ಒಂದು ಕೊಲೆ, ಒಂದು ಕೇಸು. ಅದಕ್ಕೆ ಹಲವು ಮುಖಗಳು. ಯಾವ ಮುಖದಲ್ಲಿ ಅಪರಾದ ಅಡಗಿದೆ. ಯಾವ ಕೋನದಲ್ಲಿ ನ್ಯಾಯ ಸಿಕ್ಕಿಕೊಂಡಿದೆ ಎನ್ನುವ ಕುತೂಹಲದಲ್ಲಿ ಪತ್ತೆಕಾರ್ಯ ನಡೆಯುತ್ತದೆ. ಒಂದು ರೀತಿಯಲ್ಲಿ ಒಂದು ಪ್ರಕರಣವನ್ನು ಅವರವರ ಮೂಗಿನ ನೇರಕ್ಕೆ ತೆರೆದುಕೊಳ್ಳುತ್ತಿದ್ದಾಗ ‘ಉಳಿದವರು ಕಂಡಂತೆ’ ಎನ್ನುವ ಉದ್ಘಾರವೂ ಪ್ರೇಕ್ಷಕನಿಂದ ಬರುತ್ತದೆ. 

ಆರ್‌ ಕೇಶವಮೂರ್ತಿ

ಅಂದಹಾಗೆ ಹೀಗೆ ಫೈಂಡಿಂಗ್‌ಗೆ ಇಳಿಯುವುದು ಪೊಲೀಸರಲ್ಲ, ಲಾಯರ್‌. ಅದು ಕೂಡ ವಜ್ರಮುನಿ ಅವರನ್ನು ಹುಡುಕೊಂಡು ಹೊರಡುತ್ತಾರೆ. ಯಾರು ವಜ್ರಮುನಿ, ಅವರು ಸಿಗುತ್ತಾರೆಯೇ ಎನ್ನುವ ಕನ್‌ಫä್ಯಸ್‌ನಲ್ಲೇ ಕೊನೆ ತನಕ ಸಾಗುವ ‘ಬೀರ್‌ಬಲ್‌’ ಚಿತ್ರದ ಮೊದಲ ಪ್ರಕರಣ, ಪ್ರೇಕ್ಷಕರು ಕಣ್ಣು ಮಿಟಿಕಿಸದಂತೆ ಮಾಡುವಲ್ಲಿ ಯಶಸ್ವಿ ಆಗುತ್ತದೆ. ಕೊಲೆ, ಅಪರಾಧ, ಮಾಫಿಯಾ, ಅಮಾಯಕ ಶಿಕ್ಷೆಗೆ ಒಳಗಾಗುವುದೇ ಚಿತ್ರದ ಪ್ರಧಾನ ಅಂಶಗಳು. ಇದರ ಸುತ್ತ ನಿರ್ದೇಶಕ ಶ್ರೀನಿ, ಕಲ್ಪನೆಯ ಕತೆಯನ್ನು ಹೇಳುತ್ತಾರೆ.

ಕೊಂಚ ಸುಧೀರ್ಘ ಎನ್ನುವ ವಿಚಾರಣೆಯೇ ನಡೆಯುತ್ತದೆ. ಆರಂಭದಿಂದ ಕೊನೆಯವರೆಗೂ ನಡೆಯುವ ವಿಚಾರಣೆ ಇದು. ಯಾಕೆಂದರೆ ಇದೊಂದು ಲಾ ಪಾಯಿಂಟ್‌. ಹಾಗಂತ ಲಾಂಡ್‌ ಆಡರ್‌ ಸಮಸ್ಯೆ ಅಲ್ಲ. ಲಾ ಪುಸ್ತಕದಿಂದ ಕಣ್ಮರೆಯಾಗಿ, ಪೊಲೀಸ್‌ ಸ್ಟೇಷನ್‌ ಗೋಡೆಗಳ ನಡುವೆ ಮಣ್ಣಾದ ಹಳೆಯ ಕೇಸಿನ ಹೊಸ ವಿಚಾರಣೆಯ ಸಂಗತಿ. ಯಾವಾಗಲೂ ಕ್ರೈಮು, ಲಾ ಪಾಯಿಂಟ್‌ಗಳ ಸುತ್ತ ಮಾತನಾಡುವವರಿಗೆ ‘ಬೀರ್‌ಬಲ್‌’ನ ಫೈಂಡಿಂಗ್‌ ವಜ್ರಮುನಿಯ ಕೇಸ್‌ ಆಸಕ್ತಿದಾಯಕ ಪಾಠ ಅನ್ನಬಹುದು. ನಡುವೆ ರಾತ್ರಿ, ನಡು ರಸ್ತೆ. ಜೋರು ಮಳೆ ಬೀಳುತ್ತಿದೆ. ಟ್ಯಾಕ್ಸಿ ಚಾಲಕನೊಬ್ಬ ಸಾವಿಗೀಡಾಗುತ್ತದೆ. ಆ ಪ್ರಕರಣ, ಬಾರ್‌ನಲ್ಲಿ ಕೆಲಸ ಮಾಡುವ ಹುಡುಗನ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ. ಬಾರ್‌ ಹುಡುಗ ಅನ್ಯಾಯವಾಗಿ ಶಿಕ್ಷೆ ಅನುಭವಿಸಿ, ಪೆರೋಲ್‌ ಮೇಲೆ ಆಚೆ ಬಂದಾಗ ಬೀರ್‌ಬಲ್‌ ಬರುತ್ತಾನೆ. ಅರ್ಥಾತ್‌, ಚಿತ್ರದ ನಾಯಕ ಎಂಟ್ರಿ. ಬಹುತೇಕ ಸತ್ತೇ ಹೋಗಿರುವ ಪ್ರಕರಣಕ್ಕೆ ಮರು ಜೀವ ಕೊಡುತ್ತಾನೆ. ಬೀರ್‌ಬಲ್‌ನಂತೆಯೇ ಸತ್ಯದ ಹಾದಿಯಲ್ಲೇ ಹೆಜ್ಜೆ ಹಾಕುತ್ತಾರೆ. ಮತ್ತೊಂದು ಕಡೆ ಇಡೀ ಪೊಲೀಸ್‌ ಇಲಾಖೆ, ಗಣ್ಯರಲ್ಲಿ ಹೆದರಿಕೆ ಹುಟ್ಟಿಕೊಳ್ಳುತ್ತದೆ.

ಟಾಕ್ಸಿ ಚಾಲಕನ ಪ್ರಕರಣ, ಇಷ್ಟೆಲ್ಲ ಸಂಚಲನ ಮೂಡಿಸುತ್ತದೆಯೇ ಎಂದುಕೊಳ್ಳುವ ಹೊತ್ತಿಗೆ, ಸತ್ತವನು ಪೊಲೀಸ್‌ ಮಾಹಿತಿದಾರನೂ ಕೂಡ ಆಗಿದ್ದ ಎನ್ನುವ ಗುಟ್ಟು ರಟ್ಟಾಗುತ್ತದೆ. ಕೇಸು ಮತ್ತಷ್ಟುಕುತೂಹಲ ಮೂಡಿಸುತ್ತದೆ. ಮುಂದೆ ಏನು ಎಂಬುದನ್ನು ತೆರೆ ಮೇಲೆ ನಡೆಯುವ ವಿಚಾರಣೆಯನ್ನು ನೋಡಬೇಕು. ಇಲ್ಲಿ ಮೂರು ಪಾತ್ರಗಳ ಮೇಲೆಯೇ ಇಡೀ ಕತೆ ನಿಲ್ಲುತ್ತದೆ. ಹೀಗಾಗಿ ನಟನೆ ಮಾಡಿದ್ದಾರೆ ಎನ್ನುವುದಕ್ಕಿಂತ ಬಂದು ಹೋಗುತ್ತಾರೆ.

ನಿರ್ದೇಶಕ ಶ್ರೀನಿ, ತಮ್ಮ ಹಿಂದಿನ ಚಿತ್ರಗಳಿಗಿಂತ ಇಲ್ಲಿ ಹೆಚ್ಚು ಬದಲಾಗಿದ್ದಾರೆ. ತಾಂತ್ರಿಕವಾಗಿ ಹೊಸತನಗಳನ್ನು ಕಂಡುಕೊಂಡಿದ್ದಾರೆ. ಜತೆಗೆ ಕತೆ ನಿರೂಪಿಸುವ ರೀತಿಯೂ ಹೊಸದಾಗಿದೆ. ವಿಶೇಷವಾಗಿ ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಾಹಣ ನಿರ್ದೇಶಕರ ಕಲ್ಪನೆಯನ್ನು ಅಂಗೈಯಲ್ಲಿ ಹಿಡಿದು ಸಾಗುತ್ತದೆ. ಕೊಂಚ ತಾಳ್ಮೆ ಇದ್ದು, ರೆಗ್ಯೂಲರ್‌ ಮಾಸ್‌- ಮಸಾಲೆ ಚಿತ್ರಗಳ ಆಚೆಗೂ ಒಂದು ಕ್ರೈಮ್‌ ಥ್ರಿಲ್ಲರ್‌ ಚಿತ್ರ ನೋಡಬೇಕು ಎಂದುಕೊಳ್ಳುವವರಿಗೆ ‘ಬೀರ್‌ಬಲ್‌’ ಸೂಕ್ತ ಸಿನಿಮಾ. ಅಲ್ಲದೆ, ನಿರೂಪಣೆಯ ಹಂತದಲ್ಲಿ ಕತೆಯಲ್ಲಿ ನಿರ್ದೇಶಕರು ತರುವ ಟ್ವಿಸ್ಟ್‌ಗಳು ತುಂಬಾ ಚೆನ್ನಾಗಿದೆ. ಇನ್ನೂ ತಾನು ಕೈಗೆತ್ತಿಕೊಂಡಿರುವ ಕೇಸಿನಲ್ಲಿ ಕೊಲೆಯಾದ ವ್ಯಕ್ತಿ ಯಾರು, ಆತನಿಗೂ ನಾಯಕನಿಗೂ ಏನು ಸಂಬಂಧ ಎನ್ನುವ ತಿರುವಿನಲ್ಲಿ ನೋಡುಗರಿಗೇ ಅಚ್ಚರಿ ಮೂಡಿಸುತ್ತಾರೆ. ಅಂದಹಾಗೆ ಸಿನಿಮಾ ಇನ್ನೂ ಮುಗಿದಿಲ್ಲ. ಇನ್ನೂ ಎರಡು ಪಾರ್ಟ್‌ ಬಾಕಿ ಇದೆ.

ಚಿತ್ರ: ಬೀರ್‌ಬಲ್‌

ತಾರಾಗಣ: ಶ್ರೀನಿ, ರುಕ್ಮಿಣಿ ವಸಂತ್‌, ಕವಿತಾ, ಮಧುಸೂದನ್‌, ಯಮುನಾ, ಸುರೇಶ್‌ ಹೆಬ್ಲಿಕರ್‌, ಅರುಣಾ ಬಾಲರಾಜ್‌, ರವಿ ಭಟ್‌, ಕೃಷ್ಣ ಹೆಬ್ಬಾಳೆ, ಸುಜಯ್‌ ಶಾಸ್ತ್ರಿ

ನಿರ್ದೇಶನ: ಶ್ರೀನಿ

ನಿರ್ಮಾಣ: ಟಿ ಆರ್‌ ಚಂದ್ರಶೇಖರ್‌

ಛಾಯಾಗ್ರಾಹಣ: ಭರತ್‌ ಪರಶುರಾಮ್‌

ಸಂಗೀತ: ಸೌರಭ್‌ ವೈಭವ್‌- ಕಾಲಚರಣ್‌

ರೇಟಿಂಗ್:***