ಗಣೇಶ್‌ ಅಭಿನಯದ ‘ಗೀತಾ’ ಚಿತ್ರದ ಚಿತ್ರೀಕರಣಕ್ಕೆ ಕೋಲ್ಕತ್ತಾ, ಮನಾಲಿ ಸುತ್ತು ಹಾಕಿ ಬಂದಿರುವ ಶಾನ್ವಿ ಶ್ರೀವಾಸ್ತವ್‌ ಈಗ ‘ಅವನೇ ಶ್ರೀಮನ್ನಾರಾಯಣ’ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿನ ಸೆಟ್‌ವೊಂದರಲ್ಲಿ ಹಾಡಿನ ಚಿತ್ರೀಕರಣ ಭರದಿಂದ ಸಾಗಿದೆ.

ಪುಷ್ಕರ್‌ ಮಲ್ಲಿಕಾರ್ಜುನಯ್ಯ, ಹೆಚ್‌.ಕೆ. ಪ್ರಕಾಶ್‌ ಹಾಗೂ ರಕ್ಷಿತ್‌ ಶೆಟ್ಟಿ ನಿರ್ಮಾಣದ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಸಚಿನ್‌ ರವಿ. ಚಿತ್ರಕ್ಕೆ ಇನ್ನೂ 20 ದಿನಗಳ ಕಾಲದ ಚಿತ್ರೀಕರಣ ಬಾಕಿಯಿದೆ ಎನ್ನಲಾಗಿದೆ. ಹಾಡಿನ ಚಿತ್ರೀಕರಣಕ್ಕಾಗಿ ಆ ದಿನ ವಿಶೇಷವಾದ ಕೆಂಪು ಬಣ್ಣದ ಖಾದಿ ಸೀರೆ ತೊಟ್ಟು, ರಕ್ಷಿತ್‌ ಶೆಟ್ಟಿಅವರೊಂದಿಗೆ ಹೆಜ್ಜೆ ಹಾಕುತ್ತಿದ್ದ ನಾಯಕಿ ಶಾನ್ವಿ, ಚಿತ್ರೀಕರಣದ ನಡುವೆಯೇ ಮಾತಿಗೆ ಸಿಕ್ಕಾಗ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಚಿತ್ರದ ವಿಶೇಷತೆ ಕುರಿತು ಮಾತನಾಡಿದರು.

  • ನನ್ನ ಮಟ್ಟಿಗೆ ಇದೊಂದು ವಿಶೇಷ ಸಿನಿಮಾ. ಚಿತ್ರದ ಕತೆ, ಮೇಕಿಂಗ್‌ ಶೈಲಿ, ನಿರೂಪಣೆಯ ರೀತಿ, ಲೊಕೇಷನ್‌ ವಿಚಾರ ಎಲ್ಲದರಲ್ಲೂ ಅದ್ಭುತ. ಜತೆಗೆ ಬಿಗ್‌ ಬಜೆಟ್‌ ಸಿನಿಮಾ ಕೂಡ. ಇಂತಹ ಸಿನಿಮಾದಲ್ಲಿ ನಾನು ನಾಯಕಿ ಆಗಿದ್ದೇ ಲಕ್ಕಿ ಅಂತೆನಿಸುತ್ತಿದೆ.
  • ನಾನು ಇದುವರೆಗೆ ನಟಿಸಿದ ಸಿನಿಮಾಗಳಲ್ಲೇ ಭಿನ್ನವಾದ ಪಾತ್ರ ಇದು. ಲಕ್ಷ್ಮೀ ಅಂತ ಪಾತ್ರದ ಹೆಸರು. ತುಂಬಾ ಬುದ್ಧಿವಂತೆ. ಮೆಚ್ಯೂರ್ಡ್‌ ಕ್ಯಾರೆಕ್ಟರ್‌. ಈ ತರಹದ ಪಾತ್ರ ಸಿಕ್ಕಿದ್ದು ಇದೇ ಮೊದಲು. ಲೂನಾ ನನ್ನ ಪಾತ್ರದ ಪ್ರಮುಖ ಆಕರ್ಷಣೆ. ಆ ಲೂನಾ ಆಕೆಯ ಜರ್ನಿಯಲ್ಲಿ ವಿಶೇಷ ಪಾತ್ರ ವಹಿಸುತ್ತದೆ.

ಸ್ಟಾರ್‌ ಜತೆಗೆ ಮಾತ್ರ ಸಿನಿಮಾ ಮಾಡೋದು ಅಂತ ನಾನೆಂದಿಗೂ ಗೆರೆ ಹಾಕಿಕೊಂಡಿಲ್ಲ. ಒಳ್ಳೆಯ ಪಾತ್ರವೇ ನನ್ನ ಆಯ್ಕೆ. ಪಾತ್ರದ ಜತೆಗೆ ಕತೆಯೂ ಚೆನ್ನಾಗಿದ್ದರೆ ಹೊಸಬರ ಜತೆಗೂ ಅಭಿನಯಿಸುತ್ತಿದ್ದೇನೆ. ಆದ್ರೆ, ಸ್ಟಾರ್‌ ರಕ್ಷಿತ್‌ ಶೆಟ್ಟಿಅವರ ಜತೆಗೆ ಅಭಿನಯಿಸುವ ಅವಕಾಶ ಇಷ್ಟುಬೇಗ ಸಿಗುತ್ತೆ ಅಂತಂದುಕೊಂಡಿರಲಿಲ್ಲ. ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ತುಂಬಾ ಖುಷಿಯಿದೆ. ಅವರೊಬ್ಬ ಒಳ್ಳೆಯ ನಟ. ನಟನೆ, ನಿರ್ದೇಶನ ಹಾಗೂ ಸಿನಿಮಾ ನಿರ್ಮಾಣದ ಮೇಲೆ ಪ್ಯಾಷನ್‌ ಇರುವಂತಹ ವ್ಯಕ್ತಿ. - ಶಾನ್ವಿ ಶ್ರೀವಾಸ್ತವ್‌

  • ಇದು ಆರ್ಡಿನರಿ ಸಿನಿಮಾ ಅಲ್ಲ. ಇಡೀ ತಂಡದ ಮಹತ್ವಾಕಾಂಕ್ಷೆಯ ಸಿನಿಮಾ. ಮೊದಲು ಅದಕ್ಕೆ ಕಾರಣ ಚಿತ್ರದ ಕತೆ. ಇದೊಂದು ವಿಶೇಷವಾದ ಕತೆ. ಪಿರಿಯಾಡಿಕ್‌, ರೊಮ್ಯಾಂಟಿಕ್‌ ಕಾಮಿಡಿ ಚಿತ್ರ. ಅದರಲ್ಲಿ ರಕ್ಷಿತ್‌ ಶೆಟ್ಟಿಅವರ ಪಾತ್ರ ಹೇಗೆ ವಿಶೇಷವೋ ಹಾಗೆ ನನ್ನ ಪಾತ್ರ ಕೂಡ.
  • ಚಿತ್ರವನ್ನು ಅಚ್ಚುಕಟ್ಟಾಗಿ ತರಬೇಕೆನ್ನುವ ತಂಡದ ಆಸೆಗೆ ತಕ್ಕಂತೆ ಚಿತ್ರೀಕರಣ ನಡೆಯುತ್ತಿದೆ. ಅದಕ್ಕಾಗಿ ತಡವಾಯಿತು ಅಂತ ಪ್ರೇಕ್ಷಕರಿಗೆ ಎನಿಸಿರಬಹುದು. ಆದರೆ ಚಿತ್ರ ತೆರೆಗೆ ಬಂದಾಗ ಅದರ ನಿಜವಾದ ವರ್ಕ್ ಏನು ಅಂತ ಗೊತ್ತಾಗಲಿದೆ. ನಂಗಂತೂ ಒಳ್ಳೆಯ ಪಾತ್ರ ಸಿಕ್ಕ ಖುಷಿಯಿದೆ. ನಾನೆಂದಿಗೂ ಎಷ್ಟುದಿನ ಆಯ್ತು, ಏನಾಯ್ತು ಅಂತಂದುಕೊಂಡಿಲ್ಲ. ಒಳ್ಳೆಯ ಪಾತ್ರ ಸಿಕ್ಕಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕೆನ್ನುವುದಷ್ಟೇ ನನ್ನ ಮುಂದಿದ್ದ ಸವಾಲು.