ಕವಲುದಾರಿಯಲ್ಲಿ ನಿರ್ದೇಶಕ ಹೇಮಂತ್ ರಾವ್ ಸಂದರ್ಶನ

ಕನ್ನಡದ ಭರವಸೆಯ ನಿರ್ದೇಶಕ. ಹೆಸರು ಹೇಮಂತ್‌ ರಾವ್‌. ಇವರ ಪ್ರತಿಭೆಗೆ ಸಾಕ್ಷಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ. ಬಾಲಿವುಡ್‌ನ ಸೂಪರ್‌ಹಿಟ್‌ ಚಿತ್ರ ‘ಅಂಧಾದುನ್‌’ ಚಿತ್ರಕತೆಯಲ್ಲಿ ಇವರದೂ ಪಾಲಿಗೆ ಅನ್ನುವುದು ಇವರ ಹೆಗ್ಗಳಿಕೆ. ಇವರ ಬಹುನಿರೀಕ್ಷಿತ ‘ಕವಲುದಾರಿ’ ಇಂದು ಬಿಡುಗಡೆ. ಅವರ ಜತೆ ಮಾತುಕತೆ.

 

Exclusive interview with Kavaludaari director  Hemanth Rao

ದೇಶಾದ್ರಿ ಹೊಸ್ಮನೆ

ಕವಲುದಾರಿಯ ವಿಶೇಷತೆಗಳೇನು?

ಹೇಳುವುದಕ್ಕೆ ಸಾಕಷ್ಟಿವೆ. ನನ್ನ ದೃಷ್ಟಿಯಲ್ಲಿ ಇದೊಂದು ಅಪರೂಪದ ಕತೆ. ಸಸ್ಪೆನ್ಸ್‌, ಥ್ರಿಲ್ಲರ್‌ ಅದರ ವಿಶೇಷ. ಆನಂತರ ಅನಂತನಾಗ್‌. ಕನ್ನಡ ಚಿತ್ರರಂಗಕ್ಕೇ ಇದೇ ಮೊದಲು ಎನ್ನುವ ಹಾಗೆ, ಯುರೋಪ್‌ನ ಮೆಸಿಡೋನಿಯಾದ ಲೈವ್‌ ಆರ್ಕೆಸ್ಟ್ರಾವನ್ನು ಚಿತ್ರದ ಹಿನ್ನೆಲೆ ಸಂಗೀತಕ್ಕೆ ಬಳಸಿದ್ದೇವೆ. ಥ್ರಿಲ್ಲಿಂಗ್‌ ಕ್ಯೂರಿಯಾಸಿಟಿ ಇದರ ಮತ್ತೊಂದು ವಿಶೇಷ.

ಕವಲುದಾರಿಯ ಕತೆ ಏನು, ಇದು ಹುಟ್ಟಿದ್ದು ಹೇಗೆ?

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕಿಂತ ಮುಂಚೆಯೇ ಈ ಕತೆಯ ಐಡಿಯಾ ಹೊಳೆದಿತ್ತು. ನಮ್ಮ ಮನೆ ಹತ್ತಿರ ಆಗ 80 ರಸ್ತೆ ನಿರ್ಮಾಣ ಶುರುವಾಗಿತ್ತು. ರಸ್ತೆ ನಿರ್ಮಾಣಕ್ಕೆ ದೊಡ್ಡ ದೊಡ್ಡ ಗಾತ್ರದಲ್ಲಿ ಆಳಗಳನ್ನು ತೆಗೆಯಲಾಗಿತ್ತು. ಕೆಲವು ಕಡೆ ಮನುಷ್ಯರ ಮೂಳೆಗಳು ಸಿಕ್ಕವು ಎನ್ನುವ ಸುದ್ದಿ ಇತ್ತು. ಒಂದು ವೇಳೆ, ಯಾವುದಾದರೂ ಕೊಲೆ ಪ್ರಕರಣದ ವ್ಯಕ್ತಿಯ ಮೂಳೆ ಸಿಕ್ಕರೆ ಪೊಲೀಸರು ಅದನ್ನು ಹೇಗೆಲ್ಲ ಬೇಧಿಸಬಹುದು ಎನ್ನುವ ನನ್ನ ಕುತೂಹಲದ ಕತೆಯಿದು. ಅದರೊಳಗಡೆ ಪೊಲೀಸ್‌ ವ್ಯವಸ್ಥೆಯಿದೆ, ಕ್ರಿಮಿನಲ್‌ ಹಿನ್ನೆಲೆಯ ರಾಜಕಾರಣವಿದೆ. ಜತೆಗೆ ಸಹಜವಾದ ಒಬ್ಬ ಪೊಲೀಸ್‌ ವ್ಯಕ್ತಿಯ ಸುತ್ತಣ ಚಿತ್ರಣವಿದೆ. ಆ ಮೂಲಕ ಕವಲುದಾರಿ ಇವತ್ತಿನ ಸಮಾಜದ ಬಯಲು ದಾರಿಗೆ ಬಂದು ನಿಲ್ಲುತ್ತದೆ.

ಇದು ಪಿಆರ್‌ಕೆ ಬ್ಯಾನರ್‌ಗಾಗಿಯೇ ಮಾಡಿದ್ದ ಕತೆನಾ?

ಇಲ್ಲ, ಈ ಕತೆ ಬರೆಯುವಾಗಲೇ ನನಗೆ ಪುನೀತ್‌ ಸರ್‌ ಸಿನಿಮಾ ನಿರ್ಮಾಣದ ಬಗ್ಗೆ ಹೇಳಿದ್ದು. ಆಗಲೇ ಅವರು ನನಗೆ ಪರಿಚಯವಿದ್ದರು. ಪೃಥ್ವಿ ಚಿತ್ರಕ್ಕೆ ನಾನು ಸಹಾಯಕ ನಿರ್ದೇಶಕನಾಗಿದ್ದೆ. ಆಗ ಅವರ ಪರಿಚಯವಿತ್ತು. ಆ ನಂತರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ಬಂದಾಗ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ನಂತರದ ದಿನಗಳಲ್ಲಿ ಒಮ್ಮೆ ಸಿಕ್ಕಾಗ, ಏನ್‌ ಮಾಡ್ತೀರಾ, ಅಂತ ಔಪಚಾರಿಕವಾಗಿ ಮಾತನಾಡುತ್ತಿದ್ದಾಗ ಈ ಕತೆಯ ವಿಚಾರ ಹೇಳಿದೆ. ಒಮ್ಮೆ ಬನ್ನಿ ಕತೆ ಹೇಳಿ ಅಂದರು. ಕತೆ ಅವರಿಗೆ ಇಷ್ಟವಾಯ್ತು. ಅವರೇ ಸಿನಿಮಾ ಮಾಡ್ತೀನಿ ಅಂತ ಒಪ್ಪಿಕೊಂಡರು.

ಕ್ಯಾಬರೆ ಹಾಡಿಗೆ ಸುಮನ್ ರಂಗನಾಥ್ ಸಖತ್ ಸ್ಟೆಪ್! ಅಭಿಮಾನಿಗಳು ಫುಲ್ ಫಿದಾ!

ಮತ್ತೆ ಅನಂತನಾಗ್‌ ಅವರನ್ನೇ ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿರಿ. ಏನು ಕಾರಣ?

ಅನಂತನಾಗ್‌ ಅವರ ಆಯ್ಕೆಗೆ ಎರಡು ಕಾರಣಗಳಿದ್ದವು. ಕತೆಯಲ್ಲಿನ ನಿವೃತ್ತ ಪೊಲೀಸ್‌ ಅಧಿಕಾರಿ ಮುತ್ತಣ್ಣನ ಕಲ್ಪನೆ ಹಾಗೆಯೇ ಇತ್ತು. ಹಾಗಾಗಿ ಪಾತ್ರಕ್ಕೆ ಅವರೇ ಸೂಕ್ತ ಎನ್ನುವುದು ಅವರ ಆಯ್ಕೆಗೆ ಇದ್ದ ಮೊದಲ ಕಾರಣ. ಅನಂತ ಸರ್‌ ನಾನು ಕಂಡ ಅಪರೂಪದ ನಟ. ಜತೆಗೆ ನಾನು ಅವರ ಅಭಿಮಾನಿ. ಜಾಗತಿಕ ಮಟ್ಟದಲ್ಲಿ ಇಂತಹ ನಟರನ್ನು ಎಣಿಸುತ್ತಾ ಹೋದರೆ ಬೆರಳೆಣಿಕೆಯಷ್ಟುಮಾತ್ರ ಸಿಗಬಹುದು. ಯಾಕಂದ್ರೆ, ಯಾವುದೇ ಪಾತ್ರವಾದರೂ ಸರಿ ಅದಕ್ಕೆ ಒಂದು ಮೌಲ್ಯ ತಂದುಕೊಡಬಲ್ಲ ನಟ. ನನ್ನ ಸಿನಿಮಾದಲ್ಲಿ ಅವರಿದ್ದರೆ, ಸಿನಿಮಾಕ್ಕೂ ಮೆರುಗು ಎನ್ನುವುದರ ಜತೆಗೆ ಪಾತ್ರ ಪೋಷಣೆಯೂ ಸುಲಭವಾಗುತ್ತೆ ಎನ್ನುವ ಸ್ವಾರ್ಥವೂ ಇತ್ತು. ಅವರಿಗೆ ಇಲ್ಲಿ ಮಾತು ಕಮ್ಮಿ, ಆಂಗಿಕ ನಟನೆ ಜಾಸ್ತಿ ಎನ್ನುವ ತರಹದ ಪಾತ್ರ. ಬರೀ ಕಣ್ಣಲ್ಲೇ ಸೀನ್‌ ಮುಗಿಸುತ್ತಿದ್ದರು.

ಚಿತ್ರದ ಮೇಕಿಂಗ್‌ನಲ್ಲಿ ಸಾಕಷ್ಟುಪ್ರಯೋಗ ಮಾಡಿದ್ದೀರಿ ಎನ್ನುವ ಮಾತಿದೆ....

ಹೌದು, ಇದೊಂದು ಸಸ್ಪೆನ್ಸ್‌ -ಥ್ರಿಲ್ಲರ್‌ ಸಿನಿಮಾ. ಇಂತಹ ಸಿನಿಮಾ ಮಾಡುವಾಗ ಪ್ರೇಕ್ಷಕರನ್ನು ಮೊದಲು ಥ್ರಿಲ್ಲಿಂಗ್‌ ಮೂಡ್‌ಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಯಾಕಂದ್ರೆ, ಥ್ರಿಲ್ಲರ್‌ ಅಂದ್ರೇನೆ ಅದಕ್ಕೊಂದು ಮೂಡ್‌ ಇದೆ. ಆ ಪ್ರಕಾರ ಥ್ರಿಲ್ಲಿಂಗ್‌ ಸಬ್ಜೆಕ್ಟ್ಗೆ ಅನುಗುಣವಾಗಿ ನೆರಳಗಳ ಮೂಲಕ ಚಿತ್ರೀಕರಣದ ಪ್ರಯೋಗ ಮಾಡಿದ್ದೇವೆ. ಪ್ರತಿಬಿಂಬಗಳನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದೇವೆ. ಒಳಾರ್ಥಗಳನ್ನು ಹುಡುಕುವವರ ಜತೆಗೆ ರಂಜನೀಯ ದೃಷ್ಟಿಯಿಂದ ಸಿನಿಮಾ ನೋಡುವವರಿಗೂ ಕತೆ ಅರ್ಥವಾಗುವ ರೀತಿ ಸಂಕೇತಗಳನ್ನು ಬಳಸಿದ್ದೇವೆ. ಮ್ಯೂಸಿಕ್‌ ಬೇರೆಯದೇ ಹಂತದಲ್ಲಿದೆ. ಅದ್ವೈತ್‌ ಗುರುಮೂರ್ತಿ ಕ್ಯಾಮರಾ ವರ್ಕ್ ಅತ್ಯದ್ಭುತವಾಗಿದೆ.

ಮರ್ಡರ್‌ ಮಿಸ್ಟ್ರಿ ಸಸ್ಪೆನ್ಸ್‌ -ಥ್ರಿಲ್ಲರ್‌ ಈ ಕತೆಯೊಂದಿಗೆ ಏನನ್ನು ಹೇಳಲು ಹೊರಟಿದ್ದೀರಿ?

ಇದೊಂದು ಮೆಸೇಜ್‌ ಓರಿಯೆಂಟೆಡ್‌ ಸಿನಿಮಾ ಅನ್ನೋದು ನಿಜ, ಹಾಗಂತ ನಾನಿಲ್ಲಿ ಯಾವುದೇ ಸೊಲ್ಯೂಷನ್‌ ನೀಡಲು ಹೊರಟಿಲ್ಲ. ಹಾಗೆ ಸೊಲ್ಯೂಷನ್‌ ಕೊಡುವುದು ನಿರ್ದೇಶಕನ ಕೆಲಸ ಅಂತಲೂ ನಾನು ನಂಬಿಲ್ಲ. ನಮ್ಮ ಸುತ್ತಲ ಸಮಾಜ ಮತ್ತು ವ್ಯವಸ್ಥೆಗೆ ಕನ್ನಡಿ ಹಿಡಿಯಬಲ್ಲೆ ಮಾತ್ರ. ಸಾಮಾನ್ಯವಾಗಿ ಪೊಲೀಸ್‌ ಅಂದ್ರೆ ಜನ ನೋಡುವ ರೀತಿಯೇ ಬೇರೆ. ಮಾಮ ಅನ್ನೋದು ಕೆಲವರು ಅವರನ್ನು ಕರೆಯುವ ವ್ಯಂಗ್ಯದ ಮಾತು. ಇನ್ನು ಅವರ ಸಂಬಳ -ಸಾರಿಗೆ ವ್ಯವಸ್ಥೆ ನೋಡಿದರೆ ಈಗಲೂ ತುಂಬಾ ಕೆಳಮಟ್ಟದಲ್ಲೇ ಇದೆ. ತುಂಬಾ ಪ್ರಾಮಾಣಿಕವಾಗಿದ್ದರೂ ಅವರಿಗೆ ಸಿಗುವ ಮರ್ಯಾದೆಯೇ ಬೇರೆ. ಅದನ್ನು ಇಲ್ಲಿ ತೋರಿಸಿದ್ದೇನೆ. ಜತೆಗೆ ಕ್ರಿಮಿನಲ್‌ ಆಧರಿತ ರಾಜಕಾರಣದ ನಡುವೆ ಅವರೆಲ್ಲ ಹೇಗೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆನ್ನುವುದನ್ನು ಸಿನಿಮಾ ಹೇಳುತ್ತದೆ.

ಪ್ರೇಕ್ಷಕರು ಯಾಕೆ ಈ ಸಿನಿಮಾ ನೋಡ್ಲಿಕ್ಕೆ ಬರಬೇಕು?

ಫೈಟ್ಸ್‌, ಸಾಂಗ್ಸು ಎನ್ನುವುದಕ್ಕಿಂತ ಒಳ್ಳೆಯ ಕತೆ ಇದ್ರೆ ಜನ ಸಿನಿಮಾ ನೋಡೇ ನೋಡ್ತಾರೆ ಎನ್ನುವುದನ್ನು ಬಲವಾಗಿ ನಂಬಿದವನು ನಾನು. ಹಿಂದಿನ ಚಿತ್ರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವೇ ಅದಕ್ಕೆ ಸಾಕ್ಷಿ. ಅದೇ ರೀತಿಯ ಮತ್ತೊಂದು ಸಿನಿಮಾವಿದು. ಕೆಲವ್ರು ಹೇಳ್ತಾರೆ, ಆಡಿಯನ್ಸ್‌ ದಡ್ಡರು, ಅಷ್ಟಾಗಿ ಅಪ್‌ಡೇಟೆಡ್‌ ಇಲ್ಲ ಅಂತ. ಆದ್ರೆ ನನ್ನ ಪ್ರಕಾರ ಆಡಿಯನ್ಸ್‌ ತುಂಬಾ ಬುದ್ಧಿವಂತರು. ಮೇಲಾಗಿ ನಮಗಿಂತ ತುಂಬಾ ಫಾಸ್ಟ್‌ ಇದ್ದಾರೆ. ಅವರು ಒಂದಷ್ಟುಹಣ ಕೊಟ್ಟು ಟಿಕೆಟ್‌ ಖರೀದಿಸಿ, ಸಿನಿಮಾ ನೋಡ್ಲಿಕ್ಕೆ ಬರ್ತಾರೆ ಅಂದ್ರೆ, ಅವರ ಸಮಯ ಹಾಳು ಮಾಡಬಾರದು ಅನ್ನೋದನ್ನೇ ಮೈಂಡ್‌ನಲ್ಲಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಆ ದೃಷ್ಟಿಯಲ್ಲಿ ಪ್ರೇಕ್ಷಕರು ಈ ಸಿನಿಮಾ ನೋಡ್ಬೇಕು ಅನ್ನೋದು ನನ್ನ ವಿನಂತಿ.

Latest Videos
Follow Us:
Download App:
  • android
  • ios