ಬೆಂಗಳೂರು (ಸೆ. 27): ಈ ಚಿತ್ರದ ಮುಂದುವರಿದ ಭಾಗ ಬರುತ್ತಾ? ಅ... ಏನೂ...! ಅಲ್ಲಾ, ಈ ಚಿತ್ರದ ಪಾರ್ಟ್ 2 ಬರುತ್ತಾ? ಹೌದೌದು ಬರುತ್ತೆ... ಯಾಕೆ ಬರಬಾರದು? ಅಯ್ಯೋ ಸುಮ್ನಿರಪ್ಪ ಪಾರ್ಟ್ 2, ಪಾರ್ಟ್ 3 ಮಾಡಕ್ಕೆ ಇದೇ

‘ಕೋಟಿಗೊಬ್ಬ’ ಚಿತ್ರನಾ?

- ಈ ಪ್ರಶ್ನೋತ್ತರ ಮಾತುಕತೆ ನಡೆದಿದ್ದು ಮಾಧ್ಯಮಗಳಿಗೂ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ನಡುವೆ.

ಸಂದರ್ಭ: ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಬಿಡುಗಡೆ ಪತ್ರಿಕಾಗೋಷ್ಟಿ.

ಎಲ್ಲರಿಗಿಂತ ಮೊದಲೇ ಆಗಮಿಸಿದ್ದ ಅಂಬರೀಶ್ ಎಂದಿನಂತೆ ತಮ್ಮ ಸ್ಟೈಲಿನಲ್ಲಿ ಹರಟೆ ಶುರು ಮಾಡಿದರು. ಪತ್ರಕರ್ತರಿಗೂ ಅಂಬರೀಶ್ ಅವರಿಗೆ ಪ್ರಶ್ನೆ ಕೇಳಕ್ಕೆ ಎಲ್ಲಿಲ್ಲದ ಉತ್ಸಾಹ. ‘ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಬಗ್ಗೆ ಇಷ್ಟೆಲ್ಲ ಭರವಸೆ ಇಟ್ಟುಕೊಂಡು ಮಾತನಾಡುತ್ತಿದ್ದೀರಿ. ಸಿನಿಮಾ ಅದ್ಭುತವಾಗಿದೆ ಗೆದ್ದೇ ಗೆಲ್ಲುತ್ತದೆ ಎಂದಿದ್ದೀರಿ. ಗೆದ್ದ ಸಿನಿಮಾದ ಮುಂದುವರಿದ ಭಾಗ ಬರುತ್ತದೆಯೇ’ ಎಂದು ಕೇಳಲಾಯಿತು.

ಈ ಪ್ರಶ್ನೆಗೆ ಮೊದಲು ನಿರ್ದೇಶಕ ಗುರುದತ್ತ ಗಾಣಿಗ ಮಾತಿಗೆ ನಿಂತರು. ಯಾವುದೇ ಒಂದು ಚಿತ್ರದ ಮುಂದುವರಿದ ಭಾಗ ಬರಬೇಕು ಅಂದ್ರೆ ಅದರ ಹಿಂದಿನ ಭಾಗ ದೊಡ್ಡ ಮಟ್ಟದಲ್ಲಿ ಗೆಲ್ಲಬೇಕು. ಹಾಗೆ ಗೆದ್ದು, ಅಂಬರೀಶಣ್ಣ ಅವರೇ ಮತ್ತೆ ಮಾಡುತ್ತೇನೆ ಎಂದರೆ ಖಂಡಿತ ನಾನು ಪಾರ್ಟ್ 2 ಮಾಡುತ್ತೇನೆ ಎಂದರು.

ನಿರ್ದೇಶಕರ ಮಾತಿನ ನಡುವೆ ಅಂಬರೀಶ್ ಕೈಗೆ ಮೈಕು ಶಿಫ್ಟ್ ಆಯ್ತು. ‘ಅಲ್ಲಪ್ಪ... ಇದು ಅಂಬಿ ಸಿನಿಮಾ ಅಷ್ಟೆ. ಇದನ್ನ ಮುಂದುವರಿಸಿಕೊಂಡು ಹೋಗುವುದಕ್ಕೆ ಇದೇನು ಕೋಟಿಗೊಬ್ಬ ಸಿನಿಮಾನಾ. ಅವರು ಕೋಟಿಗೊಬ್ಬ 2, ಕೋಟಿಗೊಬ್ಬ 3 ಮಾಡುತ್ತಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಆ ಕ್ಯಾಟಗರಿಗೆ ಸೇರಿದ್ದಲ್ಲ. ಮೊದ್ಲು ಮೊದಲ ಪಾರ್ಟ್ ನೋಡಿ ಗೆಲ್ಲಿಸಿ’ ಎಂದು ತಮ್ಮದೇ ಸ್ಟೈಲಿನಲ್ಲಿ ಉತ್ತರ ಕೊಟ್ಟರು.

ಡೈರೆಕ್ಟ್ರೇ ಹೆದರಿಕೊಳ್ಳಬೇಡಿ

ಈ ಚಿತ್ರದ ನಿರ್ದೇಶಕ ಅಂತ ಸುದೀಪ್ ಅವರು ಅಂಬರೀಶ್ ಅವರ ಬಳಿಗೆ ಕಳುಹಿಸಿಕೊಟ್ಟಿದ್ದು ಗುರುದತ್ತ ಗಾಣಿಗ ಅವರನ್ನ. ‘ಮಾಮ ನನ್ನ ಬಳಿ ಒಬ್ಬ ಹುಡುಗ ಇದ್ದಾನೆ. ಟ್ಯಾಲೆಂಟೆಡ್ ಫೆಲೋ. ಅವನನ್ನ ನೋಡಿದರೆ ಚಿಕ್ಕ ಹುಡುಗನ ರೀತಿ ಕಾಣುತ್ತಾನೆ. ಆದರೆ, ಒಳ್ಳೆಯ ಕೆಲಸಗಾರ ಎಂದು ಹೇಳಿ ನನ್ನ ಬಳಿ ಈ ಹುಡುಗನನ್ನ ಕಳುಹಿಸಿದರು ಸುದೀಪ್. ನಾನು ಒಂದು ಸಲ ಮೇಲಿಂದ ಕೆಳಗಡೆ ನೋಡಿದೆ. ಮಗು ಥರಾ ಇದ್ದಾನೆ ಹೇಗಪ್ಪ ಅಂದುಕೊಂಡೆ. ಆಯ್ತು ಅಂತ ಒಪ್ಪಿಕೊಂಡು ಸೆಟ್‌ಗೆ ಹೋದೆ.

ಪಾಪ ಮೊದಲನೇ ದಿನ ನನ್ನ ನೋಡಿ ಹುಡುಗ ಹೆದರಿಕೊಳ್ಳುತ್ತಿದ್ದ. ಆಗ ನಾನು ಹತ್ತಿರ ಹೋಗಿ ಡೈರೆಕ್ಟ್ರೇ ಹೆದರಿಕೊಳ್ಳಬೇಡಿ. ನಾನು ಹೊರಗೆ ಮಾತ್ರ ಅಂಬರೀಶ್, ಸೆಟ್‌ಗೆ ಬಂದ್ರೆ ಆರ್ಟಿಸ್ಟ್. ಡೈರೆಕ್ಟರ್ ಹೇಳಿದಂತೆ ಕೇಳುವ ನಟ ಅಷ್ಟೆ ಎಂದೇ. ಆ ಮೇಲೆ ಎಲ್ಲ ಸರಿ ಹೋಯಿತು. ಇನ್ನೂ ನನ್ನ ಜತೆ ನಟಿಸಿರುವ ನಟ ದಿಲೀಪ್‌ರಾಜ್ ಕೂಡ ನನ್ನ ಬೈಯುವ ದೃಶ್ಯಗಳಲ್ಲಿ ತುಂಬಾ ಹೆದರಿಕೊಂಡೇ ಮಾಡುತ್ತಿದ್ದ.

ಅವನಿಗೂ ನಾನು ನೀನು ಬೈಯುತ್ತಿರುವುದು ಅಂಬರೀಶ್‌ಗೆ ಅಲ್ಲ, ಚಿತ್ರದ ಪಾತ್ರಧಾರಿಗೆ ಅಂತ ಧೈರ್ಯ ಕೊಟ್ಟೆ’ ಎಂದು ಹೊಸ ಹುಡುಗರ ಜತೆಗಿನ ಶೂಟಿಂಗ್ ಅನುಭವ ಹೇಳಿಕೊಂಡರು ಅಂಬರೀಶ್. ಅವರು ಹಾಗೆ ಹೇಳುವಾಗ ಹೊಸಬರೆಡೆಗೆ ಮೆಚ್ಚುಗೆ ಇತ್ತು.

ಅಂಬರೀಶ್ ಕೊನೆಯ ಚಿತ್ರ ಯಾವುದು?

ಅಂಬರೀಶ್ ಕೊನೆಯ ಸಿನಿಮಾ ಯಾವುದು ಎನ್ನುವುದು ನಿನ್ನೆಯಿಂದ ಓಡಾಡುತ್ತಿರುವ ನ್ಯೂಸ್. ಅದಕ್ಕೆ ಕಾರಣ ಅಂಬರೀಶ್ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನೆಯೊಂದಕ್ಕೆ ತಮಾಷೆಗೆ ‘ಹೌದಪ್ಪ
ಇದೇ ನನ್ ಕೊನೆಯ ಚಿತ್ರ’ ಎಂದುಬಿಟ್ಟರು. ಆ ಮಾತಿನ ಅರ್ಥವಿಷ್ಟೆ, ಮುಂದೆಯೂ ತಾವು ಸಿನಿಮಾ ಮಾಡಬೇಕು ಅಂದ್ರೆ ತಮ್ಮ ವಯಸ್ಸಿಗೆ ತಕ್ಕಂತೆ ಕತೆಗಳು ಬರಬೇಕು, ಹಾಗಾದ್ರೆ ಮಾತ್ರ ಅನ್ನುವುದು ಅವರ ಮಾತಿನ ತಾತ್ಪರ್ಯವಾಗಿತ್ತು. ಅಷ್ಟೇ.

‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವೇ ರೆಬೆಲ್ ಸ್ಟಾರ್ ಕೊನೆಯ ಚಿತ್ರ ಎಂಬ ಸುದ್ದಿ ಸುಳ್ಳು. ಅಂಬರೀಶ್ ಇದು ನನ್ನ ಕೊನೆಯ ಸಿನಿಮಾ ಎಂದು ಎಲ್ಲಿಯೂ ಹೇಳಿಲ್ಲ.