ಹೊಸ ಸಿನಿಮಾ 'ಪೆದ್ದಿ'ಯಲ್ಲಿ ಜಾನ್ವಿ ಕಪೂರ್ ಅವರನ್ನು ಕೇವಲ ಒಂದು ವಸ್ತುವಿನಂತೆ ತೋರಿಸಲಾಗಿದೆ ಎಂಬ ಟೀಕೆಗಳು ಜೋರಾಗಿವೆ. ಇದರ ಬೆನ್ನಲ್ಲೇ, ಮಹಿಳೆಯರ ದೇಹವನ್ನು ಅವರ ಅನುಮತಿಯಿಲ್ಲದೆ ಚಿತ್ರೀಕರಿಸುವುದರ ವಿರುದ್ಧ ಅವರು ಹಿಂದೆ ನೀಡಿದ್ದ ಹೇಳಿಕೆಗಳು ಮತ್ತೆ ಚರ್ಚೆಗೆ ಬಂದಿವೆ.

ಕೆಲವು ದಿನಗಳ ಹಿಂದೆ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ರಿಲೀಸ್ ಆಯ್ತು. ಆದರೆ, ಸಿನಿಮಾ ಕಥೆಗಿಂತ ಹೆಚ್ಚಾಗಿ ನಾಯಕಿ ಜಾನ್ವಿ ಕಪೂರ್ ಅವರ ಬಟ್ಟೆ ಹಾಗೂ ಅವರನ್ನು ಚಿತ್ರದಲ್ಲಿ ತೋರಿಸಿದ ರೀತಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ಮಹಿಳೆಯರನ್ನು ಕೇವಲ ಒಂದು ವಸ್ತು ಥರ ತೋರಿಸಲಾಗಿದೆ, ಇಡೀ ಸಿನಿಮಾದಲ್ಲಿ ನಾಯಕಿಯ ಎದೆ, ಸೊಂಟವನ್ನೇ ಫೋಕಸ್ ಮಾಡಲಾಗಿದೆ ಅಂತ ನಿರ್ದೇಶಕರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇಂಥದ್ದಕ್ಕೆಲ್ಲಾ ಜಾನ್ವಿ 'ನೋ' ಹೇಳಬಹುದಿತ್ತಲ್ವಾ? ಅಂತಾನೂ ಜನ ಪ್ರಶ್ನೆ ಮಾಡ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಪೆದ್ದಿ' ಸಿನಿಮಾ ವಿವಾದದ ನಡುವೆಯೇ, ಸೋಷಿಯಲ್ ಮೀಡಿಯಾ ಯೂಸರ್‌ಗಳು ಜಾನ್ವಿ ಕಪೂರ್ ಅವರ ಹಳೆಯ ಇಂಟರ್ವ್ಯೂ ಒಂದನ್ನು ಈಗ ವೈರಲ್ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ಒಂದು ಪಾಡ್‌ಕಾಸ್ಟ್‌ನಲ್ಲಿ ಜಾನ್ವಿ ಈ ಮಾತುಗಳನ್ನು ಆಡಿದ್ದರು. “ನಾವು ಸ್ಟೈಲಿಶ್ ಬಟ್ಟೆ ಹಾಕಿಕೊಂಡು ಹೊರಗೆ ಹೋದಾಗ, ಕ್ಯಾಮೆರಾ ಹಿಡಿದುಕೊಂಡು ಬರುವವರು ನಮ್ಮ ದೇಹದ ಭಾಗಗಳನ್ನೇ ಜೂಮ್ ಮಾಡಿ ಫೋಟೋ ತೆಗೀತಾರೆ ಅಂತ ನಾವು ಅಂದುಕೊಂಡಿರಲ್ಲ. ಆದರೆ, ದುಡ್ಡಿಗಾಗಿ ಮತ್ತು ವೀಕ್ಷಕರಿಗಾಗಿ ಅವರು ಮಹಿಳೆಯರ ದೇಹವನ್ನು ಅವರ ಅನುಮತಿಯಿಲ್ಲದೆ ಚಿತ್ರೀಕರಿಸುತ್ತಾರೆ. ಇದು ತುಂಬಾನೇ ಅಸಹ್ಯಕರ,” ಎಂದು ಜಾನ್ವಿ ಹೇಳಿದ್ದರು.

ಸಿನಿಮಾದಲ್ಲಿ ಗ್ಲಾಮರಸ್ ಆಗಿ ನಟಿಸೋದು ಬೇರೆ, ಅನುಮತಿ ಇಲ್ಲದೆ ನಮ್ಮನ್ನು ಲೈಂಗಿಕ ವಸ್ತುವಿನಂತೆ ತೋರಿಸೋದು ಬೇರೆ ಅಂತಾನೂ ಜಾನ್ವಿ ಸ್ಪಷ್ಟಪಡಿಸಿದ್ದರು. 'ಸಿನಿಮಾದಲ್ಲಿ ಕ್ಯಾಮೆರಾಮ್ಯಾನ್ ನಮಗೆ ಕಂಫರ್ಟಬಲ್ ಇಲ್ಲದ ಆ್ಯಂಗಲ್‌ಗಳಲ್ಲಿ ಕ್ಯಾಮೆರಾ ಇಟ್ಟಾಗ, ‘ಹೀಗೆ ಬೇಡ’ ಅಂತ ನಾವು ಧೈರ್ಯವಾಗಿ ಹೇಳಬೇಕು. ಆರಂಭದಲ್ಲಿ ನನಗೆ ಹಾಗೆ ಹೇಳಲು ತುಂಬಾ ಹಿಂಜರಿಕೆಯಿತ್ತು. ಆದರೆ ಈಗ ಹಾಗಲ್ಲ. ಇಷ್ಟವಾಗದಿದ್ದರೆ ನೇರವಾಗಿ ಹೇಳಿಬಿಡುತ್ತೇನೆ. ಇಂತಹ ಕೆಟ್ಟ ದೃಶ್ಯಗಳಿಂದಾಗಿ ಪ್ರೇಕ್ಷಕರು ಮತ್ತು ನಿರ್ಮಾಪಕರಲ್ಲಿ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಿದೆ. ಒಂದರ್ಥದಲ್ಲಿ, ಒಳ್ಳೊಳ್ಳೆ ಪಾತ್ರಗಳು ನನಗೆ ಸಿಗದೇ ಇರಲು ಇದೂ ಒಂದು ಕಾರಣ', ಎಂದಿದ್ದರು ಜಾನ್ವಿ.

ಇಷ್ಟೆಲ್ಲಾ ಮಾತಾಡ್ತೀರಾ

ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲವನ್ನೂ ಹೇಳುವಷ್ಟು ಸ್ವಾತಂತ್ರ್ಯ ನನಗಿನ್ನೂ ಬಂದಿಲ್ಲ, ಕೆಲವೊಮ್ಮೆ ಕಾಂಪ್ರಮೈಸ್ ಆಗಬೇಕಾಗುತ್ತೆ ಅಂತಾನೂ ಜಾನ್ವಿ ಒಪ್ಪಿಕೊಂಡಿದ್ದರು. ಈ ಹಳೆ ವಿಡಿಯೋಗೆ ಕೂಡ ಈಗ ಟೀಕೆಗಳು ಬರ್ತಿವೆ. 'ಪೆದ್ದಿ' ಸಿನಿಮಾವನ್ನು ಉಲ್ಲೇಖಿಸಿ, 'ಇಷ್ಟೆಲ್ಲಾ ಮಾತಾಡ್ತೀರಾ, ಆದ್ರೆ ಸಿನಿಮಾದಲ್ಲಿ ಮಾಡೋದು ಇದನ್ನೇನಾ?' ಅಂತ ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ತಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳುವ ಧೈರ್ಯ ಇರಬೇಕು, ಇಷ್ಟವಿಲ್ಲದ ವಿಷಯವನ್ನು ಯಾರ ಮುಖ ನೋಡಿಯೂ 'ಆಗಲ್ಲ' ಅಂತ ಹೇಳೋಕೆ ಕಲಿಬೇಕು ಅಂತ ವಿಮರ್ಶಕರು ಹೇಳುತ್ತಿದ್ದಾರೆ.