Asianet Suvarna News Asianet Suvarna News

ತಮನ್ನಾ ಹಾಡೇ ಬೇಡ ಎಂದಿದ್ದೆ! : ಕತೆ ಬದಲಾವಣೆಯ ಡಜನ್ ಸತ್ಯ ಬಿಚ್ಚಿಟ್ಟ ಹೆಚ್'ಡಿಕೆ

ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಎಲ್ಲ ಸಂಗತಿಗಳನ್ನೂ ಖಡಕ್ಕಾಗಿಯೇ ವಿಮರ್ಶಿಸುವವರು. ಅವರೆಂದೂ ಆತ್ಮರತಿಗೆ ಪ್ರಾಮುಖ್ಯ ನೀಡುವವರಲ್ಲ. ಅದೇ ರೀತಿ ಈಗ ಮಗ ನಿಖಿಲ್ಜಾಗ್ವಾರ್ ಚಿತ್ರದ ನಿರ್ಮಾಣದ ವೇಳೆಯಾದ ಸಂಗತಿಗಳನ್ನು ನಿಷ್ಠುರವಾಗಿ ಬಿಚ್ಚಿಟ್ಟಿದ್ದಾರೆ. ಇದ್ದಕ್ಕಿದ್ದಂತೆ ಬರುವ ತಮನ್ನಾ ಹಾಡು, ಹೊಸತಲ್ಲದ ಕತೆ, ಅದ್ಧೂರಿ ಬಜೆಟ್ಟಿನ ಮೇಲಿನ ಪ್ರೀತಿ- ಇವೆಲ್ಲದರ ಬಗ್ಗೆ ಎಚ್ಡಿಕೆ ಇಲ್ಲಿ ಖಡಕ್ಕಾಗಿಯೇ ಹೇಳಿಕೊಂಡಿದ್ದಾರೆ.

HDK Reveal jaguar movie fact

ಜಾಗ್ವಾರ್‌ನ ಡಜನ್ ಕಟುಸತ್ಯಗಳು

1. ನಾನು ‘ಜಾಗ್ವಾರ್’ ಅನ್ನು ನೋಡಿದ್ದು ಮುಕ್ಕಾಲು ಭಾಗ ಶೂಟಿಂಗ್ ಮುಗಿದ ಮೇಲೆ. ಅಲ್ಲಿ ತಾಯಿಯ ಪಾತ್ರವೇ ಇರದಿದ್ದನ್ನು ನೋಡಿ ಶಾಕ್ ಆಯಿತು. ನಿರ್ದೇಶಕ, ಕತೆಗಾರನನ್ನು ಕರೆದು ಕೇಳಿದೆ, ‘ಏನ್ರಪ್ಪಾ ತಾಯಿಯ ಪಾತ್ರವೇ ಇಲ್ವಲ್ಲ?’. ‘ಸೆಂಟಿಮೆಂಟ್ ಈ ಜನರೇಷನ್‌ಗೆ ಆಗಿಬರೋದಿಲ್ಲ’ ಅಂದ್ರು. ನಾನು ಪ್ರತಿಯಾಗಿ ವಾದಿಸಿ, ತಾಯಿ ಪಾತ್ರ ಇರಲೇಬೇಕೆಂದು ಸೂಚಿಸಿದೆ. ರಮ್ಯಾಕೃಷ್ಣ ಬಳಿ ಮಾತನಾಡಿ, ತಾಯಿಯ ಪಾತ್ರವನ್ನು ಸೃಷ್ಟಿಸಿದ್ದು ನಾನೇ.

2. ತಮನ್ನಾಳನ್ನು ಕರೆಸಬೇಕೋ ಬೇಡವೋ ಎಂಬುದರ ಬಗ್ಗೆ ನಮ್ಮ ಕುಟುಂಬದಲ್ಲೇ ಚರ್ಚೆಗಳಾದವು. ಕೆಲವರು ಬೇಡ ಅಂತಲೇ ಹೇಳಿದರು. ನಾನು ಕೂಡ ‘ಈ ಹಾಡು ಬೇಡ್ವೇ ಬೇಡ’ ಎಂದಿದ್ದೆ. ತೆಲುಗು ಮಾರ್ಕೆಟಿಗೋಸ್ಕರ ತಮನ್ನಾ ಹಾಡು ಇರಲಿಯೆಂದು ಒತ್ತಾಯಿಸಿ ಈ ಡ್ಯಾನ್ಸನ್ನು ಸೇರಿಸಲಾಗಿದೆ.  75 ಲಕ್ಷ ವೆಚ್ಚದಲ್ಲಿ ಮೂಡಿಬಂದಿರುವ ತಮನ್ನಾ ಹಾಡು ಕಾರಣವಿಲ್ಲದೆ ಬಂದಿದೆ. ಆ ಹಾಡಿಗೆ ಲಿಂಕ್ ಇರುವ ದೃಶ್ಯಗಳಿಗೆ ಕತ್ತರಿ ಹಾಕಿದ್ದೇ ಈ ದೋಷಕ್ಕೆ ಕಾರಣ.

3. ಕೆಲವು ಪತ್ರಿಕೆಗಳಲ್ಲಿ ‘ಇಂಥ ಕತೆ ಮಾಡೋದಿಕ್ಕೆ ವಿಜಯೇಂದ್ರ ಪ್ರಸಾದ್ ಅವರೇ ಬೇಕಾ?’ ಎಂದು ಬರೆದಿದ್ದಾರೆ. ಆದರೆ, ಪೂರ್ತಿ ಕತೆ ವಿಜಯೇಂದ್ರ ಪ್ರಸಾದ್ ಅವರದ್ದಲ್ಲ! ಅವರು ಒಂದು ಸಾಲಿನ ಕತೆ ಹೇಳಿದ್ದಷ್ಟೇ. ನಂತರ ನಾವೇ ಕುಳಿತು ಚಿತ್ರಕತೆ ಮಾಡಿಕೊಂಡೆವು!

4. ‘ಜಾಗ್ವಾರ್’ ಚಿತ್ರಕ್ಕೆ  60 ಕೋಟಿ ವೆಚ್ಚ ಮಾಡಿದ್ದೇವೆ ಎನ್ನುತ್ತಿದ್ದಾರೆ. ನಿಜ ಹೇಳಬೇಕಂದ್ರೆ, ಚಿತ್ರಕ್ಕೆ ಖರ್ಚಾಗಿರೋದು ಕೇವಲ  35 ರಿಂದ 38 ಕೋಟಿ! ಅದು ಕೂಡ ಎರಡೂ ಭಾಷೆಗೆ ಒಟ್ಟು ಸೇರಿ.

5. ನಿಖಿಲ್ ಡೈಲಾಗ್ ಡೆಲಿವರಿ ಚೆನ್ನಾಗಿ ಮೂಡಿಬರಬೇಕಿತ್ತು. ಆದರೆ, ಅವನಿಗೆ ಡಬ್ಬಿಂಗ್‌ಗೆ ಬೇಕಾದಷ್ಟು ಟೈಮ್ ಕೊಟ್ಟಿಲ್ಲ. ಧ್ರುವ ಸರ್ಜಾ ಅಂಥವರೇ ತಮ್ಮ ‘ಬಹದ್ದೂರ್’ ಚಿತ್ರಕ್ಕೆ ಡಬ್ಬಿಂಗ್‌ಗೆ 1 ತಿಂಗಳು ಟೈಮ್ ತೆಗೆದುಕೊಂಡಿದ್ದರು. ಆದರೆ, ಇಲ್ಲಿ ನಿಖಿಲ್ ಡಬ್ಬಿಂಗ್ ಮಾಡಿದ್ದು ಕೇವಲ ನಾಲ್ಕೇ ದಿನದಲ್ಲಿ! ಮೇಕಿಂಗ್ ವಿಚಾರದಲ್ಲಿ ಕೆಲವು ಸಂಗತಿಗಳು ನನ್ನ ನಿಯಂತ್ರಣದಲ್ಲೇ ಇರ್ಲಿಲ್ಲ!

6. ‘ಸೂರ್ಯವಂಶ’, ‘ಚಂದ್ರಚಕೋರಿ’ ಚಿತ್ರದಂತೆ ಇಲ್ಲೂ ಮಧುರ ಹಾಡುಗಳನ್ನು ಸೇರಿಸಬೇಕೆಂದು ಸಲಹೆ ಕೊಟ್ಟೆ. ‘ಸಾರ್ ಸಿನಿಮಾ ಉದ್ದ ಆಗುತ್ತೆ. 2 ಗಂಟೆ ಮೇಲೆ ಯಾರೂ ಸಿನಿಮಾ ನೋಡಲ್ಲ’ ಎಂಬ ಮಾತು ಕೇಳಬೇಕಾಯಿತು. ಆದರೆ, ‘ಧೋನಿ’ ಸಿನಿಮಾ ಎಷ್ಟು ಗಂಟೆ ಇದೆ? ಅದು ಸುದೀರ್ಘವಾಗಿದ್ದರೂ ಜನ ಮುಗಿಬಿದ್ದು ನೋಡಿದ್ದಾರಲ್ಲ! ಪರಭಾಷಾ ಚಿತ್ರವನ್ನು 3 ಗಂಟೆಯಾದ್ರೂ ನೋಡ್ತಾರೆ, ಕನ್ನಡದಲ್ಲಿ ನೋಡೋಲ್ಲ ಎನ್ನುವ ವಾದ ಸುಳ್ಳು. ಇದನ್ನು ನಮ್ಮ ಚಿತ್ರತಂಡ ಒಪ್ಪಿಕೊಳ್ಳಲೇ ಇಲ್ಲ!

7. ‘ಕಾಲೇಜಿನ ಹಾಡಿಗೆ 500 ಡ್ಯಾನ್ಸರ್ ಬೇಕು’ ಅಂದ್ರು. ನಾನು ‘ಯಾಕೆ ಅಷ್ಟೊಂದು ಜನ? ನೀವು ಅಷ್ಟೂ ಡ್ಯಾನ್ಸರ್‌ಗಳನ್ನು ತೆರೆಮೇಲೆ ತೋರಿಸ್ತೀರಾ?’ ಅಂತ ಕೇಳಿದೆ. ಬೇರೆ ದಾರಿ ಇಲ್ಲದೆ ಮುಂಬೈ, ಕೇರಳ, ತಮಿಳುನಾಡು, ಹೈದರಾಬಾದ್- ಹೀಗೆ ಎಲ್ಲ ಕಡೆಯಿಂದ 500 ಡ್ಯಾನ್ಸರ್‌ಗಳನ್ನು ಕರೆಸಿದೆ.

8. ನಟನೆ ವಿಚಾರಕ್ಕೆ ಬಂದರೆ ನಿಖಿಲ್ ಡ್ಯಾನ್ಸ್, ೈಟ್ ಓಕೆ. ಆದರೆ, ಅಭಿನಯ ಇನ್ನಷ್ಟು ಮಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಮುಂದೆ ಕಲಿಯುತ್ತಾನೆಂಬ ನಂಬಿಕೆ ಮತ್ತು ಭರವಸೆ ಇದೆ.

9. ನನ್ನ ಪ್ಲಾನ್ ಪ್ರಕಾರ, ‘ಜಾಗ್ವಾರ್’ ಚಿತ್ರೀಕರಣ 90 ದಿನಗಳಲ್ಲಿ ಮುಗಿಯಬೇಕಿತ್ತು. ಚಿತ್ರದ ಮೊದಲ ಪ್ರತಿಯೇ 90 ದಿನದಲ್ಲಿ ಬಂದರೆ ನಿರ್ಮಾಪಕ ಸ್ೇ. ಆದರೆ, ಶೂಟಿಂಗ್ ಶೆಡ್ಯೂಲ್ ಅನ್ನೇ 170 ದಿವಸ ಮಾಡಿದ್ದಾರೆ! ಹೀಗಾಗಿ ಬಜೆಟ್ ಜಾಸ್ತಿ ಆಯಿತು. ನಮ್ಮ ನಿರೀಕ್ಷೆಗೂ ಮೀರಿ ಅನಗತ್ಯವಾಗಿ ಹಣ ವೆಚ್ಚವಾಯಿತು. ಈಗಿನ ಜನರೇಷನ್‌ಗೆ ಪ್ರೊಡಕ್ಷನ್ ಕಂಟ್ರೋಲ್ ಇಲ್ಲ ಎಂಬುದಕ್ಕೆ ಇದು ಸಾಕ್ಷಿ.

10. ಮೊದಲ ವಾರದಲ್ಲೇ ಹಾಕಿರುವ ಹಣ ಬಂದಿದೆ ಎಂದು ಹೇಳಲಾರೆ. ಇನ್ನೂ ನಾಲ್ಕೈದು ವಾರ ಸಿನಿಮಾ ಹೌಸ್‌ುಲ್ ಆದರೆ, ನಾನು ಹಾಕಿರುವ ಬಜೆಟ್ ಬರುತ್ತೆ. ಯಾಕೆಂದರೆ ನಾನು ಸಾಲ ಮಾಡಿಯೇ ಸಿನಿಮಾ ಮಾಡಿದ್ದು!

11. ನಮ್ಮ ನಿರ್ದೇಶಕರು, ತಂತ್ರಜ್ಞರು ತಮ್ಮ ಕೆಲಸವನ್ನು ವೇಗದಲ್ಲಿ ಮಾಡಲಿಲ್ಲ. ಹಾಗಂತ ಅವರೊಂದಿಗೆ ಜಗಳವಾಡಲು ನಾನು ಹೋಗಲಿಲ್ಲ. ನಾನೇ ರಾಜಿ ಮಾಡಿಕೊಂಡೆ. ಯಾಕೆಂದರೆ ಮೊದಲ ಚಿತ್ರದಲ್ಲೇ ಗಲಾಟೆ ಮಾಡಿಕೊಂಡರೆ ನಿಖಿಲ್‌ಗೆ ತೊಂದರೆ ಆಗುತ್ತದೆಂಬ ಯೋಚನೆಯಲ್ಲಿ ರಾಜಿಯಾದೆ.

12 ಮುಂದಿನ ಸಿನಿಮಾ ಮಾಡುವಾಗ ಸರಿಯಾಗಿ ಪ್ಲಾನ್ ಮಾಡಿಕೊಳ್ಳುತ್ತೇನೆ. ಜಾಗ್ವಾರ್‌ನಲ್ಲಿ ಮಾಡಿದ ತಪ್ಪುಗಳನ್ನು ಮತ್ತೆ ಮಾಡೋದಿಲ್ಲ.  25- 28 ಕೋಟಿಯಲ್ಲಿ ಮುಗಿಸಬಹುದಾದ ಚಿತ್ರವನ್ನು  38 ಕೋಟಿ ವೆಚ್ಚ ಮಾಡಿಸಿದ್ದಾರೆ. ಮುಂದೆ ಈ ತಪ್ಪಾಗಲ್ಲ. ಮುಂದೆ ಯಾರೇ ಬಂದರೂ ಮೊದಲು ಕತೆ ಕೇಳಿ, ಕನ್ನಡ ಸಿನಿಮಾ ಮಾರುಕಟ್ಟೆ ಬಗ್ಗೆ ಹೇಳುತ್ತೇನೆ. ನಂತರವಷ್ಟೇ ಸಿನಿಮಾಕ್ಕೆ ಒಪ್ಪಿಗೆ ಕೊಡುತ್ತೇನೆ.

(ಕನ್ನಡ ಪ್ರಭ)

Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ

Follow Us:
Download App:
  • android
  • ios