ಬೆಂಗಳೂರು (ಜು. 18): ಪಾತಕ ಲೋಕದ ಕತೆಗಳ ಕಡೆ ಕೊಂಚ ಹೆಚ್ಚಾಗಿಯೇ ಸಿನಿಮಾ ಮಂದಿಯ ಗಮನ ಇರುತ್ತದೆ. ಹಾಗೆ ಬೆಂಗಳೂರಿನ ಒಂದು ಮಾಫಿಯಾ ಕತೆ ಗಮನ ಸೆಳೆದರೆ ಏನಾಗುತ್ತದೆ ಎಂಬುದಕ್ಕೆ ‘ಗೋಸಿಗ್ಯಾಂಗ್’ ಉತ್ತಮ ನಿದರ್ಶನ. ಹೆಸರಿಗೆ ತದ್ವಿರುದ್ಧವಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಇದು ಡ್ರಗ್ ಮಾಫಿಯಾ  ಕತೆಯನ್ನು ಹೇಳುವ ಸಿನಿಮಾ. ಇತ್ತೀಚೆಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಡ್ರಗ್ ಪ್ರಕರಣ ಹಾಗೂ ತೆಲುಗು ಚಿತ್ರರಂಗದ ಸ್ಟಾರ್ ನಟ, ನಟಿಯರನ್ನೇ ಕಾನೂನು ಕಟಕಟೆಯಲ್ಲಿ ನಿಲ್ಲಿಸಿದ ಡ್ರಗ್ ಪ್ರಕರಣ... ಹೀಗೆ ಹಲವು ಕೋನಗಳನ್ನು ತೆರೆದಿಡುವ ‘ಗೋಸಿಗ್ಯಾಂಗ್’ನಲ್ಲಿ ಜಗ್ಗೇಶ್ ಪುತ್ರ ಯತಿರಾಜ್ ಜಗ್ಗೇಶ್ ಹಾಗೂ ಅಜಯ್ ಕಾರ್ತಿಕ್ ಈ ಇಬ್ಬರು ಹೇಗೆ ಸಿಕ್ಕಿಕೊಳ್ಳುತ್ತಾರೆ ಎಂಬುದನ್ನು ಇಂಥ ನೈಜ ಘಟನೆಗಳ ಮೂಲಕ ಹೇಳಲಾಗಿದೆ. 

ಈ ಚಿತ್ರದ ನಿರ್ಮಾಪಕ ಕೆ ಶಿವಕುಮಾರ್ ಅವರೇ ಕತೆ ಬರೆದಿದ್ದು, ರಾಜು ದೇವಸಂದ್ರ  ನಿರ್ದೇಶನ ಮಾಡಿದ್ದಾರೆ. ವಿಧಾನಸೌಧ ಅಂಗಳದಲ್ಲೂ ಸದ್ದು ಮಾಡಿದ ಒಂದು ಅಪಾಯಕಾರಿ ಮಾಫಿಯಾದ ಮೇಲೆ ಸಿನಿ ಬೆಳಕು ಬೀರುವ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ಹಂಸಲೇಖ ಹಾಗೂ ಜಗ್ಗೇಶ್  ಅವರಿಂದ ಅನಾವರಣಗೊಂಡಿದೆ. ಸದ್ಯದಲ್ಲೇ ತೆರೆಗೆ ಬರಲಿರುವ ಈ ಚಿತ್ರಕ್ಕೆ ಹಾಲೇಶ್ ಛಾಯಾಗ್ರಹಣ, ಆರವ್ ಋಶಿಕ್ ಸಂಗೀತ ನಿರ್ದೇಶನವಿದೆ.

ಯೋಗರಾಜ್ ಭಟ್, ಶಶಿಕರ ಪಾತೂರು, ಹರಿಮಾವಳ್ಳಿ, ಅಪ್ಪವರ್ಧನ್ ಹಾಡುಗಳನ್ನು ಬರೆದಿದ್ದಾರೆ. ಅಪ್ಪು ವೆಂಕಟೇಶ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಮೋನಿಕಾ, ಅನುಷಾ, ಸೋನು ಪಾಟೀಲ್  ಚಿತ್ರದ ನಾಯಕಿಯರು.