ಬೆಂಗಳೂರು (ಡಿ. 12): ಬಾಹುಬಲಿ’ ಅಂದಾಕ್ಷಣ ಕಣ್ಮುಂದೆ ಬರುವ ಪಾತ್ರಗಳ ಪೈಕಿ ಅಮರೇಂದ್ರ ಬಾಹುಬಲಿ, ಶಿವಗಾಮಿ, ಬಲ್ಲಾಳದೇವ, ದೇವಸೇನಾ ಹಾಗೂ ಕಟ್ಟಪ್ಪ ಮೊದಲು. ನಂತರದ ಸ್ಥಾನ ಕಾಲಕೇಯ ರಾಜ ಇಂಕೋಸಿಗೆ. ವಿಶಿಷ್ಟ ಭಾಷೆಯ ಸಂಭಾಷಣೆ ಮೂಲಕ ಮನೆಮಾತಾಗಿದ್ದ ಆ ಪಾತ್ರದಲ್ಲಿ ನಟಿಸಿದ್ದು ಪ್ರಭಾಕರ್.

ಈಗ ಆ ಮಹಾ ವಿಲನ್ ಕನ್ನಡದ ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ‘ಬೃಂದಾವನ’, ‘ಗಜಕೇಸರಿ’, ‘ಲಕ್ಷ್ಮಣ’, ‘ಚೌಕ’ ಚಿತ್ರಗಳಲ್ಲಿ ಖಳ ನಟನಾಗಿ ಮಿಂಚಿದ್ದ ಅವರು ಹರಿ ಸಂತು ನಿರ್ದೇಶನದ ಈ ಚಿತ್ರದಲ್ಲಿ ಮುದ್ದಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದು ಚಿತ್ರದುರ್ಗದ ಪಾಳೇಗಾರ ಬಿಚ್ಚುಗತ್ತಿ ಭರಮಣ್ಣ ನಾಯಕನ ಬದುಕಿನ ಕುರಿತ ಚಿತ್ರ. ಅದರಲ್ಲೂ ಆತನ ಅಧಿಕಾರವಧಿಯಲ್ಲಿ ದಾಖಲಾಗಿ  ಉಳಿದ ‘ದಳವಾಯಿ ದಂಗೆ’ಯೇ ಈ ಚಿತ್ರದ ಪ್ರಧಾನ ಕಥಾ ಹಂದರ. ಅಲ್ಲಿ ಭರಮಣ್ಣನ ಹಾಗೆ ಪ್ರಮುಖ ಪಾತ್ರವಾಗಿ ಕಾಣಿಸಿಕೊಂಡಿದ್ದು ಮುದ್ದಣ್ಣ. ಈಗ ಆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಪ್ರಭಾಕರ್.

‘ಕನ್ನಡದಲ್ಲಿ ನನಗಿದು ಐದನೇ ಚಿತ್ರ. ಬಾಹುಬಲಿ  ನಂತರ ಸಾಕಷ್ಟು ಆಫರ್ ಬಂದಿವೆ. ಆದರೆ, ಬೇರೆ ಭಾಷೆಗಳಲ್ಲೂ ನಾನು ಬ್ಯುಸಿ ಇರುವುದರಿಂದ ಪಾತ್ರಗಳ ಮಹತ್ವ ನೋಡಿಕೊಂಡು ಅಭಿನಯಿಸುತ್ತಾ ಬರುತ್ತಿದ್ದೇನೆ. ಅಂತಹ ಆಯ್ಕೆಯಲ್ಲಿ ಇದು ಕೂಡ ಒಂದು. ಖಳನಟ, ನೆಗೆಟಿವ್ ಶೇಡ್ ಇರುವ ಪಾತ್ರ ಎನ್ನುವುದಕ್ಕಿಂತ ಕಥಾ ನಾಯಕನಷ್ಟೇ ಪ್ರಾಮುಖ್ಯತೆ ಇರುವ ಪಾತ್ರ. ಭರಮಣ್ಣ ನಾಯಕನಿಗೆ ಸರಿ ಸಮನಾಗಿ ನಿಲ್ಲುವ ವ್ಯಕ್ತಿಯೇ ಮುದ್ದಣ್ಣ. ಅವರಿಬ್ಬರ ನಡುವಿನ ಕಾಳಗವೇ ಇಲ್ಲಿ ರೋಚಕ. ಅದಕ್ಕಿರುವ ಮಹತ್ವ ನೋಡಿಯೇ ಅದರಲ್ಲಿ ಅಭಿನಯಿಸಲು ಒಪ್ಪಿಕೊಂಡೆ’ ಎನ್ನುತ್ತಾರೆ ಪ್ರಭಾಕರ್.

ಪ್ರಭಾವಕರ್ ತವರು ಕನ್ನಡ ನಾಡು. ಅವರ ತಾಯಿ ರಾಯಚೂರಿನವರು. ಹಾಗೆಯೇ ಅವರ ಪತ್ನಿ ಕೂಡ ಇಲ್ಲಿಯವರೇ. ತಾವು ಅಭಿನಯಿಸುವ ಪಾತ್ರಗಳಿಗೆ ತಾವೇ ವಾಯ್ಸ್ ನೀಡುತ್ತಾ ಬಂದಿದ್ದಾರೆ. ‘ಬಾಹುಬಲಿಯಲ್ಲಿ ಲಿಪಿ ಇಲ್ಲದ ಯಾವುದೋ ಕಲಿಕಿ ಭಾಷೆಗೇ ವಾಯ್ಸ್ ಕೊಟ್ಟಿದ್ದೇನೆ. ಅಂಥದ್ದರಲ್ಲಿ ಕನ್ನಡ ಸಿನಿಮಾಗಳಲ್ಲಿ ವಾಯ್ಸ್ ನೀಡುವುದು ನನಗೆ ಕಷ್ಟ ಆಗುವುದಿಲ್ಲ’ ಎಂದು ನಗುತ್ತಾರೆ ಪ್ರಭಾಕರ್