ಬೆಂಗಳೂರು[ಆ.20]: ಚೆನ್ನೈನ ಒಡಪಳನಿ ಎನ್ನುವ ಬಡಾವಣೆಯಲ್ಲಿ ಕನ್ನಡದ ನಟ ಹುಚ್ಚ ವೆಂಕಟ್‌ ಅವರು ಹುಚ್ಚನ ರೀತಿ ತಿರುಗುತ್ತಿರುವ ದೃಶ್ಯಗಳನ್ನು ‘ರಾಂಧವ’ ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಜೊತೆಗೆ ವೆಂಕಟ್‌ ಅವರ ರಕ್ಷಣೆಗೆ ನಮ್ಮ ತಂಡ ಮುಂದಾಗಿದೆ ಎಂದು ಹೇಳಿಕೊಂಡಿದೆ.

‘ರಾಂಧವ’ ಚಿತ್ರದ ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ಸಹ ನಿರ್ಮಾಪಕ ಮಂಜುನಾಥ್‌ ಅವರು ಚಿತ್ರದ ಯುಎಫ್‌ಒ ಅಪ್‌ಲೋಡ್‌ಗಾಗಿ ಚೆನ್ನೈಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಚಿತ್ರತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ಹುಚ್ಚ ವೆಂಕಟ್‌ ಬಂದು ರೂಮ್ ಕೇಳಿದ್ದಾರೆ. ಆದರೆ ಚಪ್ಪಲಿ ಇಲ್ಲದೇ, ಗಡ್ಡ ಬಿಟ್ಟು, ಕೊಳಕು ಬಟ್ಟೆಹಾಕಿದ್ದ ಅವರಿಗೆ ಹೋಟೆಲ್‌ನವರು ರೂಮ್ ಕೊಡಲು ನಿರಾಕರಿಸಿದ್ದಾರೆ.

ಇದನ್ನು ಕಂಡ ಚಿತ್ರ ತಂಡ ಬಳಿಗೆ ಹೋಗಿ ಮಾತನಾಡಿಸಿದಾಗ ವೆಂಕಟ್‌ ಅಸ್ವಸ್ಥನ ರೀತಿ ವರ್ತಿಸಿದ್ದಾರೆ. ಜೊತೆಗೆ ತಕ್ಷಣ ಅಲ್ಲಿಂದ ಹೊರಟಿದ್ದಾರೆ. ಇತ್ತ ತಮ್ಮ ಕೆಲಸ ಮುಗಿಸಿ ವಾಪಸ್‌ ಹೊರಡುವಾಗ ಒಡಪಳನಿಯ ಬೀದಿಗಳಲ್ಲಿ ಅವರು ಸುತ್ತುತ್ತಿದ್ದದ್ದನ್ನು ಚಿತ್ರತಂಡ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ ಲೋಡ್‌ ಮಾಡಿದೆ.

"

 

ಹೋಟೆಲ್ ಬಳಿ ವೆಂಕಟ್‌ ಅವರನ್ನು ಅಸ್ವಸ್ಥರ ಸ್ಥಿತಿಯಲ್ಲಿ ನೋಡಿ ಸಹಾಯ ಮಾಡಲು ಮುಂದಾದೆವು. ಆದರೆ ಅವರು ನಮಗೆ ಸಹಕರಿಸಲಿಲ್ಲ. ಮತ್ತೆ ಕೆಲವೇ ಕ್ಷಣದಲ್ಲಿ ಅಲ್ಲಿಂದ ಹೊರಟಿದ್ದರು. ಮತ್ತೆ ನಮಗೆ ರಸ್ತೆಯಲ್ಲಿ ಚಪ್ಪಲಿ ಇಲ್ಲದೇ, ಒಂಟಿಯಾಗಿ ಹೋಗುತ್ತಿದ್ದದ್ದು ಕಾಣಿಸಿತು. ಕಾರ್‌ ನಿಲ್ಲಿಸಿ ಸಹಾಯ ಮಾಡೋಣ ಎಂದುಕೊಂಡರೆ ಆಗಲೂ ನಮಗೆ ಸಹಕರಿಸಲಿಲ್ಲ. ಹೀಗಾಗಿ ವಿಡಿಯೋ ಮಾಡಿ, ಅವರ ನೆರವಿಗೆ ಸ್ನೇಹಿತರೆಲ್ಲರೂ ಬರುವಂತೆ ಕೇಳಿಕೊಂಡಿದ್ದೇವೆ.

- ಸುನೀಲ್ ಆಚಾರ್ಯ, ರಾಂಧವ ಚಿತ್ರ ನಿರ್ದೇಶಕ

ವಿಡಿಯೋ ನೋಡಿ ನನಗೆ ನೋವಾಯಿತು. ವೆಂಕಟ್‌ ಅವರನ್ನು ಬಲವಂತವಾಗಿಯಾದರೂ ಕರೆತರಬೇಕಿತ್ತು. ನೀವು ತಪ್ಪು ಮಾಡಿದ್ದೀರಿ ಎಂದು ನಾನು ನಮ್ಮ ತಂಡಕ್ಕೆ ಹೇಳಿದ್ದೇನೆ. ಆದರೆ ಅವರು ನಮ್ಮ ತಂಡದೊಂದಿಗೆ ಬರುವ ಸ್ಥಿತಿಯಲ್ಲಿ ಇರಲಿಲ್ಲವಂತೆ. ಈಗ ನಮ್ಮ ಸ್ನೇಹಿತರು ಚೆನ್ನೈನಲ್ಲಿ ವೆಂಕಟ್‌ ಅವರನ್ನು ಹುಡುಕುತ್ತಿದ್ದಾರೆ. ಅವರು ಸಿಕ್ಕಿದ ತಕ್ಷಣ ನಮ್ಮ ತಂಡದಿಂದ ಆಗುವ ನೆರವನ್ನು ನಾವು ಅವರಿಗೆ ನೀಡುತ್ತೇವೆ. ಈಗಾಗಲೇ ನಾವು ಅವರ ಕುಟುಂಬಸ್ಥರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೇವೆ.

- ಭುವನ್‌ ಪೊನ್ನಣ್ಣ, ನಟ