ವರನಟ ಡಾ. ರಾಜ್ ಹುಟ್ಟುಹಬ್ಬದ ಸ್ಮರಣೆ

Dr Rajkumar Birthday Special Article
Highlights

ಏಪ್ರಿಲ್ 24 ವರನಟ ಡಾ॥ ರಾಜ್‌ಕುಮಾರ್ ಅವರ 89 ನೇ ಜನ್ಮದಿನದ ಸಂಭ್ರಮಾಚರಣೆ. ಡಾ॥ ರಾಜ್ ಅಮರರಾದ ಏಪ್ರಿಲ್-12 ರಿಂದಲೇ ರಾಜಸ್ಮರಣೆ ಮೊದಲಾಗಿದೆ. ಡಾ॥ ರಾಜ್ ನಮ್ಮನ್ನು ಅಗಲಿ ಹನ್ನೆರಡು ವರ್ಷಗಳಾಗಿವೆ. ಡಾ॥ ರಾಜ್ ಅನುಪಸ್ಥಿತಿಯಲ್ಲಿಯೂ ಅವರನ್ನು ಸ್ಮರಿಸುವ ಅನೇಕ ಸಂದರ್ಭಗಳು ತಾನಾಗಿಯೇ ಒದಗಿ ಬರುತ್ತವೆ. 

ಬೆಂಗಳೂರು:  ಏಪ್ರಿಲ್ 24 ವರನಟ ಡಾ॥ ರಾಜ್‌ಕುಮಾರ್ ಅವರ 89 ನೇ ಜನ್ಮದಿನದ ಸಂಭ್ರಮಾಚರಣೆ. ಡಾ॥ ರಾಜ್ ಅಮರರಾದ ಏಪ್ರಿಲ್-12 ರಿಂದಲೇ ರಾಜಸ್ಮರಣೆ ಮೊದಲಾಗಿದೆ. ಡಾ॥ ರಾಜ್ ನಮ್ಮನ್ನು ಅಗಲಿ ಹನ್ನೆರಡು ವರ್ಷಗಳಾಗಿವೆ. ಡಾ॥ ರಾಜ್ ಅನುಪಸ್ಥಿತಿಯಲ್ಲಿಯೂ ಅವರನ್ನು ಸ್ಮರಿಸುವ ಅನೇಕ ಸಂದರ್ಭಗಳು ತಾನಾಗಿಯೇ ಒದಗಿ ಬರುತ್ತವೆ. 

ಮಹಾ ಮಜ್ಜನ  

ದಶಕಗಳ ಹಿಂದೆ ತಮ್ಮ ಅಭಿಮಾನದ ಮಹಾ ಸಾಮ್ರಾಜ್ಯವನ್ನು ದಾಟಿ ಏಕಾಂಗಿಯಾಗಿ ಧ್ಯಾನಸ್ಥ ಸ್ಥಿತಿಯಲ್ಲಿ ಉಳಿದುಕೊಳ್ಳಬೇಕೆಂಬ ಅಂತರಾಳದ ಸಂಕಲ್ಪವೊಂದು ರಾಜ್‌ರಲ್ಲಿ ಉದ್ದೀಪನವಾಯಿತು. ಆ ಸಂಕಲ್ಪದ ಸಾಕಾರ ರೂಪವಾಗಿ ಅವರಿಗೆ ಗೋಚರವಾದದ್ದು ಬಾಹುಬಲಿಯ ಅರ್ಥಾತ್ ಗೊಮ್ಮಟೇಶ್ವರನ ಮಹಾ ಮಜ್ಜನ. ತಾವೊಬ್ಬರೇ ಹೋಗಿ ಜನರ ಮಧ್ಯದಿಂದ ಆ ಪವಿತ್ರ ದೃಶ್ಯವನ್ನು ಕಣ್ತುಂಬಾ ಕಂಡು ಆನಂದಿಸಬೇಕೆಂಬ ಹಂಬಲ. ಆದರೆ ಅದು ಸಾಧ್ಯವೆ? ಕೊನೆಗೆ ವೇಷ ಭೂಷಣಗಳನ್ನು ಬದಲಿಸಿ ಗಡ್ಡ ಮೀಸೆಗಳನ್ನು ಅಂಟಿಸಿಕೊಂಡಾದರೂ ಮಾರು ವೇಷದಲ್ಲಿ ಜನರ ಗುಂಪಿನ ನಡುವೆ ಶ್ರವಣ ಬೆಳಗೊಳಕ್ಕೆ ಹೋಗಿ ಮಹಾ ಮಜ್ಜನವನ್ನು ದರ್ಶಿಸಿ ಆತ್ಮಾನಂದ ಹೊಂದಬೇಕೆಂಬ ಮಹದಾಸೆ ಅವರಲ್ಲಿ ಅಗಾಧವಾಗಿ ಕಾಡಿತ್ತು. ಆದರೆ ಅವರ ಮಹದಾಸೆ ಅಂದಿನ ಪರಿಸ್ಥಿತಿಯಲ್ಲಿ ಪ್ರತ್ಯಕ್ಷವಾಗಿ ಈಡೇರದಿದ್ದರೂ ಪರೋಕ್ಷವಾಗಿ ಕೈಗೂಡಿತು. ಅದು ಅಂದಿನ ದೂರದರ್ಶನದ ಮೂಲಕ. ಆಗಿನ್ನೂ ಖಾಸಗಿ ಛಾನೆಲ್‌ಗಳ ಪ್ರಸಾರಗಳು ಆರಂಭಗೊಂಡಿರಲಿಲ್ಲ. ಕನ್ನಡದ ಕಾರ್ಯಕ್ರಮಗಳಿಗಾಗಿ ದೂರದರ್ಶನವನ್ನೇ ಕಾಯಬೇಕಿತ್ತು. ಆಗ ಮಹಾ ಮಸ್ತಕಾಭಿಷೇಕವನ್ನು ದೂರದರ್ಶನದಿಂದ ವಿಶೇಷವಾಗಿ ಪ್ರಸಾರ ಮಾಡಿದ್ದರು. ಮನೆಯಲ್ಲಿಯೇ ಕುಳಿತು ಮಹಾಮಜ್ಜನದ ದೃಶ್ಯ ವೈಭವವನ್ನು ರಾಜ್ ಆನಂದದಿಂದ ವೀಕ್ಷಿಸಿದರು. ತಾನೇ ಸ್ವಯಂ ಅಲ್ಲಿಗೆ ತೆರಳಿದ್ದರೂ ಸಹ ಅಷ್ಟು ಹತ್ತಿರದಿಂದ ನೋಡುವ ಸುಯೋಗ ದೊರೆಯುತ್ತಿತ್ತೋ ಇಲ್ಲವೋ ಎಂದು ಮಕ್ಕಳಂತೆ ಸಂಭ್ರಮಿಸಿದ ರಾಜ್, ಆ ಮನೋಹರ ಮಹಾ ಮಜ್ಜನವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಗೊಮ್ಮಟೇಶ್ವರನ ಬೃಹತ್ ಶಿಲಾ ಮೂರ್ತಿಗೆ ಮುಡಿಯಿಂದ ಅಡಿಯವರೆಗೆ ಹಾಲಿನ ಅಭಿಷೇಕ ಮಾಡುತ್ತಿದ್ದರೆ ತಮಗೆ ಒಂದು ಬಗೆಯ ರೋಮಾಂಚನ. ಹೇಳಿಕೊಳ್ಳಲು ಆಗದಂಥ ಅನಿರ್ವಚನೀಯ ಆನಂದದ ಅನುಭವವಾಗಿ ಗೊತ್ತಾಗದ ಹಾಗೆ ತಮ್ಮ ಕಣ್ಣಿನಿಂದ ಅಶ್ರುತರ್ಪಣವಾಯಿತೆಂದು ಸ್ವಾನುಭವವನ್ನು ಹಂಚಿಕೊಂಡಿದ್ದರು. ವಿರಾಟ್ ವಿರಾಗಿಯ  ಮಹಾಮಜ್ಜನಕ್ಕೂ, ರಾಜ್ ಕಣ್ಣೀರಿಗೂ ಸಂಬಂಧವಿರಬಹುದು ಅರಿವಿಗೆ ಇದು ದೊಡ್ಡ ವಿಚಾರ. 

ಅತಿಲೋಕ ಸುಂದರಿ ಶ್ರೀದೇವಿ 
ಇತ್ತೀಚೆಗೆ ಅಕಾಲ ಮರಣಕ್ಕೆ ಈಡಾದ ಭಾರತೀಯ ಸಿನಿಮಾದ ಅತಿಲೋಕ ಸುಂದರಿ ಶ್ರೀದೇವಿ ಬಹುಭಾಷಾ ತಾರೆಯಾಗಿ ಮಾಡಿದ ಸಾಧನೆಯನ್ನು ಬಹುತೇಕ ಎಲ್ಲಾ ಭಾಷಾ ಪತ್ರಿಕೆಗಳು ಬರೆದವು. ಕನ್ನಡವೂ ಹೊರತಾಗಿರಲಿಲ್ಲ. ಮುಖ್ಯವಾಗಿ ಶ್ರೀದೇವಿ ಬಾಲನಟಿಯಾಗಿ ರಾಜ್‌ರ ಭಕ್ತಕುಂಬಾರ ಚಿತ್ರದಲ್ಲಿ ನಟಿಸಿದ್ದು ಸಹ ಉಲ್ಲೇಖವಾಯಿತು. ಆದರೆ  ಶ್ರೀದೇವಿ ರಾಜ್‌ಕುಮಾರ್‌ರೊಂದಿಗೆ ನಾಯಕಿಯಾಗಿ ನಟಿಸಬೇಕಾಗಿದ್ದ ಬಗ್ಗೆಯಾಗಲೀ, ಆ ಪ್ರಯತ್ನದ ಬಗ್ಗೆಯಾಗಲೀ ಎಲ್ಲಿಯೂ ಪ್ರಸ್ತಾಪವಾಗಲಿಲ್ಲವಾದ್ದರಿಂದ ಈ ನೇಪಥ್ಯ ಸಂಗತಿಗೆ ಪುಟ್ಟ ಮೆಲುಕು.  ಶ್ರೀದೇವಿಯವರನ್ನು ರಾಜ್ ನಾಯಕಿಯಾಗಿಸಲು ಪ್ರಯತ್ನಿಸಿದ ಮೊದಲ ನಿರ್ಮಾಪಕರು ದಿಗ್ಗಜ ಕೆ.ಸಿ.ಎನ್.ಗೌಡರು. ಕನ್ನಡದ ಅದ್ಧೂರಿ ಐತಿಹಾಸಿಕ ‘ಹುಲಿಯ ಹಾಲಿನ ಮೇವು’ (ರಾಜ್‌ರ ಮೊದಲ ಸಿನಿಮಾ ಸ್ಕೋಪ್ ಚಿತ್ರ) ಚಿತ್ರಕ್ಕಾಗಿ ರಾಜ್ ಎದುರು ಇಬ್ಬರು ನಾಯಕಿಯರ ಅನಿವಾರ್ಯವಿದ್ದಾಗ ಗೌಡರ ಪರಿಕಲ್ಪನೆಯಲ್ಲಿ ಮೂಡಿದ್ದೇ ಅಂದಿನ  ದಕ್ಷಿಣದ ಟಾಪ್ ತಾರೆಯರಾದ ಶ್ರೀದೇವಿ ಮತ್ತು ಜಯಪ್ರದ. ತಾರೆ ಜಯಪ್ರದ ಆಯ್ಕೆ ಮುಗಿಸಿ ಗೌಡರು ಶ್ರೀದೇವಿಯವರಲ್ಲಿ ಕಾಲ್ ಶೀಟ್‌ಗೆ ಹೋದಾಗ ಅದಾಗ ತಾನೆ ಶ್ರೀದೇವಿಯವರು ತೆಲುಗು ಚಿತ್ರವೊಂದಕ್ಕೆ ತೊಡಗಿಸಿಕೊಂಡಿದ್ದರಿಂದ ಡೇಟ್ಸ್ ಹೊಂದಾಣಿಕೆಯಾಗಲಿಲ್ಲ. ಶ್ರೀದೇವಿಯವರಿಗೆ ರಾಜ್ ನಾಯಕಿಯಾಗಿ ನಟಿಸುವ ಆಕಾಂಕ್ಷೆ ಇದ್ದರೂ ಡೇಟ್ಸ್ ಹೊಂದಾಣಿಕೆಯ ಮನವಿಯನ್ನು ಮಾಡಿಕೊಂಡರು. ಅದಾಗಲೇ ಗೌಡರು ಚಿತ್ರದ ಶೆಡ್ಯೂಲ್‌ಗಳನ್ನು ನಿರ್ಧರಿಸಿದ್ದರಿಂದ ಶ್ರೀದೇವಿಯವರಿ–ಗಾಗಿ ಕಾಯುವಂತಿರಲಿಲ್ಲ. ಹೀಗಾಗಿ ರಾಜ್-ಶ್ರೀದೇವಿ ಜೋಡಿಯನ್ನು ಕನ್ನಡದ ಬೆಳ್ಳಿತೆರೆಯಲ್ಲಿ ನೋಡುವ ಅವಕಾಶ ಚಿತ್ರ ರಸಿಕರ ಪಾಲಿಗೆ ಇಲ್ಲವಾಯಿತು. ನಂತರ ಶ್ರೀದೇವಿ ಪಾತ್ರವನ್ನು ಜಯಪ್ರದ ಅವರು ಹಾಗೆಯೇ ಜಯಪ್ರದರ ಪಾತ್ರವನ್ನು ಜಯಚಿತ್ರ ಅವರು ನಿರ್ವಹಿಸಿದರು. ಚಿತ್ರದ ಅವಕಾಶ ಅನಿವಾರ್ಯವಾಗಿ ಕೈ ತಪ್ಪಿದ್ದರಿಂದ ಶ್ರೀದೇವಿ ನೊಂದುಕೊಂಡ ಬಗ್ಗೆ ಗೌಡರು ನೆನಪಿಸಿಕೊಂಡಿದ್ದರು. ರಾಜ್ ಬಗ್ಗೆ ಶ್ರೀದೇವಿ ಅವರಿಗೆ ಅಪಾರವಾದ ಗೌರವವಿತ್ತು. ಕವಿರತ್ನ ಕಾಳಿದಾಸ ಸೆಟ್‌ಗೆ ಆಗಮಿಸಿ ರಾಜ್‌ರಿಂದ ಆಶೀರ್ವಾದವನ್ನು ಪಡೆದುಕೊಂಡಿದ್ದರು.

ರಾಜಕೀಯ
ನಾಡಿನಲ್ಲಿ ರಾಜಕೀಯದ ಕಾವು ಚುನಾವಣೆಯ ದೃಷ್ಟಿಯಿಂದ ತಾರಕಕ್ಕೆ ಏರಿದೆ. ಈ ಸಂದರ್ಭದಲ್ಲಿಯೂ ಡಾ॥ ರಾಜ್ ನೆನಪಾಗುವುದು ಈ ರಾಜಕೀಯದ ಹಿನ್ನೆಲೆಯಿಂದಲೇ. ರಾಜಕೀಯದ ಕುರಿತಂತೆ ನಿರ್ಲಿಪ್ತತೆಯನ್ನು ಕೊನೆಯವರೆಗೂ ಕಾಯ್ದುಕೊಂಡು ಬಂದ ರಾಜ್ ನಿಲುವು ಕನ್ನಡಿಗರಿಗೆ ಬಹು ಪ್ರಿಯ. ಅಂತೆಯೇ ರಾಜಕೀಯದ ಕುರಿತಂತೆ ರಾಜ್ ಪ್ರತಿಕ್ರಿಯೆ ಇಲ್ಲಿ ಸಾಂದರ್ಭಿಕವೂ ಹೌದೆನಿಸುತ್ತದೆ. ‘‘ರಾಜಕೀಯ ಜಂಜಾಟದ ನಡುವೆ ನಾನೆಂದಿಗೂ ತಲೆಹಾಕಿ  ಕೆಡಿಸಿಕೊಂಡವನಲ್ಲ. ತಿಗಣೆ ತರಹ ಸಾಯ್ತಾ ಇದ್ದಾರೆ. ದಿನಪತ್ರಿಕೆ ತಿರುವಿ ಹಾಕಿದ್ರೆ ಇದೇ ಸುದ್ದಿ. ಎಲ್ಲಿಗೆ ಹೋಯಿತು ಗಾಂಧಿ ಅಹಿಂಸೆಯ ಕೂಗು. ಯಾಕೆ ಯಾರಿಗೂ ಕೇಳಿಸ್ತಾ ಇಲ್ವೆ? ನಮ್ಮ ಮನೆಯಲ್ಲೇ ಕತ್ತೆ ಸತ್ತು ಬಿದ್ದಿದೆ ಪಕ್ಕದವರ ಗೋಳೇಕೆ ನಮಗೆ ಎಂಬ ಸ್ಥಿತಿಯಲ್ಲಿರುವ ಜನರಿಗೆ ದೇಶದ ಚಿಂತನೆ ಮಾಡಲು ಸಮಯವೆಲ್ಲಿದೆ. ಅಷ್ಟೊಂದು ನಿಶ್ಚಿಂತೆಯಾಗಿದ್ದರೆ ತಾನೆ ಯೋಚಿಸಲು.

-ಎಸ್ ಜಗನ್ನಾಥ ರಾವ್ ಬಹುಳೆ 

loader