ಲವ್ ಮಾಡಿ ನಾಲ್ಕು ವರ್ಷಗಳ ಬಳಿಕ ಮದ್ವೆಯಾಗಲು ಜಾತಕ ತೋರಿಸಿ ಪೇಚಿಗೆ ಸಿಲುಕಿದ ಕಾಲಿವುಡ್ ಜೋಡಿ ಮಧುಮಿತಾ ಮತ್ತು ಶಿವ ಬಾಲಾಜಿ ಅವರ ಸ್ಟೋರಿ ಕೇಳಿ...
ಲವ್ ಮಾಡುವಾಗ ಜ್ಯೋತಿಷಿಗಳನ್ನು ಕೇಳುವುದಿಲ್ಲ, ಏಕೆಂದರೆ ಲವ್ ಯಾವಾಗ, ಹೇಗೆ, ಎಲ್ಲಿ ಆಗುತ್ತೆ ಎಂದು ಹೇಳುವುದಕ್ಕೆ ಆಗುವುದೇ ಇಲ್ಲ, ಆದರೆ ಅದೇ ಮದುವೆಯ ವಿಷಯ ಬಂದಾಗ ಜಾತಕ, ನಕ್ಷತ್ರ, ಕುಂಡಲಿ ಅದೂ ಇದೂ ಅಂತೆಲ್ಲಾ ಜ್ಯೋತಿಷಿಗಳ ಮೊರೆ ಹೋಗುವುದು ಸಾಮಾನ್ಯ. ಆ ಸಮಯದಲ್ಲಿ ಇಬ್ಬರ ಜಾತಕ ಮ್ಯಾಚ್ ಆಗಿಲ್ಲ ಎಂದುಬಿಟ್ರೆ ಏನಾಗತ್ತೆ ಎಂದು ಊಹಿಸೋದೂ ಕಷ್ಟ, ಜಾತಕ ಮ್ಯಾಚ್ ಆಗ್ತಿಲ್ಲ ಅಂದ್ರೂ ತಡ್ಕೋಬೋದೇನೋ, ಈ ಮದ್ವೆಯಾದ್ರೆ ಅಪ್ಪನೋ, ಅಮ್ಮನೋ ಸತ್ತು ಹೋಗ್ತಾರೆ ಅಂದುಬಿಟ್ರೆ? ಅಂಥದ್ದೇ ಒಂದು ಲವ್ ಸ್ಟೋರಿ ವಿಜಯ ರಾಘವೇಂದ್ರ ಅಭಿನಯದ ನಾನು ನೀನು ಜೋಡಿ, ಹುಚ್ಚನ ಮದುವೆಯಲಿ ಉಂಡವನೇ ಜಾಣ ಚಿತ್ರದಲ್ಲಿ ನಟಿಸಿರೋ ಕಾಲಿವುಡ್ ನಟಿ ಮಧುಮಿತಾ ಮತ್ತು ಕಾಲಿವುಡ್ನ ಖ್ಯಾತ ನಟ ಶಿವ ಬಾಲಾಜಿ ಅವರ ಮದ್ವೆ ಕಥೆ!
ಈ ಜೋಡಿ 2009ರಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳ ಅಪ್ಪ-ಅಮ್ಮ ಕೂಡ ಆಗಿದ್ದಾರೆ. ಆದರೆ ಇವರ ಲವ್ ಸ್ಟೋರಿ ಇದೀಗ ವೈರಲ್ ಆಗುತ್ತಿದ್ದು, ಸಕತ್ ಇಂಟರೆಸ್ಟಿಂಗ್ ಆಗಿದೆ. ಅದರ ಬಗ್ಗೆ ನಟಿ ಈಗ ಶೇರ್ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಮೊದಲಿಗೆ ಭೇಟಿಯಾದದ್ದು 'ಇಂಗ್ಲಿಷ್‌ಕರಣ್' ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಪರದೆ ಶೇರ್ ಮಾಡಿಕೊಂಡಿತ್ತು ಈ ಜೋಡಿ. 2005ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು. ಸಿನಿ ಸೆಟ್ನಲ್ಲಿಯೇ ಲವ್ ಆ್ಯಟ್ ಫಸ್ಟ್ ಸೈಟ್ ಆಗಿ ಒಬ್ಬರನ್ನೊಬ್ಬರು ಪ್ರೀತಿಸತೊಡಗಿದರು. ನಂತರ ಮದುವೆಯ ನಿರ್ಧಾರಕ್ಕೂ ಬಂತು. ಕುತೂಹಲದ ಸಂಗತಿಯೆಂದರೆ ಇವರಿಬ್ಬರು ಕೂಡ ತಾವು ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳಲೇ ಇಲ್ಲವಂತೆ. ಇದರ ಹೊರತಾಗಿಯೂ ಇಬ್ಬರ ಮನಸ್ಸಿಗೂ ತಾವು ಪ್ರೀತಿಯಲ್ಲಿ ಬಿದ್ದದ್ದು ತಿಳಿದಿತ್ತು. ನೇರವಾಗಿ ಈ ಜೋಡಿ ಮದುವೆಯಾಗುವ ನಿರ್ಧಾರ ಮಾಡಿತ್ತು.
ಆದರೆ ಎಲ್ಲಾ ಪ್ರೇಮಗಳು ಸುಲಭದಲ್ಲಿ ಯಶಸ್ವಿಯಾಗುವುದು ಕಷ್ಟ. ಅದರಂತೆಯೇ ಈ ಜೋಡಿಯ ಮದುವೆಗೂ ಅಡ್ಡಿ ಬಂದಿತ್ತು. ಆದರೆ ಆ ಅಡ್ಡಿ ಮನೆಯವರಿಂದ ಅಲ್ಲ, ಬದಲಿಗೆ ಜಾತಕದಿಂದಾಗಿ! ಇಬ್ಬರೂ ಮದುವೆಯ ನಿರ್ಧಾರಕ್ಕೆ ಬಂದಿದ್ದರೂ ಏಕಾಏಕಿ ಶಿವ ಬಾಲಾಜಿ ಮದುವೆಯಿಂದ ಹಿಂದಕ್ಕೆ ಸರಿದಿದ್ದರು. ಇದಕ್ಕೆ ಕಾರಣ ಮಧುಮಿತಾ ಅವರ ಜಾತಕವಂತೆ! ಒಂದು ವೇಳೆ ಆಕೆಯನ್ನು ಮದುವೆಯಾದರೆ ತಮ್ಮ ತಾಯಿ ಸತ್ತು ಹೋಗುತ್ತಾರೆ ಎನ್ನುವುದು ಜಾತಕದಲ್ಲಿ ಇತ್ತಂತೆ! ಇಬ್ಬರ ಜಾತಕ ತೋರಿಸಿದಾಗ ಅದು ಹೊಂದಾಣಿಕೆ ಆಗಿರಲಿಲ್ಲವೆಂದು ಶಿವ ಬಾಲಾಜಿ ಮದುವೆ ಮುರಿದಿದ್ದರು! ಈ ಬಗ್ಗೆ ಮಧುಮಿತಾ ಖುದ್ದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 'ನಾವಿಬ್ಬರು 4 ವರ್ಷ ಪ್ರೀತಿಸಿದ್ದೆವು. ಆದರೆ ಪ್ರೀತಿಯ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಮದುವೆ ಆಗುವ ನಿರ್ಧಾರಕ್ಕೆ ಬಂದೆವು. ಬಾಲಾಜಿ ಮದುವೆಯ ಕುರಿತು ತುಂಬಾ ಉತ್ಸುಕರಾಗಿದ್ದರು. ಆದರೆ ಏಕಾಏಕಿ ಅವರು ಫೋನ್ ಮಾಡಿ 'ನಮ್ಮಿಬ್ಬರಿಗೂ ಸೆಟ್ ಆಗುವುದಿಲ್ಲ. ಜಾತಕ ಹೊಂದಾಣಿಕೆ ಆಗ್ತಿಲ್ಲ, ನಾವು ಮದುವೆ ಆದರೆ ನಮ್ಮ ತಾಯಿ ಸಾಯುತ್ತಾರಂತೆ' ಎಂದುಬಿಟ್ಟರು ಎಂದು ಮಧುಮಿತಾ ಹೇಳಿದರು.
ಹೀಗೆ ಹೇಳುತ್ತಿದ್ದಂತೆಯೇ ನನಗೆ ನೆಲವೇ ಕುಸಿದುಹೋದ ಅನುಭವವಾಯ್ತು. ಹೇಳಲು ಏನೂ ಉಳಿದಿರಲಿಲ್ಲ. ಆತನನ್ನು ನನ್ನ ಗಂಡ ಎಂದೇ ಒಪ್ಪಿಕೊಂಡಿದ್ದೆ. ಆದರೆ ಆತ ಮಾತ್ರ ಫ್ರೆಂಡ್ಸ್ ಆಗಿ ಇರೋಣ ಎಂದುಬಿಟ್ಟ ಎಂದು ಮಧುಮಿತಾ ಹೇಳಿದರು, ನಂತರ ಒಂದೂವರೆ ವರ್ಷ ಬ್ರೇಕಪ್ ಆಗಿತ್ತು. ಪುನಃ ಮನೆಯವರನ್ನು ಒಪ್ಪಿಸಿ ಶಿವ ಬಾಲಾಜಿ (Shiva Balaji) ಮದುವೆ ಆಗಿದ್ದಾರೆ. ನಮ್ಮ ಮನೆಯಲ್ಲಿ ಜಾತಕದ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳಲ್ಲ. ಆದರೆ ನಮ್ಮ ಅತ್ತೆ ಮನೆಯಲ್ಲಿ ಅದನ್ನೆಲ್ಲಾ ಬಹಳ ನಂಬ್ತಾರೆ. ಒಂದೂವರೆ ವರ್ಷದ ನಂತರ ಮತ್ತೆ ಇಬ್ಬರು ಒಂದಾದೆವು. ನಂತರ ಪುನಃ ಜಾತಕ ತೋರಿಸಿದಾಗ, ಅಡ್ಡಿ ಏನೂ ಇಲ್ಲ ಚೆನ್ನಾಗಿದೆ ಎಂದರು ಜ್ಯೋತಿಷಿಗಳು. ಆದ್ದರಿಂದ ಮದ್ವೆಯಾದ್ವಿ ಎಂದಿದ್ದಾರೆ.
