ಒಮ್ಮೆ ಮತ್ತೊಮ್ಮೆ ನೋಡಬೇಕೆಂದೆನಿಸುವ 'ನಂಜುಂಡಿ ಕಲ್ಯಾಣ' ಚಿತ್ರ ತೆರೆ ಕಂಡು 30 ವರ್ಷಗಳಾಗಿವೆ. ಕನ್ನಡ ಚಿತ್ರರಂಗದಲ್ಲಿ ಮೆರೆಯಲು ಮಾಲಾಶ್ರೀಗೆ ಮುನ್ನಡಿ ಬರೆದಿದ್ದು ಈ ಚಿತ್ರ. ಈ ಚಿತ್ರದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ ಕನಸಿನ ರಾಣಿ.

'ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವವಳು ಗಂಡು...' ಹಾಡು ಕೇಳಿದರೆ ಸಾಕು ಮಾಲಾಶ್ರೀ ಕಣ್ಣೆದುರಿಗೆ ಬರುತ್ತಾರೆ. ಮದ್ಯ ಸೇವಿಸಿ ಮಾದಕವಾಗಿ ನಟಿಸಿದ ಮಾಲಾಶ್ರೀಗೆ ಆಗಲೇ ಕನ್ನಡಿಗರು ಫುಲ್ ಫಿದಾ ಆಗಿದ್ದರು. ಕಥೆ ಹಾಗೂ ಮಾಲಾಶ್ರಿ ಎಂಬ ಮುದ್ದು ಮುಖದ ಸುಂದರಿಗೆ ಮನಸೋತ ಕನ್ನಡ ಚಿತ್ರ ಪ್ರೇಮಿಗಳು ಈ ಚಿತ್ರವನ್ನು 75 ವಾರಗಳ ಕಾಲ ಯಶಸ್ವಿಯಾಗಿ ಪ್ರದರ್ಶನಗೊಳ್ಳುವಂತೆ ಮಾಡಿದ್ದರು. ಆ ಮೂಲಕ ಕನ್ನಡ ಚಿತ್ರರಂಗ ಮಾಲಾಶ್ರೀ ಎಂಬ ಅದ್ಭುತ ನಟಿಯನ್ನೂ ಪಡೆಯುವಲ್ಲಿ ಯಶಸ್ವಿಯಾಯಿತು.

ಇನ್ನು ಮಾಲಾಶ್ರೀಗೆ ಜೋಡಿಯಾಗಿ ನಟ ರಾಘವೇಂದ್ರ ರಾಜ್‌ಕುಮಾರ್ 'ನಿಜವಾ ನುಡಿಯಲೇ ನನ್ನಾಣೆ ನಲ್ಲೆ....' ಎಂದು ಹಾಡಿ, ಚಿತ್ರ ಸೂಪರ್ ಹಿಟ್ ಮಾಡಿ, ಕನ್ನಡ ಚಿತ್ರ ತೆಲುಗಿಗೂ ರಿಮೇಕ್ ಆಗುವಂತೆ ಮಾಡಿದ್ದರು.

'ಇಂದಿಗೆ ನಾನು ಸಿನಿ ಪಯಣ ಆರಂಭಿಸಿ 30 ವರ್ಷಗಳಾಯಿತು. ನಿನ್ನೆ, ಮೊನ್ನೆ ಬಂದಂತೆ ಭಾಸವಾಗುತ್ತಿದೆ. 'ನಂಜುಂಡಿ ಕಲ್ಯಾಣ' ಎಂದಿಗೂ ನನ್ನ ಮನಸ್ಸಿಗೆ ಹತ್ತಿರ. ಈ ಸುಂದರ ಜರ್ನಿಯಲ್ಲಿ ಜತೆಯಲ್ಲಿದ್ದ ಎಲ್ಲರಿಗೂ ಧನ್ಯವಾದಗಳು' ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.