ಮಂಡ್ಯ[ಡಿ.30]: ತಿಥಿ ಸಿನಿಮಾ ಮೂಲಕ ಗಡ್ಡಪ್ಪ ಎಂದೇ ಹೆಸರುವಾಸಿಯಾದ ಮಂಡ್ಯದ ಚನ್ನೇಗೌಡರ ಆರೋಗ್ಯದಲ್ಲಿ ಏರುಪೇರಾಗಿದೆ. ತನ್ನ ಡೈಲಾಗುಗಳಿಂದಲೇ ಫೇಮಸ್ ಆದ ಗಡ್ಡಪ್ಪ ಪಾರ್ಶ್ವವಾಯುವಿಗೆ ತುತ್ತಾಗಿ, ಮಾತನಾಡಲಾಗದೆ ಸಂಕಟ ಪಡುತ್ತಿದ್ದಾರೆ.

ಇಟ್ಟಿಗೆ ಫ್ಯಾಕ್ಟರಿ, ಟೀ ಅಂಗಡಿ ಎಂದು ಕೆಲಸ ಮಾಡಿಕೊಂಡು ಆರೋಗ್ಯವಂತರಾಗಿದ್ದ ಗಡ್ಡಪ್ಪರವರಿಗೆ ತಿಥಿ ಸಿನಿಮಾ ಶೂಟಿಂಗ್ ವೇಳೆ ಹಾರ್ಟ್ ಅಟ್ಯಾಕ್ ಆಗಿತ್ತು. ಇದಾದ ಹೃದಯ ರೋಗಕ್ಕೆ ಚಿಕಿತ್ಸೆ ಮುಂದುವರೆದಿದ್ದು, ಬಳಿಕ ನರರೋಗದ ಸಮಸ್ಯೆಯೂ ಇವರನ್ನು ಕಾಡಿತ್ತು. ಅದರೀಗ ಸಮಸ್ಯೆ ಉಲ್ಬಣಿಸಿದ್ದು, ಗಡ್ಡಪ್ಪರಿಗೆ ಮಾತನಾಡಲೂ ಸಾಧ್ಯವಾಗುತ್ತಿಲ್ಲ. ಗಡ್ಡಪ್ಪಗೆ ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಸದ್ಯ ವೈದ್ಯರ ಸಲಹೆಯಂತೆ ಕುಟುಂಬಸ್ಥರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು‌ಇಪ್ಪತ್ತು ದಿನ ಬೆಡ್‌ ರೆಸ್ಟ್ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

2016ರಲ್ಲಿ ರಾಮ್ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ತಿಥಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಂಡ್ಯದ ಸಾಮಾನ್ಯ ವ್ಯಕ್ತಿ ಚನ್ನೇಗೌಡರು ಬಳಿಕ ಗಡ್ಡಪ್ಪ ಎಂದೇ ಪ್ರಸಿದ್ಧರಾದರು. ಮೇಕಪ್ ಇಲ್ಲದೇ, ಸಾಮಾನ್ಯವಾಗಿ ನಟಿಸಿದ್ದ ಅವರ ನಟನೆ ಜನರಿಗೆ ಬಹಳ ಇಷ್ಟವಾಗಿತ್ತು.

ಆದರೆ ತಿಥಿ ಸಿನಿಮಾದ ಬಳಿಕ ಅವರ ಯಾವ ಸಿನಿಮಾವೂ ಯಶಸ್ಸು ಕಾಣದಿರುವುದರಿಂದ ಚಿತ್ರರಂಗವೂ ದೂರ ಸರಿಯಿತು. ಇದೀಗ ಚಿಕಿತ್ಸೆಗೆ ಹಣವಿಲ್ಲದೇ ಗಡ್ಡಪ್ಪ ಕುಟುಂಬ ಪರದಾಡುತ್ತಿದೆ.