ಸೋನುಗೌಡನಿಂದ ಪ್ರೇರಿತರಾದ ಸ್ಕೂಲ್ ಗರ್ಲ್ಸ್: ಬೆನ್ನು ಹುಡಿ ಹಾರಿಸಿದ ಅಮ್ಮ: ವೈರಲ್ ವೀಡಿಯೋ
ಮಕ್ಕಳು ಫೇಮಸ್ ಆಗುವುದಕ್ಕಾಗಿ ಯಾವ ರೀತಿ ಪ್ರಭಾವಕ್ಕೊಳಗಾಗುತ್ತಾರೆ ಎಂದು ಪೋಷಕರನ್ನು ಎಚ್ಚರಿಸುವ ಸಲುವಾಗಿ ಒಬ್ಬರು ಹಾಸ್ಯಮಯವಾಗಿ ವೀಡಿಯೋವೊಂದನ್ನು ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇದು ಸಾಮಾಜಿಕ ಜಾಲತಾಣ ಯುಗ ಕೈಗೆ ಮೊಬೈಲ್ ಸಿಕ್ಕಿದ ಮೇಲೆ ಮಕ್ಕಳು ಏನು ಮಾಡುತ್ತಾರೋ ದೇವರಿಗೆ ಬಲ್ಲ, ಕೋವಿಡ್ ನಂತರ ಲಾಕ್‌ಡೌನ್ ಸಮಯದಲ್ಲಾದ ಆನ್‌ಲೈನ್ ಕ್ಲಾಸ್‌ನಿಂದಾಗಿ ಪ್ರತಿ ಮಕ್ಕಳ ಕೈಗೂ ಮೊಬೈಲ್ ಫೋನ್ ಬಂದಿದ್ದು, ಚಿಕ್ಕವರು ದೊಡ್ಡವರೆನ್ನದೇ ಎಲ್ಲರೂ ಮೊಬೈಲ್‌ಗೆ ದಾಸರಾಗಿದ್ದಾರೆ. ಈ ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರತಂದು ಅಧ್ಯಯನದಲ್ಲಿ ತೊಡಗಿಸುವುದೇ ಪೋಷಕರಿಗೆ ದೊಡ್ಡ ತಲೆವೋವಾಗಿದೆ. ಇದರ ಜೊತೆಗೆ ಮಕ್ಕಳು ಮೊಬೈಲ್ ಸಿಕ್ಕಿದ ನಂತರ ಮಂಗನ ಕೈಗೆ ಮಾಣಿಕ್ಯ ಸಿಕ್ಕಿದಂತೆ ಆಡುತ್ತಿದ್ದು, ಅಪ್ಪ ಅಮ್ಮನಿಲ್ಲದ ಸಮಯದಲ್ಲಿ ಮಕ್ಕಳು ಏನು ಮಾಡುತ್ತಾರೆ ಏನು ನೋಡುತ್ತಾರೆ ಎಂಬುದೇ ಪೋಷಕರ ದೊಡ್ಡ ಚಿಂತೆಗೆ ಕಾರಣವಾಗಿದೆ. ಈ ಮಧ್ಯೆ ಹೇಗಾದರೂ ಫೇಮಸ್ ಆಗಬೇಕು ಎಂಬ ಹುಚ್ಚು ಅನೇಕರನ್ನು ಅಡ್ಡ ದಾರಿ ಹಿಡಿಸುತ್ತಿದೆ. ಈ ಮಧ್ಯೆ ಕೆಲ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಒಳ್ಳೆಯದೋ ಕೆಟ್ಟದೋ ಒಟ್ಟಿನಲ್ಲಿ ಫೇಮಸ್ ಮಾತ್ರ ಆಗಬೇಕು ಎಂದು ಹಠಕ್ಕೆ ಬಿದ್ದು ಏನೇನೋ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಇವರು ಫೇಮಸ್ ಆಗುತ್ತಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ ನಟಿ ಸೋನು ಗೌಡ...
ಒಳ್ಳೆಯ ಕಾರ್ಯ, ಒಳ್ಳೆಯ ಉದ್ದೇಶಗಳನ್ನು ಹೊಂದಿರುವ ವೀಡಿಯೋಗಳು ಇಷ್ಟು ಫೇಮಸ್ ಆಗುವುದೋ ಇಲ್ಲವೋ ಆದರೆ ಸೋನುಗೌಡ (sonugowda) ಬಿಕಿನಿ ವೀಡಿಯೋ ಮಾತ್ರ ಊರೆಲ್ಲಾ ಮಾತನಾಡುವಂತೆ ಮಾಡಿ, ವೀಡಿಯೋಗೆ ಲಕ್ಷಗಟ್ಟಲೇ ವೀವ್ಸ್ (views) ನೀಡಿರುವುದು ಕಹಿ ಸತ್ಯ. ಈ ಮಧ್ಯೆ ಮಕ್ಕಳು ಫೇಮಸ್ ಆಗುವುದಕ್ಕಾಗಿ ಯಾವ ರೀತಿ ಪ್ರಭಾವಕ್ಕೊಳಗಾಗುತ್ತಾರೆ ಎಂದು ಪೋಷಕರನ್ನು ಎಚ್ಚರಿಸುವ ಸಲುವಾಗಿ ಒಬ್ಬರು ಹಾಸ್ಯಮಯವಾಗಿ ವೀಡಿಯೋವೊಂದನ್ನು ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಆಮೆಗೆ ಮುತ್ತಿಕ್ಕುವ ಚಿಟ್ಟೆಯ ಹಿಂಡು: ಈ ವಿಸ್ಮಯದ ಹಿಂದಿದೆ ವಿಶೇಷ: ವೀಡಿಯೋ ವೈರಲ್
ವೀಡಿಯೋದಲ್ಲೇನಿದೆ?
ತಮ್ಮ ವೀಡಿಯೋಗೆ ಅತೀ ಹೆಚ್ಚು ವೀವ್ಸ್ ಬರಬೇಕೆಂದು ಆಸೆಯಲ್ಲಿರುವ ಹಳ್ಳಿಯ ಹುಡುಗಿಯರಿಬ್ಬರು ಸೋನುಗೌಡ ಬಿಕಿನಿ ವೀಡಿಯೋಗೆ ಬಂದ ವೀವ್ಸ್ ನೋಡಿ ಫುಲ್ ಬೆರಗಾಗ್ತಾರೆ. ಅವಳಂತೆ ನಾವು ಫೇಮಸ್ ಆಗ್ಬೇಕು ಅಂತ ಆಕೆಯಂತೆ ವೀಡಿಯೋ ಮಾಡೋಣ ಅಂತ ಮಾತಾಡಿಕೊಳ್ಳುವ ಈ ಹುಡುಗಿಯರು ಮೊಬೈಲ್ ಫೋನ್ ಹಿಡಿದುಕೊಂಡು ಯಾರು ಇಲ್ಲದ ಜಾಗಕ್ಕೆ ಬರುತ್ತಾರೆ. ಇತ್ತ ಪ್ರಾಯಕ್ಕೆ ಬಂದ ಮಕ್ಕಳಿಬ್ಬರು ಕಪಿಗಳಂತೆ ಮೊಬೈಲ್ ಹಿಡಿದು ಆಡುವುದರಿಂದ ಇವರ ಮೇಲೆ ಕಣ್ಣಿಟ್ಟಿದ ತಾಯಿ ಇವರ ಮಾತನ್ನ ಕೇಳಿಸಿಕೊಂಡಿದ್ದಲ್ಲದೇ ಮನೆಯಲ್ಲಿದ್ದ ಪೊರಕೆ ತೆಗೆದುಕೊಂಡು ಇವರ ಹಿಂದೆಯೇ ಮೆಲ್ಲನೆ ಬಂದಿದ್ದಾರೆ. ಇತ್ತ ಅಮ್ಮ ಬಂದಿರುವುದನ್ನು ತಿಳಿಯದ ಈ ಮಕ್ಕಳಲ್ಲಿ ಒಬ್ಬಳು ವೀಡಿಯೋ ಮಾಡಲು ಶುರು ಮಾಡಿದ್ರೆ ಇನ್ನೊಬ್ಳು ಬಟ್ಟೆ ಬಿಚ್ಚಲು ರೆಡಿ ಆಗಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ತಲುಪಿದ ಅಮ್ಮ ಪೊರಕೆ ಹುಡಿಯಾಗುವಂತೆ ಮಕ್ಕಳಿಬ್ಬರಿಗೆ ಬಾರಿಸಿದ್ದಲ್ಲದೇ ಓದಿ ಅಂದ್ರೆ ನನ್ನ ಮರ್ಯಾದೆ ತೆಗೆತೀರಾ ಅಂತ ಬಾಯ್ ಬಾಯ್ ಬಡಿದುಕೊಂಡಿದ್ದಾಳೆ.
ಆಗಷ್ಟೇ ಹರೆಯಕ್ಕೆ ಕಾಲಿರಿಸಿರುವ ಟ್ರೆಂಡ್‌ಗೆ ತಕ್ಕಂತೆ ಫೇಮಸ್ ಆಗಲು ಬಯಸುವ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರಷ್ಟಕ್ಕೆ ಅವರನ್ನು ಬಿಟ್ಟರೆ ಏನು ಆಗಬಹುದು ಎಂಬುದನ್ನು ತೋರಿಸುವ ಉದ್ದೇಶದಿಂದ, ಜೊತೆಗೆ ಪೋಷಕರನ್ನು ಎಚ್ಚರಿಸುವ ದೃಷ್ಟಿಯಿಂದ ಈ ವೀಡಿಯೋವನ್ನು ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ್ತಿದೆ ಈ ವೀಡಿಯೋ... ಉಡುಪಿಯ ಬ್ರಹ್ಮಾವರ ಮೂಲದ ದೀಕ್ಷಾ ಎಂಬುವವರು ಈ ವೀಡಿಯೋ ಮಾಡಿದ್ದು, ಕುಂದಾಪ್ರ ಭಾಷೆಯಲ್ಲಿ (Kundapra Language) ವೀಡಿಯೋ ಇದೆ. ಇವರು ಮೂಲತಃ ಶಿಕ್ಷಕಿ, ಹಾಗೂ ಕಲಾವಿದೆ. ನಾಟಕಗಳಲ್ಲಿ ಕೂಡ ನಟನೆ ಮಾಡಿದ್ದಾರೆ.
ನಾನು ನಂದಿನಿ ಬೆಂಗ್ಳೂರು ಬಂದೀನಿ... ವಿಕಿಪೀಡಿಯಾ ಖ್ಯಾತಿಯ ವಿಕ್ಕಿ ಈ ಹಾಡು ಫುಲ್ ವೈರಲ್
ನೋಡುಗರ ಕಾಮೆಂಟ್ ಹೀಗಿದೆ.
ವೀಡಿಯೋ ನೋಡಿದ ಅನೇಕರು ಇದೊಂದು ಕಣ್ಣು ತೆರೆಸುವ ವೀಡಿಯೋ ಆಗಿದೆ ಎಂದಿದ್ದಾರೆ. ಮತ್ತೊಬ್ಬರು ಇದೇ ರೀತಿ ಸೋನುಗೌಡನ ಅಮ್ಮನೂ ಮಾಡ್ತಿದ್ರೆ ಆಕೆ ಹೀಗಾಗ್ತಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋದಿಂದ ನಿಮ್ಮ ವೀವ್ಸ್ ಕೂಡ ಫುಲ್ ಜಾಸ್ತಿಯಾಗುತ್ತೆ ನೋಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಇದು ಎಲ್ಲಾ ಪೋಷಕರಿಗೆ ನೀಡಬಹುದಾದ ಉತ್ತಮ ಸಂದೇಶ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.