ಗೋವಾದಲ್ಲಿ ನಡೆಯುತ್ತಿರುವ 57ನೇ IFFI 2026ರ ಆರನೇ ದಿನ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಹಾಡುಗಳ ಕ್ವಿಜ್ನಲ್ಲಿ ತಮ್ಮ ಸಂಗೀತ ಜ್ಞಾನ ಪ್ರದರ್ಶಿದರು.
ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಆರನೇ ದಿನದಂದು ಸಂಗೀತಪ್ರಿಯರಿಗೆ ವಿಶೇಷ ಅನುಭವವೊಂದು ಸಿಕ್ಕಿತು. ನವೆಂಬರ್ 25ರಂದು ಗೋವಾದ ಕಲಾ ಅಕಾಡೆಮಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪದ್ಮಭೂಷಣ ಪುರಸ್ಕೃತೆ, ಖ್ಯಾತ ಗಾಯಕಿ ಡಾ. ಕೆ.ಎಸ್. ಚಿತ್ರಾ ತಮ್ಮ ಸುಮಧುರ ಧ್ವನಿಯ ಮೂಲಕ ಸಂಗೀತದ ಲೋಕಕ್ಕೆ ಪ್ರೇಕ್ಷಕರನ್ನು ಕರೆದೊಯ್ದರು.
‘ಲತಾ ಮಂಗೇಶ್ಕರ್ ಟಾಕ್: ದಿ ವಾಯ್ಸ್ ದಟ್ ಎಕೋಸ್ ಫಾರೆವರ್’ ಎಂಬ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚಿತ್ರಾ, ಭಾರತೀಯ ಚಿತ್ರರಂಗದ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ ದಿಗ್ಗಜ ಗಾಯಕಿಯರಾದ ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ ಹಾಗೂ ಎಸ್. ಜಾನಕಿ ಅವರ ಗಾಯನ ವೈಶಿಷ್ಟ್ಯಗಳನ್ನು ಸ್ಮರಿಸಿದರು. ಖ್ಯಾತ ನಟಿ ಹಾಗೂ ನಿರ್ದೇಶಕಿ ಸುಹಾಸಿನಿ ಮಣಿರತ್ನಂ ಈ ಕಾರ್ಯಕ್ರಮವನ್ನು ನಿರೂಪಿಸಿದರು.
ಇಂದಿಗೂ ಕಣ್ಣೀರು ಬರುತ್ತದೆ
ಮೂರು ದಿಗ್ಗಜ ಗಾಯಕಿಯರ ಗಾಯನ ಶೈಲಿ, ಅವರ ಸಂಗೀತ ಸಾಧನೆ ಮತ್ತು ತಮ್ಮ ವೃತ್ತಿಜೀವನದ ಮೇಲೆ ಅವರು ಬೀರಿದ ಪ್ರಭಾವದ ಬಗ್ಗೆ ಚಿತ್ರಾ ಮನಬಿಚ್ಚಿ ಮಾತನಾಡಿದರು. ಇದೇ ವೇಳೆ ತಮ್ಮ ಮನಸ್ಸಿಗೆ ಬಹಳ ಹತ್ತಿರವಾದ ಮಲಯಾಳಂ ಹಾಡೊಂದರ ಬಗ್ಗೆಯೂ ಭಾವುಕರಾಗಿ ಮಾತನಾಡಿದರು. ‘ಸ್ವರ್ಣಮುಖಿಲೇ’ ಹಾಡನ್ನು ಕೇಳಿದಾಗ ಅಥವಾ ಹಾಡಿದಾಗ ಇಂದಿಗೂ ಕಣ್ಣೀರು ಬರುತ್ತದೆ ಎಂದು ಹೇಳಿಕೊಂಡರು. ಈ ಮಾತು ಸಭಾಂಗಣದಲ್ಲಿದ್ದ ಸಂಗೀತಪ್ರಿಯರ ಮನಮುಟ್ಟಿತು.
ಕಾರ್ಯಕ್ರಮದಲ್ಲಿ ಕೇವಲ ಮಾತುಕತೆಯಷ್ಟೇ ಅಲ್ಲ, ಸಂಗೀತದ ಮೋಜಿನ ಕ್ಷಣಗಳೂ ಪ್ರೇಕ್ಷಕರನ್ನು ರಂಜಿಸಿದವು. ಸುಹಾಸಿನಿ ಅವರು ವಿಶೇಷ ಕ್ವಿಜ್ ಆಯೋಜಿಸಿದ್ದರು. ಐದು ಜನಪ್ರಿಯ ಸಿನಿಮಾಗಳ ದೃಶ್ಯಗಳನ್ನು ಧ್ವನಿಯಿಲ್ಲದೆ ಚಿತ್ರಾಗೆ ತೋರಿಸಲಾಯಿತು. ಅಚ್ಚರಿಯೆಂದರೆ, ದೃಶ್ಯಗಳನ್ನು ನೋಡಿದ ತಕ್ಷಣವೇ ಹಾಡುಗಳನ್ನು ಗುರುತಿಸಿದ ಚಿತ್ರಾ, ಸ್ಥಳದಲ್ಲೇ ಅವುಗಳನ್ನು ಹಾಡಿ ರಂಜಿಸಿದರು. ಅವರ ಸಂಗೀತ ಜ್ಞಾನ ಮತ್ತು ಅದ್ಭುತ ನೆನಪಿನ ಶಕ್ತಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸುಂದರ ಅನುಭವ
ಕಾರ್ಯಕ್ರಮದ ಕೊನೆಯಲ್ಲಿ ಚಿತ್ರಾ ಮತ್ತೊಮ್ಮೆ ತಮ್ಮ ಗಾಯನದ ಮೋಡಿ ಮಾಡಿದರು. ರಾಷ್ಟ್ರ ಪ್ರಶಸ್ತಿ ಪಡೆದ ತಮಿಳು ಚಿತ್ರ ‘ಸಿಂಧು ಭೈರವಿ’ಯ ಜನಪ್ರಿಯ ಹಾಡು ‘ಪಾಡರಿಯೇನ್’ ಅನ್ನು ಹಾಡಿ ಸಭಾಂಗಣವನ್ನು ಸಂಗೀತಮಯಗೊಳಿಸಿದರು. ಈ ವೇಳೆ ಸುಹಾಸಿನಿ ಕೂಡ ವೇದಿಕೆಯಲ್ಲೇ ಹಾಡಿಗೆ ತುಟಿಯಾಡಿಸುತ್ತಾ ಸಾಥ್ ನೀಡಿದರು. ಹೀಗೆ ದಿಗ್ಗಜ ಗಾಯಕಿಯರ ನೆನಪು, ಭಾವುಕ ಕ್ಷಣಗಳು, ಸಂಗೀತದ ಕ್ವಿಜ್ ಮತ್ತು ಚಿತ್ರಾ ಅವರ ಅದ್ಭುತ ಗಾಯನದೊಂದಿಗೆ IFFI ಆರನೇ ದಿನದ ಈ ಕಾರ್ಯಕ್ರಮ ಪ್ರೇಕ್ಷಕರ ಮನದಲ್ಲಿ ಬಹುಕಾಲ ಉಳಿಯುವಂತಹ ಸುಂದರ ಅನುಭವವಾಗಿ ಮೂಡಿಬಂತು.
















