ಹಾವೇರಿಯ ಮಾಗಾವಿ ಚಿತ್ರಮಂದಿರದಲ್ಲಿ 'ಪ್ರೇಮದ ಊರಲಿ' ಸಿನಿಮಾ ಟಿಕೆಟ್‌ಗಾಗಿ ಮಹಿಳೆಯರ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದಿದೆ. ಮತ್ತೊಂದೆಡೆ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 105 ಕೋಟಿ ರೂ. ಗಳಿಸಿ ದಾಖಲೆ ಬರೆದಿದ್ದು, ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.
ಹಾವೇರಿ: 'ಪ್ರೇಮದ ಊರಲಿ' ಸಿನಿಮಾ ಭರ್ಜರಿ ಸಕ್ಸಸ್ ಕಾಣ್ತಿದೆ. ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಿರೋರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬಹುತೇಕ ಥಿಯೇಟರ್‍ಗಳು ಹೌಸ್‌ಫುಲ್ ಆಗಿವೆ. ಲೇಟೆಸ್ಟ್ ವಿಚಾರ ಏನಂದರೆ.. ಹಾವೇರಿಯಲ್ಲಿ ಸಿನಿಮಾ ಟಿಕೆಟ್‌ಗಾಗಿ ಬಿಗ್ ಫೈಟ್ ನಡೆದಿದೆ.
ಮಹಿಳೆಯರ ಮಧ್ಯೆ ಟಿಕೆಟ್‌ಗಾಗಿ ದೊಡ್ಡ ಗಲಾಟೆಯೇ ಆಗಿದೆ.. ಹಾವೇರಿಯ ಮಾಗಾವಿ ಚಿತ್ರಮಂದಿರದ ಮುಂದೆ ಮಹಿಳೆಯರು ಕಿತ್ತಾಟ ನಡೆಸಿದ್ದಾರೆ. ಮಹಿಳೆಯರು ತಮ್ಮ ಪತಿಯನ್ನು ಕರೆದುಕೊಂಡು ಸಿನಿಮಾ ಥಿಯೇಟರ್‍ಗೆ ಬಂದಿದ್ದರು. ಟಿಕೆಟ್ ಖರೀದಿಗಾಗಿ ಲೈನ್‌ನಲ್ಲಿ ನಿಂತಾಗಿ ಏನೋ ಕಿರಿಕ್ ಆಗಿದೆ.
ನೂರಾರು ಜನರ ಮಧ್ಯೆ ಮಹಿಳೆಯರು ದೊಡ್ಡದಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆಸಿ ಮನಸ್ಸೋ ಇಚ್ಛೆ ಬೈಯ್ದಾಡಿಕೊಂಡಿದ್ದಾರೆ. ಅದೂ ಸಾಲದಕ್ಕೆ ಕೈಕೈ ಮಿಲಾಯಿಸಿದ್ದಾರೆ. ಮುಖ ಪರಚಿಕೊಂಡಿದ್ದಾರೆ. ಈ ವೇಳೆ ಓರ್ವ ಮಹಿಳೆಯ ಮಾಂಗಲ್ಯ ಸರ ಕಿತ್ತುಬಂದಿದೆ. ಆಗ ಮಹಿಳೆಯ ನಡುವಿನ ಕಿತ್ತಾಟ ಮತ್ತಷ್ಟು ಜೋರಾಗಿದೆ.
ಹೀಗೆ ಗಲಾಟೆ ನಡೆಯುತ್ತಿದ್ದಾಗ ಅಲ್ಲಿಂದ ಕೆಲವು ಸಮಾಧಾನಪಡಿಸಲು ಎಂಟ್ರಿಯಾಗಿದ್ದರು. ಅವರ ಮಾತನ್ನೂ ಕೇಳದೇ ಜೋರಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಸಿನಿಮಾ ಥಿಯೇಟರ್ ಮುಂದೆ ಹೈಡ್ರಾಮಾ ಸೃಷ್ಟಿಯಾಗಿತ್ತು. ಗಲಾಟೆ ಜೋರಾದ ಹಿನ್ನೆಲೆಯಲ್ಲಿ ಮಹಿಳೆಯರ ಪತಿಯರು ಅಸಹಾಯಕರಾಗಿ ನಿಲ್ಲುವಂತೆ ಮಾಡಿತ್ತು. ಕೊನೆಗೆ ಸಿನಿಮಾ ನೋಡದೇ ವಾಪಸ್ ಹೋಗಿದ್ದಾರೆ ಎಂದು ವರದಿಯಾಗಿದೆ.
ಕಲೆಕ್ಷನ್‌ನಲ್ಲಿ ದಾಖಲೆ
ಕನ್ನಡ ಚಿತ್ರರಂಗದಲ್ಲಿ ಸಣ್ಣ ಬಜೆಟ್‌ನ ಸಿನಿಮಾವೊಂದು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ದಾಖಲೆ ಬರೆದಿದೆ. ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಶೋ ಪಡೆಯುವುದಕ್ಕೂ ಪರದಾಡಿದ್ದ ‘ಪ್ರೇಮದ ಊರಲ್ಲಿ’ ಸಿನಿಮಾ ಈಗ ವಿಶ್ವಾದ್ಯಂತ ಸುಮಾರು ₹105 ಕೋಟಿ ಗಳಿಸಿ, ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ ಎಂದು ವರದಿಯಾಗಿದೆ. ವಿಶೇಷವೆಂದರೆ.. ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಮತ್ತು ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾಗಳ ಕಲೆಕ್ಷನ್ ಅನ್ನೂ ಈ ಚಿತ್ರ ಹಿಂದಿಕ್ಕಿದೆ ಎನ್ನಲಾಗಿದೆ.
ಚಿತ್ರರಂಗದ ಬಾಕ್ಸ್ ಆಫೀಸ್ ಮಾಹಿತಿ ನೀಡುವ Sacnilk ಪ್ರಕಾರ..‘ಪ್ರೇಮದ ಊರಲ್ಲಿ’ ಸಿನಿಮಾ ವಿಶ್ವಾದ್ಯಂತ ₹102.19 ಕೋಟಿ ಗಳಿಸಿತ್ತು. 27ನೇ ದಿನವೂ ₹2.37 ಕೋಟಿ ಗಳಿಕೆ ಕಂಡಿದ್ದು, ಒಟ್ಟು ಕಲೆಕ್ಷನ್ ₹105 ಕೋಟಿಯ ಸಮೀಪಕ್ಕೆ ತಲುಪಿದೆ ಎಂದು ವರದಿಯಾಗಿದೆ. 26ನೇ ದಿನ ಭಾರತದಲ್ಲಿ 943 ಶೋಗಳ ಮೂಲಕ ₹4.25 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದರೆ, ವಿದೇಶಗಳಲ್ಲಿ ₹20 ಲಕ್ಷ ಗಳಿಸಿತ್ತು. ಆ ದಿನದ ಒಟ್ಟು ಗಳಿಕೆ ₹4.45 ಕೋಟಿ ಆಗಿತ್ತು. ಚಿತ್ರಕ್ಕೆ ಸುಮಾರು ಶೇ.72ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, ಈವರೆಗೆ 57 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸಿನಿಮಾ ವೀಕ್ಷಿಸಿದ್ದಾರೆ ಎನ್ನಲಾಗಿದೆ. ಈ ಅಂಕಿಅಂಶಗಳು ಚಿತ್ರದ ಮೂಲ ಕನ್ನಡ ಆವೃತ್ತಿಗೆ ಸಂಬಂಧಿಸಿವೆ. ಕನ್ನಡದಲ್ಲಿ ಸಿಕ್ಕಿರುವ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ತೆಲುಗಿನಲ್ಲಿ ‘ಪ್ರೇಮನೆ ಊರಿಲೋ’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ. ತಮಿಳು, ಮಲಯಾಳಂ ಮತ್ತು ಹಿಂದಿ ಡಬ್ಬಿಂಗ್ ಆವೃತ್ತಿಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.


