ವಿಜಯ್ ಆಂಟೋನಿ ತಮ್ಮ ಮಗಳು 16 ವರ್ಷದ ಮೀರಾ ಸಾವಿನ ನಂತರ ತಮ್ಮ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 19 ರಂದು ಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಚೆನ್ನೈ (ಸೆ.21): ನಟ, ನಿರ್ದೇಶಕ ವಿಜಯ್ ಆಂಟೋನಿ ಕೊನೆಗೂ ತಮ್ಮ ಮಗಳು ಮೀರಾ ಸಾವಿಗೆ ಪ್ರತಿಕ್ರಿಯೆ ನೀಡಿದ್ದಾರೆ. 16 ವರ್ಷದ ಮೀರಾ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಅಂತ್ಯಸಂಸ್ಕಾರ ಬುಧವಾರ ಚೆನ್ನೈನಲ್ಲಿ ನಡೆದಿತ್ತು. ಈ ಕುರಿತಾಗಿ ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ವಿಜಯ್ ಆಂಟೋನಿ ಭಾವುಕವಾಗಿ ಬರೆದುಕೊಂಡಿದ್ದಾರೆ. ಆಕೆಯ ಸಾವಿನೊಂದಿಗೆ ನಾನು ಕೂಡ ನನ್ನೊಳಗಿನಿಂದ ಸತ್ತು ಹೋಗಿದ್ದೇನೆ ಎಂದು ಬರೆದಿದ್ದಾರೆ. ಮೀರಾ ಯಾವಾಗಲೂ ತನ್ನೊಂದಿಗೆ ಇರುತ್ತಾಳೆ ಮತ್ತು ನಾನು ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಿದರೆ ಅದನ್ನು ಅವಳಿಗೆ ಅರ್ಪಿಸುತ್ತೇನೆ ಎಂದು ವಿಜಯ್ ಆಂಟೋನಿ ಈ ವೇಳೆ ಹೇಳಿದ್ದಾರೆ. ಈ ಕುರಿತಾಗಿ ಎಕ್ಸ್‌ನಲ್ಲಿ (ಹಳೆಯ ಟ್ವಿಟರ್‌) ಬರೆದುಕೊಂಡಿರುವ ವಿಜಯ್ ಆಂಟೋನಿ, 'ನನ್ನ ಪುತ್ರಿ ಮೀರಾ ಅತ್ಯಂತ ಕರುಣಾಮಯಿ ಮತ್ತು ಧೈರ್ಯಶಾಲಿ. ಅವಳು ಇಹಲೋಕ ತ್ಯಜಿಸಿ ಮತ, ಜಾತಿ, ಧರ್ಮ, ಹಣ, ಅಸೂಯೆ, ನೋವು, ಬಡತನ, ದುಶ್ಚಟಗಳಿಲ್ಲದ ಕಡೆ ಹೋಗಿದ್ದಾಳೆ. ಅವಳು ಶಾಂತಿಯುತವಾದ ಸ್ಥಳಕ್ಕೆ ಹೋಗಿದ್ದಾಳೆ. (ನನಗೆ ಅನಿಸುತ್ತದೆ) ಅವಳು ಇನ್ನೂ ನನ್ನೊಂದಿಗೆ ಮಾತನಾಡುತ್ತಿದ್ದಾಳೆ." ಅವರು ಬರೆದಿದ್ದಾರೆ, "ಅವಳು ಸಾವು ಕಂಡಾಗ ನಾನು ಒಳಗಿನಿಂದ ಸತ್ತು ಹೋಗಿದ್ದೇನೆ. ಈಗ, ನಾನು ಅವಳೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ತಮ್ಮ ಭಾವುಕ ಪತ್ರವನ್ನು ವಿಜಯ್, “ನಾನು ಪ್ರಾರಂಭಿಸುವ ಯಾವುದೇ ಒಳ್ಳೆಯ ಕಾರ್ಯವು ಅವಳ ಹೆಸರಿನಲ್ಲಿಯೇ ಇರುತ್ತದೆ. ಇವೆಲ್ಲವೂ ಅವಳಿಂದ ಪ್ರಾರಂಭವಾಗುತ್ತವೆ ಎಂದು ನಾನು ನಂಬುತ್ತೇನೆ' ಎನ್ನುವ ಸಾಲಿನೊಂದಿಗೆ ಮುಗಿಸಿದ್ದಾರೆ.

ಬುಧವಾರ ವಿಜಯ್ ಆಂಟೋನಿ ಅವರ ಪತ್ನಿ ಫಾತಿಮಾ ಕೂಡ ಅಂತ್ಯಕ್ರಿಯೆಯಲ್ಲಿ ಸಾಂತ್ವನ ಹೇಳಲಾಗದಷ್ಟು ರೀತಿಯಲ್ಲಿ ಭಾವುಕರಾಗಿದ್ದರು. ತಂತಿ ಟಿವಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನ ಪ್ರಕಾರ, ಮೀರಾ ಅವರ ಅಂತಿಮ ಸಂಸ್ಕಾರದ ಸಮಯದಲ್ಲಿ, 9 ತಿಂಗಳು ನಿನ್ನನ್ನು ನಾನು ಗರ್ಭದಲ್ಲಿ ಹೊತ್ತುಕೊಂಡಿದ್ದೆ. ನೀನು ನನಗೆ ಒಂದು ಮಾತು ಹೇಳಬಹುದಿತ್ತು' ಎಂದು ಆಕೆ ಹೇಳುತ್ತಿದ್ದರು ಎಂದು ವರದಿ ಮಾಡಿದೆ.

ಮಕ್ಕಳಿಗೆ ಒತ್ತಡ ಕೊಡಬಾರದು ಅಂದಿದ್ದ ವಿಜಯ್: ನಟನ ಬಾಳಲ್ಲಿ ಇದೆಂಥ ದುರ್ವಿಧಿ!

ವಿಜಯ್ ಆಂಟೋನಿ ಅವರ ಪುತ್ರಿ ಮೀರಾ ಅವರು ಸೆಪ್ಟೆಂಬರ್ 19, ಮಂಗಳವಾರ ನಸುಕಿನ ವೇಳೆ ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯು ಕುಟುಂಬದವರ ಚೆನ್ನೈನ ಮನೆಯಲ್ಲಿ ಮುಂಜಾನೆ 3 ಗಂಟೆಗೆ ಮೃತಪಟ್ಟಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ, ಅಲ್ಲಿ ಆಕೆ ಮೃತಪಟ್ಟದ್ದಾಳೆ ಎಂದು ಘೋಷಣೆ ಮಾಡಲಾಗಿದೆ. ವರದಿಯ ಪ್ರಕಾರ, ಮಂಗಳವಾರ ಮುಂಜಾನೆ ಚೆನ್ನೈನ ತೆನಾಂಪೇಟ್ ಪ್ರದೇಶದಲ್ಲಿ ಮೀರಾ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೀರಾ ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು ಮತ್ತು ಖಿನ್ನತೆಯೊಂದಿಗೆ ಆಕೆ ಹೋರಾಟ ನಡೆಸುತ್ತಿದ್ದಳು ಎನ್ನಲಾಗಿದೆ. ಆದರೆ, ಇದನ್ನು ಏಷ್ಯಾನೆಟ್‌ ಸುವರ್ಣನ್ಯೂಸ್‌ ಪರಿಶೀಲಿಸಲು ಸಾಧ್ಯವಾಗಿಲ್ಲ.

ಅಪ್ಪ ನಾನು ಚಿಕ್ಕವನಿದ್ದಾಗಲೇ ಆತ್ಮಹತ್ಯೆ ಮಾಡ್ಕೊಂಡಿದ್ರು, ಮಗಳು ಹೀಗ್ಮಾಡಿದ್ಲು; ನಟ ವಿಜಯ್ ಆಂಟೋನಿ

Scroll to load tweet…