ಬೆಂಗಳೂರು (ಫೆ. 02): ಹಿರಿಯ ಪತ್ರಕರ್ತ ಹಾಗೂ ಕಥೆಗಾರ ರವಿ ಬೆಳಗೆರೆ ಅವರ ‘ಒಮರ್ಟಾ’ ಎನ್ನುವ ಕಾದಂಬರಿ ಸಿನಿಮಾ ಆಗುತ್ತಿದೆ. ಭೂಗತ ಮಾಫಿಯಾ, ರೌಡಿಸಂ, ಕ್ರೌರ್ಯ ಜತೆಗೆ ಡಾರ್ಕ್ ಲೈಫ್‌ನ ಮತ್ತೊಂದು ಮುಖವನ್ನು ತೆರೆದಿಡುವ ‘ಒಮರ್ಟಾ’, ಕನ್ನಡದ ಮಟ್ಟಿಗೆ ಬಹು ವಿಶೇಷವಾದ ಕಾದಂಬರಿ.

ನೆತ್ತರಿನ ಕತೆಗಳ ಸುತ್ತ ‘ಒಮರ್ಟಾ’ ಮತ್ತೊಂದು ಗಾಢವಾದ ಕಾದಂಬರಿ. ಸಾಕಷ್ಟು ಓದುಗರನ್ನು ತಲುಪಿರುವ, ಈಗಲೂ ಬಹು ಬೇಡಿಕೆಯಲ್ಲಿರುವ ಇಂಥ ಪುಸ್ತಕವನ್ನು ಸಿನಿಮಾ ಮಾಡಲಿಕ್ಕೆ ಹೊರಟಿರುವುದು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ. ಈ ಹಿಂದೆ ‘ಗುಳ್ಟು’ ಸಿನಿಮಾ ನಿರ್ದೇಶಿಸಿ ಚಿತ್ರರಂಗದ ಗಮನ ಸೆಳೆದವರು. ಈ ಬಾರಿ ಬೇರೊಂದು ರೀತಿಯ ಕತೆಯನ್ನು ತೆರೆ ಮೇಲಿಡುವ ಸಾಹಸಕ್ಕೆ ಮುಂದಾಗಿದ್ದಾರೆ.

ಈಗಾಗಲೇ ಮಾತುಕತೆ ಆಗಿದ್ದು, ರವಿ ಬೆಳೆಗೆರೆ ಅವರು ಸಹ, ತಮ್ಮ ಕಾದಂಬರಿ ಸಿನಿಮಾ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ನಿರ್ದೇಶಕ ಜನಾರ್ದನ ಚಿಕ್ಕಣ್ಣ, ‘ಒಮರ್ಟಾ’ ಕಾದಂಬರಿಯನ್ನು ಮುಂದಿಟ್ಟುಕೊಂಡು
ಚಿತ್ರಕಥೆ ಮಾಡುವ ತಯಾರಿಯಲ್ಲಿದ್ದಾರೆ. ಸದ್ಯಕ್ಕೆ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಚಿತ್ರದ ಕುರಿತಂತೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಒಂದು ಮಾಹಿತಿಯ ಪ್ರಕಾರ ಸತೀಶ್ ನೀನಾಸಂ ಅಥವಾ ಡಾಲಿ ಧನಂಜಯ್ ಈ ಚಿತ್ರಕ್ಕೆ ಹೀರೋ ಆಗುವ ಸಾಧ್ಯತೆಗಳಿವೆ. ಅಲ್ಲದೆ ಜನಾರ್ದನ್ ಚಿಕ್ಕಣ್ಣ ಕೂಡ ಬೇರೊಂದು ಕತೆಯನ್ನು ಸತೀಶ್ ಅವರ ನಟನೆಯಲ್ಲಿ ಮಾಡುವ ತಯಾರಿ
ಮಾಡಿಕೊಳ್ಳುತ್ತಿದ್ದಾರೆ. ಆ ಕತೆ ‘ಒಮರ್ಟಾ’ ಅಥವಾ ಬೇರೆಯದ್ದಾ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಹಾಗೆ ನೋಡಿದರೆ ‘ಒಮರ್ಟಾ’ ಕಾದಂಬರಿಯನ್ನು ಸಿನಿಮಾ ಮಾಡುವುದಕ್ಕೆ ಹಲವು ನಿರ್ದೇಶಕರು, ನಟರು ಮುಂದೆ ಬಂದಿದ್ದರು.
ಇಲ್ಲಿವರೆಗೂ ಹತ್ತಕ್ಕೂ ಹೆಚ್ಚು ನಿರ್ದೇಶಕರು ‘ಒಮರ್ಟಾ’ ಕಾದಂಬರಿ ಹಕ್ಕುಗಳಿಗಾಗಿ ರವಿ ಬೆಳಗೆರೆ ಅವರನ್ನು ಭೇಟಿ ಮಾಡಿದ್ದಾರೆ. ಕೊನೆಗೆ ಈ ಪುಸ್ತಕವನ್ನು ಸಿನಿಮಾ ಮಾಡುವ ಹಕ್ಕು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಅವರ
ಪಾಲಿಗೆ ದಕ್ಕಿದೆ.