ನಿಮ್ಮ ಹಿನ್ನೆಲೆ ಏನು?

ಮಾಡೆಲಿಂಗ್ ಲೋಕದಿಂದ ಚಿತ್ರರಂಗ ಬಂದ ನಟಿ ನಾನು. ಸಾಕಷ್ಟು ಉತ್ಪನ್ನಗಳಿಗೆ ಮಾಡೆಲ್ ಆಗಿರುವೆ. ಶೋಗಳಲ್ಲಿ ಭಾಗವಹಿಸಿದ್ದೇನೆ. ನಾನು ಮೂಲತಃ ಕೇರಳ. ಮಲಯಾಳಂ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚಯವಾದವಳು. ಈಗಾಗಲೇ ಎರಡು ಚಿತ್ರಗಳಲ್ಲಿ ನಟಿಸಿದ್ದೇನೆ. ‘ವಿಶ್ವಾಸಂ ಅಂತೆಲ್ಲ ಎಲ್ಲಮ್’ ಹಾಗೂ ‘ಅಡ್ವೆಂಚರ್ ಆಫ್ ಒಮನ್‌ಕುಟ್ಟನ್’ ಈ ಎರಡು ಚಿತ್ರಗಳು ನನಗೆ  ಹೆಸರು ತಂದು ಕೊಟ್ಟಿವೆ. ಈ ಸಿನಿಮಾಗಳನ್ನು ನಾನೂ ನಟಿಯಾಗಬಹುದು ಎನ್ನುವ ವಿಶ್ವಾಸವನ್ನು ಮೂಡಿಸಿದವು.

ಕನ್ನಡದ ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ನಾಯಕಿ ಆಗಿದ್ದು ಹೇಗೆ?

ನಿರ್ಮಾಪಕ ಈ ಚಿತ್ರದ ನಿರ್ಮಾಪಕರಾದ ಕೊಲ್ಲ ಪ್ರವೀಣ್ ಮೂಲಕ ನಾನು ನಿರ್ದೇಶಕ ರಘುರಾಮ್ ಅವರಿಗೆ ಪರಿಚಯವಾದೆ. ಚಿತ್ರದಲ್ಲಿ ನನ್ನ ಪಾತ್ರ ಮತ್ತು ಕತೆಯ ಸಾಲು ಹೇಳಿದರು. ಇಷ್ಟವಾಯಿತು.

ಕನ್ನಡ ಸಿನಿಮಾದಲ್ಲಿ ನಟಿಸುವ ಸಮಸ್ಯೆ ಎದುರಾಯಿತೇ?

ಖಂಡಿತ ಸಮಸ್ಯೆ ಎದುರಾಯಿತು. ನನ್ನ ಮಾತೃಭಾಷೆ ಮಲಯಾಳಂ. ಹೀಗಾಗಿ ಕನ್ನಡ ಕೊಂಚವೂ ಗೊತ್ತಿರಲಿಲ್ಲ. ಆದರೆ, ಮಲಯಾಳಂ ಬಂದವರಿಗೆ ಎಲ್ಲ ಭಾಷೆಯೂ ಬರುತ್ತದೆ ಎನ್ನುವ ಧೈರ್ಯದಲ್ಲಿ ಶೂಟಿಂಗ್ ಸೆಟ್‌ಗೆ ಬಂದ ಮೇಲೆಯೇ ಭಾಷೆಯ ಮಹತ್ವ ಮತ್ತು ಅದನ್ನು ಕಲಿಯಲೇ ಬೇಕು ಎನ್ನುವ ಸಮಸ್ಯೆ ಎದುರಾಯಿತು. ಭಾಷೆ ಗೊತ್ತಿಲ್ಲದಿದ್ದಾಗ ದೃಶ್ಯಗಳಲ್ಲಿ ನಾವು ಹೇಳುವ ಡೈಲಾಗ್ ಹಿನ್ನೆಲೆ ತಿಳಿಯದು. ಹಿನ್ನೆಲೆ ಅಥವಾ ಅರ್ಥ ತಿಳಿಯದಿದ್ದಾಗ ಖಂಡಿತ ಸಮಸ್ಯೆ ಒಂದು ಸಮಸ್ಯೆಯಾಗಿ ಎದುರಾಗುತ್ತದೆ. ಕೊನೆಗೆ ಕನ್ನಡದ ಸಂಭಾಷಣೆಗಳನ್ನು ಇಂಗ್ಲಿಷ್‌ನಲ್ಲಿ ಬರೆದುಕೊಂಡು ಒಮ್ಮೆ ಓದಿ, ತಯಾರಿ ಮಾಡಿಕೊಂಡ ನಂತರವೇ ಕ್ಯಾಮೆರಾ ಮುಂದೆ ಬರುತ್ತಿದೆ.

ನಿಮಗೆ ಈ ಸಿನಿಮಾ ಒಡ್ಡಿದ ಸವಾಲು ಏನು?

ನನ್ನದು ಸಿಕ್ಕಾಪಟ್ಟೆ ಜಾಲಿ ಪಾತ್ರ. ಆದರೆ, ಕತೆ ಮಾತ್ರ ತುಂಬಾ ಎಮೋಷನಲ್ ಆಗಿ ಸಾಗುತ್ತದೆ. ಈ ಎರಡು ವಿರುದ್ಧ ದಿಕ್ಕುಗಳ ನೆರಳಿನಲ್ಲಿ ನಿಂತು ನಟಿಸುವುದು ತುಂಬಾ ಸವಾಲು ಅನಿಸಿತು. ವಿರಾಮದ ನಂತರವಂತೂ ಕತೆಯಲ್ಲಿ ಮತ್ತಷ್ಟು ಭಾವುಕತೆ ಸೇರಿಕೊಳ್ಳುತ್ತದೆ. ಈ ಸವಾಲನ್ನು ನಿಭಾಯಿಸುವುದಕ್ಕೆ ರಘುರಾಮ್ ತುಂಬಾ ಸಹಕಾರ ಮಾಡಿದರು.

ಈ ಚಿತ್ರದಲ್ಲಿ ನಿಮ್ಮ ಪಾತ್ರ ಏನು? ಕತೆಗೆ ಅದು ಯಾವ ರೀತಿ ಮಹತ್ವ ಪಡೆದುಕೊಳ್ಳಲಿದೆ?

ನಾನು ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ ಮಾಡುತ್ತಿದ್ದೇನೆ. ಇದಕ್ಕೆ ವಿಶೇಷವಾದ ತಯಾರಿ ಏನೂ ಮಾಡಿಕೊಂಡಿಲ್ಲ. ನಿರ್ದೇಶಕರು ನನ್ನ ನೋಡಿದಾಗ ನೀವು ಹೇಗಿದ್ದೀರೋ ತೆರೆ ಮೇಲೂ ಹಾಗೆ ಕಾಣಿಸಿಕೊಳ್ಳಿ ಅಂದ್ರು. ನಾನು ನಿರ್ದೇಶಕರು ಹೇಳಿದಂತೆ ಮಾಡಿರುವ ಇನ್ನೂ ಕತೆಯಲ್ಲಿ ಪ್ರಮುಖವಾಗಿ ಅಮ್ಮ, ಮಗ ಮತ್ತು ಒಬ್ಬ ಪೊಲೀಸ್ ಅಧಿಕಾರಿ ಬರುತ್ತಾರೆ. ಈ ಮೂವರಿಗೂ ಸೇತುವೆಯಾಗಿ ನನ್ನ ಪಾತ್ರ ಸಾಗುತ್ತದೆ. ಅಮ್ಮನನ್ನು ಹುಡುಕುತ್ತ ಹೋಗುವ ಮಗನಿಗೆ ಒಬ್ಬ ಪತ್ರಕರ್ತೆ ಬೆನ್ನಿಗೆ ನಿಂತಾಗ ಏನಾಗುತ್ತದೆ ಎಂಬುದನ್ನು ನನ್ನ ಪಾತ್ರದಲ್ಲಿ ನೋಡಬಹುದು.

ನೀವು ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಏನು?

ನನ್ನ ಪಾತ್ರವೇ ಮುಖ್ಯ ಕಾರಣ. ಯಾಕೆಂದರೆ ನನಗೆ ಪತ್ರಕರ್ತೆ ಆಗಬೇಕು ಎಂಬುದು ಬಹು ದೊಡ್ಡ ಕನಸು. ಆದರೆ, ನಾನು ನಿಜ ಜೀವನದಲ್ಲಿ ಈಡೇರದ ಕನಸು ತೆರೆ ಮೇಲೆ ಈಡೇರುತ್ತಿದೆ ಎಂದಾಗ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡೆ.