ರಮಾನಂದ ಶರ್ಮಾ

ಪ್ರತಿಕ್ರಿಯಿಸುತ್ತಾ, ಒಬ್ಬರಂತೂ, ಇದೇನು ಮಹಾ, ‘ನಮ್ಮ ಮನೆಗೆ ಪೂಜೆ ಮಾಡಲು ಬಂದ ಪುರೋಹಿತರಿಗೆ ಎರಡು ಘಂಟೆಗೆ ಎಲ್ಲಾ ವಿಧಿ ವಿಧಾನ ಮತ್ತು ಪೂಜೆಗಳನ್ನು ಮುಗಿಸಿ ಬಿಡಿ, ಎರಡು ಘಂಟೆಗೆ ಒಳ್ಳೆ ಧಾರಾವಾಹಿ ಇದೆ’ ಎಂದು ಮನೆಯ ಮಹಿಳೆಯರು ನಮ್ರವಾಗಿ ಕೇಳಿಕೊಂಡಿದ್ದಾರೆ ಎನ್ನುತ್ತಾ ಧಾರಾವಾಹಿಯ ಪಿಡುಗಿನ ಇನ್ನೊಂದು ಮುಖವನ್ನು ತೆರೆದಿಟ್ಟರು. ಇದು ‘ಧಾರಾವಾಹಿಗಳು’ ಬದುಕು, ಚಿಂತನೆ ಮತ್ತು ಆದ್ಯತೆಯನ್ನು ಬದಲಿಸುತ್ತಿರುವ ಒಂದು ಉದಾಹರಣೆ ಮಾತ್ರ.

ಸಾಮಾಜಿಕ ವಿಜ್ಞಾನಿಗಳು, ಧಾರಾವಾಹಿ ನೋಡುವುದನ್ನು ಕೂಡ ವ್ಯಸನ, ಚಟ ಎಂದು ಬಣ್ಣಿಸುತ್ತಾರೆ. ಇದು ಧೂಮಪಾನ, ಗುಟಕಾ ಮತ್ತು ಕುಡಿತದಂತೆ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಅದರೆ, ಇದು ದಿನ ನಿತ್ಯದ ಸಾಮಾಜಿಕ, ಕೌಟುಂಬಿಕ ಜೀವನದ ಮೇಲೆ ಮತ್ತು ಲಾಗಾಯತಿನಿಂದ ಬಂದ ಮಾನವ ಸಹಜ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪುರುಷರಿಗಿಂತ ಮಹಿಳೆಯರೇ ಇದಕ್ಕೆ ಹೆಚ್ಚು ಅಡಿಕ್ಟ್ ಅಗಿದ್ದಾರೆ ಎಂದು ಅವರು ಹೇಳುತ್ತಾರೆ. ಕೆಲವು ಧಾರಾವಾಹಿಗಳನ್ನು ನಿರಂತರವಾಗಿ ನೋಡುತ್ತಿದ್ದು, ಮದ್ಯದಲ್ಲಿ ಒಂದೇ ಒಂದು ಕಂತು ನೋಡದಿದ್ದರೆ ಏನೆನ್ನೋ ಕಳೆದು ಕೊಂಡವರಂತೆ ಚಡಪಡಿಸುತ್ತಾರೆ. ಕಳೆದುಕೊಂಡ ಧಾರಾವಾಹಿಯ ‘‘ ಲಿಂಕ್‌’’ ನಲ್ಲಿ ಏನಿದ್ದಿರಬಹುದು ಎಂದು ಚಿಂತಿಸುತ್ತಾರೆ.

ಗಾಸಿಪ್‌ ಕಡಿಮೆಯಾಗಿದೆ!

ಹರಟೆ ಕಟ್ಟೆ, ಬಾವಿಕಟ್ಟೆಮಾತುಕತೆಗಳು ಕಡಿಮೆಯಾಗಿ ಈಗ ಎಲ್ಲರೂ ಟೀವಿಯ ಮುಂದೆ ಸ್ಥಾಪಿತರು. ಮನೆಯ ಎಲ್ಲ ನಡಾವಳಿಗಳನ್ನೂ ಟೀವಿಯೇ ನಿರ್ಧರಿಸುತ್ತದೆ. ಸೀರಿಯಲ್ಲು ಬರುವ ಸಮಯಕ್ಕೆ ಊಟ ಕಾಫಿಗಳಿಲ್ಲ, ಅತಿಥಿಗಳಿಗೆ ಆತಿಥ್ಯವಿಲ್ಲ. ಸುದ್ದಿ ಪ್ರಸಾರವಾಗುವ ಹೊತ್ತಿಗೆ ಊಟದ ಸಮಯ. ಹೀಗೆ ಮನೆಯ ಟೈಮ್‌ಟೇಬಲ್ಲು ಬದಲಾಗಿದೆ. ಊಟದ ರುಚಿಯ ಬಗ್ಗೆ ತಕರಾರುಗಳಿಲ್ಲ. ನೆಲದಲ್ಲಿ ಎಲ್ಲರೂ ಕೂತು ಊಟ ಮಾಡುವ ಪರಿಪಾಠ ಇಲ್ಲ. ದೇವರ ಮುಂದೆ ಭಜನೆ ಮಾಡುವುದು ನಿಂತಿದೆ. ಹೀಗೆ ಟೀವಿ ಅನೇಕ ಬದಲಾವಣೆಗಳನ್ನು ತಂದಿದೆ.

ಒಬ್ಬರಿಗೊಂದು ಟೀವಿ ಬಂದಿದೆ

ಒಂದು ಕಾಲದಲ್ಲಿ ಊರಿಗೊಂದು ಟೀವಿ ಇರುತ್ತಿತ್ತು. ಅದರಲ್ಲಿ ಒಂದೇ ಚಾನಲ್‌ ಬರುತ್ತಿತ್ತು. ಆಮೇಲೆ ಮನೆಗೊಂದು ಟೀವಿ ಎಂದಾಯಿತು. ಈಗ ಕೋಣೆಗೊಂದು ಟೀವಿ ಎಂಬ ಹೊಸ ಪರಿಪಾಠ ಶುರುವಾಗಿದೆ. ಒಳಕೋಣೆಯಲ್ಲಿ ಅತ್ತೆ ಮಾವಂದಿರಿಗೆ ಕನ್ನಡ ಸೀರಿಯಲ್‌ ನೋಡಲಿಕ್ಕೊಂದು, ಡ್ರಾಯಿಂಗ್‌ ರೂಮಲ್ಲಿ ಗಂಡಸರಿಗೆ ಸುದ್ದಿ, ಕ್ರಿಕೆಟ್‌ ನೋಡಲಿಕ್ಕೊಂದು, ಬೆಡ್‌ ರೂಮಲ್ಲಿ ಪತ್ನಿಗೆ ಹಿಂದಿ ಸೀರಿಯಲ್‌ ನೋಡಲಿಕ್ಕೊಂದು ಟೀವಿ ಬಂದುಬಿಟ್ಟಿದೆ. ಮೂರು ಟೀವಿಯಿಲ್ಲದ ಮನೆಗಳು ಇದ್ದಾವೆ ಎಂದರೆ ಅಲ್ಲಿ ಅತ್ತೆ ಮಾವಂದಿರಿಲ್ಲ ಎಂದೇ ಅರ್ಥ.

ಅತಿಥಿಗಳಿಗೆ ಪ್ರವೇಶವಿಲ್ಲ!

ಸಂಜೆ ಮೇಲೆ ಅತಿಥಿಗಳು ಮನೆಗೆ ಬರುವ ಪರಿಪಾಠ ಇತ್ತು. ಈಗ ಅದು ತಪ್ಪಿಯೇ ಹೋಗಿದೆ. ಮದುವೆಯ ಆಹ್ವಾನ ಪತ್ರ ಕೊಡುವವರಿಂದ ಹಿಡಿದು, ಸೌಹಾರ್ದ ಭೇಟಿಗೆ ಬರುವವರು ಬೆಳಗಿನ ಹೊತ್ತೇ ಬಂದು ಹೋಗಬೇಕು. ಪ್ರೈಮ್‌ ಟೈಮುಗಳಲ್ಲಿ ಬಂದರೆ ಅರೆಬರೆ ಮಾತು, ಟೀವಿ ಮೇಲೆ ನೋಟ ಮತ್ತು ನಿರ್ಲಕ್ಷ್ಯಕ್ಕೆ ತುತ್ತಾಗಬೇಕಾಗುತ್ತದೆ. ಹಾಗೊಂದು ವೇಳೆ ಮಾತಾಡುವುದೇ ಆದರೆ ಗಂಡಸರ ಕೂಟಕ್ಕೆ ಕ್ರಿಕೆಟ್‌ ಮತ್ತು ರಾಜಕೀಯ, ಮಹಿಳೆಯರಿಗೆ ಧಾರಾವಾಹಿ ಮತ್ತು ಅಲ್ಲಿನ ಬಟ್ಟೆಬರೆ ಚರ್ಚೆಯಾಗಲೇಬೇಕು.

ಗ್ರಾಮ ಡ್ರಾಮ!

ತೋಟಕ್ಕೆ ಕೆಲಸಕ್ಕೆ ಬರುವವರು ರಾತ್ರಿಪೂರ ಧಾರಾವಾಹಿ ನೋಡಿ ಬೆಳಗ್ಗೆ ಏಳರ ನಂತರ ಕೆಲಸಕ್ಕೆ ಬರುತ್ತಾರೆ, ಸಂಜೆ ಆರರ ಒಳಗೆ ಹೊರಟುಬಿಡುತ್ತಾರೆ ಎಂಬ ಆಕ್ಷೇಪಗಳಿಂದ ಹಿಡಿದು, ಬಯಲಾಟ, ನಾಟಕ ಮತ್ತು ಜಾತ್ರೆಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾತೂ ಕೇಳಿಬರುತ್ತಿದೆ. ಎಲ್ಲ ಕಡೆಯೂ ಐವತ್ತು ದಾಟಿದವರು ಮಾತ್ರ ಕಾಣುತ್ತಾರೆ. ಮಕ್ಕಳೆಲ್ಲ ಟೀವಿ ಮುಂದೆ ಸ್ಥಾಪನೆಯಾಗಿರುತ್ತಾರೆ. ಮಲೆನಾಡಿನಲ್ಲಿ ಅಡಿಕೆ ಸುಲಿಯುವ ಕೆಲಸ ಮಾಡುವವರು ಟೀವಿ ಇರಬೇಕು ಅಂತ ಕಡ್ಡಾಯ ಮಾಡಿದ್ದಾರೆ. ಹೀಗಾಗಿ ಅವರ ಜೀವನದ ಕತೆಗಳನ್ನು ಕೇಳುವ ಭಾಗ್ಯ ಈಗ ಸಿಗುವುದಿಲ್ಲ.

ಕನ್ನಡವೇ ಸತ್ಯ

ಟಿವಿ ಕಾರ್ಯಕ್ರಮಗಳು, ಮುಖ್ಯವಾಗಿ ಧಾರಾವಾಹಿಗಳು ಜನರ ಬದುಕಿನ ವೈಖರಿಯನ್ನೇ ಬದಲಿಸಿವೆ. ಉಡುಗೆ ತೊಡುಗೆ, ಮಾತಿನಧಾಟಿ ಮತ್ತು ಜೀವನ ಪದ್ದತಿಯಲ್ಲಿ ಈ ಬದಲಾವಣೆಯನ್ನು ಕಾಣಬಹುದು. ಇಂದು ಕನ್ನಡಿಗರು ಕನ್ನಡಕ್ಕೆ ಅಂಟಿಕೊಂಡಿರುವಂತೆ ಮಾಡಿರುವುದು ಟಿವಿ ಧಾರಾವಾಹಿಗಳು. ಕನ್ನಡಿಗರನ್ನು ಒಗ್ಗೂಡಿಸುವ ಶಕ್ತಿ ಇರುವುದು ಇವುಗಳಲ್ಲೇ: ಕನ್ನಡದ ಏಕತೆಯನ್ನು ಮನೆ ಮಾಡುತ್ತಿವೆ ಇತ್ತೀಚಿನ ದಿನಗಳಲ್ಲಿ ಸಿನೇಮಾಗಳಿಗಿಂತಲೂ ಧಾರಾವಾಹಿಗಳು ಆಕರ್ಷಕವಾಗಿ ಮೂಡಿಬರುತ್ತಿವೆ. ತಂತ್ರಜ್ಞಾನ ವಿಷಯದಲ್ಲೂ ಯಾವ ಭಾಷೆಯ ಕಿರುತೆರೆಗೂ ಕಡಿಮೆ ಇಲ್ಲ. ಕರ್ನಾಟಕದ ಗಡಿಭಾಗದಲ್ಲಿರುವ ಪ್ರದೇಶಗಳಲ್ಲಿ ಈ ಧಾರಾವಾಹಿಗಳು ಕನ್ನಡಿಗರು ಬೇರೆ ಭಾಷೆಗಳ ಮೇಲೆ ಅವಲಂಬಿತವಾಗದಂತೆ ಮಾಡಿವೆ. ಕನ್ನಡಿಗರು ಕನ್ನಡದಿಂದ ವಿಮುಕ್ತರಾದಂತೆ ನೋಡಿಕೊಂಡಿವೆ.

ಟಿವಿ ಮತ್ತು ಮುಖ್ಯವಾಗಿ ಧಾರಾವಾಹಿಗಳು ಸಮಾಜದಲ್ಲಿ ಭಾರೀ ಬದಲಾವಣೆ ತಂದಿವೆ. ಆದರೆ, ವಿಷಾದದ ಸಂಗತಿಯೆಂದರೆ, ಹೊಸದನ್ನು ಸ್ವೀಕರಿಸಿಕೊಳ್ಳುವ ಧಾವಂತದಲ್ಲಿ ಸಾಂಪ್ರದಾಯಿಕ ಮತ್ತು ಪರಂಪರಾಗತವಾಗಿ ಬಂದ ನಮ್ಮ ಮನರಂಜನೆಯ ಅವಿಷ್ಕಾರಗಳು ಬಲಿಪಶುಗಳಾಗಿವೆ. ಲಾಗಾಯ್ತನಿಂದ ಬಂದ ಯಕ್ಷಗಾನ, ಆಟ, ನಾಟಕ, ತಾಳಮದ್ದಲೆ, ಕೋಲಾಟ, ನೃತ್ಯಗಳು, ಸಂಗೀತ ಮತ್ತು ಬಯಲಾಟಗಳು ಕಾಟಾಚಾರಕ್ಕೆ ಕಾಣುತ್ತಿದ್ದು, ತಮ್ಮ ಹಿಂದಿನ ಹಿರಿಮೆಯನ್ನು ಕಳೆದುಕೊಂಡಂತೆ ಕಾಣಿಸುತ್ತಿವೆ.