ಅಂದಿಗೂ ಹಾಗೂ ಇಂದಿಗೂ ಕೂಡ ಈ ಸ್ಟಾರ್ ವಾರ್‌ ಕನ್ನಡ ಚಿತ್ರರಂಗ ಸೇರಿದಂತೆ ಬಹುತೇಕ ಸಿನಿರಂಗದಲ್ಲಿ ಇದ್ದೇಇದೆ. ಪುಟ್ಟಣ್ಣ ಕಣಗಾಲ್ ಸೇರಿದಂತೆ ಹಲವರು ಸಲಹೆ ನೀಡಿದ್ದರೂ ಅದನ್ನು ಅಂದು ಗಂಭೀರವಾಗಿ ತೆಗೆದುಕೊಳ್ಳದ ವಿಷ್ಣುವರ್ಧನ್ ಅವರು ರಾಜ್‌ಕುಮಾರ್ ಎದುರು 'ಗಂಧದ ಗುಡಿ' ಚಿತ್ರದಲ್ಲಿ ವಿಲನ್ ಆಗಿಬಟ್ಟರು

ಕನ್ನಡ ಚಿತ್ರರಂಗದ ಮೇರುನಟರ ಸಾಲಿನಲ್ಲಿ ನಿಲ್ಲುವ ವ್ಯಕ್ತಿಗಳಲ್ಲಿ ಡಾ ರಾಜ್‌ಕುಮಾರ್ (Dr Rajkumar) ಹಾಗೂ ಡಾ ವಿಷ್ಣುವರ್ಧನ್ (Dr Vishnuvardhan) ಪ್ರಮುಖ ನಟರು. ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತ್‌ ನಾಗ್ ಹಾಗೂ ಶಂಕರ್‌ ನಾಗ್ ಈ ಎಲ್ಲರೂ ಕೂಡ ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆದು ಮೇರು ನಟರು ಎನ್ನಿಸಿದ್ದಾರೆ. ನಟ ವಿಷ್ಣುವರ್ಧನ್ ಅವರು ಡಾ ರಾಜ್‌ಕುಮಾರ್ ನಂತರದ ಜನರೇಶ್‌ನ್ ಸ್ಟಾರ್ ನಟರು. ಅವರಿಬ್ಬರಲ್ಲಿ 21 ವರ್ಷಗಳಷ್ಟು ಅಂತರವಿತ್ತು. ಅಷ್ಟೇ ಅಲ್ಲ, ನಟ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದಾಗ ಡಾ ರಾಜ್‌ಕುಮಾರ್ ಅವರು ಆಗಲೇ 150 ಸಿನಿಮಾಗಳನ್ನು ಮಾಡಿ ಮುಗಿಸಿದ್ದರು. ಹೀಗಾಗಿ, ಅವರಿಬ್ಬರ ಮಧ್ಯೆ ಹೋಲಿಕೆ ಅಸಾಧ್ಯ ಎಂಬುದನ್ನು ಮೊಟ್ಟಮೊದಲು ಗಮನಿಸಬೇಕು.

ಹೌದು, ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅವರಿಬ್ಬರ ಮಧ್ಯೆ ಹೋಲಿಕೆ ಮಾಡುವುದೇ ಮಹಾ ತಪ್ಪು. ಆದರೂ ಇಡೀ ಕನ್ನಡ ಚಿತ್ರರಂಗ ಹಾಗೂ ಸಿನಿಪ್ರೇಕ್ಷಕರು ಯಾವತ್ತೂ ಅದನ್ನು ಮಾಡಿದ್ದಾರೆ. ಅದೇನೇ ಇದ್ದರೂ ಡಾ ರಾಜ್‌ಕುಮಾರ್ 2007 ಸಿನಿಮಾಗಳನ್ನು ಮಾಡಿದ್ದರೆ ವಿಷ್ಣುವರ್ಧನ್ ಅವರು 21 ವರ್ಷಗಳ ಬಳಿಕ ಚಿತ್ರರಂಗಕ್ಕೆ ಬಂದರೂ 200ಕ್ಕೂ ಮೀರಿ ಸಿನಿಮಾ ಮಾಡಿದ್ದಾರೆ. ಹೋಲಿಕೆ ಮಾಡುವವರು ಇದಕ್ಕೇನು ಹೇಳ್ತಾರೆ? ಯಾವುದೇ ರೀತಿಯಲ್ಲೂ ಅವರಿಬ್ಬರ ಮಧ್ಯೆ ಹೋಲಿಕೆ ಮಾಡದಿದ್ದರೆ, ಕನ್ನಡ ಚಿತ್ರರಂಗದಲ್ಲಿ ಅವರಿಬ್ಬರಿಗೂ ವಿಶೇಷ ಸ್ಥಾನವಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.

ಹಾಗಿದ್ದರೂ ಕೂಡ ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಅವರಿಬ್ಬರ ಅಭಿಮಾನಿಗಳ ಮಧ್ಯೆ ಸ್ಟಾರ್ ವಾರ್ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಈಗಲೂ ಆ ಸ್ಟಾರ್‌ ವಾರ್‌ ನಿಂತಿಲ್ಲ ಎಂಬುದು ಹೇಳಬಾರದ ಕಹಿ ಸತ್ಯ. ಆದರೆ, ಅವರಿಬ್ಬರ ಮಧ್ಯೆ ಅಷ್ಟು ದೊಡ್ಡ ರೀತಿಯಲ್ಲಿ ಸ್ಟಾರ್ ವಾರ್ ನಡೆಯಲು ನಿಜವಾದ ಕಾರಣ ಏನು ಎಂಬುದು ಇಂದಿಗೂ ಎಷ್ಟು ನಿಗೂಢವೋ ಅಷ್ಟೇ ಚರ್ಚೆಗೆ ಆಹಾರವಾಗುವ ಸಂಗತಿ ಕೂಡ. ಕೆಲವರು ಕೆಲವು ಘಟನೆಗಳನ್ನು, ಕೆಲವು ಸಂಗತಿಗಳನ್ನು ಹೇಳುತ್ತಾರೆ. ಆದರೆ ಅದರಲ್ಲಿ ಯಾವುದು ಸತ್ಯವೋ ಯಾವುದು ಸುಳ್ಳೋ ಎಂಬುದನ್ನು ಹೇಳಲು ಕಷ್ಟವೇ ಸರಿ.

ಆದರೆ, ಬಹುತೇಕರು ಹೇಳುವ ಪ್ರಕಾರ, ಡಾ ರಾಜ್‌ಕುಮಾರ್ ಕನ್ನಡದ ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿರುವ ಸಮಯದಲ್ಲಿ ವಿಷ್ಣುವರ್ಧನ್ ಎಂಬ ಇನ್ನೊಬ್ಬ ನಟ ಸ್ಟಾರ್ ಆಗಿ ಉದಯಿಸಿದ್ದನ್ನು ಡಾ ರಾಜ್‌ ಅಭಿಮಾನಿಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಅಲ್ಲಿಂದ ಶುರುವಾದ ಡಾ ರಾಜ್ ಅಭಿಮಾನಿಗಳ ಅಸಹನೆ, 'ಗಂಧದ ಗುಡಿ' ಚಿತ್ರದ ಘಟನೆಯ ಬಳಿಕ ಇನ್ನಷ್ಟು ಹೆಚ್ಚಾಯಿತು ಎನ್ನಲಾಗುತ್ತದೆ. ಅಷ್ಟೇ ಅಲ್ಲ, ಡಾ ರಾಜ್‌ ಎದುರು ನಟ ವಿಷ್ಣು ವಿಲನ್ ರೋಲ್ ಮಾಡಿದ್ದೇ ಜೀವನದಲ್ಲಿ ಅವರು ಮಾಡಿರೋ ದೊಡ್ಡ ತಪ್ಪು ಎಂದು ಬಹುತೇಕರು ಅಭಿಪ್ರಾಯ ಪಡುತ್ತಾರೆ.

ಕಾರಣ, ಸಿನಿಮಾ ಪಾತ್ರಗಳನ್ನೂ ಸಿನಿಮಾ ಅಭಿಮಾನಿಗಳು ರಿಯಲ್ ಅಂದುಕೊಳ್ಳುವಷ್ಟು ಅಪ್ರಬುದ್ಧರಾಗಿರುತ್ತಾರೆ ಎಂಬುದು ವಾಸ್ತವ. ಅಂದಿಗೂ ಹಾಗೂ ಇಂದಿಗೂ ಕೂಡ ಈ ಸ್ಟಾರ್ ವಾರ್‌ ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಬಹುತೇಕ ಸಿನಿರಂಗದಲ್ಲಿ ಇದ್ದೇಇದೆ. ಪುಟ್ಟಣ್ಣ ಕಣಗಾಲ್ ಸೇರಿದಂತೆ ಹಲವರು ಸಲಹೆ ನೀಡಿದ್ದರೂ ಕೂಡ ಅವದನ್ನು ಅಂದು ಗಂಭೀರವಾಗಿ ತೆಗೆದುಕೊಳ್ಳದ ನಟ ವಿಷ್ಣುವರ್ಧನ್ ಅವರು ಡಾ ರಾಜ್‌ಕುಮಾರ್ ಎದುರು 'ಗಂಧದ ಗುಡಿ' ಚಿತ್ರದಲ್ಲಿ ಖಳನಾಯಕರಾಗಿ ನಟಿಸಿಬಿಟ್ಟರು.

ಮೊದಲೇ ನಟ ವಿಷ್ಣುವರ್ಧನ್ ಅವರನ್ನು ಡಾ ರಾಜ್‌ಕುಮಾರ್ ಅವರನ್ನು ಸೋಲಿಸಲು ಬಂದ ನಟ ಎಂಬ ಅಭಿಪ್ರಾಯದಲ್ಲಿ ಕಂಗೆಟ್ಟಿದ್ದ ಅಣ್ಣಾವ್ರ ಅಭಿಮಾನಿಗಳು ವಿಷ್ಣುವರ್ಧನ್ ಅವರನ್ನು ಅಕ್ಷರಶಃ ದ್ವೇಷಿಸಲು ಶುರು ಮಾಡಿದರು ಎಂದು ಅಂದಿನ ಕಾಲದ ಬಹಳಷ್ಟು ಜನರು ಹೇಳುವ ಮಾತು. ಅಂದಿನಿಂದ ಡಾ ರಾಜ್‌ ಹಾಗು ವಿಷ್ಣು ಅಭಿಮಾನಿಗಳಲ್ಲಿ ಶುರುವಾದ ದ್ವೇಷಕ್ಕೆ ಇಂದಿಗೂ ಅಂತ್ಯ ಸಿಕ್ಕಿಲ್ಲ ಅನ್ನೋದು ಬಹಳಷ್ಟು ಜನರ ಅನಿಸಿಕೆ. ಇದು ಸತ್ಯವೇ ಸುಳ್ಳೇ? ಲೆಕ್ಕಾಚಾರ ಮಾಡಿ ಹೇಳುವುದು ಹೇಗೆ?

ಅದರಲ್ಲಿ ಸತ್ಯ-ಸುಳ್ಳು ಹುಡುಕಿ ಹೇಳುವುದು ಕಷ್ಟ ಎನ್ನುವುದೇ ಸರಿ. ಏಕೆಂದರೆ, ಹಲವು ದಶಕಗಳ ಹಿಂದೆ ಸಿನಿಮಾ ನಟರನ್ನು ದೇವರೆಂದೇ ಪೂಜಿಸುವಷ್ಟು ಮಗ್ಧತೆ ಹಾಗೂ ಆರಾಧನಾ ಮನೋಭಾವ ಸಿನಿಮಾ ಪ್ರೇಕ್ಷಕರಲ್ಲಿ ಇತ್ತು. ಈಗಲೂ ಕೂಡ ಅದು ಇದೆಯಾದರೂ ಸ್ವಲ್ಪ ಮಟ್ಟಿಗೆ ಮಾತ್ರ ಮುಂದುವರೆದಿದೆ ಎನ್ನಬಹುದು. ಗಂಧದ ಗುಡಿ ಚಿತ್ರದಲ್ಲಿ ಡಾ ರಾಜ್‌ ಎದುರು ವಿಲನ್ ಆಗಿ ಭಾರೀ ಅಬ್ಬರದ ನಟನೆ ಮಾಡಿದ್ದ ವಿಷ್ಣುವರ್ಧನ್ ಅವರನ್ನು ನಿಜವಾಗಿಯೂ ಅಣ್ಣಾವ್ರ ವಿರೋಧಿ ಅಂದುಕೊಂಡುಬಿಟ್ರಾ ಅಣ್ಣಾವ್ರ ಫ್ಯಾನ್ಸ್? ಅದನ್ನು ಅವರೇ ಹೇಳಬೇಕು ಅಷ್ಟೇ.

ಒಟ್ಟನಲ್ಲಿ, ಅಂದಿನ ಕಾಲದ ಸಿನಿಮಾ ಪ್ರೇಮಿಗಳು ಹಾಗೂ ಚಿತ್ರರಂಗದ ಆಗುಹೋಗುಗಳನ್ನು ಬಲ್ಲವರು ಈ ಸಂಗತಿಯನ್ನು 'ಕಟ್ಟೆ ಪುರಾಣ'ಗಳಲ್ಲಿ ಹೇಳುತ್ತಾರೆ. ಡಾ ರಾಜ್‌-ಡಾ ವಿಷ್ಣು ಅವರಿಬ್ಬರ ಫ್ಯಾನ್ಸ್ ವಾರ್ ಇತ್ತು ಎಂಬುದು ಎಷ್ಟು ನಿಜವೋ ಅಷ್ಟೇ ನಿಜವಾದ ಸಂಗತಿ ಎಂದರೆ, ಈ ಇಬ್ಬರು ಮೇರನಟರಲ್ಲಿ ಪರಸ್ಪರ ಗೌರವ ಹಾಗು ಪ್ರೀತಿ ಇತ್ತು ಎಂಬುದು. ಆದರೆ, ಅದನ್ನು ಅವರು ಅಭಿಮಾನಿಗಳ ಮುಂದೆ ಎಂದೂ ತೋರಿಸಿಕೊಳ್ಳಲೇ ಇಲ್ಲ. ಅದೇ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್‌ ಮಾಡಿರುವ ದೊಡ್ಡ ತಪ್ಪು ಎನ್ನುವುದು ಬಹಳಷ್ಟು ಜನರು ಹೇಳುವ ಅಭಿಪ್ರಾಯ. ಆದರೆ ಈಗಲೂ ಆ ಸತ್ಯವನ್ನು ಬಾಯಿಬಟ್ಟು ಹೇಳುವವರು ಯಾರೂ ಇಲ್ಲ. ಕೆಲವರು ಕೆಲವೊಂದು ಸಾರಿ ಹೇಳಿದ್ದಷ್ಟೇ ಸುದ್ದಿ ಆಗುತ್ತಿದೆ ಅಷ್ಟೇ..!