ಮುಂಬೈ[ಮೇ.10]: ತಮ್ಮ ಮೇಲಿನ ವಿವಿಧ ಪ್ರಕರಣಗಳು ಇತ್ಯರ್ಥ ಆಗುವವರೆಗೂ ವಿವಾಹ ಆಗದಿರುವ ನಿರ್ಧರಿಸಿದ್ದ ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ಇದೀಗ ಬಾಡಿಗೆ ತಾಯ್ತನದ ಮೂಲಕ ಮಗುವೊಂದನ್ನ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕೃಷ್ಣಮೃಗ ಹತ್ಯೆ, ಹಿಟ್‌ ಆ್ಯಂಡ್‌ ರನ್‌ ಸೇರಿದಂತೆ ಸಲ್ಮಾನ್‌ ಹಲವು ಪ್ರಕರಣಗಳಲ್ಲಿ ಸಲ್ಮಾನ್‌ ಆರೋಪಿಯಾಗಿದ್ದಾರೆ. ಇವುಗಳ ವಿಚಾರಣೆ ಒಂದರಿಂದ ಇನ್ನೊಂದು ಕೋರ್ಟ್‌ಗೆ ವರ್ಗಾವಣೆಯಾಗುತ್ತಲೇ ಇದೆ. ಹೀಗಾಗಿಯೇ ಸದ್ಯಕ್ಕೆ ಮದುವೆ ಇಲ್ಲ ಎನ್ನುವುದು ಸಲ್ಮಾನ್‌ (53) ನಿರ್ಧಾರ. ಆದರೆ ಮತ್ತೊಂದೆಡೆ ಅವರಿಗೆ ಮದುವೆಯ ವಯಸ್ಸೂ ಮೀರುತ್ತಿದೆ. ನಾನು ಮದುವೆಯಾಗುವುದಾದರೆ ಅದು ಕೇವಲ ಮಕ್ಕಳನ್ನು ಹೊಂದುವ ಉದ್ದೇಶಕ್ಕಾಗಿ ಎಂದು ಈ ಹಿಂದೊಮ್ಮೆ ಸಲ್ಮಾನ್‌ ಹೇಳಿದ್ದರು. ಹೀಗಾಗಿಯೇ ಅವರೀಗ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೊಂದುವ ಚಿಂತನೆಯಲ್ಲಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಈ ಹಿಂದೆ ಬಾಲಿವುಡ್‌ನವರೇ ಆದ ಶಾರುಖ್‌, ಅಮೀರ್‌ ಖಾನ್‌, ಕರಣ್‌ ಜೋಹರ್‌, ಏಕ್ತಾ ಕಪೂರ್‌, ತುಷಾರ್‌ ಕಪೂರ್‌ ಬಾಡಿಗೆ ತಾಯ್ತನದ ಮೂಲಕವೇ ಮಕ್ಕಳನ್ನು ಪಡೆದುಕೊಂಡಿದ್ದರು. ಈ ಪೈಕಿ ಕರಣ್‌ ಜೋಹರ್‌, ಏಕ್ತಾ ಕಪೂರ್‌, ತುಷಾರ್‌ ಕಪೂರ್‌ ವಿವಾಹವಾದವರಲ್ಲ.