ನಟ ಡಾಲಿ ಧನಂಜಯ ಮತ್ತು ಡಾ. ಧನ್ಯತಾ ಅವರ ಮದುವೆಯ ಸುಂದರ ಕ್ಷಣಗಳನ್ನು ಒಗ್ಗೂಡಿಸಿ ಒಂದು ವಿಶೇಷ ಸಿನಿಮಾ ಮಾಡಲಾಗಿದೆ. ತಂತ್ರಜ್ಞರ ಶ್ರಮಕ್ಕೆ ಮನ್ನಣೆ ನೀಡುವ ಉದ್ದೇಶದಿಂದ ಈ ವೈಯಕ್ತಿಕ ಮದುವೆಯ ಸಿನಿಮಾವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಕನ್ನಡ ಚಿತ್ರರಂಗದ ಸ್ಟಾರ್ ಅಂಡ್ ಕ್ಯೂಟ್ ಜೋಡಿಗಳಲ್ಲಿ ಒಂದಾದ ನಟ ಡಾಲಿ ಧನಂಜಯ ಹಾಗೂ ಡಾಕ್ಟರ್ ಧನ್ಯತಾ ಅವರ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಅವರಿಬ್ಬರ ಈ ಮದುವೆ ಕಾರ್ಯಕ್ರಮಗಳಲ್ಲಿ ಸೆರೆ ಹಿಡಿಯಲಾದ ಎಲ್ಲ ದೃಶ್ಯಗಳನ್ನು ಒಗ್ಗೂಡಿಸಿ ಒಂದು ಸಿನಿಮಾ ಮಾಡಲಾಗಿದ್ದು, ಅದನ್ನು ಯೂಟ್ಯೂಬ್ನಲ್ಲಿ ಸಿನಿಮಾವಾಗಿ ರಿಲೀಸ್ ಮಾಡುವುದಾಗಿ ನಟ ಡಾಲಿ ಧನಂಜಯ್ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದು, ಮದುವೆಗೆ ತಾವು ಹೋಗಿದ್ದ ದೃಶ್ಯಗಳು ಕಾಣಿಸಿಕೊಳ್ಳಲಿವೆಯೇ ಎಂದು ಕಾತುರದಿಂದ ಕಾಯುತ್ತಿದ್ದಾರೆ.
ಈ ಬಗ್ಗೆ ಸ್ವತಃ ನಟ ಡಾಲಿ ಧನಂಜಯ ಅವರು ಸಾಮಾಜಿಕ ಜಾಲತಾಣದಲ್ಲಿ ಫೊಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, "ಮದುವೆ ನಿಶ್ಚಯವಾಗುವ ಸಮಯ. ನಮ್ಮ ಶಶಾಂಕ್ ಸೋಗಾಲ್ ಕಳುಹಿಸಿದ ಒಂದು ಮದುವೆಯ ವಿಡಿಯೋ ನೋಡಿದೆ. ಅದಕ್ಕಿಂತ ಹೆಚ್ಚಾಗಿ ಅದೊಂದು ಮದುವೆಯ ಸಿನಿಮಾವಾಗಿತ್ತು. ಅದನ್ನು ಮಾಡಿದ್ದ ಅಕ್ಷಯ್ ಮತ್ತು ಶರತ್ ಪಡಾರು ಅವರನ್ನು ಭೇಟಿಯಾದೆ. 'ನಿಮ್ಮ ಜೊತೆ ಪಯಣ ಮಾಡುತ್ತಾ, ನಿಶ್ಚಿತಾರ್ಥದಿಂದ ಮದುವೆಯವರೆಗಿನ ನಿಮ್ಮ journey ಯನ್ನು ಚಿತ್ರೀಕರಿಸಿ, ಸಿನಿಮಾ ಮಾಡಿ ಕೊಡುತ್ತೇವೆ. Edit ಗೆ ಬಹಳ ಸಮಯ ಹಿಡಿಯತ್ತೆ, ಒಂದು ವರ್ಷದ ಮದುವೆ anniversary ಗೆ ಸಿನಿಮಾ ಕೊಡ್ತಿವಿ' ಎಂದರು. ಆಸಕ್ತಿಕರ ಎನಿಸಿತು. ನಮ್ಮ ಪಯಣ ಶುರುವಾಯಿತು.
ಸುಂದರ ನೆನಪುಗಳನ್ನು ಮೆಲುಕು ಹಾಕಲು ನೆನಪಿನ ಪೆಟ್ಟಿಗೆ:
ಆರಂಭದಲ್ಲಿ ನಾನು, ಧನ್ಯತಾ ಮತ್ತು ಮನೆಯವರೆಲ್ಲ ಸ್ವಲ್ಪ ಮುಜುಗರದಲ್ಲಿದ್ದೆವು. ಆದರೆ ದಿನಕಳೆದಂತೆ ಅಕ್ಷಯ್, ಶರತ್ ಮತ್ತು ಅವರ ತಂಡ ನಮ್ಮ ಕುಟುಂಬದವರೇ ಆಗಿಬಿಟ್ಟರು. ಅವರ ಪಾಡಿಗೆ ಅವರು ಕ್ಯಾಮೆರಾ ಹಿಡಿದು ಓಡಾಡುತ್ತಿದ್ದರು, ನಮ್ಮ ಪಾಡಿಗೆ ನಾವು ನಮ್ಮ ಲೋಕದಲ್ಲಿ ಮುಳುಗಿದ್ದೆವು. ಒಂದು ವರ್ಷಕ್ಕೂ ಹೆಚ್ಚು ಕಾಲದ ದೃಶ್ಯಗಳನ್ನು ಜೋಡಿಸಿ, ಸುಂದರವಾದ ಹಾಡುಗಳೊಂದಿಗೆ ನಮ್ಮ ಮದುವೆಯ ಪಯಣವನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದರು. ಇದು ಮೂಲತಃ ನಮಗಾಗಿ, ನಮ್ಮ ಕುಟುಂಬಕ್ಕಾಗಿ ಮಾಡಿದ ವೈಯಕ್ತಿಕ ಸಿನಿಮಾ. ಆಗಾಗ ನೋಡಿ ಖುಷಿಪಡಲು, ಆಗಿನ ನಮ್ಮನ್ನು ಈಗಿನ ನಮ್ಮ ಜೊತೆ ಹೋಲಿಸಿಕೊಳ್ಳಲು, ಸುಂದರ ನೆನಪುಗಳನ್ನು ಮೆಲುಕು ಹಾಕಲು ಒಂದು ನೆನಪಿನ ಪೆಟ್ಟಿಗೆ. ಆದರೆ, ಇದನ್ನು ನೋಡಿ ಮುಗಿಸಿ ಹಾರ್ಡ್ ಡಿಸ್ಕ್ ಒಳಗೆ ಇಡುವಾಗ ಕೆಲವು ಪ್ರಶ್ನೆಗಳು ಕಾಡಿದವು.
YouTubeನಲ್ಲಿ ಹಾಕೋಣ ಎಂದು ನಿರ್ಧಾರ
ಒಬ್ಬ ಸಿನಿಮಾ ನಿರ್ಮಾಪಕ ತಾನು ನಿರ್ಮಿಸಿದ ಸಿನಿಮಾವನ್ನು ತನ್ನ ಮನೆಯಲ್ಲೇ ಇಟ್ಟುಕೊಂಡರೆ, ಅದರಲ್ಲಿ ಕೆಲಸ ಮಾಡಿದ ನಿರ್ದೇಶಕ, ನಟರು ಮತ್ತು ತಂತ್ರಜ್ಞರ ಶ್ರಮಕ್ಕೆ ಸಿಗಬೇಕಾದ ಮನ್ನಣೆ ಸಿಗುತ್ತದೆಯೇ? ಅವರ ಕೆಲಸವನ್ನು ಇನ್ನಷ್ಟು ಜನ ನೋಡಿದರೆ, ಅದು ಅವರ ಮುಂದಿನ ಪಯಣಕ್ಕೆ ಸಹಾಯವಾಗುವುದಿಲ್ಲವೇ? ಅಕ್ಷಯ್ ಜೊತೆ ಮಾತನಾಡಿದಾಗ ಅವನ ಮನಸ್ಸಿನಲ್ಲಿದ್ದ ಆಸೆಯೂ ಅದೇ ಆಗಿತ್ತು. ಜನ ನೋಡಿದರೆ ನಮ್ಮ ಕೆಲಸಕ್ಕೂ ಒಂದು ಸಾರ್ಥಕತೆ ಎಂದ. ಹಾಗಾಗಿ YouTubeನಲ್ಲಿ ಹಾಕೋಣ ಎಂದು ನಿರ್ಧರಿಸಿದೆವು. ಧನ್ಯತಾ ಕೂಡ ಒಪ್ಪಿಕೊಂಡರು. ಆದರೆ, ನಮ್ಮ ವೈಯಕ್ತಿಕ ಬದುಕನ್ನು ಜಗತ್ತಿನ ಮುಂದೆ ಎಷ್ಟರ ಮಟ್ಟಿಗೆ ತೆರೆದಿಡಬೇಕು ಎಂಬ ಮತ್ತೊಂದು ಪ್ರಶ್ನೆ ಎದುರಾಯಿತು. ಮದುವೆಯ ಸಮಯದಲ್ಲಿ ಪ್ರೀತಿಯಿಂದ ಹರಸಿದವರ ಜೊತೆಗೆ ಟೀಕೆಗಳೂ ಬಂದಿದ್ದವಲ್ಲ. ಇದೆಲ್ಲ ಮತ್ತೆ ಬೇಕಾ ಎಂಬ ಯೋಚನೆಯೂ ಬಂತು.
ಕೊನೆಗೆ ಈ ಎಲ್ಲಾ ಪ್ರಶ್ನೆಗಳನ್ನೂ ಮೀರಿದ್ದು ಸಿನಿಮಾ ಪ್ರೀತಿ. ಅವತ್ತಿನ ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಕ್ಷಣಗಳನ್ನು ಇದ್ದಂತೆಯೇ ಸೆರೆಹಿಡಿದಿದ್ದಾರೆ. ಇವತ್ತು ನಮ್ಮ ಆಲೋಚನೆಗಳು ಬದಲಾಗಿರಬಹುದು. ಬದಲಾಗುತ್ತಾ, ಬೆಳೆಯುತ್ತಾ ಹೋಗುವುದೇ ಬದುಕಲ್ಲವೇ? ಈಗ ಆ ಸಿನಿಮಾವನ್ನು YouTubeನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಮಗೆ ಪ್ರೀತಿಪಾತ್ರರು ಮನೆಗೆ ಬಂದಾಗ, ಕುಟುಂಬದವರೆಲ್ಲ ಒಟ್ಟಿಗೆ ಕೂತು ಹಳೆಯ ಮದುವೆಯ ವಿಡಿಯೋ ನೋಡಿ ಖುಷಿಪಡುವ ಹಾಗೆ ನೀವೂ ನೋಡಿ. ನಾವು ನಿಮ್ಮದೆ ಕುಟುಂಬ - ಡಾಲಿ ಧನಂಜಯ" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಮದುವೆ ವಾರ್ಷಿಕೋತ್ಸವಕ್ಕೆ ರಿಲೀಸ್?
ಇನ್ನು ಡಾಲಿ ಧನಂಜಯ ಅವರು ಹಂಚಿಕೊಂಡಿರುವ ಪೋಸ್ಟ್ನಲ್ಲಿ ತಮ್ಮದೇ ಒಡೆತನದ @daalipictures Youtube channel ಮದುವೆಯ ಸಿನಿಮಾ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ದಿನಾಂಕವನ್ನು ಅಥವಾ ಸಮಯವನ್ನು ಘೋಷಣೆ ಮಾಡಿಲ್ಲ. ಶೀಘ್ರದಲ್ಲೇ ಧನ, ಧನ್ಯ ಕಲ್ಯಾಣ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದು, ಅದು ತಮ್ಮ 2ನೇ ವರ್ಷದ ಮದುವೆ ವಾರ್ಷಿಕೋತ್ಸವ ಫೆ.15, 2027ಕ್ಕೆ ರಿಲೀಸ್ ಆಗಲಿದೆಯೇ ಅಥವಾ ಅದಕ್ಕಿಂತಲೂ ಮುಂಚಿತವಾಗಿ ರಿಲೀಸ್ ಮಾಡಲಿದ್ದಾರೆಯೇ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.






