Gouri Kishan: ಗೌರಿಯವರ ಸಹನಟ ಆದಿತ್ಯ ಮಾಧವನ್ ಅವರಿಗೆ ನಟಿಯ ತೂಕದ ಬಗ್ಗೆ ಪ್ರಶ್ನಿಸಿದಾಗ, ಎಲ್ಲರ ಮುಂದೆ ಗೌರಿ ಸ್ವಲ್ಪ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದರು. ಗೌರಿಯ ಪ್ರತಿಕ್ರಿಯೆಯ ನಂತರ ಅವರಿಗೆ ಈಗ ಚಿತ್ರೋದ್ಯಮದಿಂದಲೂ ಬೆಂಬಲ ಸಿಗುತ್ತಿದ್ದು, ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ತಮಿಳು ಚಿತ್ರ "ಅದರ್ಸ್"ನ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಗೌರಿ ಕಿಶನ್ ಭಾಗವಹಿಸಿದ್ದರು. ಈ ಸಮಯದಲ್ಲಿ ನಡೆದ ಘಟನೆಯೊಂದು ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಲ್ಲಿ ಮಹಿಳಾ ಕಲಾವಿದರಿಗೆ ನೀಡುವ ಗೌರವದ ಬಗ್ಗೆ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಈ ಕಾರ್ಯಕ್ರಮದಲ್ಲಿ, ಓರ್ವ ಯೂಟ್ಯೂಬರ್, ಗೌರಿಯವರ ಸಹನಟ ಆದಿತ್ಯ ಮಾಧವನ್ ಅವರಿಗೆ ನಟಿಯ ತೂಕದ ಬಗ್ಗೆ ಪ್ರಶ್ನಿಸಿದಾಗ, ಎಲ್ಲರ ಮುಂದೆ ಗೌರಿ ಸ್ವಲ್ಪ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದರು. ಗೌರಿಯ ಪ್ರತಿಕ್ರಿಯೆಯ ನಂತರ ಅವರಿಗೆ ಈಗ ಚಿತ್ರೋದ್ಯಮದಿಂದಲೂ ಬೆಂಬಲ ಸಿಗುತ್ತಿದ್ದು, ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
‘ನನ್ನ ತೂಕದ ಬಗ್ಗೆ ನಿಮಗ್ಯಾಕೆ ಕಾಳಜಿ?’
ಚಿತ್ರದ ಪತ್ರಿಕಾಗೋಷ್ಠಿಯ ಸಮಯದಲ್ಲಿ ಓರ್ವ ಯೂಟ್ಯೂಬರ್ ಆದಿತ್ಯ ಅವರಿಗೆ ಒಂದು ದೃಶ್ಯದಲ್ಲಿ ಗೌರಿಯನ್ನು ಎತ್ತುವುದು ಎಷ್ಟು ಕಷ್ಟವಾಯ್ತು ಎಂದು ಕೇಳಿದಾಗ, ಗೌರಿ ಕಿಶನ್ ತಕ್ಷಣವೇ ಮಧ್ಯಪ್ರವೇಶಿಸಿ, "ನನ್ನ ತೂಕದ ಬಗ್ಗೆ ನಿಮಗ್ಯಾಕೆ ಕಾಳಜಿ?. ಈ ಪ್ರಶ್ನೆಗೂ ನನ್ನ ನಟನೆಗೂ ಅಥವಾ ಸಿನಿಮಾಗೂ ಯಾವುದೇ ಸಂಬಂಧವಿಲ್ಲ." ಎಂದು ಹೇಳಿದರು. ಆಕೆಯ ಉತ್ತರ ಕೆಲವು ಪುರುಷರ ಕೆಂಗಣ್ಣಿಗೆ ಗುರಿಯಾಯಿತು.
ಇದೇ ಘಟನೆಯ ಬಗ್ಗೆ ಗೌರಿ ಹೇಳಿದ್ದೇನು?
ಘಟನೆಯ ಬಗ್ಗೆ ಮಾತನಾಡುತ್ತಾ, "ನಾನು ಅಲ್ಲಿದ್ದ ಏಕೈಕ ಮಹಿಳೆ. ನನ್ನ ಘನತೆಯನ್ನು ಪಣಕ್ಕಿಟ್ಟಿದ್ದರೂ ನನ್ನನ್ನು ಮೌನಗೊಳಿಸಲು ಪ್ರಯತ್ನಿಸಲಾಯಿತು. ಪ್ರತಿಯೊಬ್ಬ ಮಹಿಳೆಯ ದೇಹವು ವಿಭಿನ್ನವಾಗಿರುತ್ತದೆ, ಆದರೆ ಯಾರೊಬ್ಬರ ಎತ್ತರವು ಅವರ ಪ್ರತಿಭೆಯನ್ನು ವ್ಯಾಖ್ಯಾನಿಸುವುದಿಲ್ಲ" ಎಂದು ಹೇಳಿದ್ದಾರೆ.
12 ನಿಮಿಷಗಳ ಕಾಲ ನಡೆದ ವಾದಕ್ಕೆ ಜಾಯೆದ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯ ಸಮಯದಲ್ಲಿ ನಡೆದ ಘಟನೆ ಅಲ್ಲಿಗೆ ಮುಗಿಯಲಿಲ್ಲ. ಓರ್ವ ವ್ಯಕ್ತಿ ಇದೊಂದು ಲೈಟಾದ ಕಾಮಿಡಿ ಎಂದು ಸ್ಪಷ್ಟಪಡಿಸಿದಾಗ, ಗೌರಿ, "ನನಗೆ ಅದು ತಮಾಷೆಯಾಗಿ ಕಾಣಲಿಲ್ಲ. ಬಾಡಿ ಶೇಮಿಂಗ್ ಅನ್ನು ಸಾಮಾನ್ಯವಾಗಿ ನೋಡುವುದನ್ನ ನಿಲ್ಲಿಸಿ" ಎಂದು ಉತ್ತರಿಸಿದರು. 12-13 ನಿಮಿಷಗಳ ಕಾಲ ಅವರು ನಿರಂತರ ಪ್ರಶ್ನೆಗಳು ಮತ್ತು ವಾದಗಳನ್ನು ಎದುರಿಸುತ್ತಿದ್ದರು ಎಂದು ಗೌರಿ ಬಹಿರಂಗಪಡಿಸಿದರು.
"ನನ್ನ ಪಾತ್ರ ಅಥವಾ ಸಿದ್ಧತೆಯ ಬಗ್ಗೆ ಯಾರೂ ನನ್ನನ್ನು ಕೇಳಲಿಲ್ಲ. ಎಲ್ಲರೂ ನನ್ನ ತೂಕದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದರು ಎಂದು ಅವರು ಹೇಳಿದರು. ಇದಲ್ಲದೆ, ಅವರು ಯೂಟ್ಯೂಬರ್‌ಗೆ "ನೀವು ಪುರುಷ ನಟನಿಗೂ ಅಂತಹ ಪ್ರಶ್ನೆಯನ್ನು ಕೇಳುತ್ತೀರಾ?" ಎಂದು ಪ್ರಶ್ನಿಸಿದರು. ಈ ಘಟನೆಯ ನಂತರ ತಮಿಳು ಚಲನಚಿತ್ರೋದ್ಯಮದ ಹಲವಾರು ಪ್ರಮುಖ ವ್ಯಕ್ತಿಗಳು ಗೌರಿಯವರನ್ನ ಬೆಂಬಲಿಸಿದರು.
ನಿರ್ದೇಶಕ ಪಾ. ರಂಜಿತ್ ಇನ್‌ಸ್ಟಾಗ್ರಾಮ್‌ನಲ್ಲಿ, "ಮಹಿಳಾ ನಟಿಯರು ಇನ್ನೂ ಇಂತಹ ಅವಹೇಳನಕಾರಿ ಪ್ರಶ್ನೆಗಳನ್ನು ಎದುರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ" ಎಂದರೆ, ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಮಹಿಳೆಯರ ತೂಕವು ವೈಯಕ್ತಿಕ ವಿಷಯ. ಗೌರವವು ಏಕಪಕ್ಷೀಯವಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ತಮ್ಮ ಕುಟುಂಬದ ಮಹಿಳೆಯರ ಬಗ್ಗೆ ಅಂತಹ ಪ್ರಶ್ನೆಗಳನ್ನು ಕೇಳಿದರೆ ಅದನ್ನು ಇಷ್ಟಪಡುತ್ತಾರೆಯೇ?" ಎಂದು ಅವರು ಬರೆದುಕೊಂಡಿದ್ದಾರೆ. ಏತನ್ಮಧ್ಯೆ, "ಅದರ್ಸ್" ಚಿತ್ರದಲ್ಲಿ ಗೌರಿಯವರ ಸಹನಟ ನಟ ಕವಿನ್, "ನೀವು ಒಳಗೂ ಮತ್ತು ಹೊರಗೂ ಸುಂದರ ಮತ್ತು ಸ್ಪೂರ್ತಿದಾಯಕರು. ಹಾಗೆಯೇ ಇರಿ" ಎಂದು ಹೇಳಿದರು. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಚರ್ಚೆ ಶುರುವಾಗಿದೆ.
ಗೌರಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೇಗನೆ ವೈರಲ್ ಆಯಿತು. ಅನೇಕರು ಅವರ ಧೈರ್ಯವನ್ನು ಹೊಗಳಿದರು. ಆದರೆ ಕೆಲವರು ಈ ಪ್ರಶ್ನೆಯನ್ನು ಉತ್ಪ್ರೇಕ್ಷೆ ಎಂದು ಕರೆದರು. ಆದರೆ ಹೆಚ್ಚಿನ ಬಳಕೆದಾರರು ಗೌರಿ ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ತೆಗೆದುಕೊಂಡರು ಎಂದರು. ಅದರ್ಸ್ ಚಿತ್ರದ ಬಗ್ಗೆ ಹೇಳುವುದಾದರೆ ನವೆಂಬರ್ 7, 2025 ರಂದು ಬಿಡುಗಡೆಯಾದ ಇದು ತಮಿಳಿನ ಕ್ರೈಂ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ಆದಿತ್ಯ ಮಾಧವನ್ ಮತ್ತು ಗೌರಿ ಜಿ. ಕಿಶನ್ ನಟಿಸಿದ್ದಾರೆ. ಆದಿತ್ಯ ಮಾಧವನ್ ಪೊಲೀಸ್ ಅಧಿಕಾರಿಯಾಗಿ ನಟಿಸಿದರೆ, ಗೌರಿ ಜಿ. ಕಿಶನ್ ವೈದ್ಯರಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಅಬಿನ್ ಹರಿಹರನ್ ನಿರ್ದೇಶಿಸಿದ್ದಾರೆ ಮತ್ತು ಗ್ರ್ಯಾಂಡ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.
