ಈಗ ಅದೇ ದಾರಿಯಲ್ಲಿ ಇರುವವರು ಸುಲೀಲ್ ಕುಮಾರ್. ತಮಿಳು ಸಿನಿಮಾಗಳಲ್ಲಿ ಮಿಂಚಿದ ನಂತರ ಈಗ ಕನ್ನಡಕ್ಕೆ ಬಂದಿದ್ದಾರೆ. ‘ಮಾರಿಕೊಂಡವರು’ ಚಿತ್ರದ ನಂತರ ‘ಕವಲುದಾರಿ’ಯ ಖಳನಾಯಕ.

ಅವಕಾಶಗಳ ಬೆನ್ನೇರಿ ಕನ್ನಡದ ಹಲವು ನಟರು ಕಾಲಿವುಡ್ ಕಡೆ ಹಾರಿದ್ದಾರೆ. ಅರ್ಜುನ್ ಸರ್ಜಾ, ಮುರುಳಿ, ಪ್ರಕಾಶ್ ರೈ,

ಕಿಶೋರ್ ಅವರಿಗೆಲ್ಲಾ ಅಲ್ಲಿ ಯಶಸ್ಸು ಸಿಕ್ಕಿದೆ. ಈಗ ಅದೇ ದಾರಿಯಲ್ಲಿ ಇರುವವರು ಸುಲೀಲ್ ಕುಮಾರ್. ತಮಿಳು ಸಿನಿಮಾಗಳಲ್ಲಿ ಮಿಂಚಿದ ನಂತರ ಈಗ ಕನ್ನಡಕ್ಕೆ ಬಂದಿದ್ದಾರೆ. ‘ಮಾರಿಕೊಂಡವರು’ ಚಿತ್ರದ ನಂತರ ‘ಕವಲುದಾರಿ’ಯ ಖಳನಾಯಕ.

1) ತಮಿಳಿನಲ್ಲಿ ಬೇಡಿಕೆಯ ನಟ, ಕನ್ನಡಕ್ಕಿನ್ನೂ ಅಪರಿಚಿತ. ಅಲ್ವಾ?

ಸ: ಅದು ಸಹಜ ಮತ್ತು ನಿಜ. ಯಾಕಂದ್ರೆ, ನಾನು ಹೆಚ್ಚು ಸಿನಿಮಾ ಮಾಡಿದ್ದು ತಮಿಳಿನಲ್ಲಿ. ಹಾಗಾಗಿ ಅಲ್ಲಿ ನನ್ನ ಪರಿಚಯವಿದೆ. ಆ ಮಟ್ಟಿಗೆ ಅಲ್ಲಿ ಸಣ್ಣದೊಂದು ಐಡೆಂಟಿಟಿ ಸಿಕ್ಕಿದೆ. ನಾನು ಹುಟ್ಟಿ ಬೆಳೆದಿದ್ದು ಇಲ್ಲಿಯೇ ಆದರೂ, ನಟನಾಗಿ ಗುರುತಿಸಿಕೊಳ್ಳುವಷ್ಟು ಬೆಳೆದಿಲ್ಲ. ಸಿನಿಮಾಗಳ ಅವಕಾಶವೂ ಸಿಕ್ಕಿಲ್ಲ. ಹೀಗಾಗಿ ನಾನಿಲ್ಲಿ ಅಪರಿಚಿತ.

2) ಊರು, ಕೇರಿಯ ಜತೆಗೆ ನಟನೆಯ ಹಿನ್ನೆಲೆ ಏನು?

ಸ: ಹುಟ್ಟಿ, ಬೆಳೆದಿದ್ದೆಲ್ಲ ಬೆಂಗಳೂರು. ಈಗಲೂ ಬಿಟಿಎಂ ಲೇಔಟ್‌ನಲ್ಲಿ ವಾಸ. ಪದವಿ ಮುಗಿದ ನಂತರ ಅಭಿನಯ ತರಂಗದಲ್ಲಿ ನಟನೆ ಕಲಿಕೆಗೆ ಸೇರಿದೆ. ರಂಗಭೂಮಿ ನನ್ನ ಆಸಕ್ತಿಯ ಕ್ಷೇತ್ರ. ಅಲ್ಲಿ ಗೌರಿದತ್ತು ನನ್ನ ಆಸಕ್ತಿ ಗುರುತಿಸಿ ಸಾಕಷ್ಟು ಪ್ರೋತ್ಸಾಹ ನೀಡಿದರು. ಅಭ್ಯಾಸ ಮುಗಿಸಿ, ರಂಗ ವೇದಿಕೆ ಹತ್ತಿದೆ. ಸಣ್ಣ ಪುಟ್ಟ ಪಾತ್ರಗಳ ಮೂಲಕ ಆ ಜರ್ನಿ ಶುರುವಾಯಿತು.

3) ರಂಗಭೂಮಿಯಿಂದ ಬೆಳ್ಳಿತೆರೆಗೆ ಜಿಗಿದಿದ್ದು ಹೇಗೆ?

ಸ: ಹೇಗಾದ್ರೂ ಸರಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲೇಬೇಕೆಂದು ಸಿನಿಮಾ ಮಂದಿಯ ಮನೆಗೆ ಸಾಕಷ್ಟು ಸೈಕಲ್ ಹೊಡೆದೆ. ಅವಕಾಶಕ್ಕಾಗಿ ಕೆಲವರನ್ನು ಭೇಟಿ ಮಾಡುತ್ತಲೇ ಇದ್ದೆ. ಆ ಹಂತದಲ್ಲಿ ಪರಿಚಯದವರ ಮೂಲಕ ತಮಿಳು ಸಿನಿಮಾದ ಅವಕಾಶ ಬಂತು. ಅದರ ಹೆಸರು ‘ಕಾಳೈ’. ತರುಣ್ ಗೋಪಿ ನಿರ್ದೇಶಕ. ನನ್ನ ಲುಕ್ ನೋಡಿ ವಿಲನ್ ಪಾತ್ರ ಕೊಟ್ಟರು. ಆ ಸಿನಿಮಾ ಹೊರಬಂದ ನಂತರ ಗಾಯ ಎಸ್. ಪಿ. ಬಾಲಸುಬ್ರಮಣ್ಯಂ ಪುತ್ರ ಎಸ್.ಪಿ. ಚರಣ್ ನಿರ್ದೇಶನದ ‘ಕುಂಗುಮಾ ಪೂವಂ, ಕುಂಜುಮ ಪೂರವಂ’ ಚಿತ್ರಕ್ಕೆ ಆಯ್ಕೆಯಾದೆ. ಅಲ್ಲಿಂದ ಶುರುವಾಯಿತು ಕಾಲಿವುಡ್ ಜರ್ನಿ.

4) ತಮಿಳಿನಲ್ಲಿ ನಟಿಸಿದ ಸಿನಿಮಾಗಳು, ಪಾತ್ರಗಳ ಬಗ್ಗೆ ಹೇಳೋದಾದ್ರೆ...

ಸ: ನಾನು ಚೆನ್ನೈಗೆ ಹೋಗಿದ್ದು 2008ರಲ್ಲಿ. ಇಲ್ಲಿಯತನಕ ಒಟ್ಟು 13 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆರಂಭದಲ್ಲಿ ನಾನೊಬ್ಬ

ಖಳನಟ. ಆನಂತರ ಸಾಫ್ಟ್ ವಿಲನ್. ಅಲ್ಲಿಂದ ಹೀರೋ. ‘ಕಲತ್ತೂರ್ ಗ್ರಾಮಂ’ ಚಿತ್ರದಲ್ಲಿ ಕಿಶೋರ್ ಮತ್ತು ನಾನು ಇಬ್ಬರದ್ದು ಲೀಡ್ ರೋಲ್. ಅದು ಪಕ್ಕಾ ಕಮರ್ಷಿಯಲ್ ಚಿತ್ರ. ಒಂದೇ ರೀತಿಯ ಪಾತ್ರಕ್ಕೆ ನಾನು ಬ್ರಾಂಡ್ ಆಗಿಲ್ಲ. ಎಲ್ಲಾ ಥರದ ಪಾತ್ರ ಮಾಡಿದ್ದೇನೆ.

5) ಕನ್ನಡಕ್ಕೆ ಬಂದಿದ್ದು ಹೇಗೆ?

ಸ: ‘ಕಲತ್ತೂರ್ ಗ್ರಾಮಂ’ ಚಿತ್ರದ ಚಿತ್ರೀಕರಣದ ವೇಳೆ ಎಡಿಟರ್ ಸುರೇಶ್ ಅರಸ್ ಸಿಕ್ಕಿದ್ದರು. ಅವರು ಮಾತನಾಡುವಾಗ ನಿರ್ದೇಶಕ ಶಿವರುದ್ರಯ್ಯ ಅವರ ಸಿನಿಮಾ ಬಗ್ಗೆ ಹೇಳಿದರು. ದೇವನೂರು ಮಹಾದೇವ ಕತೆ. ನೀವು ಅಭಿನಯಿಸಿದರೆ ಚೆನ್ನಾಗಿ ರುತ್ತೆ ಅಂದ್ರು. ಹಾಗಾಗಿ ‘ಮಾರಿಕೊಂಡವರು’ಚಿತ್ರಕ್ಕೆ ಬಂದೆ. ಈಗ ‘ ಕವಲುದಾರಿ’ ಅವಕಾಶ ಸಿಕ್ಕಿದೆ.

6) ‘ಕವಲುದಾರಿ’ ಪಾತ್ರ, ವಿಶೇಷತೆ ಬಗ್ಗೆ ಹೇಳಿ..

ಸ: ನೆಗೆಟಿವ್ ಶೇಡ್ ಇರುವ ಪಾತ್ರ. ಅಲ್ಲಿ ಮುಖದ ಹಾವಭಾವದ ಮೂಲಕವೇ ಕ್ರೌರ್ಯ ತೋರಬೇಕಿದೆ.ಅನಂತನಾಗ್ ಸರ್ ಅಭಿನಯದ ಚಿತ್ರ ಅನ್ನೋ ಖುಷಿ ನನಗೆ. ನಿರ್ದೇಶಕರು ಸಿನಿಮಾ ಪ್ಯಾಷನ್ ಇದ್ದವರು. ಅವರ ಜತೆ ಕೆಲಸ ಮಾಡುವುದೇ ಒಂದು ಸಂಭ್ರಮ.

-ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ