* ಇನ್ನೂ ಹೆಸರಿಟ್ಟಿಲ್ಲ, ಕನ್ನಡ-ತೆಲುಗಲ್ಲಿ ನಿರ್ಮಾಣ: ಕುಮಾರಸ್ವಾಮಿ* ಬೆಂಗಳೂರಿನಲ್ಲಿ ಚಿತ್ರಕತೆಗೆ ಪೂಜೆ, ಜೂನ್‌'ನಿಂದ ಶೂಟಿಂಗ್‌ ಶುರು

ಬೆಂಗಳೂರು(ಏ. 03): ‘ಜಾಗ್ವಾರ್‌' ಚಿತ್ರದ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರ್‌ ನಾಯಕನಾಗಿ ಅಭಿನ​ಯಿಸುತ್ತಿರುವ ಎರಡನೇ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಭಾನುವಾರ ನಗರದ ಪಂಚತಾರಾ ಹೋಟೆಲ್‌'ನಲ್ಲಿ ಹೊಸ ಚಿತ್ರದ ಕತೆಗೆ ಅದ್ಧೂರಿಯಾಗಿ ಪೂಜೆ ನೆರವೇರಿದೆ. ಇನ್ನೂ ಹೆಸರು ಅಂತಿಮವಾ​ಗದ ಈ ಚಿತ್ರಕ್ಕೆ ಯುವ ನಿರ್ದೇಶಕ ಚೇತನ್‌ ಕುಮಾರ್‌ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದು, ಚೆನ್ನಾಂಬಿಕಾ ಸಂಸ್ಥೆಯ 7ನೇ ಚಿತ್ರವಾಗಿ ಇದು ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣವಾಗುತ್ತಿದೆ.

ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಸೇರಿದಂತೆ ಚಿತ್ರದ ನಿರ್ಮಾಣಕ್ಕೆ ಪೂರಕ​ವಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡ ನಂತರ ಜೂನ್‌ ಮೊದಲ ವಾರ ಈ ಚಿತ್ರಕ್ಕೆ ಮುಹೂರ್ತ ನಡೆಯಲಿದೆಯಂತೆ. ಅಂದಿ​ನಿಂದಲೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ರಾಜಸ್ಥಾನದಲ್ಲಿ ಒಂದು ವಾರ ನಡೆಯುವ ಚಿತ್ರೀಕರಣ ಹೊರತುಪ​ಡಿಸಿದರೆ, ಬಹುತೇಕ ಚಿತ್ರೀಕರಣ ರಾಜ್ಯ​ದ ವಿವಿಧೆಡೆಗಳಲ್ಲಿನ ಸುಂದರ ತಾಣಗಳಿಗೆ ಫಿಕ್ಸ್‌ ಆಗಿದೆ. ಆರು ತಿಂಗಳಲ್ಲಿ ಸಂಪೂರ್ಣ​ವಾಗಿ ಚಿತ್ರೀಕರಣ ಮುಗಿಸಿಕೊಂಡು ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಚಿಂತನೆ ಚಿತ್ರತಂಡಕ್ಕಿದೆ.

ಎಚ್‌.ಡಿ.ಕುಮಾರಸ್ವಾಮಿ ಮಾತ​ನಾಡಿ, ‘ನಿಖಿಲ್‌ ಅಭಿನಯದ ಮೊದಲ ಚಿತ್ರ ಕನ್ನಡದ ನೇಟಿವಿಟಿಗೆ ಹತ್ತಿರ​ವಾಗಿರಲಿಲ್ಲ. ತಾಂತ್ರಿಕವಾಗಿ ಚೆನ್ನಾಗಿತ್ತಾ​ದರೂ, ಕತೆಯಲ್ಲಿ ಇಲ್ಲಿನ ಸೊಗಡು ಕಾಣಲಿಲ್ಲ ಎನ್ನುವ ಸಾಕಷ್ಟು ಮಾತುಗಳು ಪ್ರೇಕ್ಷಕರ ಕಡೆಯಿಂದ ಕೇಳಿಬಂದಿದ್ದವು. ಆ ಕಾರಣಕ್ಕಾಗಿಯೇ ಈಗ ಶುದ್ಧ ಕನ್ನಡದ ಚಿತ್ರ ಮಾಡುತ್ತಿದ್ದೇವೆ. ‘ಜಾಗ್ವಾರ್‌' ನಂತರ ತೆಲುಗಿನ ಸುಧೀರ್‌ ರೆಡ್ಡಿ, ಪೂರಿ ಜಗನ್ನಾಥ್‌ ಹಾಗೂ ಕೊರಟಾಲ ಶಿವ ಅವರ ಜತೆಗೆ ಸಿನಿಮಾ ಮಾಡಬೇಕೆನ್ನುವ ಚಿಂತನೆಗಳು ನಡೆದಿದ್ದವು. ಪುರಿ ಜಗ​ನ್ನಾಥ್‌ ಬಳಿ ನಿಖಿಲ್‌ ಮೂರು ಕತೆ ಕೇಳಿದ್ದರು. ಆದರೆ ಶುದ್ಧ ಕನ್ನಡದ ಚಿತ್ರ ಮಾಡಬೇಕೆನ್ನುವ ಕಾರಣಕ್ಕೆ ಆ ಎಲ್ಲ ಪ್ರಯತ್ನಗಳನ್ನು ಅರ್ಧದಲ್ಲಿಯೇ ನಿಲ್ಲಿಸಿ, ನಿಖಿಲ್‌ ಕನ್ನಡದ ನಿರ್ದೇಶಕರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಆಯ್ಕೆ ನನಗೆ ತುಂಬಾ ಖುಷಿ ತಂದಿದೆ. ಚಿತ್ರದಲ್ಲಿ ಶೇ.95ರಷ್ಟುಭಾಗ ಕಲಾವಿದರು ಕನ್ನಡ​ದವರೇ ಇರುತ್ತಾರೆ. ತಂತ್ರಜ್ಞರಂತೂ ಪೂರ್ಣ ಪ್ರಮಾಣದಲ್ಲಿ ಕನ್ನಡದವರೇ ಆಗಿರುತ್ತಾರೆ. ಕತೆ ಇಲ್ಲಿನ ನೇಟಿವಿಟಿಗೆ ಹತ್ತಿರವಾಗಿಯೇ ಇರುತ್ತದೆ. ಚೆನ್ನಾಂಬಿಕಾ ಬ್ಯಾನರ್‌ನ ಹಿಂದಿನ ಚಿತ್ರಗಳ ಸೊಗಡು ಈ ಚಿತ್ರದಲ್ಲಿ ಕಾಣಲಿದೆ. ಪಕ್ಕಾ ಕೌಟುಂಬಿಕ ಚಿತ್ರವಾಗಿ ಇದು ಹೊಸ ಮೈಲುಗಲ್ಲು ಸೃಷ್ಟಿಸಲಿದೆ' ಎಂದರು.

ಚಿತ್ರಕ್ಕೆ ಇನ್ನೂ ಹೆಸರು ಫೈನಲ್‌ ಆಗಬೇಕಿದೆ. ಎರಡೂ ಭಾಷೆಗಳಲ್ಲೂ ಪ್ರತ್ಯೇಕವಾಗಿ ಟೈಟಲ್‌ ನೀಡುವ ಚಿಂತನೆ ಚಿತ್ರ ತಂಡಕ್ಕಿದೆ. ನಾಯಕಿ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಆಗಬೇಕಿದೆ. ನಾಯಕಿ ಪಾತ್ರಕ್ಕೆ ಕನ್ನಡದ ಹೊಸ ಪ್ರತಿಭೆಯೇ ಬಹುತೇಕ ಆಯ್ಕೆಯಾಗಲಿದ್ದಾರೆ. ಉಳಿದಂತೆ ಪೋಷಕ ಪಾತ್ರಗಳಿಗೂ ಕನ್ನಡದ ಕಲಾವಿದರೇ ಆಯ್ಕೆ ಆಗಲಿದ್ದಾರೆ. ಹರಿಕೃಷ್ಣ ಸಂಗೀತ, ಶ್ರೀಶೈಲ ಕೂದುವಳ್ಳಿ ಛಾಯಾಗ್ರಹಣ, ಇಮ್ರಾನ್‌ ಸರ್ದಾರಿಯಾ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸಮಾರಂಭದಲ್ಲಿ ಸಿ.ಆರ್‌. ಮನೋಹರ್‌, ಕೆ. ಮಂಜು, ಸುರೇಶ್‌, ಲಹರಿ ವೇಲು, ಎ.ಪಿ. ಅರ್ಜುನ್‌, ಪವನ್‌ ಒಡೆಯರ್‌, ಭಾಷಾ ಹಾಜರಿದ್ದರು.

ಕನ್ನಡಪ್ರಭ ವಾರ್ತೆ
epaper.kannadaprabha.in