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಹಂಚಿಕೊಂಡಿದ್ದಾರೆ.
ನಟಿ ಶ್ರೀದೇವಿ ಅವರ ಅಪರಿಮಿತ ಸೌಂದರ್ಯಕ್ಕೆ ನಟ ರವಿಚಂದ್ರನ್ ದೊಡ್ಡ ಅಭಿಮಾನಿ ಆಗಿದ್ದರು. ಮದ್ರಾಸ್ ಮೂಲದ ಶ್ರೀ ಅಮ್ಮ ಯಂಗೇರ್ ಅಯ್ಯಪ್ಪನ್ ಮುಂದೆ ಶ್ರೀದೇವಿಯಾಗಿ ಚಿತ್ರರಂಗದಲ್ಲಿ ಭಾರೀ ಮೋಡಿ ಮಾಡಿದ್ದು ಗೊತ್ತೇ ಇದೆ. ಆಕೆಯ ಚೆಲುವೆಗೆ ಮಾರು ಹೋಗದವರಿಲ್ಲ. ಬಹಳಷ್ಟು ಖ್ಯಾತ ತಾರೆಯರು ಕೂಡ ಆಕೆಗೆ ಅಭಿಮಾನಿಗಳಾಗಿಬಿಟ್ಟಿದ್ದರು. 'ನಾನು ಶ್ರೀದೇವಿಯನ್ನು ನೋಡಬೇಕು, ಆಕೆಯ ಜೊತೆ ಸಿನಿಮಾ ಮಾಡಬೇಕು' ಎನ್ನುವ ಒಂದೇ ಆಸೆಯಿಂದ ಚಿತ್ರರಂಗಕ್ಕೆ ಬಂದೆ ಎಂದು ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಹೇಳಿದ್ದರು. ಆ ಮಟ್ಟಿಗಿನ ಕ್ರೇಜ್ ನಟಿ ಶ್ರೀದೇವಿ ಅವರಿಗೆ ಇತ್ತು.
ಹೌದು, 80-90ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ನಟಿ ಶ್ರೀದೇವಿ ಜಾದೂ ಮರೆಯೋಕೆ ಸಾಧ್ಯವಿಲ್ಲ. 1996ರಲ್ಲಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಜೊತೆ ನಟಿ ಶ್ರೀದೇವಿ ಮದುವೆ ನಡೆದಿತ್ತು. ಆಗ ಸಾಕಷ್ಟು ಜನ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗಿತ್ತು. ಅದರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರವಿಚಂದ್ರನ್ ಕೂಡ ಒಬ್ಬರು. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಸ್ವತಃ ನಟ ರವಿಚಂದ್ರನ್ ಹೇಳಿದ್ದಾರೆ.
ಶ್ರೀದೇವಿ ಜೊತೆ ಸಿನಿಮಾ ಮಾಡುವ ರವಿಚಂದ್ರನ್ ಕನಸು ಸಂಪೂರ್ಣವಾಗಿ ಈಡೇರಲೇ ಇಲ್ಲ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ 'ಸೂಪರ್ ಟಾಕ್‌ಟೈಮ್' ಸಂದರ್ಶನದಲ್ಲಿ ರವಿಚಂದ್ರನ್ ಹಾಗೂ ನಟಿ ಖುಷ್ಬೂ ಭಾಗಿ ಆಗಿದ್ದರು. ರಾಪಿಡ್ ಫೈರ್ ರೌಂಡ್‌ನಲ್ಲಿ ಅಕುಲ್ ಬಾಲಾಜಿ 'ಯಾವ ಹೀರೊಯಿನ್ ಮದುವೆಯಾದಾಗ ನಿಮ್ಮ ಹಾರ್ಟ್ ಬ್ರೇಕ್ ಆಗಿತ್ತು?' ಎಂದು ಕೇಳಿದ್ದರು. ಆಗ ಒಂದು ಕ್ಷಣ ಕೂಡ ಯೋಚಿಸದೇ ಶ್ರೀದೇವಿ ಹೆಸರು ಹೇಳಿದ್ದಾರೆ ರವಿಚಂದ್ರನ್.
ಈ ಬಗ್ಗೆ ಹೇಳಿಕೊಂಡಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು 'ಶ್ರೀದೇವಿ ಜೊತೆ ಒಂದು ಸಿನಿಮಾ ಮಾಡಬೇಕಿತ್ತು. ಅದಕ್ಕೆ 'ಚೆಲುವೆ' ಎಂದು ಟೈಟಲ್ ಸಹ ಫಿಕ್ಸ್ ಆಗಿತ್ತು. ಶ್ರೀದೇವಿ ನಾಯಕಿಯಾಗಿ ಫಿಕ್ಸ್ ಆಗಿದ್ದರು. ಶ್ರೀದೇವಿ ಕರ್ಕೊಂಡ್ ಬಂದರೆ ನನಗೆ ಸಂಭಾವನೆ ಬೇಡ, ಫ್ರೀಯಾಗಿ ನಟಿಸುತ್ತೇನೆ ಎಂದಿದ್ದೆ. ಅದರಂತೆ ಎಲ್ಲವೂ ಆಗಿತ್ತು' ಎಂದು ರವಿಚಂದ್ರನ್ ನೆನಪಿಸಿಕೊಂಡಿದ್ದರು.
ಮಾತು ಮುಂದುವರೆಸಿದ ರವಿಚಂದ್ರನ್ 'ಚೆಲುವೆ' ಚಿತ್ರವನ್ನು ನಾನೇ ನಿರ್ದೇಶನ ಮಾಡಬೇಕಿತ್ತು. ಕಥೆ ಹೇಳಿ ನಟಿ ಶ್ರೀದೇವಿ ಒಪ್ಪಿ ಎಲ್ಲಾ ಓಕೆ ಆಗಿತ್ತು. ಕಾರಣಾಂತರಗಳಿಂದ ಆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಬಳಿಕ, ಅದೇ ಟೈಟಲ್ ಅನ್ನು 'ಚೆಲುವ' ಎಂದು ಬದಲಿಸಿ ರೀಮೆಕ್ ಸಿನಿಮಾ ಮಾಡುವಂತಾಯಿತು' ಎಂದು ರವಿಚಂದ್ರನ್ ಹೇಲಿದ್ದಾರೆ. ಕನ್ನಡದಲ್ಲಿ ಬಾಲನಟಿಯಾಗಿ 'ಭಕ್ತ ಕುಂಬಾರ' ಚಿತ್ರದಲ್ಲಿ ಶ್ರೀದೇವಿ ನಟಿಸಿದ್ದರು. 'ಪ್ರಿಯಾ' ಹಾಗೂ 'ಹೆಣ್ಣು ಸಂಸಾರದ ಕಣ್ಣು' ಅವರು ಕನ್ನಡದಲ್ಲಿ ನಟಿಸಿದ ಮತ್ತೆರಡು ಚಿತ್ರಗಳು. ಈಗ ಶ್ರೀದೇವಿ ಅವರು ನಮ್ಮೊಂದಿಗೆ ಇಲ್ಲ!
