ಬೇಡದ ಘಟನೆ, ಬೇಡದ ವ್ಯಕ್ತಿ ಅಥವಾ ಬೇಡದ ಸನ್ನಿವೇಶಗಳ ಮೂಲಕ ಬೇಕುಗಳು ದಕ್ಕುತ್ತವೆ ಎಂಬುದನ್ನು ತುಂಬಾ ಸೊಗಸಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಅರವಿಂದ ಶಾಸ್ತ್ರಿ ಮಾಡಿದ್ದಾರೆ. ನಿರ್ದೇಶಕರು ಆರಿಸಿಕೊಂಡಿರುವ ಕತೆಯ ಈ ಅಂತರಾಳವೇ ಚಿತ್ರದ ನಿಜವಾದ ಶಕ್ತಿ. ಆದರೆ ಆ ಶಕ್ತಿಯನ್ನು ನಿರ್ದೇಶಕನಂತೆ ಪ್ರೇಕ್ಷಕ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವೇ?
- ಆರ್ ಕೇಶವಮೂರ್ತಿ, ಕನ್ನಡಪ್ರಭ
ಚಿತ್ರ: ಕಹಿ
ಭಾಷೆ: ಕನ್ನಡ
ತಾರಾಗಣ: ಸೂರಜ್ ಗೌಡ, ಕೃಷಿ ತಾಪಂಡ, ಮಾತಂಗಿ ಪ್ರಸನ್, ಹರಿಶರ್ವಾ, ರಮೇಶ್ ಭಟ್, ಕಿಶೋರಿ ಬಲ್ಲಾಳ್, ಮಹೇಶ್ ಬಂಗ್
ನಿರ್ದೇಶನ: ಅರವಿಂದ ಶಾಸ್ತ್ರಿ
ನಿರ್ಮಾಣ: ರೇಖಾ ವೆಂಕಟೇಶ್, ನಾಗಶೀಲ ಪ್ರಕಾಶ್
ಛಾಯಾಗ್ರಹಣ: ಪ್ರಶಾಂತ್ ಆರ್ ಎಸ್
ಸಂಗೀತ: ಮಿಧುನ್ ಮುಕುಂದನ್
ರೇಟಿಂಗ್ ***
ನಾಲ್ಕು ಪಾತ್ರಗಳು, ಆ ನಾಲ್ಕು ಪಾತ್ರಗಳ ಹಿನ್ನೆಲೆ ಮತ್ತು ನಾಲ್ಕು ಘಟನೆಗಳು, ಒಂದು ರಾತ್ರಿ... ಇವಿಷ್ಟರ ಮೂಲಕ ಎಂಥ ಸಿನಿಮಾ ಮಾಡುವುದಕ್ಕೆ ಸಾಧ್ಯ ಎನ್ನುವ ಪ್ರಶ್ನೆಗೆ ‘ಕಹಿ'ಯೇ ಉತ್ತರ. ಹೆಸರಿಗಷ್ಟೆ‘ಕಹಿ' ಅಲ್ಲ. ಈ ಚಿತ್ರದ ಪ್ರತಿ ಪಾತ್ರಕ್ಕೂ ಕಹಿಯ ಇಮೇಜ್ ಇದೆ. ಅದರ ಘಾಟು ಆಗಾಗ್ಗೆ ನೋಡುಗನಿಗೂ ತಟ್ಟುತ್ತದೆ. ಹೀಗಾಗಿ ನಿರ್ದೇಶಕ ಎಲ್ಲೋ ಎಡವುತ್ತಿದ್ದಾರಲ್ಲ ಎನ್ನುವ ಗುಮಾನಿ ಬರುವಷ್ಟರಲ್ಲೇ ಸಿನಿಮಾ ಯು ಟರ್ನ್ ತೆಗೆದುಕೊಂಡು, ಅಚ್ಚರಿ ಮೂಡಿಸುತ್ತದೆ. ಇಲ್ಲಿನ ಘಟನೆ ಮತ್ತು ಪಾತ್ರಗಳಿಗೆ ಒಂದೊಂದು ಮುಖವಿದೆ. ಜತೆಗೆ ಆ ಮುಖದ ಹಿಂದೆ ಮತ್ತೊಂದು ಮುಖವಾಡವೂ ಉಂಟು. ಕತ್ತಲಲ್ಲಿ ಆ ಮುಖವಾಡಗಳು ಕಳಚುವ ಹೊತ್ತಿಗೆ ನಾಲ್ಕು ದಿಕ್ಕುಗಳು ಒಂದು ಕಡೆ ಬಂದು ಸೇರುತ್ತವೆ. ಬೇಡದ ಘಟನೆ, ಬೇಡದ ವ್ಯಕ್ತಿ ಅಥವಾ ಬೇಡದ ಸನ್ನಿವೇಶಗಳ ಮೂಲಕ ಬೇಕುಗಳು ದಕ್ಕುತ್ತವೆ ಎಂಬುದನ್ನು ತುಂಬಾ ಸೊಗಸಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಅರವಿಂದ ಶಾಸ್ತ್ರಿ ಮಾಡಿದ್ದಾರೆ. ನಿರ್ದೇಶಕರು ಆರಿಸಿಕೊಂಡಿರುವ ಕತೆಯ ಈ ಅಂತರಾಳವೇ ಚಿತ್ರದ ನಿಜವಾದ ಶಕ್ತಿ. ಆದರೆ ಆ ಶಕ್ತಿಯನ್ನು ನಿರ್ದೇಶಕನಂತೆ ಪ್ರೇಕ್ಷಕ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವೇ? ಹಾಗೊಂದು ವೇಳೆ ಸಾಧ್ಯವಾದರೆ ‘ಕಹಿ' ಮತ್ತೊಂದು ಪ್ರಯೋಗಾತ್ಮಕ ಚಿತ್ರವಾಗಿ ನೋಡುಗನ ಕಣ್ಣಲ್ಲುಳಿಯುತ್ತದೆ.
ಹಾಗೆ ನೋಡಿದರೆ ಕತೆಯ ಜತೆಗೆ ಇಲ್ಲಿನ ಪಾತ್ರಗಳೂ ಕಾಡುತ್ತವೆ. ಚಿತ್ರದ ನಾಲ್ಕು ಪ್ರಮುಖ ಪಾತ್ರಗಳು ಎಲ್ಲೂ ನಟಿಸಿಲ್ಲ. ಅತ್ಯಂತ ಸಹಜವಾಗಿ ಕಾಣಿಸಿಕೊಳ್ಳುವ ಮೂಲಕ ನಿರ್ದೇಶಕನ ಕತೆಯ ಆತ್ಮಕ್ಕೆ ಜೀವ ತುಂಬುತ್ತವೆ. ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗದ ಶಿಕ್ಷಕಿ ಅಖಿಲಾಳ ಗಂಡ ರಸ್ತೆ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಭರತನಾಟ್ಯಪಟು ಆಗಿರುವ ವಿದ್ಯಾಗೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಾಸೆ. ತನ್ನ ಈ ಗುರಿಯನ್ನು ಮುಟ್ಟುವ ಅವಕಾಶ ಸಿಕ್ಕಾಗ ಹಣಕ್ಕಾಗಿ ಅಡ್ಡ ದಾರಿ ತುಳಿಯುತ್ತಾಳೆ. ಅಕ್ರಮ ಸಂಬಂಧ ಇಟ್ಟುಕೊಂಡವನಿಂದ ಹಣ ಸಿಗದಿದ್ದಾಗ ಪ್ರೀತಿಯಿಂದ ಕಾಣುವ ಮನೆಯಲ್ಲೇ ಹಣ ಕದ್ದು ಮುಂಬೈ ಬಸ್ಸೇರುತ್ತಾಳೆ. ಇತ್ತ ಅದೇ ವಿದ್ಯಾಳನ್ನು ಪ್ರೀತಿಸುವ ಹರಿಗೆ ಡ್ರಗ್ಸ್ ವ್ಯಾಪಾರವೇ ಜೀವನದ ದಾರಿ. ಆದರೆ, ಆ ದಾರಿಯಲ್ಲಿ ಸಾವನ್ನು ಕಣ್ಣಾರೆ ಕಂಡವನು ಮುಂದೇನಾಗುತ್ತಾನೆ? ಇತ್ತ ಶ್ರೀಮಂತ ಕುಟುಂಬದ ಹುಡುಗ ಸೈಕೋ ಆಗಿದ್ದಾನೆ. ಆತ ರಸ್ತೆಯಲ್ಲಿ ಕಾಣುವ ನಾಯಿಯನ್ನು ಹೊಡೆದು ಓಡಿಸುವಂತೆ ನಶೆಯಲ್ಲಿ ಕಂಡ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಸಾಯುತ್ತಾನೆ.
ಹಣಕ್ಕಾಗಿ ಅಡ್ಡ ದಾರಿ ಹಿಡಿದ ವ್ಯಕ್ತಿ, ಅಂದುಕೊಂಡಿದ್ದ ಗುರಿಯನ್ನು ಸಾಧಿಸುವುದಕ್ಕಾಗಿ ಅಕ್ರಮ ಸಂಬಂಧ ಇಟ್ಟುಕೊಳ್ಳುವುದಲ್ಲದೆ ನಂಬಿದವರ ಮನೆಯಲ್ಲೇ ಹಣ ಕದಿಯುವ ಹುಡುಗಿ, ಮಕ್ಕಳಾಗದೆ ಕೊರಗುವ ಗೃಹಿಣಿ, ನಾಯಿ ಮತ್ತು ಹೆಣ್ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡಿರುವ ಶ್ರೀಮಂತ ಕುಟುಂಬದ ಹುಡುಗ... ಇವೆರಲ್ಲ ನೋಡುಗನಿಗೆ ವಿಕ್ಷಿಪ್ತವಾಗಿ ಕಾಣುವ ಮೂಲಕ ಕತ್ತಲ ಲೋಕದ ಕ್ರೈಮ್ ಕಥನಗಳನ್ನು ತೆರೆದಿಡುತ್ತಾರೆ. ಮೊದಲ ಪ್ರಯತ್ನದಲ್ಲೇ ರುಚಿಕಟ್ಟಾದ ಚಿತ್ರ ಇದಾದರೂ, ಕತೆ ಮತ್ತು ದೃಶ್ಯಗಳ ನಡುವೆ ಅಲ್ಲಲ್ಲಿ ಕಂದಕ ಕಾಣಿಸುತ್ತದೆ. ಆದರೆ, ಪ್ರಶಾಂತ್ ಆರ್ ಎಸ್ ಕ್ಯಾಮೆರಾ, ಮಿಥುನ್ ಮುಕುಂದನ್ ಅವರ ಹಿನ್ನೆಲೆ ಸಂಗೀತ ಚಿತ್ರವನ್ನು ಸಾಧ್ಯವಾದಷ್ಟು ಲಿಫ್ಟ್ ಮಾಡಿವೆ. ಮುಖ್ಯ ಪಾತ್ರಧಾರಿಗಳಾದ ಸೂರಜ್ ಗೌಡ, ಕೃಷಿ ತಾಪಂಡ, ಮಾತಂಗಿ ಪ್ರಸನ್, ಹರಿಶರ್ವಾ ಅವರವರ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಹೊಸಬರ ಹೊಸ ಪ್ರಯತ್ನದ ಜತೆಗೆ ಭಿನ್ನ ಕತೆ ಎನ್ನುವ ಕಾರಣಕ್ಕೆ ಒಮ್ಮೆ ನೋಡಬಹುದಾದ ಚಿತ್ರವಿದು.
