ಧೂಮಪಾನ ನಿಷೇಧ ಮಾಡುವ ಕುರಿತಾದ ಜಾಹೀರಾತಿನಲ್ಲಿ ಬರುವ ಈ ಮಾತು ಯಾವ ಮಟ್ಟಿಗೆ ಪ್ರಚಲಿತ ಅಂದರೆ ಅದು ಒಂದು ಸಿನಿಮಾ ಹೆಸರಾಗುವ ಮಟ್ಟಿಗೆ. ಹೌದು, ಕನ್ನಡದಲ್ಲೇ ‘ಈ ಪಟ್ಟಣಕ್ಕೆ ಏನಾಗಿದೆ?’ ಎನ್ನುವ ಹೆಸರಿನಲ್ಲೊಂದು ಸಿನಿಮಾ ಸೆಟ್ಟೇರಿರುವುದು ಎಲ್ಲರಿಗೂ ಗೊತ್ತಿದೆ.

ಒಂದು ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು. ರವಿ ಸುಬ್ಬರಾವ್ ಅವರೇ ಈ ಚಿತ್ರದ ನಾಯಕ, ನಿರ್ಮಾಪಕ ಹಾಗೂ ನಿರ್ದೇಶಕ. ಸೋನಾ ನಿಷಾ, ರಾಧಿಕಾ ರಾಮ್, ದಿಶಾ ಕೃಷ್ಣಯ್ಯ, ಸಂಧ್ಯಾ ವೇಣು ಚಿತ್ರದ ನಾಯಕಿಯರು. ‘ನಗರ ಬದುಕಿನ ಕರಾಳತೆ, ಜೂಜಾಟಗಳನ್ನು ತಿಳಿಯಪಡಿಸಲು ಈ ಚಿತ್ರ ಮಾಡಲಾಗುತ್ತಿದೆ. ಅಂದರೆ ನಗರಗಳಲ್ಲಿ ನಡೆಯುವ ಬೆಟ್ಟಿಂಗ್, ಗ್ಯಾಂಬ್ಲಿಂಗ್, ಕ್ರೈಂ ಈ ಚಿತ್ರದ ಮುಖ್ಯ ಅಂಶಗಳು. ಇವುಗಳ ಸುತ್ತ ಕಥೆ ಮಾಡಿದ್ದೇನೆ. ಸಿನಿಮಾ ಶುರುವಾಗುವುದಕ್ಕೂ ಮುಂಚೆ ಜಾಹೀರಾತಿನಲ್ಲಿ ಬರುವ ಸ್ಲೋಗನ್ ನೋಡಿದಾಗ ನನ್ನ ಕತೆಗೆ ಇದೇ ಸೂಕ್ತ ಟೈಟಲ್ ಅನಿಸಿ ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ನಿರ್ದೇಶಕ ರವಿ ಸುಬ್ಬರಾವ್.

ಈಗಾಗಲೇ 70 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು, ಇನ್ನೂ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಮಾಡಬೇಕಿದೆ. ಮಂಗಳೂರಿನಲ್ಲಿ ಕ್ಲೈಮ್ಯಾಕ್ಸ್ ಪಾರ್ಟ್ ಚಿತ್ರೀಕರಣ ಮಾಡಲಾಗುವುದು. ಯುವಕರು ಅಡ್ಡದಾರಿ ಹಿಡಿದಾಗ
ಏನಾಗುತ್ತದೆ, ಅವರನ್ನು ಸರಿ ದಾರಿಗೆ ತರುವುದು ಹೇಗೆ ಎಂಬುದಕ್ಕೆ ನೀವು ‘ಈ ಪಟ್ಟಣಕ್ಕೆ ಏನಾಗಿದೆ?’ ಎನ್ನುವ ಸಿನಿಮಾ ನೋಡಬೇಕು ಎಂಬುದು ಚಿತ್ರತಂಡದ ಮನವಿ. ‘ಹೆಸರಿನಷ್ಟೆ ಕತೆ ಕೂಡ ಭಿನ್ನವಾಗಿದೆ. ಹೀಗಾಗಿ ಚಿತ್ರದಲ್ಲಿ
ನಟಿಸುವುದಕ್ಕೆ ಒಪ್ಪಿಕೊಳ್ಳಲಾಗಿದೆ. ಎಲ್ಲ ವರ್ಗದ ಪ್ರೇಕ್ಷಕರು ನೋಡುವಂತಹ ಸಿನಿಮಾ ಇದು’ ಎಂಬುದು ಚಿತ್ರದ ನಾಯಕಿಯರಲ್ಲೊಬ್ಬರಾದ ಸೋನಾಲಿ ಅವರ ಮಾತು. ಚಿತ್ರದ ಮತ್ತೊಬ್ಬ ನಾಯಕಿ ದಿಶಾ ಕೃಷ್ಣಯ್ಯ, ಮಾಡೆಲಿಂಗ್
ಲೋಕದಿಂದ ಬಂದವರು. ಅವರಿಗೆ ಇದು ಮೊದಲ ಸಿನಿಮಾ. ಅಂದಹಾಗೆ ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಇಡೀ ಚಿತ್ರವನ್ನು ಐ ಫೋನ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಐದು ತಿಂಗಳ ಕಾಲ ಪೂರ್ವಭಾವಿಯಾಗಿ ತರಬೇತಿ ಮಾಡಿಕೊಂಡೇ ಶೂಟಿಂಗ್ ಮಾಡಲಾಗಿದೆಯಂತೆ.