ಮತ್ತೆರಡು ಚಿತ್ರ ಒಪ್ಪಿಕೊಂಡ ನೀರ್‌ದೋಸೆ ಹುಡುಗಿ
ಇದು ಹರಿಪ್ರಿಯಾ ಕಾಲ. ಈಗಾಗಲೇ ಅವರು ನಾಯಕಿ ಆಗಿ ಅಭಿನಯಿಸಿದ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ.
ಅದರ ಬೆನ್ನಲ್ಲೇ ಮತ್ತೆ ಎರಡು ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಒಂದು ಸೃಜನ್ ಲೋಕೇಶ್ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸಿ, ನಾಯಕರಾಗಿ ನಟಿಸುತ್ತಿರುವ ಪ್ರೇಮ ಕತೆ ‘ಎಲ್ಲಿದ್ದೆ ಇಲ್ಲಿ ತನಕ’. ಇನ್ನೊಂದು ಹರಿ ಸಂತೋಷ್ ನಿರ್ದೇಶನದ ಐತಿಹಾಸಿಕ ಸಿನಿಮಾ ‘ಬಿಚ್ಚುಗತ್ತಿ’. ಈ ಎರಡೂ ಚಿತ್ರಗಳಿಗೂ ಡಿ.9 ಮತ್ತು 10ರಂದು ಮುಹೂರ್ತ ಫಿಕ್ಸ್ ಆಗಿದೆ.
ಬಿಚ್ಚುಗತ್ತಿ’ಯಲ್ಲಿ ಸಿದ್ದಾಂಬೆ : ಹರಿ ಸಂತೋಷ್ ನಿರ್ದೇಶನದ ‘ಬಿಚ್ಚುಗತ್ತಿ’ ಚಿತ್ರದ ಮೊದಲ ಭಾಗ ದಳವಾಯಿ ದಂಗೆಯಲ್ಲಿ ‘ಸಿದ್ದಾಂಬೆ’ ಪಾತ್ರದಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಸಾಹಿತಿ ಬಿ.ಎಲ್. ವೇಣು ಬರೆದ ಕಾದಂಬರಿ ಆಧರಿಸಿದ ಚಿತ್ರ. ಭರಮಣ್ಣ ನಾಯಕ ಮತ್ತು ಸಿದ್ದಾಂಬೆ ಕುರಿತ ಕತೆಯೇ ಈ ಚಿತ್ರ. ಓಂ ಸಾಯಿ ಕೃಷ್ಣ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಡಿಂಗ್ರಿ ನಾಗರಾಜ ಪುತ್ರ ರಾಜವರ್ಧನ್ ನಾಯಕ.
‘ಹಿಸ್ಟಾರಿಕಲ್ ಸಿನಿಮಾದಲ್ಲಿ ಅಭಿನಯಿಸಬೇಕೆನ್ನುವುದು ನನ್ನ ಬಹು ದಿನದ ಆಸೆ. ಆ ಆಸೆ ಈಗ ಈಡೇರುತ್ತಿದೆ’ ಎನ್ನುತ್ತಾರೆ ಹರಿಪ್ರಿಯಾ. ಈ ಚಿತ್ರಕ್ಕೆ ಡಿ.14 ರಿಂದ ಚಿತ್ರೀಕರಣ ಶುರು.
ಸೃಜನ್ ಜತೆ ಹರಿಪ್ರಿಯಾ ಡ್ಯುಯೆಟ್: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಈಗ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತಂದೆ ಲೋಕೇಶ್ ಅಭಿನಯದ ಸಿನಿಮಾ ‘ಎಲ್ಲಿಂದಲೋ ಬಂದವರು’ ಚಿತ್ರದ ಪಾಪ್ಯುಲರ್ ಹಾಡು ‘ಎಲ್ಲಿದ್ದೆ ಇಲ್ಲಿ ತನಕ’ ಗೀತೆಯ ಸಾಲೇ ಈ ಚಿತ್ರದ ಟೈಟಲ್.