ಲಾವಣಿ ನೃತ್ಯ ಹಾಗೂ ಮರಾಠಿ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಹಿರಿಯ ನಟಿ ಮಧು ಕಂಬಿಕರ್ (73) ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮಹಾರಾಷ್ಟ್ರದ ಜಾನಪದ ಕಲೆಗೆ ಇವರ ಕೊಡುಗೆ ಅಪಾರ.
ಹಿರಿಯ ಮರಾಠಿ ನಟಿ ಹಾಗೂ ಖ್ಯಾತ ಲಾವಣಿ ನೃತ್ಯಗಾರ್ತಿ ಮಧು ಕಂಬಿಕರ್ (73) ಅಕ್ಟೋಬರ್ 12ರಂದು ಪುಣೆಯಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆ ಮರಾಠಿ ಚಿತ್ರರಂಗ, ರಂಗಭೂಮಿ ಹಾಗೂ ಮಹಾರಾಷ್ಟ್ರದ ಸಾಂಪ್ರದಾಯಿಕ ಜಾನಪದ ಕಲೆಗೆ ತುಂಬಲಾರದ ನಷ್ಟ ತಂದಿದೆ. ಸಿನಿಮಾಗಳು, ನಾಟಕಗಳು ಹಾಗೂ ಟಿವಿ ಧಾರಾವಾಹಿಗಳಲ್ಲಿ ಅವರು ನೀಡಿದ ಅದ್ಭುತ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು.
ಲಾವಣಿಯಿಂದ ಮರಾಠಿ ಸಿನಿಮಾವರೆಗಿನ ಪಯಣ
ಮಹಾರಾಷ್ಟ್ರದ ಸಾಂಪ್ರದಾಯಿಕ ಜಾನಪದ ರಂಗಭೂಮಿ 'ತಮಾಶಾ' ಮೂಲಕ ಮಧು ಕಂಬಿಕರ್ ತಮ್ಮ ಕಲಾ ಪಯಣ ಶುರು ಮಾಡಿದರು. ಆಮೇಲೆ ಮರಾಠಿ ಸಿನಿಮಾಗಳು, ವಾಣಿಜ್ಯ ನಾಟಕಗಳು, ಜಾನಪದ ನಾಟಕಗಳು ಹಾಗೂ ಟಿವಿ ಧಾರಾವಾಹಿಗಳಲ್ಲಿ ತಮ್ಮದೇ ಛಾಪು ಮೂಡಿಸಿದರು. ತಮ್ಮ ಸಹಜ ನಟನೆ ಹಾಗೂ ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಅಪಾರ ಜನಮನ್ನಣೆ ಗಳಿಸಿದ್ದರು.
'ಶಾಪೀತ್', 'ಹೇಚ್ ಮಾಝಾ ಮಾಹೇರ್', 'ರಘುಮೈನಾ', 'ಏಕ್ ಹೋತಾ ವಿದೂಷಕ್', 'ಝಪಟ್ಲೇಲಾ', 'ದೇಬು' ಹಾಗೂ 'ಯೇವು ಕಾ ಘರಾತ್' ಅವರ ಪ್ರಮುಖ ಸಿನಿಮಾಗಳು. ನಾನಾ ಪಾಟೇಕರ್ ಮತ್ತು ರಿಷಿ ಕಪೂರ್ ನಟನೆಯ 'ಹಮ್ ದೋನೋ' ಹಿಂದಿ ಸಿನಿಮಾದಲ್ಲೂ ಅವರು ಬಣ್ಣ ಹಚ್ಚಿದ್ದರು. ಮರಾಠಿ ಸಿನಿಮಾಗಳಲ್ಲಿ ತಾಯಿಯ ಪಾತ್ರಗಳು ಹಾಗೂ ಬಲವಾದ ಪೋಷಕ ಪಾತ್ರಗಳ ಮೂಲಕ ಕಂಬಿಕರ್ ಹೆಚ್ಚು ಗುರುತಿಸಿಕೊಂಡಿದ್ದರು. ನಟನೆಯ ಜೊತೆಗೆ, ಮಹಾರಾಷ್ಟ್ರದ ಸಾಂಪ್ರದಾಯಿಕ ನೃತ್ಯ ಪ್ರಕಾರವಾದ 'ಲಾವಣಿ'ಯನ್ನು ಉಳಿಸಿ ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಅನಾರೋಗ್ಯದಿಂದಾಗಿ ರಂಗಭೂಮಿಯಿಂದ ದೂರ
2016ರ ನವೆಂಬರ್‌ನಲ್ಲಿ ಮುಂಬೈನ ಯಶವಂತ್ ನಾಟ್ಯ ಮಂದಿರದಲ್ಲಿ ನಡೆದ ಲಾವಣಿ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಿದ ಬಳಿಕ ಕಂಬಿಕರ್ ಅವರಿಗೆ ಪಾರ್ಶ್ವವಾಯು (ಸ್ಟ್ರೋಕ್) ಉಂಟಾಗಿತ್ತು. ಕಾರ್ಯಕ್ರಮಕ್ಕೂ ಮುನ್ನವೇ ಅವರಿಗೆ ಹುಷಾರಿರಲಿಲ್ಲ. ಆದರೂ ಪ್ರದರ್ಶನ ಪೂರ್ಣಗೊಳಿಸಿದ್ದರು. ಆದರೆ ಸ್ಟೇಜ್ ಹಿಂದಕ್ಕೆ ಹೋದ ಬಳಿಕ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಪಾರ್ಶ್ವವಾಯುವಿನಿಂದ ಅವರ ಬಲಭಾಗಕ್ಕೆ ಪೆಟ್ಟಾಗಿತ್ತು. ಬಳಿಕ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಅವರು ಎದುರಿಸಬೇಕಾಯಿತು.
ಈ ಕಾರಣದಿಂದಾಗಿ ಅವರಿಗೆ ಮೊದಲಿನಂತೆ ಸ್ಟೇಜ್ ಮೇಲೆ ಪ್ರದರ್ಶನ ನೀಡಲು ಹಾಗೂ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಮರಾಠಿ ಮನರಂಜನಾ ಕ್ಷೇತ್ರಕ್ಕೆ ಕಂಬಿಕರ್ ನೀಡಿದ ಕೊಡುಗೆಯನ್ನು ಗುರುತಿಸಿ, 2018ರಲ್ಲಿ 'ಜೀ ಚಿತ್ರ ಗೌರವ್ ಪ್ರಶಸ್ತಿ' ಸಮಾರಂಭದಲ್ಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಅವರ ಪರವಾಗಿ ಸೊಸೆ ಪ್ರಶಸ್ತಿ ಸ್ವೀಕರಿಸಿದ್ದರು.
ಇನ್ನು ಮಧು ಕಂಬಿಕರ್ ನಿಧನದಿಂದಾಗಿ, ಮಹಾರಾಷ್ಟ್ರದ ಶ್ರೀಮಂತ ಜಾನಪದ ಪರಂಪರೆಯನ್ನು ಸಿನಿಮಾದೊಂದಿಗೆ ಬೆಸೆದಿದ್ದ ಒಬ್ಬ ಶ್ರೇಷ್ಠ ಕಲಾವಿದೆಯನ್ನು ಮರಾಠಿ ಚಿತ್ರರಂಗ ಕಳೆದುಕೊಂಡಿದೆ. ಲಾವಣಿ ನೃತ್ಯ ಹಾಗೂ ಕಲೆಗೆ ಅವರು ನೀಡಿದ ಕೊಡುಗೆ ಸದಾ ನೆನಪಿನಲ್ಲಿ ಉಳಿಯಲಿದೆ.


