Asianet Suvarna News Asianet Suvarna News

ತೆಲುಗು ರಸ್ತೆ ಮೇಲೆ ಕನ್ನಡದ ಜಾಗ್ವಾರ್

ಚಿತ್ರಕ್ಕೆ ನೋಡಿಸುವ ಗುಣವಿದ್ದರೂ ಭಾವನೆಗಳನ್ನು ದಾಟಿಸುವ, ಕಾಡಿಸುವ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಆದರೂ, ಬೆಳ್ಳಿತೆರೆಗೆ ಪುತ್ರನನ್ನು ಹೀರೋ ಆಗಿ ಪರಿಚಯಿಸಬೇಕೆನ್ನುವ ಕಾರಣಕ್ಕೆ ಎಚ್ಡಿ ಕುಮಾರ ಸ್ವಾಮಿ ಅವರು ಹಾಕಿದ ಶ್ರಮ ಇಲ್ಲಿ ಫಲಿಸಿದೆ. ಅದು ಕೇವಲ ನಿಖಿಲ್ಅವರ ಆ್ಯಕ್ಷನ್‌, ಡ್ಯಾನ್ಸಿಂಗ್ಕಾರಣಕ್ಕೆ ಮಾತ್ರವಲ್ಲ. ಇದೊಂದು ಭಾರಿ ವೆಚ್ಚದ ಚಿತ್ರ ಎನ್ನುವುದಕ್ಕೆ ಅಲ್ಲಿ ಕಾಣುವ ಪುರಾವೆಗಳೇ ಸಾಕು.

Jaguar film movie review

ಚಿತ್ರ: ಜಾಗ್ವಾರ್

ಭಾಷೆ: ಕನ್ನಡ

ತಾರಾಗಣ: ನಿಖಿಲ್‌ ಕುಮಾರ್‌, ದೀಪ್ತಿ ಸತಿ, ರಮ್ಯಾಕೃಷ್ಣ, ಆದಿತ್ಯಾ ಮೆನನ್‌, ಸಂಪತ್‌, ಭಜರಂಗಿ ಲೋಕಿ, ಸಾಧು ಕೋಕಿಲ, ಪ್ರಶಾಂತ್‌ ಸಿದ್ದಿ, ವಿನಾಯಕ ಜೋಷಿ

ನಿರ್ದೇಶನ: ಮಹದೇವ್‌

ಛಾಯಾಗ್ರಹಣ: ಮನೋಜ್‌ ಪರಮಹಂಸ

ಸಂಗೀತ: ತಮನ್‌

ನಿರ್ಮಾಣ: ಅನಿತಾ ಕುಮಾರಸ್ವಾಮಿ 

-ದೇಶಾದ್ರಿ ಹೊಸ್ಮನೆ, ಕನ್ನಡ ಪ್ರಭ


ಒಬ್ಬ ವ್ಯಕ್ತಿಯನ್ನು ಕೊಲ್ಲಲು ಸಾಧ್ಯವಾಗದೇ ಹೋದರೂ, ಆತನ ವ್ಯಕ್ತಿತ್ವವನ್ನು ಕೊಂದರೆ ಸಾಕು! ಕೋಲಾರ ಜಿಲ್ಲೆಯ ಸಮಾಜ ಸೇವಕ ಶರಣೂರು ಶಿವಪ್ರಸಾದ್‌ ಅವರನ್ನು ಆತನ ಹಿತಶತ್ರುಗಳು ಮುಗಿಸಿದ್ದೇ ಹಾಗೆ. ಅಪಾರ ಜನ ಬೆಂಬಲದ ವ್ಯಕ್ತಿಯನ್ನು ಕೊಂದು ಹಾಕಿದರೆ, ಜನರೇ ತಮ್ಮನ್ನು ಮುಗಿಸಿ ಹಾಕುತ್ತಾರೆನ್ನುವ ಭಯ. ಅದಕ್ಕಾಗಿ ಅವರು ರೂಪಿಸಿದ ಸಂಚೇ ‘ವ್ಯಕ್ತಿತ್ವದ ಕೊಲೆ'. ಆ ಕೊಲೆ ಮೂಲಕ ಸಾಗುವ ಕತೆಯೇ ‘ಜಾಗ್ವಾರ್‌'. ಕನ್ನಡದ ಮಟ್ಟಿಗೆ ಇದೊಂದು ಹೊಸ ಬಗೆಯ ಕತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಹಿಂದಿ ಹಾಗೂ ಟಾಲಿವುಡ್‌ನಲ್ಲಿ ಈಗಾಗಲೇ ಸೂಪರ್‌ಹಿಟ್‌ ಚಿತ್ರಗಳನ್ನು ಕೊಟ್ಟವಿಜಯೇಂದ್ರ ಪ್ರಸಾದ್‌ ಅವರ ಕತೆಯ ಬಗೆಗಿದ್ದ ಕುತೂಹಲ ಕೊಂಚ ಮಟ್ಟಿಗೆ ನಿರಾಸೆ ಮೂಡಿಸುತ್ತದೆ. 
ಚಿತ್ರಕ್ಕೆ ನೋಡಿಸುವ ಗುಣವಿದ್ದರೂ ಭಾವನೆಗಳನ್ನು ದಾಟಿಸುವ, ಕಾಡಿಸುವ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಆದರೂ, ಬೆಳ್ಳಿತೆರೆಗೆ ಪುತ್ರನನ್ನು ಹೀರೋ ಆಗಿ ಪರಿಚಯಿಸಬೇಕೆನ್ನುವ ಕಾರಣಕ್ಕೆ ಎಚ್‌ಡಿ ಕುಮಾರ ಸ್ವಾಮಿ ಅವರು ಹಾಕಿದ ಶ್ರಮ ಇಲ್ಲಿ ಫಲಿಸಿದೆ. ಅದು ಕೇವಲ ನಿಖಿಲ್‌ ಅವರ ಆ್ಯಕ್ಷನ್‌, ಡ್ಯಾನ್ಸಿಂಗ್‌ ಕಾರಣಕ್ಕೆ ಮಾತ್ರವಲ್ಲ. ಇದೊಂದು ಭಾರಿ ವೆಚ್ಚದ ಚಿತ್ರ ಎನ್ನುವುದಕ್ಕೆ ಅಲ್ಲಿ ಕಾಣುವ ಪುರಾವೆಗಳೇ ಸಾಕು. ಸಮಾಜವೇ ಪೂಜಿಸುತ್ತಿದ್ದ ತನ್ನ ತಂದೆಯನ್ನು ಮೋಸದಲ್ಲಿ ಮುಗಿಸಿದ ವ್ಯಕ್ತಿಗಳನ್ನು ಮಟ್ಟಹಾಕುವುದಕ್ಕಾಗಿ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಯಾಗಿ ಬಂದ ಎಸ್‌ ಎಸ್‌ ಕೃಷ್ಣ ಅಲಿಯಾಸ್‌ ಜಾಗ್ವಾರ್‌, ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎನ್ನುವ ಸಣ್ಣ ಎಳೆಯನ್ನೇ ಇಲ್ಲಿ ತೆರೆಗೆ ತರಲಾಗಿದೆ. ಟಿವಿ ಚಾನೆಲ್‌ಗಳ ಟಿಆರ್‌ಪಿ ಹುಚ್ಚು, ಶಿಕ್ಷಣ ಹಾಗೂ ಮೆಡಿಕಲ್‌ ದಂಧೆಯನ್ನು ತಳುಕು ಹಾಕಲಾಗಿದೆ.
ಮೇಕಿಂಗ್‌ನಲ್ಲಿ ಈ ಚಿತ್ರ ಟಾಲಿವುಡ್‌ನ ಅದ್ಧೂರಿ ಚಿತ್ರಗಳ ಸನಿಹಕ್ಕೆ ನಿಲ್ಲುತ್ತದೆ. ಚೇಸಿಂಗ್‌ ಸನ್ನಿವೇಶಗಳು ಹಾಲಿವುಡ್‌ನ ನೆರಳಲ್ಲೇ ಮೂಡಿಬಂದಿವೆ. ಅದರ ಕ್ರೆಡಿಟ್‌ ಹಾಲಿವುಡ್‌ ಸಾಹಸ ನಿರ್ದೇಶಕ ಕಲೋಯನ್‌ ಅವರಿಗೆ ಸಲ್ಲುತ್ತದೆ. ‘ಜಾಗ್ವಾರ್‌'ನ ಜಾಲಿ ರೈಡ್‌, ಸಾಹಸದ ದಾರಿಯಲ್ಲಿನ ಥ್ರಿಲ್ಲಿಂಗ್‌ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸುತ್ತದೆ. ನಿಖಿಲ್‌ ಮುಖದ ಹಾವಭಾವದ ಮೂಲಕ ನಟನೆಯಲ್ಲಿ ಇನ್ನಷ್ಟುಪಳಗಿದರೆ, ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಳ್ಳುತ್ತಾರೆ. ನಗುವಾಗ, ಅಳುವಾಗ ಮುಖದಲ್ಲಿ ಯಾವುದೇ ಬದಲಾವಣೆ ಕಾಣದೆ ಹೋಗಿದ್ದು ಮಾತ್ರ ಅವರ ಅಭಿನಯದಲ್ಲಿ ಕಾಣುವ ಮೈನಸ್‌. ನಿಖಿಲ್‌ ಹಾಸ್ಯ ದೃಶ್ಯಾವಳಿಗಳೂ ಪೇಲವ. ಕನ್ನಡದ ಪ್ರೇಕ್ಷಕರಿಗೆ ಕತೆಯಲ್ಲಿ ಕಾಣುವ ಕೊರತೆ, ಕಲಾವಿದರ ವಿಚಾರದಲ್ಲಿ ಕಾಡುತ್ತದೆ. ನಿಖಿಲ್‌, ಭಜರಂಗಿ ಲೋಕಿ, ಸಾಧು ಕೋಕಿಲ, ಪ್ರಶಾಂತ್‌ ಸಿದ್ದಿ, ಅವಿನಾಶ್‌ ಸೇರಿದಂತೆ ಇಲ್ಲಿ ಕಾಣಿಸಿಕೊಳ್ಳುವ ಸಣ್ಣಪುಟ್ಟಪಾತ್ರಧಾರಿಗಳನ್ನು ಹೊರತುಪಡಿಸಿದರೆ, ಟಾಲಿವುಡ್‌ನ ದಂಡೇ ಇಲ್ಲಿದೆ. ಕನ್ನಡ ಚಿತ್ರದ ನಿರ್ಮಾಣದಲ್ಲಿ ಉದಾರತೆ ತೋರಿರುವ ಕುಮಾರಸ್ವಾಮಿ, ತೆಲುಗು ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಿದ್ದು ಕೆಲವರಿಗೆ ಬೇಸರ ಮೂಡಿಸದೆ ಇರದು. ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ಜಗಪತಿಬಾಬು, ರಮ್ಯಾಕೃಷ್ಣ, ಸಂಪತ್‌, ಆದಿತ್ಯ ಮೆನನ್‌ ಭರ್ಜರಿ ಮಿಂಚಿದ್ದಾರೆ. ಟಾಲಿವುಡ್‌ ವಿಲನ್‌ಗಳ ನಡುವೆ ಭಜರಂಗಿ ಲೋಕಿಗೆ ಫುಲ್‌ಮಾರ್ಕ್ಸ್ ಸಿಗುತ್ತದೆ. ನಾಯಕಿ ದೀಪ್ತಿ ಸತಿ ಅವರಿಗೆ ಅಷ್ಟುಜಾಗವೇ ಸಿಕ್ಕಿಲ್ಲ. ಕೆಲವೇ ಕೆಲವು ಸನ್ನಿವೇಶ ಮತ್ತು ಹಾಡಿನ ದೃಶ್ಯಗಳಿಗೆ ಸಿಮೀತ.
ಮನೋಜ್‌ ಪರಮಹಂಸರ ಕ್ಯಾಮೆರಾ ಇಲ್ಲಿ ಜಾದೂವನ್ನೇ ನಡೆಸಿದೆ. ಅವರಿಗೆ ಸವಾಲಾಗಿದ್ದೇ ಬಹುಶಃ ಆ್ಯಕ್ಷನ್‌ ಸನ್ನಿವೇಶಗಳಲ್ಲಿ. ಬಲ್ಗೇರಿಯಾದಲ್ಲಿನ ಚೇಸಿಂಗ್‌ ಸನ್ನಿವೇಶ ರೋಮಾಂಚನಕಾರಿ. ಸಂಕಲನದಲ್ಲಿ ರುಬಿನ್‌ 20 ನಿಮಿಷಕ್ಕೆ ಕತ್ತರಿ ಹಾಕಬಹುದಿತ್ತು. ಗುರುರಾಜ್‌ ಸಂಭಾಷಣೆ ಖಡಕ್‌ ಮತ್ತು ಆಪ್ತ. ತಮನ್‌ ಸಂಗೀತದಲ್ಲಿ ಮೆಚ್ಚುವಂಥದ್ದೇನೂ ಇಲ್ಲ. ಟಾಲಿವುಡ್‌, ಕಾಲಿವುಡ್‌ ಮಟ್ಟಿಗೆ ದೊಡ್ಡ ಹೆಸರಿದ್ದರೂ, ತಮನ್‌ ಇಲ್ಲಿ ಯಾವುದೇ ಕೋನದಲ್ಲೂ ವಿಶೇಷ ಎನಿಸುವುದಿಲ್ಲ. ಚಿತ್ರದಲ್ಲಿರುವ ಐದು ಹಾಡುಗಳಲ್ಲೂ ಅದೇ ರಾಗ, ಅದೇ ಹಾಡು. ಹಾಡುಗಳ ಚಿತ್ರೀಕರಣವಷ್ಟೇ ಸುಂದರ. ತಮನ್ನಾಳ ಐಟಂ ಸಾಂಗ್‌ ಯಾಕಾಗಿ ಬಂತೆನ್ನುವುದಕ್ಕೆ ಕಾರಣವಿಲ್ಲ. ಆದರೆ ಆಕೆಯ ಡ್ಯಾನ್ಸ್‌ ಮಜಬೂತ್‌. 

Follow Us:
Download App:
  • android
  • ios