ಟೆರರಿಸ್ಟ್ ಅಥವಾ ಟೆರರಿಸಂ ಎನ್ನುವ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದರೆ ಅದಕ್ಕೆ ಪೂರಕವಾಗಿ ಸಿಗುವ ಬೆಂಬಲಕ್ಕಿಂತ ಅಪಾಯವೇ ಹೆಚ್ಚು. 

ಯಾಕಂದ್ರೆ, ಇವತ್ತು ಟೆರರಿಸಂ ಅಥವಾ ಟೆರರಿಸ್ಟ್ ಎನ್ನುವ ಪದಗಳೇ ಬಹು ದೊಡ್ಡ ಕ್ರೌರ್ಯದ ರೂಪಕ. ಆ ಹೆಸರಲ್ಲೇ ಸಿನಿಮಾ ಮಾಡಲು ಹೊರಟರೆ ಒಂದು ರಕ್ತಪಾತ, ಇಲ್ಲವೇ ಬಾಂಬ್ ಸ್ಫೋಟದ ಭೀಭತ್ಸ ಎರಡೂ ಅಲ್ಲಿ ಇದ್ದೇ ಇರುತ್ತವೆ ಎನ್ನುವುದು ಸಹಜವಾದ ತಿಳಿವಳಿಕೆ. ಹಾಗಾಗಿಯೇ ಪಿ.ಸಿ. ಶೇಖರ್ ನಿರ್ದೇಶನದ ‘ದಿ ಟೆರರಿಸ್ಟ್’ ಚಿತ್ರದ ಒಟ್ಟು ಕಥಾ ಹಂದರದ ಬಗ್ಗೆಯೂ ಅಂತಹದೇ ಶಂಕೆಯಿತ್ತು. ಆದರೆ ಅದ್ಯಾವುದೂ ಚಿತ್ರದಲ್ಲಿ ಇಲ್ಲ. ಬದಲಿಗೆ ಟೆರರಿಸಂ ವಿರುದ್ಧ ತಣ್ಣಗೆ
ನಡೆಯುವ ಸೇಡಿನ ಸಮರದ ಕತೆಯನ್ನು ಅಮಾಯಕ ಹುಡುಗಿಯೊಬ್ಬಳ ಬದುಕಿನಲ್ಲಾದ ತಲ್ಲಣ, ಆಕ್ರೋಶ, ಭಾವುಕತೆ ಮತ್ತು ಬುದ್ಧಿವಂತಿಕೆಯೊಂದಿಗೆ ನೋಡುಗನ ಮನ ಮುಟ್ಟುವ ಹಾಗೆ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿ ಆಗಿದ್ದಾರೆನ್ನುವುದು ಈ ಚಿತ್ರದ ಮೊದಲ ವಿಶೇಷ. 

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಪೂರ್ಣ ಪ್ರಮಾಣದ ಟೆರರಿಸ್ಟ್ ಕತೆ. ಜಿಹಾದಿ ಹೆಸರಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳು ಹೇಗೆ ಜನರ ನೆಮ್ಮದಿ ಹಾಳು ಮಾಡುತ್ತವೆ, ಅಮಾಯಕ ವಿದ್ಯಾವಂತ ಯುವಕರನ್ನು ಟೆರರಿಸ್ಟ್‌ಗಳು ಹೇಗೆ ತಮ್ಮ ಜಾಲಕ್ಕೆ ಸಿಲುಕಿಸಿಕೊಂಡು ಬಾಂಬ್ ಸ್ಪೋಟದಂತಹ ದುಸ್ಕೃತ್ಯಗಳನ್ನು ಎಸಗಲು ಸಂಚು ರೂಪಿಸುತ್ತಾ ರೆನ್ನುವುದು ಕತೆಯ ಒಂದು ಎಳೆ. ಬೆಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಗಳು ಕತೆಗೆ ಪ್ರೇರಣೆ ಆಗಿವೆ. ಹಾಗಂತ ಅವುಗಳನ್ನು ಕತೆಗೆ ಬಳಸಿಕೊಂಡಿಲ್ಲ. ಬದಲಿಗೆ ಇಂಜಿನಿಯರಿಂಗ್ ಓದುತ್ತಿದ್ದ ಕಥಾ ನಾಯಕಿ ರೇಷ್ಮಾಳ ಸಹೋದರ ಸೈಯದ್ ತನಗರಿವಿಲ್ಲದ್ದಂತೆ ಟೆರರಿಸ್ಟ್‌ಗಳ ಕೈಗೆ ಸಿಲುಕುತ್ತಾನೆ. ಅಲ್ಲಿಂದ ಮುಂದೇನಾಗುತ್ತೆ ಎನ್ನುವುದನ್ನು ಕುತೂಹಲಕಾರಿ ಯಾಗಿ ತೋರಿಸುತ್ತದೆ ಈ ಸಿನಿಮಾ.

ಕತೆಯೇ ಹೀರೋ. ಅದರ ಸುತ್ತ ಲವ್, ಸೆಂಟಿಮೆಂಟ್, ಸ್ವಲ್ಪ ಡ್ಯುಯೆಟ್, ಜತೆಗೆ ಕಾಮಿಡಿ.. ಹೀಗೆ ಎಲ್ಲವೂ ಇದ್ದರೂ ಅವ್ಯಾವುದೂ ಅತೀ ಎನಿಸಿಲ್ಲ. ಇವಿಷ್ಟು ಬಳಸಿಕೊಂಡು ಸಿನಿಮಾವೊಂದನ್ನು ಕುತೂಹಲಕಾರಿಯಾಗಿ ನಿರೂಪಿಸುವುದೆಂದರೆ ಅದು ಸವಾಲಿನ ಕೆಲಸ. ಅದರಲ್ಲೂ ಜಾಣ್ಮೆ ತೋರಿದ್ದಾರೆ ನಿರ್ದೇಶಕ ಪಿ.ಸಿ. ಶೇಖರ್. ತಾಂತ್ರಿಕವಾಗಿಯೂ ಸಿನಿಮಾ ಆಕರ್ಷಕವಾಗಿದೆ. ಪ್ರದೀಪ್ ವರ್ಮ ಹಿನ್ನೆಲೆ ಸಂಗೀತ, ಮುರುಳಿ ಛಾಯಾಗ್ರಹಣದ ಕುಶಲಕಾರಿಕೆಯೂ ನಿರ್ದೇಶಕರ ಅಚ್ಚುಕಟ್ಟಾದ ಕೆಲಸಕ್ಕೆ ಸಾಥ್ ನೀಡಿವೆ. ಕರ್ನಾಟಕ ಪೊಲೀಸ್ ಮತ್ತು ರಾಷ್ಟ್ರೀಯ ತನಿಖಾ ದಳ ದ ನಡುವೆ ನಡೆಯುವ ತಿಕ್ಕಾಟ, ಗೃಹ ಸಚಿವರ ಪತ್ರಿಕಾಗೋಷ್ಠಿ ಕೊಂಚ ನಾಟಕೀಯ.

ನಟಿ ರಾಗಿಣಿ ದ್ವಿವೇದಿ ಚಿತ್ರದ ಹೈಲೈಟ್. ಮುಸ್ಲಿಂ ಹುಡುಗಿ ರೇಷ್ಮಾ ಪಾತ್ರದ ಲುಕ್, ಗೆಟಪ್, ಹಾವಭಾವದಲ್ಲೂ ಇಷ್ಟವಾಗುತ್ತಾರೆ. ಆದರೆ, ಲಿಪ್ ಸಿಂಕ್ ಇಲ್ಲದ ಸಂಭಾಷಣೆಯ ಕೆಲವು ಸನ್ನಿವೇಶಗಳು ಬೇಸರ ಹುಟ್ಟಿಸುತ್ತವೆ. ಉಳಿದಂತೆ ಮನು ಹೆಗ್ಡೆ, ಸಮೀಕ್ಷಾ, ಭಾನು, ಕೃಷ್ಣ ಹೆಬ್ಬಾಲೆ, ಗಿರೀಶ್ ಶಿವಣ್ಣ, ಪದ್ಮಾ ಶಿವಮೊಗ್ಗ ಎಲ್ಲರೂ ತಮ್ಮ ಪಾತ್ರಗಳಲ್ಲಿ ನ್ಯಾಯ ಒದಗಿಸಿದ್ದು, ಎಲ್ಲದರಲ್ಲೂ ಸಿನಿಮಾ ಸರಗವಾಗಿ ಸಾಗಲು ಅನುವು ಮಾಡಿಕೊಟ್ಟಿದ್ದಾರೆ.

ಚಿತ್ರ: ಟೆರರಿಸ್ಟ್
ತಾರಾಗಣ: ರಾಗಿಣಿ ದ್ವಿವೇದಿ, ಮನು ಹೆಗ್ಡೆ, ಸಮೀಕ್ಷಾ, ಭಾನು, ಕೃಷ್ಣ ಹೆಬ್ಬಾಲೆ, ಗಿರೀಶ್ ಶಿವಣ್ಣ, ಪದ್ಮಾಶಿವಮೊಗ್ಗ.
ನಿರ್ದೇಶನ: ಪಿ.ಸಿ. ಶೇಖರ್
ಸಂಗೀತ: ಪ್ರದೀಪ್ ವರ್ಮ್
ಛಾಯಾಗ್ರಹಣ: ಮುರುಳಿ ಕ್ರಿಷ್
ನಿರ್ಮಾಣ: ಅಲಂಕಾರ್ ಸಂತಾನ
ರೇಟಿಂಗ್: ***