ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ನಟನೆಯ 'ಎಪಿಕ್' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನಲ್ಲೇ ಹೀರೋ-ಹೀರೋಯಿನ್ ನಡುವಿನ ರೊಮ್ಯಾನ್ಸ್ ಹೈಲೈಟ್ ಆಗಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈ ಟೀಸರ್ ಹೇಗಿದೆ? ಇಲ್ಲಿದೆ ಮಾಹಿತಿ.

‘ಎಪಿಕ್-ಫಸ್ಟ್ ಸೆಮಿಸ್ಟರ್’ ಸಿನಿಮಾ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಿಂದ ಯಾವ ರೀತಿಯ ಕಂಟೆಂಟ್ ಬರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಈಗಾಗಲೇ ಬಿಡುಗಡೆಯಾದ 'ಸಂಚಾರಮೇ' ಹಾಡಿಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ರಿಲೀಸ್ ಆಗಿರುವ ಟೀಸರ್ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ‘ಎಪಿಕ್’ ಟೀಸರ್ ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯರ ಕಥೆಯನ್ನು ಕೇಂದ್ರವಾಗಿಟ್ಟುಕೊಂಡು ಸುಂದರ ಅನುಭವ ನೀಡುತ್ತದೆ.

'ಬೇಬಿ' ಸಿನಿಮಾದ ನಂತರ ಈ ಜೋಡಿಗೆ ಈಗಾಗಲೇ ಉತ್ತಮ ಅಭಿಮಾನಿ ಬಳಗವಿದೆ. ಇದೀಗ ಈ ಹಿಟ್ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಸಿದ್ಧವಾಗಿದೆ. '90s' ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮನಗೆದ್ದ ನಿರ್ದೇಶಕ ಆದಿತ್ಯ ಹಾಸನ್, ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಲಂಡನ್ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರ ಒಂದು ಸುಂದರ ಪ್ರೇಮಕಥೆಯಂತೆ ಕಾಣುತ್ತಿದೆ. ಆಧುನಿಕ ಸಂಬಂಧಗಳು ಮತ್ತು ಪ್ರೀತಿಯಲ್ಲಿನ ಭಾವನೆಗಳನ್ನು ಈ ಸಿನಿಮಾ ತೋರಿಸಲಿದೆ.

ಈ ಕಥೆಯಲ್ಲಿ ಆನಂದ್ ದೇವರಕೊಂಡ ಇಂಟ್ರೋವರ್ಟ್ (ಅಂತರ್ಮುಖಿ) ಪಾತ್ರದಲ್ಲಿ ಕಾಣಿಸಿಕೊಂಡರೆ, ವೈಷ್ಣವಿ ಚೈತನ್ಯ ಸಂಪೂರ್ಣವಾಗಿ ಎಕ್ಸ್‌ಟ್ರೋವರ್ಟ್ (ಬಹಿರ್ಮುಖಿ) ಪಾತ್ರದಲ್ಲಿ ಮಿಂಚಲಿದ್ದಾರೆ. ಇಬ್ಬರ ನಡುವಿನ ಲಿಪ್‌ಲಾಕ್ ದೃಶ್ಯಗಳು ಮತ್ತು ಬೋಲ್ಡ್ ರೊಮ್ಯಾನ್ಸ್ ಗಮನ ಸೆಳೆಯುತ್ತಿದೆ. ರೊಮ್ಯಾಂಟಿಕ್ ಹೀರೋ ಆಗಿ ವಿಜಯ್ ದೇವರಕೊಂಡ ಗುರುತಿಸಿಕೊಂಡಿದ್ದು, ಈಗ ತಮ್ಮ ಆನಂದ್ ಕೂಡ ಅಣ್ಣನ ದಾರಿಯಲ್ಲೇ ಸಾಗುತ್ತಿದ್ದಾರೆ.

ಹೈದರಾಬಾದ್‌ನ ಎಎಂಬಿ ಸಿನಿಮಾಸ್‌ನಲ್ಲಿ ನಡೆದ 'ಎಪಿಕ್' ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ಆನಂದ್ ದೇವರಕೊಂಡ ಮಾತನಾಡಿದರು. 'ಆದಿತ್ಯ ಹಾಸನ್ ಈ ಕಥೆ ಹೇಳಿದಾಗ, ನನ್ನ ಕಥೆಯನ್ನೇ ನನಗೆ ಹೇಳಿದಂತಾಯಿತು. ಯಾಕಂದ್ರೆ ನಾನೂ ವಿದೇಶದಲ್ಲಿ ಓದಿದ್ದೇನೆ. ಈ ಕಥೆಯ ಭಾವನೆಗಳು ಎಲ್ಲರಿಗೂ ಇಷ್ಟವಾಗುತ್ತವೆ. ಸಿತಾರ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯಲ್ಲಿ ಸಿನಿಮಾ ಮಾಡಿದ್ದು ಖುಷಿ ತಂದಿದೆ. ಜರ್ಸಿ, ಟಿಲ್ಲು, ಮ್ಯಾಡ್‌ನಂತಹ ಹಿಟ್ ಸಿನಿಮಾಗಳ ಸಾಲಿಗೆ ಎಪಿಕ್ ಸೇರುತ್ತದೆ' ಎಂದರು.

ಕಥೆ ನನಗೆ ತುಂಬಾ ಇಷ್ಟ

ನಾಯಕಿ ವೈಷ್ಣವಿ ಚೈತನ್ಯ ಮಾತನಾಡಿ, 'ಸಂಚಾರಮೇ ಹಾಡಿಗೆ ಪ್ರೀತಿ ತೋರಿಸಿದ ಎಲ್ಲರಿಗೂ ಧನ್ಯವಾದ. ಎಪಿಕ್ ಕಥೆ ನನಗೆ ತುಂಬಾ ಇಷ್ಟವಾಯಿತು. ನಾನು ನಿರ್ವಹಿಸಿದ ಕಡಲಿ ಪಾತ್ರ ತುಂಬಾ ಚೆನ್ನಾಗಿದೆ. ಈ ಸಿನಿಮಾದಲ್ಲಿನ ಪ್ರತಿಯೊಂದು ಪಾತ್ರವನ್ನು ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ. ಇದು ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ. ನಿಮ್ಮ ಕುಟುಂಬದೊಂದಿಗೆ ಈ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿ' ಎಂದು ಹೇಳಿದರು.