ಕಮಲ್‌ 60 ವರ್ಷಗಳ ಚಿತ್ರರಂಗದ ಜೀವನಕ್ಕೆ ಗುಡ್‌ಬೈ

First Published 15, Feb 2018, 9:10 AM IST
Kamal Haasan Quit Film Industry
Highlights

ರಾಜಕೀಯ ಪ್ರವೇಶದ ಕುರಿತು ಅಧಿಕೃತ ಘೋಷಣೆ ಮಾಡಿ, ಶೀಘ್ರವೇ ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲು ಸಿದ್ದತೆ ನಡೆಸಿರುವ ಖ್ಯಾತ ನಟ ಕಮಲ್‌ಹಾಸನ್‌, ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ.

ನವದೆಹಲಿ: ರಾಜಕೀಯ ಪ್ರವೇಶದ ಕುರಿತು ಅಧಿಕೃತ ಘೋಷಣೆ ಮಾಡಿ, ಶೀಘ್ರವೇ ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲು ಸಿದ್ದತೆ ನಡೆಸಿರುವ ಖ್ಯಾತ ನಟ ಕಮಲ್‌ಹಾಸನ್‌, ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ.

1959ರಲ್ಲಿ ಮೊದಲ ಬಾರಿಗೆ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟು, 1973ರಲ್ಲಿ ಪೂರ್ಣಪ್ರಮಾಣದ ನಟನಾಗಿ ವೃತ್ತಿ ಆರಂಭಿಸಿದ್ದ ಕಮಲ್‌ ಇನ್ನೇನಿದ್ದರೂ, ತಮ್ಮದು ಸಕ್ರಿಯ ರಾಜಕಾರಣ ಎಂದು ಹೇಳಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್‌, ‘ತಮಿಳುನಾಡಿನ ಜನತೆಗಾಗಿ ನಾನು ರಾಜಕೀಯಕ್ಕೆ ಧುಮುಕಿದ್ದೇನೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈಗಾಗಲೇ ಒಪ್ಪಿಕೊಂಡಿರುವ ಎರಡು ಚಿತ್ರಗಳನ್ನು ಹೊರತುಪಡಿಸಿದರೆ ನನ್ನ ಪಾಲಿಗೆ ಇನ್ಯಾವುದೇ ಚಿತ್ರಗಳು ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಕಳೆದ 37 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಕಾರ್ಯಗಳು ಚುನಾವಣೆಯಲ್ಲಿ ಕೈಹಿಡಿಯಲಿವೆ ಎಂಬ ವಿಶ್ವಾಸವಿದೆ. ಜನರಿಗಾಗಿಯೇ ಬದುಕಿದ್ದೇನೆ. ಅವರ ಸೇವೆ ಮಾಡುತ್ತಲೇ ಇಹಲೋಕ ತ್ಯಜಿಸುತ್ತೇನೆ’ ಎಂದು ಹೇಳಿದ್ದಾರೆ.

ಒಂದು ವೇಳೆ ರಾಜಕೀಯದಲ್ಲಿ ಯಶಸ್ವಿಯಾಗದೇ ಹೋದಲ್ಲಿ, ಬದುಕಲು ಯಾವುದಾದರೂ ಉತ್ತಮ ಮಾರ್ಗ ಕಂಡುಕೊಳ್ಳುತ್ತೇನೆ, ಆದರೆ ಸೋಲುವ ಭೀತಿ ನನಗಿಲ್ಲ ಎಂದು ಕಮಲ್‌ ಹೇಳಿದ್ದಾರೆ. 6 ದಶಕಗಳ ಚಿತ್ರರಂಗದ ವೃತ್ತಿಜೀವನದ ವೇಳೆ ಕಮಲ್‌ ಕನ್ನಡದ 6 ಚಿತ್ರಗಳು ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ, ಹಿಂದಿಯಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

 

loader